ಲಕ್ನೋ: ಮಹಿಳೆಯೊಬ್ಬರು ತನ್ನ ಸಿಮ್ ಕಾರ್ಡ್ ಅನ್ನು 3ಜಿ ಯಿಂದ 4ಜಿಗೆ ಅಪ್‍ಡೇಟ್ ಮಾಡಲು ಹೋಗಿ ಬರೋಬ್ಬರಿ 9.5 ಲಕ್ಷ ಹಣ ಕಳೆದುಕೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ನೋಯ್ಡಾ ಮೂಲದ ವರ್ಷಾ ಅಗರ್ವಾಲ್ ಹಣ ಕಳೆದುಕೊಂಡಿರುವ ಮಹಿಳೆ. ಸಿಮ್ ಕಾರ್ಡ್ ಅಪ್‍ಡೇಟ್ ಮಾಡುವ ನೆಪದಲ್ಲಿ ನಕಲಿ ಗ್ರಾಹಕ ಸೇವಾ ಕಾರ್ಯನಿರ್ವಾಹಕ 9.5 ಲಕ್ಷ ರೂ. ಹಣವನ್ನು ವಂಚನೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
Advertisement
ಏನಿದು ಪ್ರಕರಣ?
ವರ್ಷಾ ಅಗರ್ವಾಲ್ ನೋಯ್ಡಾದ ಸೆಕ್ಟರ್ 108ರ ನಿವಾಸಿಯಾಗಿದ್ದು, ಮೇ 7 ರಂದು ವರ್ಷಾಗೆ ಕರೆ ಬಂದಿದೆ. ಈ ವೇಳೆ ಮೊಬೈಲ್ ನೆಟ್‍ವರ್ಕ್ ಕಂಪನಿಯ ಗ್ರಾಹಕ ಸೇವಾ ವಿಭಾಗದಿಂದ ಎಂದು ಹೇಳಿ ಮಾತು ಆರಂಭಿಸಿದ್ದಾನೆ. ಈ ವೇಳೆ ಅಗರ್ವಾಲ್‍ಗೆ ನಿಮ್ಮ 3ಜಿ ಸಿಮ್ ಕಾರ್ಡ್ ಶೀಘ್ರದಲ್ಲೇ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ ಎಂದು ಹೇಳಿದ್ದಾನೆ. ಒಂದು ವೇಳೆ ತಮ್ಮ ಸಿಮ್ ಕಾರ್ಡ್ ಕಾರ್ಯನಿರ್ವಹಿಸುವುದನ್ನು ಮುಂದುವರಿಸಲು ಬಯಸಿದರೆ 3ಜಿಯಿಂದ 4ಜಿಗೆ ಅಪ್‍ಟೇಡ್ ಮಾಡಬೇಕು ಎಂದು ತಿಳಿಸಿದ್ದಾನೆ.
Advertisement
ಫೋನ್ ಮಾಡಿದವನ ಉದ್ದೇಶದ ಅರಿವಿಲ್ಲದ ಅಗರ್ವಾಲ್ ತನ್ನ ಸಿಮ್ ಅನ್ನು ಅಪ್‍ಡೇಟ್ ಮಾಡಲು ಒಪ್ಪಿಕೊಂಡಿದ್ದಾರೆ. ಆದರೆ ಸೈಬರ್ ವಂಚಕರು ಸಿಮ್ ಸ್ವಾಪ್ ಮುಖಾಂತರ ಲಕ್ಷಾಂತರ ರೂಪಾಯಿಗಳನ್ನು ವಂಚಿಸಿದ್ದಾರೆ.
Advertisement
ಅದೇ ರೀತಿ ಸಿಮ್ ಅಪ್‍ಡೇಟ್ ಪ್ರಕ್ರಿಯೆ ಶುರುವಾದ ನಂತರ 72 ಗಂಟೆಗಳ ಕಾಲ ತಮ್ಮ ಸಿಮ್ ಕಾರ್ಡ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ ಎಂದು ಫೋನ್ ಮಾಡಿದ್ದ ವಂಚಕ ತಿಳಿಸಿದ್ದಾನೆ. ಆದರೆ ಆರು ದಿನಗಳ ನಂತರವೂ ಅಗರ್ವಾಲ್ ಸಿಮ್ ಕಾರ್ಡ್ ಅಪ್‍ಡೇಟ್ ಆಗದಿದ್ದಾಗ ಅನುಮಾನ ಮೂಡಿದೆ. ನಂತರ ಅಗರ್ವಾಲ್ ಬ್ಯಾಂಕಿಗೆ ಹೋಗಿ ಪರಿಶೀಲನೆ ಮಾಡಿದ್ದಾರೆ. ಆಗ ಉಳಿತಾಯ ಖಾತೆಯಲ್ಲಿ ಮೇ 8 ಮತ್ತು 11 ರ ನಡುವೆ 22 ವ್ಯವಹಾರ ನಡೆದಿದ್ದು, ಒಟ್ಟು 9.52 ಲಕ್ಷ ರೂಗಳನ್ನು ಜಾರ್ಖಂಡ್‍ನಿಂದ ಬೇರೆ ಖಾತೆಗೆ ವರ್ಗಾಯಿಸಲಾಗಿದೆ.
ಮಹಿಳೆಯ ಸಿಮ್ ಕಾರ್ಡ್ ಬದಲಾಯಿಸಿದ ನಂತರ ಆರೋಪಿಗಳು ಹಣವನ್ನು ಕದ್ದಿದ್ದಾರೆ. ನಾವು ಅವರನ್ನು ಶೀಘ್ರದಲ್ಲೇ ಬಂಧಿಸುತ್ತೇವೆ. ಈ ಕುರಿತು ಸೈಬರ್ ಸೆಲ್ ಐಟಿ ಕಾಯ್ದೆಯಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದೆ ಎಂದು ನೋಯ್ಡಾದ ಸೈಬರ್ ಸೆಲ್‍ನ ಉಸ್ತುವಾರಿ ಬಲ್ಜೀತ್ ಸಿಂಗ್ ತಿಳಿಸಿದ್ದಾರೆ.
ಏನಿದು ಸಿಮ್ ಸ್ವಾಪ್?
ಸೈಬರ್ ವಂಚಕರು ಹಣ ಕಬಳಿಸಲು ಬಳಸಿರುವ ನೂತನ ದಾರಿಯೇ ಸಿಮ್ ಸ್ವಾಪ್ ಆಗಿದೆ. ಹೆಸರಾಂತ ಕಂಪೆನಿಗಳ ಮೂಲಕ ಗ್ರಾಹಕರಿಗೆ ಕರೆ ಮಾಡುವ ವಂಚಕರು ಕ್ಷಣಮಾತ್ರದಲ್ಲಿ ನಮ್ಮ ಸಿಮ್ ಮಾಹಿತಿಯನ್ನು ತಮ್ಮ ಸರ್ವರ್ ಗಳಲ್ಲಿ ಸೇವ್ ಮಾಡಿಕೊಳ್ಳುತ್ತಾರೆ. ನಂತರ ಗ್ರಾಹಕರು ಸಿಮ್ ಕಾರ್ಡ್‍ಗಳನ್ನು ಹ್ಯಾಕ್ ಮಾಡಿ ಹಣದೋಚುವ ಹಾಗೂ ಕಾನೂನು ಬಾಹಿರ ಕೃತ್ಯಕ್ಕೆ ಬಳಸುತ್ತಾರೆ.