ದೇಶದ ಮೊದಲ ಬುಲೆಟ್ ರೈಲು ಸಂಚರಿಸೋ ಮಾರ್ಗದಲ್ಲಿ ರೈಲ್ವೇಗೆ ಬರುತ್ತಿಲ್ಲ ನಿರೀಕ್ಷಿತ ಅದಾಯ!

Public TV
4 Min Read
bullet train

ನವದೆಹಲಿ: ಅಹಮದಾಬಾದ್- ಮುಂಬೈ ನಡುವಿನ ಬುಲೆಟ್ ರೈಲು ಯೋಜನೆಗೆ ಪ್ರಧಾನಿ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೋ ಅಬೆ ಈಗಾಗಲೇ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಆದರೆ ಪ್ರಸ್ತುತ ಈ ಎರಡು ನಗರಗಳ ಮಧ್ಯೆ ಕ್ರಮಿಸುವ ರೈಲಿನಲ್ಲಿ ಕಡಿಮೆ ಸಂಖ್ಯೆಯಲ್ಲಿ ಪ್ರಯಾಣಿಕರು ಸಂಚರಿಸುತ್ತಿದ್ದು, ರೈಲ್ವೇಗೆ ನಿರೀಕ್ಷಿತ ಆದಾಯ ಬರುತ್ತಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

ಮುಂಬೈ ಮೂಲದ ಸಾಮಾಜಿಕ ಕಾರ್ಯಕರ್ತ ಅನಿಲ್ ಗಲಗಲಿ ಎಂಬವರು ಜುಲೈ 1 ರಿಂದ – ಸೆಪ್ಟೆಂಬರ್ 30 ರವರೆಗೆ ಮುಂಬೈ- ಅಹಮದಾಬಾದ್ ನಗರಗಳ ಮಧ್ಯೆ ಸಂಚರಿಸುತ್ತಿರುವ ರೈಲುಗಳಿಂದ ಬಂದಿರುವ ಆದಾಯ ಎಷ್ಟು ಎಂದು ಆರ್‍ಟಿಐ ಅಡಿ ಪ್ರಶ್ನೆ ಕೇಳಿದ್ದರು.

ಈ ಪ್ರಶ್ನೆಗೆ ಪಶ್ಚಿಮ ರೈಲ್ವೇ, ಈ ಮಾರ್ಗದಲ್ಲಿ ಸಂಚರಿಸುವ ರೈಲಿನಲ್ಲಿ ಶೇ.40 ರಷ್ಟು ಸೀಟ್ ಗಳು ಖಾಲಿ ಇರುತ್ತದೆ. ಇದರಿಂದಾಗಿ 30 ಕೋಟಿ ರೂ.(ತಿಂಗಳಿಗೆ 10 ಕೋಟಿ ರೂ.) ನಷ್ಟವಾಗುತ್ತಿದೆ ಎಂದು ಉತ್ತರಿಸಿದೆ.

ಇದೇ ವೇಳೆ ಈ ಎರಡು ನಗರಗಳ ಮಧ್ಯೆ ಹೊಸದಾಗಿ ಯಾವುದೇ ರೈಲು ಓಡಿಸುವ ಪ್ರಸ್ತಾಪ ಇಲ್ಲ. ಕಳೆದ ಮೂರು ತಿಂಗಳ ಅವಧಿಯಲ್ಲಿ ಮುಂಬೈ- ಅಹಮದಾಬಾದ್ ನಡುವೆ ಸಂಚರಿಸುವ ರೈಲಿನಲ್ಲಿ ಶೇ.40 ಸೀಟ್ ಗಳು ಖಾಲಿ ಇದ್ದರೆ, ಅಹಮದಾಬಾದ್- ಮುಂಬೈ ನಡುವೆ ಸಂಚರಿಸುವ ರೈಲಿನಲ್ಲಿ ಶೇ.44 ಸೀಟ್ ಗಳು ಖಾಲಿ ಇದೆ ಎಂದು ಉತ್ತರಿಸಿದೆ.

ಈ ಅವಧಿಯಲ್ಲಿ ಮುಂಬೈ- ಅಹಮದಾಬಾದ್ ನಡುವೆ ಒಟ್ಟು 7,35,630 ಸೀಟ್‍ಗಳ ಪೈಕಿ 4,44,795 ಸೀಟ್ ಗಳು ಬುಕ್ ಆಗಿದ್ದು, ಒಟ್ಟು 30,16,24,623 ರೂ. ಆದಾಯ ಸಂಗ್ರಹವಾಗಿದೆ. 44,29,08,220 ರೂ. ಆದಾಯವನ್ನು ನಿರೀಕ್ಷಿಸಿದ್ದ ರೈಲ್ವೇಗೆ 14,12,83,597 ರೂ. ನಷ್ಟವಾಗಿದೆ ಎಂದು ಹೇಳಿದೆ.

ಅಹಮದಾಬಾದ್- ಮುಂಬೈ ನಡುವೆ ಒಟ್ಟು 7,06,446 ಸೀಟ್ ಗಳ ಪೈಕಿ ಕೇವಲ 3,98,002 ಸೀಟ್ ಗಳು ಬುಕ್ ಆಗಿವೆ. ಒಟ್ಟು ಸೀಟ್ ಗಳಿಂದ 26,74,56,982 ರೂ. ಆದಾಯವನ್ನು ನಿರೀಕ್ಷಿಸಿದ್ದ ರೈಲ್ವೇಗೆ ಒಟ್ಟು 42,53,11,471 ರೂ. ಆದಾಯ ಬಂದಿದ್ದು, 15,78,54,489 ರೂ. ನಷ್ಟವಾಗಿದೆ ಎಂದು ಉತ್ತರಿಸಿದೆ.

ಅತಿ ಹೆಚ್ಚು ಪ್ರಯಾಣಿಕರು ಸ್ಲೀಪರ್ ಕೋಚ್ ನಲ್ಲಿ ಪ್ರಯಾಣಿಸಿದರೆ, ಹೆಚ್ಚಿನ ಸಂಖ್ಯೆಯ ಎಸಿ ಸೀಟ್ ಗಳು ಖಾಲಿ ಇರುತ್ತದೆ ಎಂದು ಮಾಹಿತಿ ನೀಡಿದೆ.

ಈ ಎರಡು ನಗರಗಳ ಮಧ್ಯೆ ಸಂಚರಿಸುತ್ತಿರುವ ದುರಂತೋ, ಶತಾಬ್ಧಿ ಎಕ್ಸ್ ಪ್ರೆಸ್, ಲೋಕಶಕ್ತಿ ಎಕ್ಸ್ ಪ್ರೆಸ್, ಗುಜರಾತ್ ಮೇಲ್, ಭಾವಾ ನಗರ್ ಎಕ್ಸ್ ಪ್ರೆಸ್, ಸೌರಾಷ್ಟ್ರ ಎಕ್ಸ್ ಪ್ರೆಸ್, ವಿವೇಕ್ – ಭುಜ್ ಎಕ್ಸ್ ಪ್ರೆಸ್ ರೈಲುಗಳು ಸಂಚರಿಸುತ್ತಿವೆ.

ಭಾರತ ಸರ್ಕಾರ ಯಾವುದೇ ಪೂರ್ವ ಸಿದ್ಧತೆ ಇಲ್ಲದೇ ತರಾತುರಿಯಲ್ಲಿ ಬುಲೆಟ್ ಯೋಜನೆ ಆರಂಭಿಸಲು ಮುಂದಾಗಿದೆ. 1 ಲಕ್ಷ ಕೋಟಿ ರೂ. ಹಣದ ಯೋಜನೆ ನಿಜವಾಗಿಯೂ ಕಾರ್ಯಸಾಧುವೆ ಎಂದು ಅನಿಲ್ ಗಲಗಲಿ ಅವರು ಗಂಭೀರ ಪ್ರಶ್ನೆ ಎತ್ತಿದ್ದಾರೆ.

ಮುಂಬೈ- ಅಹಮದಾಬಾದ್ ಮಾರ್ಗ ನಷ್ಟದಲ್ಲಿರುವುದಾಗಿ ಆರ್‍ಟಿಐ ಅಡಿ ಮಾಹಿತಿ ಸಿಕ್ಕಿದೆ. ಹೀಗಾಗಿ ಈ ಯೋಜನೆ ಆರಂಭಿಸುವ ಮುನ್ನ ಮತ್ತೊಮ್ಮೆ ಪರಿಶೀಲಿಸುವುದು ಒಳಿತು. ಆರಂಭಗೊಂಡ ಬಳಿಕ ಭಾರತೀಯ ಪ್ರಜೆಗಳಿಗೆ ಇದು ಬಿಳಿಯಾನೆ ಆಗಬಾರದು ಎನ್ನುವುದೇ ನನ್ನ ಕಳಕಳಿ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಜಪಾನ್ ನೀಡುತ್ತಿರುವ 88 ಸಾವಿರ ಕೋಟಿ ರೂ. ಸಾಲವನ್ನು ಮರುಪಾವತಿ ಮಾಡಬೇಕಾದರೆ ಪ್ರತಿ ದಿನ 100 ಟ್ರಿಪ್ ರೈಲು ಸಂಚರಿಸಬೇಕು ಅಥವಾ ದಿನಕ್ಕೆ 88 ಸಾವಿರದಿಂದ 1.18 ಲಕ್ಷ ಪ್ರಯಾಣಿಕರು ಸಂಚರಿಸಬೇಕು ಎಂದು ಈ ಹಿಂದೆ ಈ ಯೋಜನೆ ಬಗ್ಗೆ ಅಧ್ಯಯನ ನಡೆಸಿದ್ದ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಅಹಮದಾಬಾದ್ ರೈಲ್ವೇ ಇಲಾಖೆಗೆ ವರದಿ ನೀಡಿತ್ತು. ಅಷ್ಟೇ ಅಲ್ಲದೇ 300 ಕಿ.ಮೀ ಪ್ರಯಾಣಕ್ಕೆ ಒಂದು ಟಿಕೆಟ್‍ಗೆ 1500 ರೂ ದರವನ್ನು ನಿಗದಿ ಮಾಡಬೇಕೆಂಬ ಅಂಶವನ್ನು ವರದಿಯಲ್ಲಿ ತಿಳಿಸಿತ್ತು.

ಬುಲೆಟ್ ರೈಲು ಬೇಕು ಎನ್ನುವವರ ವಾದ ಏನು?
ಈ ಹಿಂದೆ ಭಾರತ ಸರ್ಕಾರ ಉಪಗ್ರಹ ನಿರ್ಮಾಣಕ್ಕೆ ಕೈ ಹಾಕಿದಾಗಲೂ ವಿರೋಧ ಕೇಳಿ ಬಂದಿತ್ತು. ವಿಮಾನ ಯಾನ ಸೇವೆ ಆರಂಭಗೊಂಡ ಅವಧಿಯಲ್ಲಿ ಭಾರತಕ್ಕೆ ಈ ಸೇವೆ ಅಗತ್ಯವಿದೆಯೇ? ವಿಮಾನದಲ್ಲಿ ಎಷ್ಟು ಮಂದಿ ಹೋಗುತ್ತಾರೆ ಎನ್ನುವ ಪ್ರಶ್ನೆ ಎದ್ದಿತ್ತು. ಆದರೆ ಈಗ ವಿಮಾನ ಪ್ರಯಾಣ ದುಬಾರಿ ಆಗಿದ್ದರೂ ಹೆಚ್ಚಿನ ಸಂಖ್ಯೆಯ ಜನ ಈ ಸೇವೆ ಬಳಸುತ್ತಿದ್ದಾರೆ. ಮೆಟ್ರೋ ಸೇವೆ ಆರಂಭಗೊಂಡಾಗಲೂ ಜನರಿಂದ ಪ್ರಶ್ನೆ ಎದ್ದಿತ್ತು. ಆದರೆ ಈಗ ಬೆಂಗಳೂರು ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಬುಲೆಟ್ ರೈಲು ಆರಂಭದಲ್ಲಿ ಎಷ್ಟೇ ಟೀಕೆ ಬಂದರೂ ಭವಿಷ್ಯದಲ್ಲಿ ಜನರಿಗೆ ನೆರವಾಗಲಿದೆ ಎನ್ನುವ ವಾದ ಬುಲೆಟ್ ರೈಲು ಪ್ರಿಯ ಜನರದ್ದು.

ಇದನ್ನೂ ಓದಿ: 31ನೇ ಬಾರಿ ಹಿಡಿಯಿತು ಅದೃಷ್ಟ -ಬುಲೆಟ್ ರೈಲು ಯೋಜನೆಗೆ ಲೋಗೋ ರೂಪಿಸಿದ ವಿದ್ಯಾರ್ಥಿಯ ಸಾಧನೆಯ ಕತೆ

ಪರ ವಿರೋಧ ಮಾತುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಭಾರತ ಬುಲೆಟ್ ರೈಲು ಯೋಜನೆ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಇದರಿಂದ ದೇಶದ ಆರ್ಥಿಕತೆ ಬದಲಾಗುತ್ತಾ? ಕಮೆಂಟ್ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ.

modi japan bullet train 1

modi japan bullet train 6

modi japan bullet train 5

modi japan bullet train 4

modi japan bullet train 3

modi japan bullet train 2

NARENDRA Modi 6

NARENDRA Modi 5

NARENDRA Modi 4

NARENDRA Modi 3

NARENDRA Modi 1 2

Share This Article
Leave a Comment

Leave a Reply

Your email address will not be published. Required fields are marked *