38 ಬಾಲಿಗೆ 75 ರನ್ ಪಾಂಡ್ಯ, ಯಾದವ್ ಜೊತೆಯಾಟ – ರಾಜಸ್ಥಾನಕ್ಕೆ 194 ರನ್‍ಗಳ ಗುರಿ

Public TV
2 Min Read
suryakumar yadav

ಅಬುಧಾಬಿ: ಐಪಿಎಲ್ 20ನೇ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡ ರಾಜಸ್ಥಾನ್ ತಂಡಕ್ಕೆ 194 ರನ್‍ಗಳ ಬಿಗ್ ಟಾರ್ಗೆಟ್ ನೀಡಿದೆ.

ಯಾದವ್ ಪಂಡ್ಯಾ ಭರ್ಜರಿ ಜೊತೆಯಾಟ
ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಮುಂಬೈ ತಂಡವನ್ನು ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಭರ್ಜರಿ ಜೊತೆಯಾಟದಿಂದ ಉತ್ತಮ ಮೊತ್ತವನ್ನು ಕಲೆ ಹಾಕುವಂತೆ ಮಾಡಿದರು. ಈ ಇನ್ನಿಂಗ್ಸ್ ನಲ್ಲಿ ಉತ್ತಮವಾಗಿ ಆಡಿದ ಸೂರ್ಯಕುಮಾರ್ ಯಾದವ್ ಅವರು 47 ಬಾಲಿಗೆ ಎರಡು ಸಿಕ್ಸರ್ ಮತ್ತು 11 ಬೌಂಡರಿ ಸಮೇತ 79 ರನ್ ಹೊಡೆದರು. ಇವರಿಗೆ ಉತ್ತಮ ಸಾಥ್ ನೀಡಿದ ಹಾರ್ದಿಕ್ ಪಾಂಡ್ಯ 19 ಬಾಲಿಗೆ 30 ರನ್ ಸಿಡಿಸಿದರು. ಈ ಜೋಡಿ 38 ಬಾಲಿಗೆ 75 ರನ್‍ಗಳ ಜೊತೆಯಾಟವಾಡಿತು.

ಶ್ರೇಯಾಸ್ ಗೋಪಾಲ್ ಸ್ಪಿನ್ ಮೋಡಿ
ಬಲಿಷ್ಠ ಬ್ಯಾಟಿಂಗ್ ಬಲ ಹೊಂದಿರುವ ಮುಂಬೈ ಇಂಡಿಯನ್ಸ್ ತಂಡವನ್ನು ಕೊಂಚ ಕಟ್ಟು ಹಾಕುವಲ್ಲಿ ರಾಯಲ್ಸ್ ಬೌಲರ್ಸ್ ಯಶಸ್ವಿಯಾದರು. ನಾಲ್ಕು ಓವರ್ ಬೌಲ್ ಮಾಡಿದ ಕನ್ನಡಿಗ ಶ್ರೇಯಾಸ್ ಗೋಪಾಲ್ ಎರಡು ವಿಕೆಟ್ ಕಿತ್ತು ಕೇವಲ 28 ರನ್ ನೀಡಿದರು. ಇವರಿಗೆ ಸಾಥ್ ಕೊಟ್ಟ ಜೋಫ್ರಾ ಆರ್ಚರ್ ಮತ್ತು ಕಾರ್ತಿಕ್ ತ್ಯಾಗಿ ತಲಾ ಒಂದು ವಿಕೆಟ್ ಕಿತ್ತು ಮಿಂಚಿದರು.

ಟಾಸ್ ಗೆದ್ದು ತೆಗೆದುಕೊಂಡ ತೀರ್ಮಾನದಂತ ಮುಂಬೈ ಇಂಡಿಯನ್ಸ್ ತಂಡ ಉತ್ತಮ ಆರಂಭವನ್ನು ಕಂಡುಕೊಂಡಿತು. ಆರಂಭಿಕರಾಗಿ ಬಂದ ನಾಯಕ ರೋಹಿತ್ ಶರ್ಮಾ ಮತ್ತು ಕ್ವಿಂಟನ್ ಡಿ ಕಾಕ್ ಅವರು ಪವರ್ ಪ್ಲೇನಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸಿದರು. ಆದರೆ 4ನೇ ಓವರಿನ ಕೊನೆಯ ಬಾಲಿನಲ್ಲಿ ಯುವ ವೇಗಿ ಕಾರ್ತಿಕ್ ತ್ಯಾಗಿ ಅವರಿಗೆ ದೊಡ್ಡ ಹೊಡೆತ ಹೊಡೆಯಲು ಹೋದ ಕ್ವಿಂಟನ್ ಡಿ ಕಾಕ್ ಅವರು 23 ರನ್ ಸಿಡಿಸಿ ಔಟ್ ಆದರು.

ಈ ವೇಳೆ ಆರನೇ ಓವರ್ ಮುಕ್ತಾಯಕ್ಕೆ ಮುಂಬೈ ಇಂಡಿಯನ್ಸ್ ಒಂದು ವಿಕೆಟ್ ಕಳೆದುಕೊಂಡು 57 ರನ್ ಪೇರಿಸಿತು. ನಂತರ ಒಂದಾದ ರೋಹಿತ್ ಮತ್ತು ಸೂರ್ಯಕುಮಾರ್ ಯಾದವ್ 39 ರನ್‍ಗಳ ಜೊತೆಯಾಟವಾಡಿದರು. 23 ಬಾಲಿಗೆ 35 ರನ್ ಸಿಡಿಸಿ ಆಡುತ್ತಿದ್ದ ನಾಯಕ ರೋಹಿತ್ ಶರ್ಮಾ 9ನೇ ಓವರಿನ ಮೊದಲೇ ಬಾಲಿನಲ್ಲಿ ಶ್ರೇಯಾಸ್ ಗೋಪಾಲ್ ಅವರ ಬೌಲಿಂಗ್‍ನಲ್ಲಿ ರಾಹುಲ್ ತಿವಾಟಿಯಾ ಅವರಿಗೆ ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರಿದರು.

ಇದಾದ ನಂತರ ಅಂಗಳಕ್ಕಿಳಿದ ಗುಡ್ ಫಾರ್ಮ್‍ನಲ್ಲಿದ್ದ ಇಶಾನ್ ಕಿಶನ್, ಮೊದಲ ಬಾಲಿನಲ್ಲೇ ಒಲ್ಲದ ಹೊಡೆತಕ್ಕೆ ಕೈಹಾಕಿ ಸೊನ್ನೆ ಸುತ್ತಿ ಹೊರನಡೆದರು. ನಂತರ ಬಂದ ಕ್ರುನಾಲ್ ಪಾಂಡ್ಯ ಮತ್ತು ಸೂರ್ಯಕುಮಾರ್ ಯಾದವ್ ಅವರು ಬಿರುಸಿನ ಆಟಕ್ಕೆ ಮುಂದಾದರು. ಆದರೆ 12 ರನ್ ಗಳಿಸಿದ್ದ ಕ್ರುನಾಲ್ ಪಾಂಡ್ಯ ಕ್ಯಾಚ್ ಕೊಟ್ಟು ಔಟ್ ಆದರು. ಈ ನಡುವೆ ಆರಂಭದಿಂದ ಉತ್ತಮವಾಗಿ ಆಡಿಕೊಂಡು ಬಂದಿದ್ದ ಸೂರ್ಯಕುಮಾರ್ ಯಾದವ್ ಅವರು, 34 ಎಸೆತದಲ್ಲಿ ಅರ್ಧಶತಕ ಭಾರಿಸಿ ಮಿಂಚಿದರು. ನಂತರ ಅರ್ಮೋಘವಾಗಿ ಆಡಿದ ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಕೇವಲ 26 ಎಸೆತಗಳಲ್ಲಿ 50ರನ್‍ಗಳ ಜೊತೆಯಾಟವಾಡಿತು.

Share This Article