ಮುಂಬೈ: ಅಪ್ರಾಪ್ತನೋರ್ವ ಕಾರನ್ನು (Car) ಮಿತಿ ಮೀರಿದ ವೇಗದಲ್ಲಿ ಚಲಾಯಿಸಿ ನಾಲ್ಕು ವರ್ಷದ ಬಾಲಕನ ಮೇಲೆ ಹರಿಸಿದ ಘಟನೆ ಮುಂಬೈನಲ್ಲಿ (Mumbai) ನಡೆದಿದೆ. ಪರಿಣಾಮ ಬಾಲಕ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವಡಾಲ ಪ್ರದೇಶದ ಅಂಬೇಡ್ಕರ್ ಕಾಲೇಜು ಬಳಿ ಈ ಅಪಘಾತ (Accident) ಸಂಭವಿಸಿದೆ. ಮೃತ ಬಾಲಕನನ್ನು ಆಯುಷ್ ಲಕ್ಷ್ಮಣ್ ಕಿನ್ವಾಡೆ ಎಂದು ಗುರುತಿಸಲಾಗಿದೆ. ಬಾಲಕನ ಕುಟುಂಬ ಫುಟ್‌ಪಾತ್‌ನಲ್ಲಿ ವಾಸವಾಗಿತ್ತು. ಆತನ ತಂದೆ ಕಾರ್ಮಿಕರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರು ಚಾಲನೆ ಮಾಡುತ್ತಿದ್ದ ಸಂದೀಪ್ ಗೋಲೆ (19) ಎಂಬಾತನನ್ನು ಬಂಧಿಸಲಾಗಿದೆ. ಆತ ವಿಲೇ ಪಾರ್ಲೆ ನಿವಾಸಿಯಾಗಿದ್ದಾನೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ಕಳೆದ ಐದು ವರ್ಷಗಳಲ್ಲಿ ಅತಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸಿದ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರವೂ ಸೇರಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಕಳೆದ ವಾರ ಹೇಳಿತ್ತು. ಇದರ ಬೆನ್ನಲ್ಲೇ ಅಪ್ರಾಪ್ತ ಕಾರು ಚಲಾಯಿಸಿ ಅಪಘಾತಕ್ಕೆ ಕಾರಣನಾದ ಘಟನೆ ನಡೆದಿದೆ.
ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಪಡೆದ ದತ್ತಾಂಶವನ್ನು ಆಧರಿಸಿದ ವರದಿಯಲ್ಲಿ 2018-2022ರ ಅವಧಿಯಲ್ಲಿ ಭಾರತದಾದ್ಯಂತ ರಸ್ತೆ ಅಪಘಾತಗಳಲ್ಲಿ 7 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಉಲ್ಲೇಖಿಸಿಲಾಗಿದೆ. ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ರಸ್ತೆ ಅಪಘಾತದಿಂದ ಸಾವುಗಳು ಸಂಭವಿಸಿವೆ (1,08,882), ತಮಿಳುನಾಡು (84,316) ಮತ್ತು ಮಹಾರಾಷ್ಟ್ರ (66,370) ನಂತರದ ಸ್ಥಾನದಲ್ಲಿವೆ.