ಬೆಂಗಳೂರು: ಪ್ರಕೃತಿ ವೈಪರಿತ್ಯದ ಕಾರಣ ಬೆಂಗಳೂರು (Bengaluru) ಸೀಮೆ ಮಳೆನಾಡಾಗಿ ಬದಲಾಗಿದೆ. ಪ್ರಸಕ್ತ ಮಳೆ ವರ್ಷದಲ್ಲಿ ಸುರಿದ ಶತಮಾನದ ರಣ ಮಳೆಯಿಂದಾಗಿ ರಾಜಧಾನಿ ತತ್ತರಿಸಿಹೋಗಿದೆ.
ಬುಧವಾರ ರಾತ್ರಿ ಮುಕ್ಕಾಲು ಗಂಟೆ ವರುಣ ಅಬ್ಬರಿಸಿದ್ದು, ಬರೋಬ್ಬರಿ 98 ಮಿಲಿಮೀಟರ್ ಮಳೆ ಕಾರಣ ಮತ್ತೆ ಸೆಪ್ಟೆಂಬರ್ ಅವಾಂತರಗಳು ಮರುಕಳಿಸಿವೆ. ರಸ್ತೆಯೋ, ನದಿಯೋ ಎನ್ನುವುದು ಗೊತ್ತಾಗದ ಮಟ್ಟಿಗೆ ನೀರು ಹರಿದಿದೆ. ಅನುಗ್ರಹ ಲೇಔಟ್, ಹೆಚ್‍ಎಸ್‍ಆರ್ ಲೇಔಟ್, ಇಂದಿರಾನಗರದ ಹೆಚ್‍ಎಎಲ್ ಲೇಔಟ್, ಶಿವಾಜಿನಗರ, ಬೆಳ್ಳಂದೂರು, ಕರಿಯಮ್ಮನ ಅಗ್ರಹಾರ, ರೇನ್‍ಬೋ ಲೇಔಟ್, ಬಸವನಗುಡಿ ಹೀಗೆ ಎಲ್ಲಾ ಕಡೆ ನಾನಾ ಅವಾಂತರ ಸಂಭವಿಸಿವೆ. ಇದನ್ನೂ ಓದಿ: ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಸಹಾಯವಾಣಿ ಆರಂಭ – ಸಕ್ಕರೆ ಇಲಾಖೆ ತೀರ್ಮಾನ
ಅನುಗ್ರಹ ಲೇಔಟ್‍ನ ಮನೆಗಳಲ್ಲಂತೂ ಮೊಣಕಾಲುದ್ದ ನೀರು ನಿಂತಿತ್ತು. ಅಂಗಡಿಗಳು ಜಲಮಯವಾಗಿದ್ದು, ಅಪಾರ್ಟ್‍ಮೆಂಟ್ ನೆಲಮಹಡಿಗಳು ಸ್ವಿಮ್ಮಿಂಗ್ ಪೂಲ್‍ಗಳಂತಾಗಿವೆ. ಮೋಟಾರ್ ಇಟ್ಟು ನೀರು ಪಂಪ್ ಮಾಡಲಾಗುತ್ತಿದೆ. ಶಿವಾಜಿನಗರದಲ್ಲಿ ಬೈಕ್‍ಗಳು ಕೊಚ್ಚಿ ಹೋಗುವುದನ್ನು ತಡೆಯಲು ಜನ ಹರಸಾಹಸಪಟ್ಟರು. ರೇನ್‍ಬೋ ಲೇಔಟ್‍ನಲ್ಲಿ ಮತ್ತೆ ಟ್ರ್ಯಾಕ್ಟರ್ ಸವಾರಿ ಶುರುವಾಗಿದೆ. ಶೇಷಾದ್ರಿಪುರಂನಲ್ಲಿ ಮೆಟ್ರೋ ತಡೆಗೋಡೆ ಕುಸಿದ ಕಾರಣ ಹತ್ತಾರು ಕಾರು, ಬೈಕ್‍ಗಳು ಜಖಂ ಆಗಿವೆ.
ಒಟ್ಟಾರೆ ಬೆಂಗಳೂರಲ್ಲಿ ಜನಜೀವನ ಅಸ್ತವ್ಯಸ್ತವಾಗಿತ್ತು. ಸದ್ಯಕ್ಕೆ ಮಳೆ ನಿಲ್ಲುವ ಯಾವುದೇ ಲಕ್ಷಣಗಳಿಲ್ಲ. ಇನ್ನೂ 4 ದಿನ ಬೆಂಗಳೂರಲ್ಲಿ ಮಳೆಯಾಗಲಿದ್ದು, ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಇದನ್ನೂ ಓದಿ: 1 ಮತದಿಂದ ಸೋತು ಮರು ಮತ ಎಣಿಕೆಗೆ ಕೋರ್ಟ್ ಮೊರೆ ಹೋಗಿದ್ದ ಅಭ್ಯರ್ಥಿಗೆ ಮುಖಭಂಗ