ಮಡಿಕೇರಿ: ಕಳೆದ ವರ್ಷ ಕೊಡಗು (Kodagu) ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ (Tourists Place) 43 ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆ ಮಾಹಿತಿ ಹಂಚಿಕೊಂಡಿದೆ.
2025ರಲ್ಲಿ ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಿರುವ ಪ್ರವಾಸಿಗರ (Tourists) ಸಂಖ್ಯೆಯು 2024ರ ವರ್ಷಕ್ಕಿಂತ 2.10 ಲಕ್ಷದಷ್ಟು ಸಂಖ್ಯೆ ಕುಸಿತ ಕಂಡಿದೆ. ಪ್ರವಾಸೋದ್ಯಮ ಇಲಾಖೆ ದಾಖಲೆ ಪ್ರಕಾರ, 2024ರಲ್ಲಿ ಜಿಲ್ಲೆಯ ತಾಣಗಳಿಗೆ 45,72,790 ಮಂದಿ ಪ್ರವಾಸಿಗರು ಭೇಟಿ ನೀಡಿದ್ದರು. 2025ರಲ್ಲಿ ಕೊಡಗಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಅರ್ಧಕೋಟಿ ದಾಟಬಹುದೆಂದು ನಿರೀಕ್ಷಿಸಲಾಗಿತ್ತು.

ಆದರೆ 2025ರಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ವಿದೇಶಿಗರೂ ಸೇರಿ 43,62,332 ಪ್ರವಾಸಿಗರು ಭೇಟಿ ನೀಡಿದ್ದಾರೆ. 2023 ರಲ್ಲೇ ಜಿಲ್ಲೆಗೆ 43,69,507 ಮಂದಿ ಪ್ರವಾಸಿಗರು ಭೇಟಿ ನೀಡಿದ್ದು, 2025ರಲ್ಲಿ ಕಳೆದೆರಡು ವರ್ಷಗಳಿಗಿಂತ ಕಡಿಮೆಯಾಗಿದೆ.
ಈ ಅಂಕಿ ಅಂಶವು, ಕೇವಲ ಪ್ರವಾಸಿ ತಾಣಗಳಿಗೆ ಭೇಟಿ ನೀಡಿರುವ ಪ್ರವಾಸಿಗರ ಸಂಖ್ಯೆಯಾಗಿದೆ. ಜಿಲ್ಲೆಗೆ ಭೇಟಿ ನೀಡಿ ರೆಸಾರ್ಟ್-ಹೊಟೇಲ್‌ಗಳಲ್ಲಿ ತಂಗಿ ಅಲ್ಲೇ ಕಾಲ ಕಳೆಯುವವರ ಸಂಖ್ಯೆ ಇದರಲ್ಲಿ ಸೇರ್ಪಡೆಯಾಗಿಲ್ಲ.

ಪ್ರವಾಸಿಗರ ‘ಫೇವರೇಟ್ ಸ್ಪಾಟ್’ ರಾಜಾಸೀಟ್
ಮಡಿಕೇರಿ ನಗರದಲ್ಲಿರುವ ರಾಜಾಸೀಟ್, ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿದೆ. 2023ರಲ್ಲೂ ಕೂಡ ರಾಜಾಸೀಟ್ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ ತಾಣಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿತ್ತು. 2024ರಲ್ಲಿ ಕೂಡ ರಾಜಾಸೀಟ್‌ಗೆ ಇತರ ತಾಣಗಳಿಗೆ ಹೋಲಿಸಿದರೆ ಅತೀ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದರು. 2025 ರಲ್ಲಿ 7,63,494 ಮಂದಿ ಪ್ರವಾಸಿಗರು ರಾಜಾಸೀಟ್‌ಗೆ ಭೇಟಿ ನೀಡಿದ್ದಾರೆ. 2024ಕ್ಕೆ ಹೋಲಿಸುವುದಾದ್ರೆ 2025ರಲ್ಲಿ ರಾಜಾಸೀಟ್‌ಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆಯಲ್ಲಿ 2.27 ಲಕ್ಷದಷ್ಟು ಕುಸಿತ ಕಂಡಿದೆ.

ಪ್ರವಾಸಿಗರ ಅಚ್ಚು ಮೆಚ್ಚಿನ ತಾಣಗಳ ಪಟ್ಟಿಯಲ್ಲಿ 2ನೇ ಸ್ಥಾನವನ್ನು ಕುಶಾಲನಗರದ ನಿಸರ್ಗಧಾಮ ಪಡೆದಿದೆ. 2024ರಲ್ಲಿ ನಿಸರ್ಗಧಾಮಕ್ಕೆ 5,98,605 ಮಂದಿ ಪ್ರವಾಸಿಗರು ಭೇಟಿ ನೀಡಿದ್ದರು. 2025 ರಲ್ಲಿ 6,06,886 ಮಂದಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ದುಬಾರೆಗೆ 4,17,076, ಹಾರಂಗಿಗೆ 3,34,921, ಅಬ್ಬಿಫಾಲ್ಸ್‌ಗೆ 2,81,698 ಮಂದಿ, ಜನರಲ್ ತಿಮ್ಮಯ್ಯ ಮ್ಯೂಸಿಯಂಗೆ 51,239 ಮಂದಿ ಹಾಗೂ ಮಾಂದಲ್‌ಪಟ್ಟಿಗೆ 41,697 ಮಂದಿ ಪ್ರವಾಸಿಗರು ಭೇಟಿ ನೀಡಿದ್ದಾರೆ.

