ಮುಂಬೈ: ಐಪಿಎಲ್‍ನಲ್ಲಿ ಅದೇಷ್ಟೋ ಮಂದಿ ಆಟಗಾರರು ರಾತ್ರೋ ರಾತ್ರಿ ಬೆಳಕಿಗೆ ಬಂದಿದ್ದಾರೆ. ಅದೇ ರೀತಿ ಮಿಂಚಿ ಮರೆಯಾದವರು ಕೂಡ ಇದ್ದಾರೆ. ಇದೀಗ ತಮ್ಮ ಆಟದ ಶ್ರಮ, ಶ್ರದ್ಧೆಗೆ ಐಪಿಎಲ್‍ನಲ್ಲಿ ವೇದಿಕೆ ಸಿಕ್ಕಾಗ ಅದನ್ನು ಸರಿಯಾಗಿ ಬಳಸಿಕೊಂಡಿರುವ ಮಧ್ಯಪ್ರದೇಶ ಮೂಲದ ಆಲ್‍ರೌಂಡರ್ ಆಟಗಾರ ವೆಂಕಟೇಶ್ ಅಯ್ಯರ್ ಕೇವಲ ಒಂದೇ ವರ್ಷದಲ್ಲಿ 20 ಲಕ್ಷವಿದ್ದ ತಮ್ಮ ಸಂಬಳವನ್ನು 8 ಕೋಟಿಗೆ ಏರಿಸಿಕೊಳ್ಳುವ ಮೂಲಕ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ.
ದೇಶಿ ಕ್ರಿಕೆಟ್‍ನಲ್ಲಿ ಉತ್ತಮ ಪ್ರದರ್ಶನ ತೋರಿದ್ದರು ಕೂಡ ಅಷ್ಟು ಸದ್ದು ಮಾಡದಿದ್ದ ಅಯ್ಯರ್ ಎಲ್ಲರಿಗೂ ಪರಿಚಯವಾಗಿದ್ದು 14ನೇ ಆವೃತ್ತಿಯ ಐಪಿಎಲ್ ಮೂಲಕ. ದುಬೈನಲ್ಲಿ ನಡೆದ 14ನೇ ಆವೃತ್ತಿಯ ಸೆಕೆಂಡ್ ಇನ್ನಿಂಗ್ಸ್ ಐಪಿಎಲ್‍ನಲ್ಲಿ ಕೋಲ್ಕತ್ತಾ ಪರ ಅಬ್ಬರದ ಬ್ಯಾಟಿಂಗ್ ಮೂಲಕ ತಂಡಕ್ಕೆ ಶಕ್ತಿ ತುಂಬಿ ಫೈನಲ್‍ಗೆ ಹೋಗುವಂತೆ ಮಾಡಿದ ಕೀರ್ತಿಕೂಡ ವೆಂಕಟೇಶ್ ಅಯ್ಯರ್‌ಗೆ ಸಲ್ಲುತ್ತದೆ. 2021ರ ಐಪಿಎಲ್‍ನ ಹರಾಜಿನಲ್ಲಿ ಅಯ್ಯರ್‌ರನ್ನು ಕೇವಲ 20 ಲಕ್ಷ ರೂಪಾಯಿಗೆ ಕೋಲ್ಕತ್ತಾ ಫ್ರಾಂಚೈಸ್ ಖರೀದಿಸಿತು. ಬಳಿಕ ತಂಡದಲ್ಲಿ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ಅಯ್ಯರ್ ಇದೀಗ ಸ್ಟಾರ್ ಆಟಗಾರರಾಗಿ ಗುರುತಿಸಿಕೊಂಡು ತಂಡದಲ್ಲಿ ರಿಟೈನ್ ಆಗುವ ಮಟ್ಟಕ್ಕೆ ಬೆಳೆದಿದ್ದಾರೆ. ಇದನ್ನೂ ಓದಿ: ಕನಸು ನನಸಾಗಿಸಿಕೊಂಡ ಅಯ್ಯರ್ – ಟೀಂ ಇಂಡಿಯಾಗೆ ನೂತನ ಆಲ್‍ರೌಂಡರ್ ಎಂಟ್ರಿ
ಈಗಾಗಲೇ 15ನೇ ಆವೃತ್ತಿಯ ಐಪಿಎಲ್‍ಗಾಗಿ 8 ತಂಡಗಳು ಕೆಲ ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ಅದರಂತೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 4 ಮಂದಿ ಆಟಗಾರರನ್ನು ರಿಟೈನ್ ಮಾಡಿಕೊಂಡಿದ್ದು, ಅದರಲ್ಲಿ ವೆಂಕಟೇಶ್ ಅಯ್ಯರ್ ಕೂಡ ಸೇರಿದ್ದಾರೆ. ಈ ಹಿಂದೆ 20 ಲಕ್ಷ ರೂಪಾಯಿಗೆ ತಂಡ ಸೇರಿದ್ದ ಅಯ್ಯರ್ ಇದೀಗ ರಿಟೈನ್‍ನಲ್ಲಿ ಬರೋಬ್ಬರಿ 8 ಕೋಟಿ ಪಡೆದಿದ್ದಾರೆ. ಈ ಮೂಲಕ ಒಂದೇ ವರ್ಷದಲ್ಲಿ 4000% ಸಂಬಳದಲ್ಲಿ ಏರಿಕೆ ಕಂಡು ಕೋಟ್ಯಧಿಪತಿ ಆಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಲಕ್ನೋ ಫ್ರಾಂಚೈಸ್ ನೀಡಿದ ಆಫರ್‌ನಿಂದ ರಾಹುಲ್, ರಶೀದ್ ಖಾನ್‍ಗೆ ಐಪಿಎಲ್ ಬ್ಯಾನ್ ಭೀತಿ?
ಅಯ್ಯರ್ ಐಪಿಎಲ್ ಪ್ರದರ್ಶನದಿಂದಾಗಿ ಟೀಂ ಇಂಡಿಯಾಗೆ ಕೂಡ ಆಯ್ಕೆಯಾಗಿ ಟಿ20 ಪಂದ್ಯನ್ನಾಡಿದ್ದಾರೆ. ಇದೀಗ ಭವಿಷ್ಯದ ಟೀಂ ಇಂಡಿಯಾದ ತಾರೆಯಾಗಿ ಗುರುತಿಸಿಕೊಂಡಿರುವ ಅಯ್ಯರ್ ಇನ್ನಷ್ಟೂ ಉತ್ತಮ ಪ್ರದರ್ಶನದ ಮೂಲಕ ಮಿಂಚಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.