ಬೆಂಗಳೂರು: ಅತೃಪ್ತರ ವಿರುದ್ಧ ಅನರ್ಹತೆಯ ತೀರ್ಮಾನವನ್ನು ತೆಗೆದುಕೊಂಡಿದ್ದರೂ ಇದೂವರೆಗೂ ಅನರ್ಹತೆಯ ಶಿಫಾರಸನ್ನು ಸ್ಪೀಕರ್ ರಮೇಶ್ ಕುಮಾರ್ ಅವರ ಕೈಗೆ ಕಾಂಗ್ರೆಸ್ ಇನ್ನೂ ನೀಡಿಲ್ಲ. ಶುಕ್ರವಾರದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ಬಳಿಕ ಮಾತನಾಡಿದ್ದ ಸಿದ್ದರಾಮಯ್ಯ ಸಂಜೆ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ದೂರು ನೀಡಲಾಗುವುದು ಎಂದು ತಿಳಿಸಿದ್ದರು. ಆದರೆ ಇಲ್ಲಿಯವರೆಗೂ ಸ್ಪೀಕರ್ ಅವರಿಗೆ ಯಾವುದೇ ದೂರು ಬಂದಿಲ್ಲ.
ವಿಪ್ ಮೇಲೆ ವಿಪ್ ಜಾರಿಯಾದರೂ ಕಾಂಗ್ರೆಸ್ ಅಸಮಾಧಾನಿತ ಶಾಸಕರು ಶಾಸಕಾಂಗ ಸಭೆಗೆ ಬರಲಿಲ್ಲ. ಬಜೆಟ್ ಮಂಡನೆಗೂ ಬರಲಿಲ್ಲ. ಹೀಗಾಗಿ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಬಳ್ಳಾರಿ ಶಾಸಕ ನಾಗೇಂದ್ರ, ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಹಾಗೂ ಚಿಂಚೋಳಿ ಶಾಸಕ ಉಮೇಶ್ ಜಾಧವ್‍ರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸುವಂತೆ ಕಾಂಗ್ರೆಸ್ ತೀರ್ಮಾನಿಸಿದೆ.
Advertisement
Advertisement
ಬಜೆಟ್ ಅನುಮೋದನೆಗೆ ಫೆಬ್ರವರಿ 15 ರಂದು ಮುಹೂರ್ತ ಫಿಕ್ಸ್ ಆಗಿದೆ. ಹೀಗಾಗಿ ಅಲ್ಲಿಯವರೆಗೂ ಒಳಗೊಳಗೆ ಶಾಸಕರ ಮನವೊಲಿಕೆ ಯತ್ನ ನಡಸಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಅನರ್ಹತೆ ಅಸ್ತ್ರ ಮುಂದಿಟ್ಟುಕೊಂಡು ಫೆ.15ರವರೆಗೂ ಕಾದು ನೋಡುವ ತಂತ್ರ ಮಾಡಿದ್ದು ಫೆ.15ರೊಳಗೆ ಶಾಸಕರು ವಾಪಸ್ ಬರದಿದ್ದರೆ ಅನರ್ಹತೆಗೆ ಶಿಫಾರಸು ಮಾಡುವ ಸಾಧ್ಯತೆಯಿದೆ.
Advertisement
ಈ ನಾಲ್ವರು ಫೆಬ್ರವರಿ 15ರವವರೆಗೆ ಯಾವುದೇ ಸಭೆ ಮತ್ತು ಅಧಿವೇಶನಕ್ಕೆ ಬರುವುದಕ್ಕೆ ಆಗುವುದಿಲ್ಲ ಎಂದು ಅನುಮತಿ ಕೇಳಿದ್ದಾರೆ. ಈ ನಾಲ್ವರಿಗೆ ಸಾಕಷ್ಟು ಅವಕಾಶಗಳನ್ನು ನೀಡಲಾಗಿತ್ತು. ಶೋಕಾಸ್ ನೋಟಿಸ್ ಜಾರಿ ಮಾಡಿ ಕಾರಣ ನೀಡುವಂತೆ ಕೇಳಿದ್ದೇವೆ. ಈ ಸಂಬಂಧ ಶಾಸಕರ ಅನರ್ಹತೆಗೆ ಶಿಫಾರಸ್ಸು ಮಾಡಲು ನಿರ್ಧರಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದರು.
Advertisement
ಜನವರಿ 18ರಂದು ನೀಡಿದ್ದ ಶೋಕಾಸ್ ನೋಟಿಸ್‍ಗೆ ಉತ್ತರ ನೀಡಿದ್ದ ನಾಲ್ವರು ಕಾಂಗ್ರೆಸ್ ನಲ್ಲಿ ಇದ್ದೇವೆ ಎಂದು ಉತ್ತರ ನೀಡಿದ್ದರು. ನಾನು ಸಭೆಗೆ ಅಥವಾ ನನ್ನನ್ನು ಪರ್ಸನಲ್ ಆಗಿ ಭೇಟಿಯಾಗಬೇಕೆಂಬ ಸಂದೇಶವನ್ನು ಕಳುಹಿಸಲಾಗಿತ್ತು. ಎರಡು ದಿನ ನಡೆದ ಅಧಿವೇಶನಕ್ಕೂ ಈ ನಾಲ್ವರು ಹಾಜರಾಗಿಲ್ಲ. ಇವತ್ತು ಬರೆದ ಪತ್ರದಲ್ಲಿಯೂ ಅಧಿವೇಶನಕ್ಕೆ ಬರಲ್ಲ ಅಂತಾ ತಿಳಿಸಿದ್ದಾರೆ. ಅನರ್ಹಗೊಳಿಸುವ ಕುರಿತಾಗಿ ದಾಖಲೆಗಳನ್ನು ಸಿದ್ಧ ಮಾಡಿಕೊಳ್ಳುತ್ತಿದ್ದು, ಸಂಜೆಯೊಳಗೆ ಸ್ಪೀಕರ್ ಅವರಿಗೆ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸುವಂತೆ ಮನವಿ ಮಾಡಿಕೊಳ್ಳುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದರು.
ಮುಂಬೈನಲ್ಲಿದ್ದಾರೆ ಎನ್ನಲಾದ ನಾಲ್ವರು ಪತ್ರ ಕಳುಹಿಸಿದ್ದು, ವೈಯಕ್ತಿಕ ಕಾರಣ ನೀಡಿ ಸಿಎಲ್‍ಪಿ ಸಭೆಗೆ ಗೈರಾಗಿದ್ದಾರೆ. ಅತೃಪ್ತರು ನೀಡಿರುವ ಕಾರಣಗಳು ಹೀಗಿವೆ.
1. ಉಮೇಶ್ ಜಾಧವ್: ವೈಯಕ್ತಿಕ ಕಾರಣಗಳಿಂದ ಸಭೆಗೆ ಬರಲು ಆಗುತ್ತಿಲ್ಲ. ಆದಷ್ಟು ಬೇಗ ನಿಮ್ಮನ್ನು ಭೇಟಿಯಾಗುತ್ತೇನೆ.
2. ರಮೇಶ್ ಜಾರಕಿಹೊಳಿ: ಮದುವೆ ಕಾರ್ಯಕ್ರಮವಿದ್ದು, ಈ ತಿಂಗಳ 15ರವರೆಗೆ ಬರೋದಕ್ಕೆ ಆಗಲ್ಲ.
3. ಮಹೇಶ್ ಕುಮಟಳ್ಳಿ: ಆರೋಗ್ಯ ಸರಿ ಇಲ್ಲದ ಕಾರಣ ಸಭೆಗೆ ಬಂದಿಲ್ಲ.
4. ನಾಗೇಶ್ : ವೈಯಕ್ತಿಕ ಕಾರಣಗಳಿಂದ ಬರೋದಕ್ಕೆ ಆಗುತ್ತಿಲ್ಲ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv