ನವದೆಹಲಿ: ಐದು ತಿಂಗಳ ಕೂಸಿನ ಜೀವ ಉಳಿಸಲು ಕೇಂದ್ರ ಸರ್ಕಾರ ಬರೋಬ್ಬರಿ 6 ಕೋಟಿ ರೂ.ಗಳ ಆಮದು ಸುಂಕ ಹಾಗೂ ಜಿಎಸ್‍ಟಿಯನ್ನು ಮನ್ನಾ ಮಾಡಿದೆ. ಈ ಮೂಲಕ ಮಾನವೀಯತೆ ಮೆರೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಈ ವಿಚಾರವನ್ನು ಮಹಾರಾಷ್ಟ್ರ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. 5 ತಿಂಗಳು ಕೂಸು ಟೀರಾ ಕಾಮತ್ ವಿಶ್ವದಲ್ಲಿ ಅಪರೂಪದಲ್ಲಿ ಅಪರೂಪವಾಗಿರುವ ಬೆನ್ನುಮೂಳೆಯ ಸ್ನಾಯು ಸಮಸ್ಯೆ(ಎಸ್‍ಎಂಎ) ಟೈಪ್-1 ಯಿಂದ ಬಳಲುತ್ತಿದ್ದಳು. ನರ ಕೋಶಗಳು ಸಂಪೂರ್ಣ ಸ್ಥಗಿತವಾಗಿ ಸ್ನಾಯುವಿನ ಮೇಲೆ ಶೂನ್ಯ ನಿಯಂತ್ರಣಕ್ಕೆ ಕಾರಣವಾಗಿತ್ತು. ಈಕೆ ಉಪನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
Advertisement
Advertisement
ಟೀರಾ ಕಾಮತ್ ಪೋಷಕರಾದ ಪ್ರಿಯಾಂಕಾ ಹಾಗೂ ಮಿಹಿರ್ ಅವರು ಅಕ್ಟೋಬರ್ 2020ರಲ್ಲಿ ಹಾಗೂ ಬಳಿಕ ಜನವರಿ 2021ರಂದು ಆಕೆಯ ವೈದ್ಯಕೀಯ ಸ್ಥಿತಿಗತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಜೊತೆ ಹಂಚಿಕೊಂಡಿದ್ದರು. ಔಷಧಿ ಮೇಲಿನ ಆಮದು ಸುಂಕ ಹಾಗೂ ಜಿಎಸ್‍ಟಿಯನ್ನು ಮನ್ನಾ ಮಾಡುವಂತೆ ಮನವಿ ಮಾಡಿದ್ದರು.
Advertisement
View this post on Instagram
Advertisement
ಸ್ಪೈನಲ್ ಮಸಲ್ ಅಟ್ರೋಫಿಯ ಜೆನೆಟಿಕ್ ರೂಟ್(ಎಸ್‍ಎಂಎ)ಗೆ ಸಂಬಂಧಿಸಿದ ಜೊಲ್ಗೆನ್ಸ್ ಮಾ ಎಂಬ ಔಷಧಿಯನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳಬೇಕಿತ್ತು. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನವನ್ನೇ ಆರಂಭಿಸಲಾಗಿತ್ತು. ಶೇ.23ರಷ್ಟು ಆಮದು ಸುಂಕ ಹಾಗೂ ಶೇ.12ರಷ್ಟು ಜಿಎಸ್‍ಟಿ ಅಂದರೆ 6 ಕೋಟಿ ರೂ. ತೆರಿಗೆ ಹಾಗೂ 16 ಕೋಟಿ ರೂ. ಚಿಕಿತ್ಸಾ ವೆಚ್ಚವನ್ನು ಟೀರಾಳ ಪೋಷಕರು ಭರಿಸಬೇಕಿತ್ತು. ದಾನಿಗಳ ಸಹಾಯದಿಂದ 75 ದಿನಗಳಲ್ಲಿ 12 ಕೋಟಿ ರೂ. ಸಂಗ್ರಹಿಸಲು ಯಶಸ್ವಿಯಾಗಿದ್ದರು.
ಇದಾದ ಬಳಿಕ ಆಮದು ಸುಂಕ ಹಾಗೂ ಜಿಎಸ್‍ಟಿಯನ್ನು ಮನ್ನಾ ಮಾಡುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದು ಗಮನ ಸೆಳೆದಿದ್ದರು. ಪೋಷಕರು ದಾನಿಗಳ ಸಹಾಯ ಹಾಗೂ ಸಾಲದ ರೂಪದಲ್ಲಿ ಹಣ ಪಡೆದರೂ ಆಮದು ಸುಂಕ ಹಾಗೂ ಜಿಎಸ್‍ಟಿ ಕಟ್ಟಲು ಅವರ ಬಳಿ ಹಣ ಇರಲಿಲ್ಲ. ಅಮೆರಿಕದಿಂದ ಭಾರತಕ್ಕೆ ಔಷಧಿ ತರಿಸಲು ಎಲ್ಲ ನಿಯಮ ಹಾಗೂ ಪತ್ರ ವ್ಯವಹಾರಗಳನ್ನು ಮುಗಿಸಿದ್ದರು. ಒಂದು ತಿಂಗಳಿಗೂ ಹೆಚ್ಚು ಕಾಲ ಪೋಷಕರು ಈ ಪತ್ರ ವ್ಯವಹಾರವನ್ನು ಪೂರ್ಣಗೊಳಿಸಿದ್ದರು.
ಬಳಿಕ ಫೆಬ್ರವರಿ 1ರಂದು ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು, ಆಮದು ಸುಂಕ ಹಾಗೂ ಜಿಎಸ್‍ಟಿ ರದ್ದು ಪಡಿಸುವಂತೆ ಕೇಳಿಕೊಂಡಿದ್ದರು. ಬಳಿಕ ಕೇಂದ್ರ ಸರ್ಕಾರ ಆಮದು ಸುಂಕ ಹಾಗೂ ತೆರಿಗೆಯನ್ನು ಮನ್ನಾ ಮಾಡಿ ಆದಷ್ಟು ಬೇಗ ಔಷಧಿ ಅಮೆರಿಕದಿಂದ ಭಾರತಕ್ಕೆ ಬರುವಂತೆ ಮಾಡಿತ್ತು. ಎಲ್ಲ ಕೆಲಸ ಆದ ಬಳಿಕ ಇದೀಗ ಫಡ್ನವಿಸ್ ಅವರು ಕೇಂದ್ರ ಸರ್ಕಾರಕ್ಕೆ ಧನ್ಯವಾದ ತಿಳಿಸಿ ಪತ್ರ ಬರೆದಿದ್ದಾರೆ.