– ಚಲಿಸುತ್ತಿದ್ದ ಕಾರಿನ ಮೇಲ್ಛಾವಣಿ ಹಿಡಿದು ಸಾಹಸ ಮೆರೆದ ಕಾನ್ಸ್ಟೇಬಲ್
ಚೆನ್ನೈ: ತಮಿಳುನಾಡು (Tamil Nadu) ಪೊಲೀಸರು, ಗುಟ್ಕಾ (Gutkha) ಸ್ಮಗ್ಲಿಂಗ್ ಮಾಡುತ್ತಿದ್ದ ಗ್ಯಾಂಗ್ನ್ನು 40 ಕಿಮೀ ಚೇಸ್ ಮಾಡಿ ಹಿಡಿದಿದ್ದಾರೆ. ಈ ವೇಳೆ ಹೆಡ್ ಕಾನ್ಸ್ಟೇಬಲ್ ಒಬ್ಬರು ಚಲಿಸುತ್ತಿದ್ದ ಕಾರಿನ ಮೇಲ್ಛಾವಣಿಯನ್ನು ಬಿಗಿಯಾಗಿ ಹಿಡಿದುಕೊಂಡು ಸಾಹಸ ಮೆರೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೊಯಮತ್ತೂರು ಬಳಿ ಪೊಲೀಸರು ಕಾರನ್ನು ತಡೆದು ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಕಾರಿನ ಹಿಂಭಾಗ ಚೀಲಗಳು ಕಾಣಿಸಿದ್ದವು. ಸಬ್-ಇನ್ಸ್ಪೆಕ್ಟರ್ ಒಬ್ಬರು ಚೀಲಗಳನ್ನು ಪರಿಶೀಲಿಸಲು ಮುಂದಾದಾಗ, ಕಾರಿನಲ್ಲಿದ್ದ ಮೂವರು ವ್ಯಕ್ತಿಗಳು ಪೊಲೀಸರನ್ನು ತಳ್ಳಿ, ಕಾರಿನ ಬಾಗಿಲುಗಳನ್ನು ಲಾಕ್ ಮಾಡಿ ವೇಗವಾಗಿ ಕಾರನ್ನು ಚಲಾಯಿಸಿಕೊಂಡು ಹೋಗಲು ಯತ್ನಿಸಿದ್ದಾರೆ. ಆಗ ಹೆಡ್ ಕಾನ್ಸ್ಟೇಬಲ್ ವೇಲ್ಮುರುಗನ್ ಕಾರಿನ ಮೇಲ್ಛಾವಣಿಯನ್ನು ಬಿಗಿಯಾಗಿ ಹಿಡಿದುಕೊಂಡಿದ್ದಾರೆ. ಆದರೂ ದುಷ್ಕರ್ಮಿಗಳು ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪ – ಶಾಲಾ ಗೆಳೆಯನೊಂದಿಗೆ ಸೇರಿ ವ್ಯಕ್ತಿಯನ್ನು ಹತೈಗೈದ ಮಹಿಳೆ
ಆ ಕಾರು ಕೊಯಮತ್ತೂರಿನ ಹೊರವಲಯದಲ್ಲಿರುವ ಹಲವು ಜನನಿಬಿಡ ರಸ್ತೆಗಳ ಮೂಲಕ ಸಾಗಿ ಟೋಲ್ ಪ್ಲಾಜಾವನ್ನು ತಲುಪಿತು. ಈ ವೇಳೆ ಚಾಲಕ ಫಾಸ್ಟ್ಟ್ಯಾಗ್ (FASTag) ಬಳಸಿ ಟೋಲ್ ಶುಲ್ಕವನ್ನು ಸಹ ಕಟ್ಟಿದ್ದಾನೆ.
ಪೊಲೀಸರು ಕಾರನ್ನು ಚೇಸ್ ಮಾಡುತ್ತಿರುವ ಮಾಹಿತಿ ಪಡೆದ ನೆರೆಯ ತಿರುಪ್ಪೂರ್ ಜಿಲ್ಲೆಯ ಪೊಲೀಸ್ ತಂಡಗಳು ಮತ್ತು ಆಂಬ್ಯುಲೆನ್ಸ್ ಸಿಬ್ಬಂದಿ ಕೂಡ ಕಾರನ್ನು ತಡೆಯಲು ಕಾರ್ಯಾಚರಣೆಗಿಳಿದ್ದರು. ಅಂತಿಮವಾಗಿ ಸುಮಾರು 40 ಕಿಮೀ ದೂರ ತೆರಳಿದ್ದ ಕಾರನ್ನು ಪೊಲೀಸ್ ವಾಹನಗಳು ಮತ್ತು ಆಂಬ್ಯುಲೆನ್ಸ್ಗಳು ಸುತ್ತುವರೆದು ತಡೆದಿವೆ.
ಕಾರಿನಲ್ಲಿದ್ದ ಮೂವರ ಪೈಕಿ ಒಬ್ಬನನ್ನು ತಕ್ಷಣವೇ ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಈ ವೇಳೆ ಪರಾರಿಯಾಗಿದ್ದು, ಅವರನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು ಬಾಬು ಧಾರಾ (27), ರಾಜೇಶ್ (23) ಮತ್ತು ಸುರೇಶ್ (20) ಎಂದು ಗುರುತಿಸಲಾಗಿದೆ.
ವಿಚಾರಣೆ ವೇಳೆ ತಂಬಾಕು ಉತ್ಪನ್ನಗಳನ್ನು ಬೆಂಗಳೂರಿನಿಂದ ಕೊಯಮತ್ತೂರಿಗೆ ಕೊಂಡೊಯ್ಯಲಾಗುತ್ತಿತ್ತು ಎಂದು ಆರೋಪಿಗಳು ತಿಳಿಸಿದ್ದಾರೆ. ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಕಾರಿನಲ್ಲಿ ಸುಮಾರು 300 ಕೆಜಿ ಗುಟ್ಕಾ ಮತ್ತು ಇತರ ನಿಷೇಧಿತ ತಂಬಾಕು ಉತ್ಪನ್ನಗಳನ್ನು ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ವಾಹನವನ್ನು ಬೆನ್ನಟ್ಟುವಲ್ಲಿ ಹಾಗೂ ವೇಲ್ಮುರುಗನ್ ಅವರನ್ನು ರಕ್ಷಿಸುವಲ್ಲಿ ಪೊಲೀಸರಿಗೆ ನೆರವಾದ ಆಂಬ್ಯುಲೆನ್ಸ್ ಸಿಬ್ಬಂದಿ ಮತ್ತು ಸ್ವಯಂಸೇವಕರನ್ನೂ ಜನ ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಮಂತ್ರಾಲಯಕ್ಕೆ ತೆರಳುತ್ತಿದ್ದ ಟಿಟಿ ವಾಹನ ಪಲ್ಟಿ – 10ಕ್ಕೂ ಹೆಚ್ಚು ಜನರಿಗೆ ಗಾಯ


