ಮಡಿಕೇರಿ: ಉಕ್ರೇನ್ ಮತ್ತು ರಷ್ಯಾ ದೇಶಗಳ ನಡುವೆ ಭೀಕರ ಯುದ್ಧ ಆರಂಭವಾಗಿದ್ದು ಕೊಡಗು ಜಿಲ್ಲೆಯ ನಾಲ್ವರು ವಿದ್ಯಾರ್ಥಿಗಳು ಉಕ್ರೇನ್ ದೇಶದಲ್ಲಿ ಸಿಲುಕಿದ್ದಾರೆ.
ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ಮೂವರು ವಿದ್ಯಾರ್ಥಿಗಳು ಹಾಗೂ ವಿರಾಜಪೇಟೆಯ ಒಬ್ಬ ವಿದ್ಯಾರ್ಥಿ ಉಕ್ರೇನ್ ದೇಶದ ಖಾರ್ಕಿವ್ ಪಟ್ಟಣದಲ್ಲಿ ಸಿಲುಕಿದ್ದಾರೆ. ಕುಶಾಲನಗರ ಸಮೀಪದ ಮುಳ್ಳುಸೋಗೆ ಗ್ರಾಮದ ಆರೋಗ್ಯ ಶುಶ್ರೂಷಕಿ ಒಬ್ಬರ ಮಗ ಲಿಖಿತ್, ಕುಶಾಲನಗರ ತಾಲೂಕಿನ ಕೂಡ್ಲೂರು ಗ್ರಾಮದ ಹಾಗೂ ಕಾಂಗ್ರೆಸ್‍ನ ಮಾಜಿ ಕೊಡಗು ಜಿಲ್ಲಾಧ್ಯಕ್ಷರೂ ಆಗಿರುವ ಕೆ.ಕೆ ಮಂಜುನಾಥ್ ಅವರ ಪುತ್ರ ಚಂದನ್ ಗೌಡ, ಕೂಡಿಗೆ ಗ್ರಾಮದ ಅಕ್ಷಿತಾ ಮತ್ತು ವಿರಾಜಪೇಟೆ ನಗರದ ಸೋನು ಸುಫಿಯಾ ಈ ನಾಲ್ವರು ವಿದ್ಯಾರ್ಥಿಗಳು ಉಕ್ರೇನ್ ದೇಶದ ಖಾರ್ಕಿವ್ ನಗರದಲ್ಲಿ ಸಿಲುಕಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ರಕ್ಷಣೆಗೆ ರಾಜ್ಯ ಸರ್ಕಾರದಿಂದ ವೆಬ್ ಪೋರ್ಟಲ್ ಪ್ರಾರಂಭ
ಸದ್ಯ ನಾಲ್ವರು ವಿದ್ಯಾರ್ಥಿಗಳು ಆ ನಗರದ ಬೆಕೆಟೋವಾ ಮೆಟ್ರೊ ರೈಲು ನಿಲ್ದಾಣದ ಅಂಡರ್ ಗ್ರೌಂಡ್ ನಲ್ಲಿ ರಕ್ಷಣೆ ಪಡೆದಿದ್ದಾರೆ. ಕ್ಷಣ ಕ್ಷಣಕ್ಕೂ ಸ್ಥಳದಲ್ಲಿ ಯಾವಾಗ ಬೇಕಾದರೂ ಬಾಂಬ್‍ಗಳು ಬಿದ್ದು ಸ್ಫೋಟಗೊಳ್ಳುವ ಸಾಧ್ಯತೆ ಇದೆ ಅನ್ನೋ ಆತಂಕ ಎದುರಿಸುತ್ತಿದ್ದಾರೆ. ರೈಲ್ವೇ ನಿಲ್ದಾಣದ ಅಂಡರ್ ಗ್ರೌಂಡ್‍ನಲ್ಲಿ ಸಾವಿರಾರು ಸಂಖ್ಯೆಯ ಜನರು ಕಿಕ್ಕಿರಿದು ಸೇರಿದ್ದು ಅಲ್ಲಿಯೇ ರಕ್ಷಣೆ ಪಡೆದಿದ್ದಾರೆ. ಆದರೆ ಇತ್ತ ಕೊಡಗಿನಲ್ಲಿ ಇರುವ ಪೋಷಕರು ಮಕ್ಕಳ ಪರಿಸ್ಥಿತಿ ಕಂಡು ರಾಜ್ಯಕ್ಕೆ ಕರೆ ತರಬೇಕು ಎಂದು ಮನವಿ ಮಾಡುತ್ತಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಬಾಂಬ್ ಆರ್ಭಟ – 30 ಗಂಟೆಗಳ ಕಾಲ ಮೆಟ್ರೋ ಸುರಂಗದಲ್ಲೇ ಕುಳಿತ ಭಾರತೀಯ ವಿದ್ಯಾರ್ಥಿಗಳು
ಇನ್ನೂ ಉಕ್ರೇನ್‍ನಲ್ಲಿರುವ ಮಗನನ್ನು ನೆನೆದು ಕಣ್ಣೀರಿಟ್ಟ ಕಾಂಗ್ರೆಸ್‍ನ ಮಾಜಿ ಜಿಲ್ಲಾದ್ಯಕ್ಷ ಮಂಜುನಾಥ್ ಪಬ್ಲಿಕ್ ಟಿವಿಯೊಂದಿಗೆ ಮಾತಾನಾಡಿ, ಖಾರ್ಕಿವ್ ನ್ಯಾಷನಲ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಓದುತ್ತಿರುವ ತಮ್ಮ ಮಗ ಚಂದನ್ ಗೌಡ ಮೂರನೇ ವರ್ಷದ ಎಂಬಿಬಿಎಸ್ ಕಲಿಯುತ್ತಿದ್ದಾನೆ. ಅಲ್ಲಿ ಉತ್ತಮ ವೈದ್ಯಕೀಯ ಶಿಕ್ಷಣ ಇದೆಯೆಂದು ಅಲ್ಲಿಗೆ ಕಳಿಸಿದ್ದೆವು ಎಂದರು.
ಕಳೆದ ಒಂದು ತಿಂಗಳ ಹಿಂದೆಯಷ್ಟೇ ಊರಿಗೆ ಬಂದಿದ್ದ ಆಗಲೂ ಉಕ್ರೇನ್‍ನಲ್ಲಿ ಯುದ್ಧದ ಭೀತಿ ಇತ್ತು ಎಂದು ಹೇಳಿದ. ಆದರೆ ರಾಷ್ಟ್ರ-ರಾಷ್ಟ್ರಗಳ ನಡುವೆ ಅದೆಲ್ಲಾ ಸಾಮಾನ್ಯ ಎಂದುಕೊಂಡಿದ್ದೆವು ಈಗ ಯುದ್ಧ ಆರಂಭವಾಗಿ ನಾಗರಿಕರ ಮೇಲೂ ದಾಳಿಯಾಗುತ್ತಿದೆ. ಇದರಿಂದ ನಮಗೂ ತೀವ್ರ ಆತಂಕ ಶುರುವಾಗಿದೆ. ಕಳೇದ ರಾತ್ರಿ ಇಡೀ ಮೆಟ್ರೊ ಅಂಡರ್ ಗ್ರೌಂಡ್‍ನಲ್ಲಿ ಕಾಲ ಕಳೆದಿದ್ದರು. ಸದ್ಯ ಈಗ ಪ್ಲಾಟ್‍ಗಳಿಗೆ ತೆರಳಿದ್ದಾರೆ. ಆದರೆ ಅಲ್ಲಿಯೂ ಆತಂಕದಲ್ಲಿಯೇ ಕಾಲ ಕಳೆಯಬೇಕಾಗಿದೆ. ಎಲ್ಲರೂ ಮಲಗಿದ್ದರೆ ಇಬ್ಬರು ಎಚ್ಚರದಿಂದ ಇರಬೇಕಾದ ಸ್ಥಿತಿಯಲ್ಲಿದ್ದಾರೆ ಎಂದು ನೋವಿನಿಂದ ತಿಳಿಸಿದರು.
ಇನ್ನೂ ಕೊಡಗು ಜಿಲ್ಲಾಡಳಿತ ಅಥವಾ ಸರ್ಕಾರ ಇದುವರೆಗೆ ನಮ್ಮನ್ನು ಸಂಪರ್ಕಿಸಿಲ್ಲ. ಅಧಿಕಾರಿಗಳಿಗೆ ಅಥವಾ ಜನಪ್ರತಿನಿಧಿಗಳಿಗೆ ತೊಂದರೆ ಆದರೆ ಮಾತ್ರ ನೋವು ಎಂದುಕೊಂಡಿರಬಹುದು ಎಂದು ಜಿಲ್ಲಾಡಳಿತದ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದರು.