ಕಾಶ್ಮೀರಿ ಪ್ರತ್ಯೇಕತಾವಾದಿ ಹತ್ಯೆಗೈದು ತಲೆಮರೆಸಿಕೊಂಡಿದ್ದ ಮುಜಾಹಿದ್ದೀನ್‌ ಉಗ್ರರು 33 ವರ್ಷಗಳ ಬಳಿಕ ಅರೆಸ್ಟ್‌

Public TV
1 Min Read
kashmir police officers

ಶ್ರೀನಗರ: ಕಾಶ್ಮೀರಿ ಪ್ರತ್ಯೇಕತಾವಾದಿ ಮಿರ್ವೈಜ್‌ ಮೌಲ್ವಿ ಮೊಹಮ್ಮದ್‌ ಫಾರೂಕ್‌ (Mirwaiz Moulvi Mohammad Farooq) ಹತ್ಯೆಯಾಗಿ 33 ವರ್ಷಗಳ ನಂತರ ಇಬ್ಬರು ಹಿಜ್ಬುಲ್‌ ಮುಜಾಹಿದ್ದೀನ್‌ (Hizbul Mujahideen) ಭಯೋತ್ಪಾದಕರನ್ನು ಪೊಲೀಸರು ಬಂಧಿಸಿದ್ದಾರೆ.

ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕರಾದ ಜಾವೈದ್ ಅಹ್ಮದ್ ಭಟ್ ಮತ್ತು ಜಹೂರ್ ಅಹ್ಮದ್ ಭಟ್ ಬಂಧಿತರು. ತಲೆಮರೆಸಿಕೊಂಡಿದ್ದ ಭಯೋತ್ಪಾದಕರನ್ನು ಜಮ್ಮು ಮತ್ತು ಕಾಶ್ಮೀರದ ಗುಪ್ತಚರ ಸಂಸ್ಥೆ ಬಂಧಿಸಿ, ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಹಸ್ತಾಂತರಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬರೋಬ್ಬರಿ 9 ವರ್ಷಗಳ ಬಳಿಕ ದೇಗುಲದಲ್ಲಿ ಕದ್ದ ಆಭರಣ ವಾಪಸ್ ನೀಡಿದ ಕಳ್ಳ!

Terrorist

1990ರ ಮೇ 21 ರಂದು ಮಿರ್ವೈಜ್‌ನನ್ನು ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕರು ಹತ್ಯೆ ಮಾಡಿದ್ದರು. ಹಿಜ್ಬುಲ್ ಮುಜಾಹಿದ್ದೀನ್‌ನ ಐವರು ಕಾರ್ಯಕರ್ತರು ಮಿರ್ವೈಜ್ ಹತ್ಯೆಯಲ್ಲಿ ಆರೋಪಿಗಳಾಗಿದ್ದು, ಹತ್ಯೆ ಖಂಡಿಸಿ ಕಾಶ್ಮೀರದಲ್ಲಿ ವ್ಯಾಪಕ ಪ್ರತಿಭಟನೆ ನಡೆದಿತ್ತು. ಡೌನ್‌ಟೌನ್ ಶ್ರೀನಗರದ ಹವಾಲ್‌ನಲ್ಲಿ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿದಾಗ ಹತ್ತಾರು ಪ್ರತಿಭಟನಾಕಾರರು ಸಾವನ್ನಪ್ಪಿದ್ದರು. 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿತ್ತು. ಅಪರಾಧಿಗಳೆಂದು ಘೋಷಿಸಲ್ಪಟ್ಟಿದ್ದ ಈ ಇಬ್ಬರೂ ತಲೆಮರೆಸಿಕೊಂಡು ಓಡಾಡುತ್ತಿದ್ದರು. ಪಾಕಿಸ್ತಾನ, ನೇಪಾಳಕ್ಕೆ ಪಲಾಯನ ಮಾಡಿದ್ದರು. ಕೆಲ ವರ್ಷಗಳ ಹಿಂದೆ ಕಾಶ್ಮೀರಕ್ಕೆ ಮರಳಿದ್ದರು. ಇದನ್ನೂ ಓದಿ: ಮೂವರು ಅಪ್ರಾಪ್ತರಿಂದಲೇ 12ರ ಬಾಲಕನ ಭೀಕರ ಹತ್ಯೆ – ತಲೆಗೆ ಜಜ್ಜಿ ಕತ್ತು ಸೀಳಿದ್ರು

ಐವರು ಆರೋಪಿಗಳ ಪೈಕಿ ಇಬ್ಬರು ಈಗಾಗಲೇ ಸಾವನ್ನಪ್ಪಿದ್ದಾರೆ. ಒಬ್ಬರು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾನೆ. ಪರಾರಿಯಾಗಿದ್ದ ಇಬ್ಬರನ್ನು ಅಂತಿಮವಾಗಿ ಇಂದು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article