ಕೊಡಗು: ಕಾನೂನು ಬಾಹಿರವಾಗಿ ಆಧಾರ್ ಕಾರ್ಡ್ ವಿತರಣೆ- ನಾಲ್ವರ ಬಂಧನ

Public TV
2 Min Read
mdk adhar card

-ಇಲ್ಲಿ 750 ರೂ. ಹಣ ಪಡೆದು ಆಧಾರ್ ಕಾರ್ಡ್ ಕೊಡ್ತಾರೆ!

ಕೊಡಗು: ದಕ್ಷಿಣ ಕೊಡಗಿನಲ್ಲಿ ಕಾನೂನು ಬಾಹಿರವಾಗಿ ಆಧಾರ್ ಕಾರ್ಡ್ ವಿತರಣೆ ಮಾಡುತ್ತಿದ್ದ ತಂಡದ ಮೇಲೆ ಪೊಲೀಸರು ರಹಸ್ಯ ಕಾರ್ಯಾಚರಣೆ ನಡೆಸಿ ನಾಲ್ವರನ್ನು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತ್ಯದ ಪ್ರಮುಖ ರೂವಾರಿ ಸಕಲೇಶಪುರ ಆರೇಹಳ್ಳಿಯ ಖಲೀಮುಲ್ಲಾ ಎಂಬ ವ್ಯಕ್ತಿ ಪರಾರಿಯಾಗಿದ್ದಾನೆ. ಸಕಲೇಶಪುರ ದುದ್ದ ಗ್ರಾಮದ ಪ್ರಸನ್ನ, ಮುನ್ನ, ಗುರುಪ್ರಸಾದ್ ಹಾಗೂ ನವೀನ್ ಎಂಬ ನಾಲ್ವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಕೊಡಗು ಎಸ್‍ಪಿ ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ.

mdk aadhar 1

ದಕ್ಷಿಣ ಕೊಡಗಿನ ದೇವರಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಾರಿಕಟ್ಟೆ ಎಂಬ ಗ್ರಾಮದ ವ್ಯಕ್ತಿಯೊಬ್ಬರ ಮನೆಯಲ್ಲಿ ಆಧಾರ್ ಲಿಂಕ್ ಮಾಡೋ ದಂಧೆ ರಾತ್ರೋ ರಾತ್ರೋ ಎಗ್ಗಿಲ್ಲದೆ ನಡೆಯುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಉಪಕರಣಗಳನ್ನು ವಶಕ್ಕೆ ಪಡೆದಿದ್ದಾರೆ. ಅಸ್ಸಾಂ ಹಾಗೂ ಬಾಂಗ್ಲಾ ವಲಸಿಗರಿಂದ 750 ರೂ. ಹಣ ಪಡೆದು ಆಧಾರ್ ಕಾರ್ಡ್ ಲಿಂಕ್ ಮಾಡಿಕೊಡಲಾಗ್ತಿದೆ. ಹಾಸನದಲ್ಲಿ ಆಧಾರ್ ಲಿಂಕ್ ಮಾಡೋ ಗುತ್ತಿಗೆ ಪಡೆದಿರುವ ಕಂಪೆನಿಯ ಪ್ರಮುಖರಿಂದಲೇ ಕೊಡಗಿನಲ್ಲಿ ಈ ದಂಧೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

mdk aadhar 2

ಕಾಫಿ ತೋಟಗಳಿಂದಲೇ ಆವೃತವಾಗಿರುವ ಕೊಡಗು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕಾರ್ಮಿಕರ ಸಮಸ್ಯೆ ಹೆಚ್ಚಾಗ್ತಿದೆ. ಕಾರ್ಮಿಕರ ಅಭಾವ ನೀಗಿಸಲು ಹೊರ ಜಿಲ್ಲೆ, ಹೊರ ರಾಜ್ಯಗಳ ಕಾರ್ಮಿಕರನ್ನು ಬಳಕೆ ಮಾಡಿಕೊಳ್ಳಲಾಗ್ತಿದೆ. ನೆರೆ ರಾಜ್ಯದ ಹೆಸರಲ್ಲಿ ಬಾಂಗ್ಲಾ ವಲಸಿಗರು ಕೊಡಗಿನತ್ತ ಬರುತ್ತಿದ್ದಾರೆ. ಕಡಿಮೆ ಕೂಲಿಗೆ ದುಡಿಯುವ ಅಂತಹ ಕಾರ್ಮಿಕರಿಗೆ ಜಿಲ್ಲೆಯಲ್ಲಿ ಅಪಾರ ಬೇಡಿಕೆ ಇದೆ. ಕಾಫಿಯ ಕೆಲಸದ ಸಮಯಕ್ಕೆ ಬೇರೆಡೆಯಿಂದ ಗುಳೆ ಬರುವ ಕಾರ್ಮಿಕರು ಕಾಫಿ ತೋಟಗಳ ಲೈನ್ ಮನೆಯಲ್ಲಿ ಬದುಕು ಕಟ್ಟಿಕೊಳ್ತಾರೆ.

mdk aadhar 3

ಆದರೆ ಅಸ್ಸಾಂ ನಿವಾಸಿಗಳು ಎಂದು ಹೇಳಿಕೊಂಡು ಬರುವ ಬಹುತೇಕರು ನೆರೆಯ ಬಾಂಗ್ಲಾದೇಶದ ಪ್ರಜೆಗಳಾಗಿದ್ದಾರೆ. ಇಂತಹ ಕಾರ್ಮಿಕರಿಗೆ ಸ್ಥಳೀಯ ಕೆಲ ವ್ಯಕ್ತಿಗಳು ಗುರುತಿನ ಚೀಟಿ ಹಾಗೂ ಆಧಾರ್ ಕಾರ್ಡ್ ಮಾಡಿಕೊಡ್ತಿರೋ ವಿಚಾರ ಜಿಲ್ಲೆಯ ಜನತೆಯನ್ನು ಬೆಚ್ಚಿ ಬೀಳಿಸಿದೆ ಎಂದು ಸ್ಥಳೀಯರಾದ ಅಜಿತ್ ಆತಂಕ ವ್ಯಕ್ತಪಡಿಸಿದ್ದಾರೆ.

mdk aadhar 4

ಒಟ್ಟಿನಲ್ಲಿ ಹಾಸನ ಜಿಲ್ಲಾಡಳಿತ ಗಮನಕ್ಕೆ ಬಾರದೆ ಅಧಿಕೃತವಾದ ಕಂಪ್ಯೂಟರ್, ಲ್ಯಾಪ್‍ಟಾಪ್, ಬೆರಳಚ್ಚು ಯಂತ್ರ, ನೇತ್ರಮಾಹಿತಿ ಯಂತ್ರ ಹಾಗೂ ಪ್ರಿಂಟರನ್ನು ಬೇರೆ ಜಿಲ್ಲೆಗಳಿಗೆ ಸಾಗಿಸುತ್ತಿರುವುದು ದಿಗ್ಭ್ರಮೆ ಮೂಡಿಸಿದೆ. ಆಡಳಿತ ವರ್ಗದ ನಿರ್ಲಕ್ಷ್ಯವೋ, ದಂಧೆಕೋರರ ಕೈಚಳಕವೋ ಒಟ್ಟಾರೆ ಅಕ್ರಮ ವಲಸಿಗರು ಮಾತ್ರ ದೇಶದ ಅಧಿಕೃತ ಗುರುತಿನ ಚೀಟಿ, ಆಧಾರ್ ಪಡೀತಿದ್ದಾರೆ. ಇನ್ನಾದ್ರೂ ಈ ಬಗ್ಗೆ ಸರ್ಕಾರ ಹಾಗೂ ಆಡಳಿತ ವರ್ಗ ಎಚ್ಚೆತ್ತುಕೊಳ್ಳುಬೇಕಿದೆ.

 

Share This Article