ಕೋಲಾರ: ಗುರುವಾರ ಸಂಜೆ ಕಾಣೆಯಾಗಿದ್ದ ಮೂರು ವರ್ಷದ ಮಗು ಎರಡು ದಿನಗಳ ನಂತರ ಶವವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಮಾಲೂರು ಹುಲ್ಕೂರು ಗ್ರಾಮದಲ್ಲಿ ನಡೆದಿದೆ.
ಮೂರು ವರ್ಷದ ವೇದ ಕೊಲೆಯಾದ ಕಂದಮ್ಮ. ಈಕೆ ಗ್ರಾಮದ ಪಚ್ಚಪ್ಪ ಹಾಗೂ ಕವಿತಾ ದಂಪತಿಯ ಮಗಳಾಗಿದ್ದು, ಗುರುವಾರ ಸಂಜೆ ಈಕೆ ಕಾಣೆಯಾಗಿದ್ದಳು. ಆದರೆ ವೇದ ಶನಿವಾರ ಅರ್ಧ ಸುಟ್ಟು ಹೋಗಿರುವ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.
ಅದೇ ಗ್ರಾಮದ ನಿವಾಸಿ ಮುನಿರಾಜು ಎಂಬವನು ವೇದಳನ್ನು ಕೊಂದು ಸುಟ್ಟು ಹಾಕಿದ್ದಾನೆ. ಆರೋಪಿ ಮುನಿರಾಜು ಮಗುವಿನ ಚಿಕ್ಕಮ್ಮನ ಜೊತೆಯಲ್ಲಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದನು. ಇದನ್ನು ವೇದ ನೋಡಿದ್ದಾಳೆ. ಹೀಗಾಗಿ ಈ ಬಗ್ಗೆ ಮನೆಯವರಿಗೆ ಹೇಳುತ್ತಾಳೆ ಎಂಬ ಭಯದಿಂದ ಆರೋಪಿ ಮುನಿರಾಜು ಮಗುವನ್ನು ಕಿಡ್ನಾಪ್ ಮಾಡಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕೊಂದಿದ್ದಾನೆ. ಬಳಿಕ ತಾನೇ ಸುಟ್ಟು ಹಾಕಿದ್ದಾನೆ.
ಮಗು ನಾಪತ್ತೆಯಾದ ನಂತರ ಗ್ರಾಮಸ್ಥರು ಈತನ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಬಳಿಕ ಪೊಲೀಸರು ಆರೋಪಿ ಮುನಿರಾಜುನನ್ನು ಬಂಧಿಸಿ ವಿಚಾರಣೆ ಮಾಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
ಈ ಕುರಿತು ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.