ಧಾರವಾಡ: ಹೃದಯದ ಬಡಿತದಲ್ಲಿ ವಿಪರೀತ ಏರುಪೇರಾಗಿ ಸಾವು ಬದುಕಿನ ಮಧ್ಯೆ ಬಾಲಕ ಹೋರಾಡುತ್ತಿದ್ದ ಬಾಲಕನಿಗೆ ಉಚಿತವಾಗಿ ಹೃದಯ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ನಾರಾಯಣ ಹೃದಯಾಲಯ ಮೆಚ್ಚುಗೆಗೆ ಪಾತ್ರವಾಗಿದೆ.
ಸಾಮಾನ್ಯವಾಗಿ 4 ರಿಂದ 5 ವರ್ಷದ ಮಕ್ಕಳ ಹೃದಯ ಬಡಿತ ನಿಮಿಷಕ್ಕೆ 100 ಮೇಲೆ ಇರುತ್ತೆ. ಆದರೆ ದಾಂಡೇಲಿಯ 4 ವರ್ಷದ ಬಾಲಕನ ಹೃದಯ ನಿಮಿಷಕ್ಕೆ 35 ರಿಂದ 40 ಬಾರಿ ಮಾತ್ರ ಬಡಿದುಕೊಳ್ಳುತಿತ್ತು. ಇಂಥ ಬಾಲಕನ ಹೃದಯ ಶಸ್ತ್ರ ಚಿಕಿತ್ಸೆಯನ್ನ ಉಚಿತವಾಗಿ ಮಾಡುವ ಮೂಲಕ ಧಾರವಾಡದ ಎಸ್‍ಡಿಎಂ ನಾರಾಯಣ ಹೃದಯಾಲಯ ಬಾಲಕನಿಗೆ ಮತ್ತೆ ಜೀವದಾನ ಕೊಟ್ಟಿದೆ.
ಕಳೆದ ಕೆಲ ದಿನಗಳ ಹಿಂದೆ ದಾಂಡೇಲಿಯ ಪ್ರಕಾಶ ಮತ್ತು ಅಶ್ವಿನಿ ದಂಪತಿಯ ನಾಲ್ಕು ವರ್ಷದ ಪುತ್ರ ಅಮೋಘನಿಗೆ ಹೃದಯ ಸಂಬಂಧಿ ಖಾಯಿಲೆ ಇತ್ತು. ಇದರಿಂದ ಅವನಿಗೆ ಕ್ರಮೇಣ ತೂಕ ಕಡಿಮೆಯಾಗಿ ಊಟ ಮಾಡಲಾಗದೇ ಬಳಲುತಿದ್ದ.
ನಂತರ ನಾರಾಯಣ ಹೃದಯಾಲಯಕ್ಕೆ ದಾಖಲಿಸಲಾಗಿತ್ತು. ವೈದ್ಯರು ಪರೀಕ್ಷಿಸಿದ್ದು, ಶಸ್ತ್ರ ಚಿಕಿತ್ಸೆ ಮಾಡಿ, ಫೇಸ್ ಮೇಕರ್ ಕಸಿ ಮಾಡಿದ್ದಾರೆ. ಸದ್ಯ ಮಗು ಎಲ್ಲ ಮಕ್ಕಳಂತೆ ಆಟವಾಡುತ್ತಿದ್ದು, ಮೊದಲಿನಂತೆ ಊಟ ಮಾಡುತ್ತಿದ್ದಾನೆ. ಇದೇ ಶಸ್ತ್ರ ಚಿಕಿತ್ಸೆಯನ್ನು ಬೇರೆ ಆಸ್ಪತ್ರೆಗಳಲ್ಲಿ ಮಾಡಿಸಿದ್ದರೆ ನಮಗೆ 2 ಲಕ್ಷ ರೂ. ಖರ್ಚು ಬರುತಿತ್ತು. ಆದರೆ ಇಲ್ಲಿ ಬಿಪಿಎಲ್ ಕಾರ್ಡ್ ಇರುವುದರಿಂದ ಉಚಿತವಾಗಿ ಆಪರೇಷನ್ ಆಗಿದೆ ಎಂದು ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.