ತುಮಕೂರು: ಸ್ಮಾರ್ಟ್ ಸಿಟಿ ಅಧಿಕಾರಿಗಳಂತೆ ಬಂದು ವೃದ್ಧೆಯನ್ನು ವಂಚಿಸಿ ಸುಮಾರು 20 ಲಕ್ಷ ರೂ. ಗೂ ಅಧಿಕ ಬೆಲೆಬಾಳುವ ಚಿನ್ನಾಭರಣ ದೋಚಿದ ಘಟನೆ ತುಮಕೂರು ನಗರದಲ್ಲಿ ನಡೆದಿದೆ.
ಮನೋಹರಾ ವಂಚನೆಗೆ ಒಳಗಾದ ವೃದ್ಧೆ ಮಹಿಳೆ. ಮನೋಹರಾ ಅವರ ಕುಟುಂಬದವರು ಉದ್ಯಮಿಗಳಾಗಿದ್ದು, ನಗರದ ಸಿ.ಎಸ್.ಐ ಲೇಔಟ್ ನಲ್ಲಿ ಒಬ್ಬರೇ ವಾಸವಾಗಿದ್ದರು. ಚಿನ್ನಾಭರಣ ವಂಚನೆ ತಡವಾಗಿ ಬೆಳಕಿಗೆ ಬಂದಿದೆ.
ಗುರುವಾರ ಮಧ್ಯಾಹ್ನ ಸ್ಮಾರ್ಟ್ ಸಿಟಿ ಅಧಿಕಾರಿಗಳಂತೆ ಬಂದ ಮೂವರು ದುಷ್ಕರ್ಮಿಗಳು, ನಿಮ್ಮ ಮನೆಗೆ ಯುಜಿಡಿ ಕನೆಕ್ಷನ್ ಕೊಡಬೇಕಾಗಿದೆ ಅಂತ ಮನೆಯೊಳಗೆ ಬಂದಿದ್ದರು. ಅಲ್ಲದೇ ಮನೆಯಲ್ಲಿ ಯಾವ ವಸ್ತುಗಳು ಎಲ್ಲಿ ಅಭ್ಯವಿದೆ ಎಂದು ಹುಡುಕಾಡಿದ್ದಾರೆ. ನಂತರ ಇಬ್ಬರು ಮನೋಹರಾ ಅವರನ್ನು ಮನೆಯ ಮೇಲೆ ಕರೆದುಕೊಂಡು ಹೋಗಿದ್ದಾರೆ. ಮನೆಯಲ್ಲಿ ಉಳಿದುಕೊಂಡಿದ್ದ ವ್ಯಕ್ತಿ ಪಕ್ಕದಲ್ಲಿಯೇ ಇದ್ದ ಕೀಲಿ ತಗೆದುಕೊಂಡು ಬೀರೋ ತೆರೆದು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ.
ಚಿನ್ನಾಭರಣ ದೋಚಿರುವುದು ರಾತ್ರಿ 8 ಗಂಟೆಗೆ ವೃದ್ಧೆಯ ಗಮನಕ್ಕೆ ಬಂದಿದೆ. ಕಳ್ಳರು ಡೈಮಂಡ್ ನೆಕ್ಲೆಸ್ ಸೇರಿದಂತೆ ಸುಮಾರು 20 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದಾರೆ. ಈ ಸಂಬಂಧ ಹೊಸಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.