ಜೈಪುರ್: ಕೆಮ್ಮು ಹಾಗೂ ಶೀತ ವಾಸಿ ಮಾಡಲೆಂದು 4 ತಿಂಗಳ ಹೆಣ್ಣುಮಗುವಿಗೆ ಕಬ್ಬಿಣದ ರಾಡ್‍ನಿಂದ ಬರೆ ಹಾಕಿರೋ ಘಟನೆ ರಾಜಸ್ಥಾನದ ಭಿಲ್ವಾರಾ ಜಿಲ್ಲೆಯಲ್ಲಿ ನಡೆದಿದೆ
ಭಿಲ್ವಾರಾದ ರಾಮಾ ಖೇದಾ ಗ್ರಾಮದಲ್ಲಿ ಮಗುವಿಗೆ ಬರೆ ಹಾಕಲಾಗಿದೆ. ಮಗುವಿನ ಆರೋಗ್ಯ ಸ್ಥಿತಿಯಲ್ಲಿ ಏರುಪೇರಾದ ಕಾರಣ ಕೂಡಲೇ ಮಹಾತ್ಮಾ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಗುವಿಗೆ ಕೆಲವು ದಿನಗಳ ಹಿಂದೆ ಬರೆ ಹಾಕಲಾಗಿದೆ. ಆದ್ರೆ ಮಗುವನ್ನ ವೈದ್ಯರ ಬಳಿ ಕರೆದುಕೊಂಡು ಬಂದ ನಂತರ ಸೋಮವಾರ ಈ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲಿಸರು ಹೇಳಿದ್ದಾರೆ. 4 ತಿಂಗಳ ಹೆಣ್ಣುಮಗು ನ್ಯುಮೋನಿಯಾ ಹಾಗೂ ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿದೆ ಎಂದು ವರದಿಯಾಗಿದೆ.
ಕೆಮ್ಮು ಶೀತ ವಾಸಿ ಮಾಡಲು ಬರೆ ಹಾಕುವಂತಹ ಕೆಲವು ಮೂಢನಂಬಿಕೆಗಳು ಭಿಲ್ವಾರಾದಲ್ಲಿ ಸಾಮಾನ್ಯವಾಗಿದೆ. ಮಗುವಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗ್ತಿದೆ ಎಂದು ಮಹಾತ್ಮಾ ಗಾಂಧಿ ಆಸ್ಪತ್ರೆಯ ಶಿಶುತಜ್ಞರಾದ ಡಾ. ಓಪಿ ಅಗಲ್ ಹೇಳಿದ್ದಾರೆ.
ಮಕ್ಕಳ ಕಲ್ಯಾಣ ಸಮಿತಿ ನೀಡಿದ ದೂರಿನನ್ವಯ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಕಾರೋಯ್ ಪೊಲೀಸ್ ಠಾಣೆಯ ಎಸ್‍ಹೆಚ್‍ಓ ಸುನಿಲ್ ಚೌಧರಿ ಹೇಳಿದ್ದಾರೆ. ಮೂಢನಂಬಿಕೆಯಿಂದ ಮಕ್ಕಳ ಜೀವಕ್ಕೆ ಕುತ್ತು ಬಂದಿರುವುದು ಭಿಲ್ವಾರಾದಲ್ಲಿ ಇದೇ ಮೊದಲೇನಲ್ಲ ಎಂದು ಅವರು ಹೇಳಿದ್ದಾರೆ.
ಈ ಹಿಂದೆಯೂ ಕೂಡ ಶೀತ, ಕೆಮ್ಮು ವಾಸಿ ಮಾಡಲು 10 ತಿಂಗಳ ಮಗುವಿನ ಅದರ ಅಜ್ಜ ಕಬ್ಬಿಣದ ರಾಡ್‍ನಿಂದ ಬರೆ ಹಾಕಿದ್ದು, ಮಗು ಸಾವನ್ನಪ್ಪಿತ್ತು ಎಂದು ವರದಿಯಾಗಿದೆ.