– ಸಹಾಯಕ್ಕೆ ಬರದೇ ಮುಂದೆ ಸಾಗಿದ ಹತ್ತಾರು ವಾಹನಗಳು; ಅಮಾನವೀಯ ನಡೆಗೆ ಆಕ್ರೋಶ
– ಮೃತನ ಕಣ್ಣುದಾನ ಮಾಡಿ ಸಾರ್ಥಕತೆ ಮೆರೆದ ಕುಟುಂಬಸ್ಥರು
ಬೆಂಗಳೂರು: ಚಲಿಸುತ್ತಿದ್ದ ಬೈಕ್‌ನಲ್ಲೇ 34ರ ವ್ಯಕ್ತಿಗೆ ಹೃದಯಾಘಾತವಾಗಿ ನಡುರಸ್ತೆಯಲ್ಲೇ ಪ್ರಾಣ ಬಿಟ್ಟಿರುವ ಹೃದಯ ವಿದ್ರಾವಕ ಬೆಂಗಳೂರಿನಲ್ಲಿ ನಡೆದಿದೆ. ರಸ್ತೆಯಲ್ಲಿ ಬಿದ್ದಿದ್ದ ಪತಿ ಜೀವ ಉಳಿಸಲು ಪತ್ನಿ ಕೈಮುಗಿದು ಅಂಗಲಾಚಿದರೂ ಜನರು ಯಾರು ಕೂಡ ನೆರವಿಗೆ ಬಂದಿಲ್ಲ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬನಶಂಕರಿ ಮೂರನೇ ಸ್ಟೇಜ್, ಇಟ್ಟುಮಡುವಿನ ಬಾಲಾಜಿ ನಗರದ ನಿವಾಸಿ ವೆಂಕಟರಾಮಣನ್ ಮೃತ ದುರ್ದೈವಿ. ಬೆಳಗಿನ ಜಾವ 3:30ರ ಸುಮಾರಿಗೆ ಇವರಿಗೆ ಮನೆಯಲ್ಲಿಯೇ ಎದೆನೋವು ಕಾಣಿಸಿಕೊಂಡಿದೆ. ತೀವ್ರ ಅಸ್ವಸ್ಥಗೊಂಡು ವಾಂತಿ ಮಾಡಿಕೊಂಡಿದ್ದರು. ಬಳಿಕ ಬೈಕ್‌ನಲ್ಲಿಯೇ ದಂಪತಿ ಕತ್ರಿಗುಪ್ಪೆ ಜನತಾ ಬಜಾರ್ ಸಮೀಪದ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಅಲ್ಲಿ ವೈದ್ಯರು ಇಲ್ಲದ ಕಾರಣ ಮತ್ತೊಂದು ಸಮೀಪದ ಖಾಸಗಿ ಆಸ್ಪತ್ರೆಗೆ ತೆರಳಿದರು. ಖಾಸಗಿ ಆಸ್ಪತ್ರೆಯಲ್ಲಿ ಇಸಿಜಿ ಮಾಡಿದಾಗ ಮೈಲ್ಡ್ ಹಾರ್ಟ್ ಅಟ್ಯಾಕ್ ಆಗಿರೋದು ಪತ್ತೆಯಾಗಿದೆ. ಈ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡದೆ ಜಯದೇವ ಆಸ್ಪತ್ರೆಗೆ ಹೋಗುವಂತೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಎದೆಹಾಲಿನಲ್ಲಿ ಯುರೋನಿಯಂ – ‘ಅಮೃತ’ಕ್ಕೆ ಇದೆಂಥಾ ಕಂಟಕ; ತಾಯಂದಿರು, ಶಿಶುಗಳ ಮೇಲೆ ಎಫೆಕ್ಟ್ ಏನು?
ಅಂಬ್ಯುಲೆನ್ಸ್ ಕೂಡ ಕೊಡದೇ ಬೇಗ ಇಲ್ಲಿಂದ ಹೋಗುವಂತೆ ಸೂಚನೆ ನೀಡಿದ್ದಾರೆ. ಅಂಬ್ಯುಲೆನ್ಸ್ ಸಿಗದ ಹಿನ್ನೆಲೆ, ಜೀವ ಉಳಿಸಿಕೊಳ್ಳಲು ಬೈಕ್‌ನಲ್ಲಿಯೇ ದಂಪತಿ ತೆರಳಿದರು. ಜಯದೇವ ಆಸ್ಪತ್ರೆಗೆ ಹೋಗುವಾಗ ಕದಿರೇನಹಳ್ಳಿ ಬ್ರಿಡ್ಜ್ ಸಮೀಪ ಮತ್ತೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತೀವ್ರ ಎದೆನೋವಿನಿಂದ ಬೈಕ್‌ಗೆ ಡಿಕ್ಕಿ ಹೊಡೆದು ಮುಂದೆ ವೆಂಕಟರಮಣನ್ ಮುಂದೆ ಸಾಗಿದ್ದರು. 100 ಮೀಟರ್ ದೂರ ಬರ್ತಿದ್ದಂತೆ ತೀವ್ರ ಅಸ್ವಸ್ಥಗೊಂಡು ಬೈಕ್‌ನಿಂದ ಬಿದ್ದಿದ್ದಾರೆ.
ಪತ್ನಿ ರೂಪ ಅವರು ರಸ್ತೆಯಲ್ಲಿ ಚಲಿಸುತ್ತಿದ್ದ ವಾಹನಗಳಿಗೆ ಸಹಾಯಕ್ಕಾಗಿ ಅಂಗಲಾಚಿದ್ದಾರೆ. ಆದರೆ, ಯಾವೊಂದು ವಾಹನ ಕೂಡ ಇವರ ಸಹಾಯಕ್ಕೆ ಬಂದಿಲ್ಲ. ರಸ್ತೆಯಲ್ಲಿ ವೆಂಕಟರಮಣನ್ ಬಿದ್ದು ಸಾವು-ಬದುಕಿನ ನಡುವೆ ಒದ್ದಾಡಿದ್ದರು. ಇತ್ತ ಪತಿ ಉಳಿವಿಗಾಗಿ ಪತ್ನಿ ಸಹಾಯಕ್ಕಾಗಿ ಅಂಗಲಾಚಿದ್ದರು. ಯಾರೊಬ್ಬರೂ ಸಹಾಯಕ್ಕೆ ಬರದೇ ಅಮಾನವೀಯವಾಗಿ ವರ್ತಿಸಿದ್ದಾರೆ. ಇದನ್ನೂ ಓದಿ: ದಟ್ಟ ಮಂಜಿಗೆ ದೆಹಲಿ-ಆಗ್ರಾ ಎಕ್ಸ್‌ಪ್ರೆಸ್‌ವೇಯಲ್ಲಿ 10 ಬಸ್‌ಗಳು, ಕಾರುಗಳ ನಡುವೆ ಡಿಕ್ಕಿ; ನಾಲ್ವರು ಸಾವು
ಈ ನಡುವೆ ಸ್ಥಳಕ್ಕೆ ದೌಡಯಿಸಿದ ವೆಂಕಟರಮಣನ್ ಅಕ್ಕ ತನ್ನ ತಮ್ಮನ ಪ್ರಾಣ ಉಳಿಸಲು ಸತತ ಪ್ರಯತ್ನ ನಡೆಸಿದರು. ನಡುರಸ್ತೆಯಲ್ಲಿಯೇ ಸಿಪಿಆರ್ ಮಾಡಿದರು. ಈ ಮಧ್ಯೆ ಸಾಕಷ್ಟು ಸಮಯ ಕಳೆದುಹೋಗಿತ್ತು. ಕೊನೆಗೆ ಕ್ಯಾಬ್ ಚಾಲಕ ಬಂದು ಸಹಾಯ ಮಾಡಿದರು. ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ, ದುರದೃಷ್ಟವಶಾತ್ ಮಾರ್ಗಮಧ್ಯೆಯೇ ವೆಂಕಟರಮಣನ್ ಅವರು ಕೊನೆಯುಸಿರೆಳೆದಿದ್ದರು.
ಜನರು ಮಾನವೀಯತೆ ಮರೆತರೂ ಮೃತ ವೆಂಕಟರಮಣನ್ ಕಣ್ಣುದಾನ ಮಾಡಿ ಕುಟುಂಬಸ್ಥರು ಸಾರ್ಥಕತೆ ಮೆರೆದಿದ್ದಾರೆ. ಇನ್ನೊಬ್ಬರ ಬದುಕಿಗೆ ಬೆಳಕಾಗಲಿ ಎಂದು ನೇತ್ರದಾನ ಮಾಡಿದ್ದಾರೆ.


