ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಕಿಶ್ತ್ವಾರ್‌ನಲ್ಲಿ ಉಗ್ರ ಸಂಘಟನೆ ಜೈಶ್-ಎ-ಮೊಹಮ್ಮದ್‌ನ ಕಮಾಂಡರ್ ಸೈಫುಲ್ಲಾ ಸೇರಿದಂತೆ ಮೂವರು ಭಯೋತ್ಪಾದಕರನ್ನು ಭದ್ರತಾ ಪಡೆಗಳು (Indian Army) ಹತ್ಯೆಗೈದಿವೆ.
ಉಗ್ರರ ಒಳನುಸುಳುವಿಕೆ ತಡೆಯಲು ಗುಡ್ಡಗಾಡು ಪ್ರದೇಶಗಳಲ್ಲಿ ಯೋಧರು ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ (Anti Militancy Operation) ನಡೆಸುತ್ತಿದ್ದಾರೆ. ಕಾರ್ಯಾಚರಣೆಯ ಎರಡನೇ ದಿನವಾದ ಶುಕ್ರವಾರ (ಏ.11) ಮೂವರು ಭಯೋತ್ಪಾದಕರ ಹತ್ಯೆಯಾಗಿದೆ. ಜಮ್ಮುವಿನ ಗುಡ್ಡಗಾಡು ಪ್ರದೇಶಗಳಲ್ಲಿ ಭಯೋತ್ಪಾದಕರನ್ನು ಪತ್ತೆಹಚ್ಚುವ ಕಾರ್ಯಾಚರಣೆ ಇಂದು ಸಹ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ರಾಣಾಗೆ 14×14 ಅಡಿಯ ಸೆಲ್ – ದಿನದ 24 ಗಂಟೆಯೂ ನಿಗಾ; ಸೆಲ್‌ನಲ್ಲೇ ಊಟ
ಹತ್ಯೆಗೊಳಗಾದ ಭಯೋತ್ಪಾದಕರಲ್ಲಿ ಒಬ್ಬನನ್ನು ಜೈಶ್-ಎ-ಮೊಹಮ್ಮದ್‌ನ ಉನ್ನತ ಕಮಾಂಡರ್ ಸೈಫುಲ್ಲಾ ಎಂದು ಗುರುತಿಸಲಾಗಿದೆ. ಈತ ಹಲವಾರು ತಿಂಗಳುಗಳಿಂದ ಈ ಪ್ರದೇಶದಲ್ಲಿ ಸಕ್ರಿಯನಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಪ್ತಚರ ಮಾಹಿತಿಯ ಆಧಾರದ ಮೇಲೆ ಕಿಶ್ತ್ವಾರ್ ಜಿಲ್ಲೆಯ ಚತ್ರು ಅರಣ್ಯ ಪ್ರದೇಶದಲ್ಲಿ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ಪ್ರಾರಂಭಿಸಿದ್ದರು. ಉಗ್ರರ ಶೋಧದ ವೇಳೆ ಭದ್ರತಾ ಸಿಬ್ಬಂದಿ ಭಯೋತ್ಪಾದಕರು ಅಡಗಿರುವುದನ್ನು ಪತ್ತೆಹಚ್ಚಿದ್ದರು. ಈ ವೇಳೆ ಎರಡು ಕಡೆಯಿಂದ ಗುಂಡಿನ ದಾಳಿ ನಡೆದಿದೆ. ಈ ವೇಳೆ ಮೂವರು ಉಗ್ರರು ಹತರಾಗಿದ್ದಾರೆ.
ಪ್ರತಿಕೂಲ ಭೂಪ್ರದೇಶ ಮತ್ತು ಪ್ರತಿಕೂಲ ಹವಾಮಾನದ ನಡುವೆಯೂ ಸೈನಿಕರು ನಿರಂತರ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ. ಭಯೋತ್ಪಾದಕರನ್ನು ಪತ್ತೆಹಚ್ಚಲು ಭದ್ರತಾ ಪಡೆಗಳು ಸೇನಾ ವಿಮಾನ, ಡ್ರೋಣ್ ಮತ್ತು ಸ್ನಿಫರ್ ನಾಯಿಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಸೇನೆಯ ಮೂಲಗಳು ತಿಳಿಸಿದೆ. ಇದನ್ನೂ ಓದಿ: ಭದ್ರತಾ ಪಡೆಯಿಂದ ಯಶಸ್ವಿ ಕಾರ್ಯಚರಣೆ – ಓರ್ವ ಭಯೋತ್ಪಾದಕ ಹತ