ಗಾಂಧಿನಗರ: ಮೊರ್ಬಿ (Morbi) ಮೂಲದ ವ್ಯಾಪಾರಿಯೊಬ್ಬರ ಬಳಿಯಿಂದ ಬರೋಬ್ಬರಿ 2 ಲಕ್ಷ ಮೌಲ್ಯದ 40 ಕೆ.ಜಿ ಕೂದಲನ್ನು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ಸಂಬಂಧ ಇನ್ನೂ ಐವರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಬಂಧಿತನನ್ನು ಪುರುಷೋತ್ತಮ್ ಪಾರ್ಮರ್ ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಪೊಲೀಸರು ಒಟ್ಟು ಆರು ಮಂದಿಯ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉತ್ತರಪ್ರದೇಶದ ಮೊರ್ಬಿ ನಗರ ಮೂಲದ ಪುಷ್ಪೇಂದ್ರ ಸಿಂಗ್ ಗಾಂಧಿಗ್ರಾಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪಾರ್ಮರ್ ದರೋಡೆ ಮಾಡುವ ಉದ್ದೇಶದಿಂದಲೇ ಐವರನ್ನು ಕರೆದುಕೊಂಡು ಬಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಇಮ್ರಾನ್ ಖಾನ್ ಅರೆಸ್ಟ್- ಪ್ರತಿಭಟನೆಯಲ್ಲಿ 8 ಸಾವು, 100ಕ್ಕೂ ಹೆಚ್ಚು ಮಂದಿಗೆ ಗಾಯ
ರಾಜ್‍ಕೋಟ್ ಹಾಗೂ ಮೊರ್ಬಿಯ ಕ್ಷೌರದ ಅಂಗಡಿಗಳಿಂದ ಸುಮಾರು 2 ಲಕ್ಷ ರೂ. ಮೌಲ್ಯದ 40 ಕೆ.ಜಿ ಕೂದಲನ್ನು (Hair Robbery) ಕೋಲ್ಕತ್ತಾಗೆ ಮಾರಾಟ ಮಾಡಲೆಂದು ತೆಗೆದುಕೊಂಡು ಹೋಗುತ್ತಿದ್ದರು. ಹೀಗಾಗಿ ಕೂದಲನ್ನು ಪ್ಲಾಸ್ಟಿಕ್ ಬ್ಯಾಗ್‍ನಲ್ಲಿ ತುಂಬಿಕೊಂಡು ಗೆಳಯನ ಜೊತೆ ಬೈಕ್ ನಲ್ಲಿ ಮೊರ್ಬಿ ರಸ್ತೆಯಲ್ಲಿ ಸಿಂಗ್ ಹೊರಟಿದ್ದರು. ಹೀಗೆ ಹೋಗುತ್ತಿದ್ದ ಸಂದರ್ಭದಲ್ಲಿ ರಸ್ತೆ ಮಧ್ಯೆ ಬೈಕ್ ಮುಂದೆ ಆಟೋ ಬಂದು ನಿಂತಿದೆ. ಅಲ್ಲದೆ ಅದರಲ್ಲಿಂದ ಇಳಿದ ಮೂವರು ನೇರವಾಗಿ ಇವರ ಬಳಿ ಬಂದು ಮಾತಿನ ಚಕಮಕಿ ನಡೆಸಿದ್ದಾರೆ. ಇದೇ ವೇಳೆ ಆಟೋದಿಂದ ಮತ್ತೆ ಇಬ್ಬರು ಇಳಿದು ಬಂದು ಬೈಕ್ ನಲ್ಲಿದ್ದ ಗೆಳೆಯನ ಕೊರಳ ಪಟ್ಟಿ ಹಿಡಿದು ಕ್ಯಾತೆ ತೆಗೆದಿದ್ದಾರೆ. ಅಲ್ಲದೆ ಬೈಕಿನಲ್ಲಿದ್ದ ಕೂದಲನ್ನು ತೆಗೆದುಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ.
ಇತ್ತ ಜಗಳ ನಡೆಯುತ್ತಿದ್ದಂತೆಯೇ ಸಿಂಗ್ ಕಂಟ್ರೋಲ್ ರೂಂಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆಟೋದ ನಂಬರ್ ಕೂಡ ಪೊಲೀಸರಿಗೆ ನೀಡಿದರು.
ಒಟ್ಟಿನಲ್ಲಿ ದೋಡೆ ಪ್ರಕರಣ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ಪಾರ್ಮರ್ ಜೊತೆ ಕೈಜೋಡಿಸಿದ ಉಳಿದ ಐವರಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.