ತಿರುವನಂತಪುರಂ: ನೆರೆ ಮನೆಯ ನಾಯಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಪಮೋರಿಯನ್ ನಾಯಿಯೊಂದನ್ನು ಮಾಲೀಕ ಮನೆಯಿಂದ ಹೊರಹಾಕಿರುವ ವಿಚಿತ್ರ ಘಟನೆ ಕೇರಳದಲ್ಲಿ ನಡೆದಿದೆ.
ಹೌದು, ವಿಚಿತ್ರ ಎನಿಸಿದರು ಇದು ಸತ್ಯ. ಮನುಷ್ಯರು ಅನೈತಿಕ ಸಂಬಂಧ ಹೊಂದಿರುವುದು ಬಯಲಾದರೆ. ಅವರನ್ನು ಕುಟುಂಬಸ್ಥರು ಮನೆಯಿಂದ ಹೊರಹಾಕುವುದು, ಹಲ್ಲೆ ಮಾಡುವ ಪ್ರಕರಣಗಳು ದಿನನಿತ್ಯ ನಡೆಯುತ್ತಲೇ ಇರುತ್ತದೆ. ಆದ್ರೆ ಅನೈತಿಕ ಸಂಬಂಧ ಹೊಂದಿದೆ ಎಂದು ನಾಯಿಯನ್ನು ಮನೆಯಿಂದ ಹೊರಹಾಕಿರುವುದು ಇದೇ ಮೊದಲ ಪ್ರಕರಣ ಎಂದು ವರದಿಯಾಗಿದೆ.
ಈ ನಾಯಿಗೆ ಸುಮಾರು ಮೂರು ವರ್ಷ ವಯಸ್ಸಾಗಿದ್ದು, ತಿರುವನಂತಪುರದ ಚೆಕಾಯ್ ಮಾರುಕಟ್ಟೆಯಲ್ಲಿ ಅನಾಥವಾಗಿ ಈ ನಾಯಿ ನಿಂತಿತ್ತು. ಈ ವೇಳೆ ಪೀಪಲ್ ಫಾರ್ ಎನಿಮಲ್ಸ್(ಪಿಎಫ್‍ಎ) ಸ್ವಯಂ ಸೇವಕ ಶಮೀಮ್ ಅವರು ನಾಯಿಯನ್ನು ಕಂಡು ಅದರ ಬಳಿ ಹೋಗಿ ನೋಡಿದಾಗ, ಅದರ ಕೊರಳಿಗೆ ಒಂದು ಚೀಟಿಯನ್ನು ಕಟ್ಟಲಾಗಿತ್ತು. ಅದನ್ನು ತೆರೆದು ನೋಡಿದಾಗ ನಾಯಿ ಬಗ್ಗೆ ಶಮೀಮ್ ಅವರಿಗೆ ತಿಳಿದಿದೆ.
ಚೀಟಿಯಲ್ಲಿ ಏನಿದೆ?
ಇದು ಆತ್ಯುತ್ತಮ ತಳಿಯ ನಾಯಿ, ಒಳ್ಳೆ ನಡವಳಿಕೆ ಹೊಂದಿದೆ. ಇದಕ್ಕೆ ಯಾವುದೇ ಕಾಯಿಲೆಗಳಿಲ್ಲ. ಇದಕ್ಕೆ ಸಾಮಾನ್ಯವಾಗಿ ಐದು ದಿನಗಳಿಗೆ ಒಮ್ಮೆ ಸ್ನಾನ ಮಾಡಿಸಲಾಗುತಿತ್ತು. ಇದು ಕೇವಲ ಬೊಗಳುತ್ತದೆ, ಕಚ್ಚುವುದಿಲ್ಲ. ಮೂರು ವರ್ಷದಲ್ಲಿ ಯಾರನ್ನೂ ಕಡಿದಿಲ್ಲ. ಹಾಲು, ಬಿಸ್ಕೆಟ್ ಮತ್ತು ಮೊಟ್ಟೆಯನ್ನು ಹೆಚ್ಚು ತಿನ್ನಲು ಇಷ್ಟ ಪಡುತ್ತದೆ. ನೆರೆಮನೆಯ ನಾಯಿ ಜೊತೆಗೆ ಇದು ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ತಿಳಿದಿದ್ದಕ್ಕೆ ಇದನ್ನು ಮನೆಯಿಂದ ಹೊರ ಹಾಕಲಾಗಿದೆ ಎಂದು ಬರೆಯಲಾಗಿದೆ.
https://www.facebook.com/sreedevi.s.kartha/posts/10156939196634300
ಅಲ್ಲದೆ ಈ ಬಗ್ಗೆ ತಿಳಿದ ಬಳಿಕ, ಪ್ರಾಣಿ ಹಕ್ಕುಗಳ ರಕ್ಷಣೆಗಾಗಿ ಹೋರಾಡುವ ಕಾರ್ಯಕರ್ತೆ ಶ್ರೀದೇವಿ ಎಸ್. ಕರ್ಥ ಅವರು ಪೊಮೇರಿಯನ್ ನಾಯಿಯ ಫೋಟೋ ಹಾಗೂ ಅದರ ಕೊರಳಿನಲ್ಲಿದ್ದ ಚೀಟಿಯ ಫೋಟೋವನ್ನು ತಮ್ಮ ಫೇಸ್‍ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿದ ಪ್ರಾಣಿಪ್ರಿಯರು ನಾಯಿಯ ಮಾಲೀಕರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.