ಬೆಂಗಳೂರು: ನಗರದ ಪ್ರಮುಖ ಹೋಟೆಲ್‌ಗಳಲ್ಲಿ ಒಂದಾಗಿರುವ ಬ್ರೂಕ್‌ಫೀಲ್ಡ್ ರಾಮೇಶ್ವರಂ ಕೆಫೆಯಲ್ಲಿ ನಿಗೂಢ ಸ್ಫೋಟ (Rameshwaram Cafe Blast) ಸಂಭವಿಸಿದೆ. ಮಧ್ಯಾಹ್ನ 1 ಗಂಟೆ 05 ನಿಮಿಷದ ವೇಳೆ ನಡೆದ ಘಟನೆಯಲ್ಲಿ ಐವರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾರೀ ಸ್ಫೋಟದ ಪರಿಣಾಮ ಸ್ಥಳದಲ್ಲಿ ದಟ್ಟವಾದ ಹೊಗೆ ಆವರಿಸಿಕೊಂಡಿತ್ತು.
ಘಟನೆ ನಡೆಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಇತ್ತ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಪ್ರಾಥಮಿಕ ಹಂತದಲ್ಲಿ ಸಿಲಿಂಡರ್ ಸ್ಫೋಟದಿಂದ ಘಟನೆ ನಡೆದಿದೆ ಎನ್ನಲಾಗಿತ್ತು. ಆದರೆ ಇಲ್ಲಿ ಸಿಲಿಂಡರ್ ಸ್ಫೋಟ ಸಂಭವಿಸಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಹೀಗಾಗಿ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ರಾಮೇಶ್ವರಂ ಕೆಫೆ ಹಾಗೂ ಸುತ್ತಮುತ್ತ ಇರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿರುವ ವೀಡಿಯೋಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಹಾಗೂ ಎಫ್‌ಎಸ್‌ಎಲ್ ಅಧಿಕಾರಿಗಳು ಕೂಡಾ ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ.
ಐಡಿ ಕಾರ್ಡ್ ಆಧರಿಸಿ ತನಿಖೆ: ಘಟನೆ ನಡೆದ ಸ್ಥಳದಲ್ಲಿ ಪೊಲೀಸರಿಗೆ ಕೆಲವು ಐಡಿ ಕಾರ್ಡ್‌ಗಳು ಲಭ್ಯವಾಗಿದೆ. ಪೊಲೀಸರು ಈ ಐಡಿ ಕಾರ್ಡ್‌ಗಳ ಆಧಾರದಲ್ಲೂ ತನಿಖೆ ಮುಂದುವರಿಸಿದ್ದಾರೆ. ಎಚ್‌ಎಎಲ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.