ರಾಯಚೂರು: ನಗರಸಭೆಯ ಅವಾಂತರದ ಬೆನ್ನಲ್ಲೇ ಕಲುಷಿತ ನೀರು ಕುಡಿದು ಮಾನ್ವಿ ತಾಲೂಕಿನ ಗ್ರಾಮಗಳ 40 ಜನ ಆಸ್ಪತ್ರೆ ಸೇರುತ್ತಿದ್ದಾರೆ. ಓರ್ವ ಮಹಿಳೆ ಸಾವನ್ನಪ್ಪಿದ್ದಾಳೆ.
ರಾಯಚೂರಿನ ಮಾನ್ವಿ ತಾಲೂಕಿನ ವಲ್ಕಂದಿನ್ನಿ ಹಾಗೂ ಜೂಕೂರು ಗ್ರಾಮದಲ್ಲಿ ಕಲುಷಿತ ನೀರು ಕುಡಿದು 40ಕ್ಕೂ ಹೆಚ್ಚು ಗ್ರಾಮಸ್ಥರು ಅಸ್ವಸ್ಥರಾಗಿದ್ದಾರೆ. 10ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಜೂಕೂರು ಗ್ರಾಮದಲ್ಲಿ ವಾಂತಿ ಭೇದಿಯಿಂದ ಲಕ್ಷ್ಮಿ(28) ಸಾವನ್ನಪ್ಪಿದ್ದು, ಇದಕ್ಕೆ ಗ್ರಾಮಸ್ಥರು ಕಲುಷಿತ ನೀರೇ ಕಾರಣ ಎನ್ನುತ್ತಿದ್ದಾರೆ. ಇದನ್ನೂ ಓದಿ: ಅಬ್ಬರದ ಮಳೆ – ಮನೆಯ ಮೇಲೆ ಮರ ಬಿದ್ದು 6 ಜನರಿಗೆ ಗಾಯ
Advertisement
Advertisement
ಆದ್ರೆ ಸಾವಿನ ಬಗ್ಗೆ ಆರೋಗ್ಯ ಇಲಾಖೆ ಇನ್ನೂ ಸ್ಪಷ್ಟನೆ ನೀಡಿಲ್ಲ. ತುಂಗಭದ್ರಾ ನದಿಯಿಂದ ಕಾಲುವೆಗೆ ನೀರು ಹರಿಸಿ ಅದೇ ನೀರನ್ನು ಶುದ್ಧೀಕರಿಸದೇ ವಲ್ಕಂದಿನ್ನಿ ಹಾಗೂ ಜೂಕೂರು ಗ್ರಾಮಕ್ಕೆ ನೇರವಾಗಿ ಸರಬರಾಜು ಮಾಡಲಾಗಿದೆ. ಹಳ್ಳ ಹಾಗೂ ಚರಂಡಿಗಳ ನೀರು ತುಂಗಭದ್ರಾ ನದಿಗೆ ನೇರವಾಗಿ ಸೇರುವುದರಿಂದ ನದಿ ನೀರು ಕಲುಷಿತವಾಗಿದೆ.
Advertisement
ಕಾರಣವೇನು?
ಪಂಚಾಯತಿ ಅಧಿಕಾರಿಗಳು ನದಿಯಿಂದ ನೇರವಾಗಿ ಗ್ರಾಮಗಳಿಗೆ ನೀರನ್ನು ಸರಬರಾಜು ಮಾಡಿ ಯಡವಟ್ಟು ಮಾಡಿದ್ದಾರೆ. ನೀರು ಸರಬರಾಜು ಮಾಡುವ ಪೈಪುಗಳು ಅಲ್ಲಲ್ಲಿ ಹಾಳಾಗಿರುವುದರಿಂದ ಕೊಳಚೆ ನೀರು ಪೈಪಿಗೆ ಸೇರಿದೆ. ಇದೇ ನೀರನ್ನು ಕುಡಿದ ಮಕ್ಕಳು ಹಾಗೂ ದೊಡ್ಡವರು ವಾಂತಿ ಭೇದಿಗೆ ತುತ್ತಾಗಿ ಆಸ್ಪತ್ರೆ ಸೇರಿದ್ದಾರೆ.
Advertisement
ಈ ಮಧ್ಯೆ ಎಚ್ಚೆತ್ತ ಆರೋಗ್ಯ ಇಲಾಖೆ ವಲ್ಕಂದಿನ್ನಿ ಗ್ರಾಮದ ಸಮುದಾಯ ಭವನದಲ್ಲಿ ಗ್ರಾಮಸ್ಥರಿಗೆ ಚಿಕಿತ್ಸೆ ವ್ಯವಸ್ಥೆ ಮಾಡಿದೆ. ವೈದ್ಯರು ಮತ್ತು ಆಶಾ ಅಂಗನವಾಡಿ ಕಾರ್ಯಕರ್ತರ ನಿಯೋಜನೆ ಮಾಡಲಾಗಿದೆ. ವಾಂತಿ ಭೇದಿಯಿಂದ ಅಸ್ವಸ್ಥಗೊಂಡಿರುವವರಿಗೆ ಸಮುದಾಯ ಭವನದಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.
ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲು ಗ್ರಾಮದಲ್ಲಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಗ್ರಾಮಸ್ಥರು ಈಗ ಕಾಯಿಸಿ ಮತ್ತು ಸೋಸಿ ನೀರು ಕುಡಿಯಲು ಸೂಚನೆ ನೀಡಲಾಗುತ್ತಿದೆ. ಆದ್ರೆ ಕಲುಷಿತ ನೀರು ಸರಬರಾಜು ಮಾಡುವ ಮೊದಲೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿತ್ತು ಅಂತ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಅಗತ್ಯ ಕ್ರಮ ಕೈಗೊಂಡಿದ್ದು, ಕುಡಿಯುವ ನೀರಿನ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದೆ. ತಪ್ಪಿತಸ್ಥ ಅಧಿಕಾರಿಗಳನ್ನ ಅಮಾನತ್ತು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ನೂರ್ ಜಹರಾ ಖಾನಂ ಹೇಳಿದ್ದಾರೆ. ಇದನ್ನೂ ಓದಿ: ಸಮಯ ಸಂದರ್ಭ ಬಂದಾಗ ಏನು ಬೇಕಾದರೂ ಆಗಬಹುದು ಉ.ಕ ಪ್ರತ್ಯೇಕ ರಾಜ್ಯ ಕೂಗಿಗೆ ದನಿಗೂಡಿಸಿದ ಬಿಸಿ.ಪಾಟೀಲ್
ಸದ್ಯ, ನೀರಿನ ಮಾದರಿಯನ್ನ ಪ್ರಯೋಗಾಲಯಕ್ಕೆ ಕಳುಹಿಸಿರುವ ಆರೋಗ್ಯ ಇಲಾಖೆ ವರದಿಗಾಗಿ ಕಾಯುತ್ತಿದೆ. ಗ್ರಾಮಗಳಲ್ಲಿ ತಲಾ ಒಂದು ಆರ್‍ಓ ಪ್ಲಾಂಟ್ ಇದ್ದರೂ ಇಲ್ಲಿನ ಜನ ಸಂಖ್ಯೆಗೆ ಶುದ್ಧ ಕುಡಿಯುವ ನೀರು ಸಾಲುತ್ತಿಲ್ಲ. ಹೀಗಾಗಿ ಜನ ಕಲುಷಿತ ನೀರನ್ನ ಕುಡಿಯುವ ಪರಸ್ಥಿತಿ ಎದುರಾಗಿದೆ. ಕನಿಷ್ಠ ಈಗಲಾದ್ರೂ ಮಾನ್ವಿ ತಾಲೂಕು ಆಡಳಿತ ಎಚ್ಚೆದ್ದು, ನೀರಿನ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.