– ಮೋದಿಗೆ ಅಹಂಕಾರ ಜಾಸ್ತಿ, ಆ ಅಹಂಕಾರವೇ ಅವರನ್ನ ತಿನ್ನುತ್ತೆ ಅಂತ ಲೇವಡಿ
– ಕಳೆದ ಚುನಾವಣೆಯಲ್ಲಿ ಮಹಾಮೋಸ ನಡೆದಿದೆ – ಇವಿಎಂ ನಿಷೇಧ ಸ್ವಾಗತಿಸಿದ ಖರ್ಗೆ
ಕಲಬುರಗಿ: ಸಮಸ್ಯೆ ಹೇಳಿಕೊಂಡು ಬಂದ ವ್ಯಕ್ತಿ ವಿರುದ್ಧ ಎಐಸಿಸಿ (AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಗರಂ ಆದ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಕಲಬುರಗಿಯ (Kalaburagi) ತಮ್ಮ ನಿವಾಸದಲ್ಲಿ ಖರ್ಗೆ ಮಾಧ್ಯಮದವರೊಂದಿಗೆ ಮಾತನಾಡಬೇಕಾದ್ರೆ ರೈತರೊಬ್ಬರು (Farmer) ಬಂದು ಸರ್ ತೊಗರಿ ಬೆಳೆ ಹಾನಿಯಾಗಿದೆ. ನಷ್ಟ ಉಂಟಾಗಿದೆ ಎಂದು ಅಳಲುತೊಡಿಕೊಂಡಿದ್ದಾರೆ. ಈ ವೇಳೆ, ಗರಂ ಆದ ಖರ್ಗೆ, ನಿನ್ನದು 4 ಎಕ್ರೆ ಹಾಳಾಗಿದೆ. ನನ್ನದು 40 ಎಕ್ರೆ ಹಾಳಾಗಿದೆ. ಪ್ರಚಾರಕ್ಕಾಗಿ ತೊಗರಿ ತೆಗೆದುಕೊಂಡು ಬಂದ್ದಿದ್ದೀಯಾ? ತೊಗರಿ ಅಷ್ಟೆ ಅಲ್ಲ, ಉದ್ದು, ಹೆಸರು ಕೂಡ ಹಾಳಾಗಿದ್ದು ನನಗೆ ಗೊತ್ತಿದೆ. 6 ಹಡೆದವಳ ಮುಂದೆ ಮೂರು ಹಡೆದವಳು ಹೇಳಿದಂತಾಯಿತು ಎಂದು ವ್ಯಕ್ತಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಹೋಗಿ ಮೋದಿ, ಶಾಗೆ ಕೇಳಿ ಅಂತ ಹೇಳಿದ್ದಾರೆ. ಖರ್ಗೆ ನಡೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಕೇಂದ್ರ ನಮ್ಮ ಬೇಡಿಕೆಗೆ ಕಿವಿಗೊಡಲಿಲ್ಲ
ಇದೇ ವೇಳೆ ಕೇಂದ್ರ ಸರ್ಕಾರ 2 ಸ್ಲ್ಯಾಬ್‌ಗಳಲ್ಲಿ ಜಿಎಸ್‌ಟಿ (GST) ಕಡಿತದ ಬಗ್ಗೆ ಮಾತನಾಡಿದ ಖರ್ಗೆ, ಕಳೆದ ಎಂಟು ವರ್ಷಗಳಿಂದ ನಾವು ಜಿಎಸ್‌ಟಿ ಕಡಿತಕ್ಕಾಗಿ ಹೋರಾಟ ಮಾಡುತ್ತಾ ಬಂದಿದ್ದೇವೆ. ಕೇಂದ್ರ ಸರ್ಕಾರ ನಮ್ಮ ಬೇಡಿಕೆಗೆ ಕಿವಿಗೊಡಲಿಲ್ಲ. ಸದ್ಯ ಏಕಾಏಕಿ ಕಡಿತ ಮಾಡಿದ್ದಾರೆ. ಇದಕ್ಕೆ ನಿಜವಾದ ಕಾರಣ ಮೋದಿಗೇ ಗೊತ್ತು ಅಂತಾ ಮೋದಿ (Narendra Modi) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೋದಿಗೆ ಅಹಂಕಾರ ಜಾಸ್ತಿ
ಕೇಂದ್ರ ಹಾಗೂ ರಾಜ್ಯದ ಹಲವು ಪ್ರಮುಖ ವಿಚಾರಗಳ ಬಗ್ಗೆ ಮಾತನಾಡಿ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಮೋದಿಗೆ ಅಹಂಕಾರ ಜಾಸ್ತಿ. ನಾವು ಏನು ಮಾಡಿದರೂ ನಡೆಯುತ್ತದೆ ಅನ್ನೋ ಮನೋಭಾವ ಅವರದ್ದು. ಆದರೆ, ಆ ಅಹಂಕಾರವೇ ಅವರನ್ನ ತಿನ್ನಲಿದೆ ಎಂದು ಲೇವಡಿ ಮಾಡಿದರು.
ವಿದೇಶಾಂಗ ನೀತಿಯಲ್ಲಿ ಮೋದಿ ನಡೆಸುತ್ತಿರುವ ತಂತ್ರಗಳ ಕುರಿತು ವ್ಯಂಗ್ಯವಾಡಿದ ಖರ್ಗೆ, ಮಾತ್ತೆತಿದ್ರೆ ಟ್ರಂಪ್ ಟ್ರಂಪ್ ಅಂತಾರೆ. ಟ್ರಂಪ್ ಬೆಳಗಾದರೆ ಫೋನ್ ಮಾಡ್ತಾರೆ ಎಂದು ಹೇಳುತ್ತಾರೆ. ಆದರೆ, ಇವತ್ತು ಏನಾಗಿದೆ? ಚೀನಾವನ್ನು ಇಷ್ಟು ದಿನ ನೇಗ್ಲೆಕ್ಟ್ ಮಾಡಿ, ಈಗ ಅದೇ ದೇಶಕ್ಕೆ ಮೋದಿ ಹೋಗಿ ಬಂದಿದ್ದಾರೆ. ದೇಶಕ್ಕೆ ಸಮಸ್ಯೆ ಬಂದಾಗ ನಾವೆಲ್ಲ ಒಂದಾಗಿ ಬೆಂಬಲ ನೀಡಿದ್ದೇವೆ. ಪೆಹಲ್ಗಾಮ್ ದಾಳಿ ಸಂದರ್ಭದಲ್ಲೂ ನಾವು ಕೇಂದ್ರಕ್ಕೆ ಬೆಂಬಲ ನೀಡಿದ್ದೇವೆ. ಆದರೆ, ಬಿಜೆಪಿ ನಾಯಕರು ಪ್ರತಿಬಾರಿ ‘ಮೋದಿ ಹೈ, ಮೋದಿ ಹೈ’ ಅಂತಾರೆ ಎಂದು ಆರೋಪಿಸಿದರು.
ಇನ್ನೂ ದ್ವೀಭಾಷಾ ಪದ್ಧತಿಯ ಕುರಿತಂತೆ ಮಾತನಾಡಿದ ಖರ್ಗೆ, ಇದು ಯಾವ ರಾಜ್ಯ, ಯಾವ ಇಲಾಖೆಯ ನಿರ್ಧಾರವೋ ಅದಕ್ಕೆ ಅವರಿಗೆ ಅಧಿಕಾರವಿದೆ. ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯಾಗಿದೆ. ತಮಿಳುನಾಡು, ಕೇರಳದಲ್ಲಿ ಈ ವ್ಯವಸ್ಥೆಯನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ, ನಾವು ಕೇಂದ್ರದಲ್ಲಿ ಸರ್ಕಾರದಲ್ಲಿದ್ದಾಗ ರಾಷ್ಟ್ರೀಯ ಮಟ್ಟದಲ್ಲಿ ದ್ವಿಭಾಷಾ ಪದ್ಧತಿ ಅಳವಡಿಕೆ ಕುರಿತು ಚಿಂತನೆ ನಡೆಸಿದ್ದೆವು ಎಂದು ಹೇಳಿದರು.
ಇವಿಎಮ್ ನಿಷೇಧ ಶ್ಲಾಘನೀಯ:
ರಾಜ್ಯ ಸರ್ಕಾರ ಇವಿಎಮ್ ನಿಷೇಧಿಸಿ ಬ್ಯಾಲೆಟ್ ಪೇಪರ್ ಮರುಬಳಕೆಗೆ ಮುಂದಾಗಿರುವ ನಿರ್ಧಾರದ ಬಗ್ಗೆ ಮಾತನಾಡಿ, ಕಳೆದ ಚುನಾವಣೆಯಲ್ಲಿ ಇವಿಎಮ್‌ನಲ್ಲಿ ಮಹಾಮೋಸ ನಡೆದಿದೆ. ನಾನು ಕೂಡ ಸೋತಾಗ ಮತಗಳ್ಳತನವಾಗಿದೆ. ನನ್ನ ಅಭಿವೃದ್ಧಿ ಕಾರ್ಯಗಳಿಗೆ ಜನಮನ್ನಣೆ ಸಿಗುತ್ತದೆ ಎಂಬ ವಿಶ್ವಾಸವಿತ್ತು. ಆದರೆ, ಕಲಬುರಗಿ ಲೋಕಸಭೆಯ ಐದಾರು ಕ್ಷೇತ್ರಗಳಲ್ಲಿ ಅಸಹಜವಾಗಿ ಕಡಿಮೆ ಮತಗಳು ಬಂದಿವೆ. ನಮ್ಮ ಕಣ್ಣೆದುರೇ ಮೋಸವಾಗಿದೆ. ಅಲ್ಲದೇ, ಪಾರ್ಲಿಮೆಂಟ್‌ನಲ್ಲೇ ಪ್ರಧಾನಿ ಮೋದಿ ‘ಖರ್ಗೆ ಬಹುತ್ ಬಾರ್ ಜಿತ್ರೆ’ ಎಂದಿದ್ದರು. ಮೋದಿ ಅವರ ಈ ಮಾತಿನ ಬಳಿಕ ನನಗೆ ಬಲವಾದ ಅನುಮಾನ ಬಂದಿದೆ. ಬಿಹಾರ, ಕಲಬುರಗಿ ಸೇರಿದಂತೆ ರಾಜ್ಯದ ಅನೇಕ ಕಡೆ ವೋಟ್ ಚೋರಿ ನಡೆದಿದೆ ಎಂದು ಆರೋಪಿಸಿದರು.