ಭೋಪಾಲ್: ಸುಮಾರು 6 ರಾಜ್ಯಗಳಿಗೆ ಸರಬರಾಜು ಮಾಡುತ್ತಿದ್ದ 3 ಮೂರು ಹಾಲು ಉತ್ಪಾದಕ ಘಟಕಗಳ ಮೇಲೆ ದಾಳಿ ಮಾಡಿರುವ ಅಧಿಕಾರಿಗಳು ಸುಮಾರು 10,000 ಸಾವಿರ ಕೃತಕ ಸಿಂಥೆಟಿಕ್ ಹಾಲನ್ನು ಮಧ್ಯಪ್ರದೇಶದಲ್ಲಿ ವಶಪಡಿಸಿಕೊಂಡಿದ್ದಾರೆ.
ಈ ಹಾಲು ಉತ್ಪಾದಕ ಘಟಕಗಳಿಂದ ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ, ದೆಹಲಿ, ಹರಿಯಾಣ ಮತ್ತು ಮಹಾರಾಷ್ಟ್ರದ ಕೆಲ ಬ್ರಾಂಡೆಡ್ ಹಾಲಿನ ಘಟಕಗಳಿಗೆ ಸಿಂಥೆಟಿಕ್ ಹಾಲು ಸರಬರಾಜು ಆಗುತ್ತಿತ್ತು ಎನ್ನಲಾಗಿದೆ. ಈಗ ಮೊರೆನಾ ಜಿಲ್ಲೆಯ ಅಂಬಾ ಮತ್ತು ಗ್ವಾಲಿಯರ್-ಚಂಬಲ್ ಪ್ರದೇಶದ ಭಿಂದ್ ಜಿಲ್ಲೆಯ ಲಹಾರ್ ನಲ್ಲಿ ಇದ್ದ ಮೂರು ಹಾಲಿನ ಘಟಕಗಳು ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಮಧ್ಯ ಪ್ರದೇಶದ ವಿಶೇಷ ಪೊಲೀಸ್ ಅಧಿಕಾರಿಗಳು ಈ ದಾಳಿಯನ್ನು ಮಾಡಿದ್ದು, 57 ಜನರನ್ನು ಬಂಧಿಸಿದ್ದಾರೆ. ಘಟಕದಲ್ಲಿದ್ದ ಸುಮಾರು 10,000 ಕೃತಕ ಸಿಂಥೆಟಿಕ್ ಹಾಲು, 500 ಕೆ.ಜಿ ಕೃತಕ ಹಾಲಿಗೆ ಹಾಕುತ್ತಿದ್ದ ಮಾವಾ ಎಂಬ ಕೆಮಿಕಲ್ ಮತ್ತು 200 ಕೆ,ಜಿ ಸಿಂಥೆಟಿಕ್ ಪನೀರ್ ಕಾಟೇಜ್ ಚೀಸ್‍ನ್ನು ವಶಪಡಿಸಿಕೊಂಡಿದ್ದಾರೆ.
ಈ ವಿಚಾರದ ಬಗ್ಗೆ ಮಾತನಾಡಿರುವ ಎಸ್‍ಟಿಎಫ್ ಅಧಿಕಾರಿ ರಾಜೇಶ್ ಭಡೋರಿಯಾ, ನಾವು 3 ಹಾಲು ಘಟಕದ ಮೇಲೆ ದಾಳಿ ಮಾಡಿದ್ದು, ಒಟ್ಟು 20 ಟ್ಯಾಂಕರ್ ಗಳು ಮತ್ತು ಕೃತಕ ಹಾಲು ಮತ್ತು ಇತರ ಉತ್ಪನ್ನಗಳನ್ನು ಹೊಂದಿರುವ 11 ಪಿಕ್-ಅಪ್ ವ್ಯಾನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಈ ಘಟಕಗಳಿಂದ ದ್ರವ ಮಾರ್ಜಕ, ಸಂಸ್ಕರಿಸಿದ ತೈಲ ಮತ್ತು ಗ್ಲೂಕೋಸ್ ಪುಡಿಯನ್ನು ಹೆಚ್ಚಿನ ಪ್ರಮಾಣದಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಈ ಮೂರು ಘಟಕಗಳಲ್ಲಿ ತಯಾರಿಸಿದ ಪ್ರತಿ ಒಂದು ಲೀಟರ್ ಹಾಲಿನಲ್ಲಿ, ಶೇಕಡಾ 30 ರಷ್ಟು ಸಂಸ್ಕರಿಸಿದ ಎಣ್ಣೆ, ದ್ರವ ಮಾರ್ಜಕ (ಶಾಂಪೂ), ಬಿಳಿ ಬಣ್ಣ ಮತ್ತು ಗ್ಲೂಕೋಸ್ ಪುಡಿಯನ್ನು ಹಾಕುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ. ಇದರ ಜೊತೆಗೆ ಇದೇ ರೀತಿಯಲ್ಲಿ ಸಿಂಥೆಟಿಕ್ ಕಾಟೇಜ್ ಚೀಸ್ ತಯಾರಿಸಿ ಇದನ್ನು ಉತ್ತರ, ಮಧ್ಯ ಮತ್ತು ಪಶ್ಚಿಮ ಭಾರತದ ಎಲ್ಲಾ ಪ್ರಮುಖ ಮಾರುಕಟ್ಟೆಗಳಿಗೆ ಸರಬರಾಜು ಮಾಡಲಾಗುತ್ತಿತು ಎನ್ನಲಾಗಿದೆ.
ಮೂಲಗಳ ಪ್ರಕಾರ ಒಂದು ಲೀಟರ್ ಸಿಂಥೆಟಿಕ್ ಹಾಲನ್ನು ಉತ್ಪಾದಿಸಲು ಇವರಿಗೆ 5 ರೂ. ಖರ್ಚು ಆಗುತ್ತದೆ. ಆದರೆ ಇದನ್ನು ಪ್ರಮುಖ ಮಾರುಕಟ್ಟೆಗಳಿಗೆ ಲೀಟರ್‍ಗೆ 45 ರಿಂದ 50 ರೂಗಳಿಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಈ ಮೂರು ಘಟಕಗಳು ದಿನದ 24 ಗಂಟೆಗಳೂ ಕಾರ್ಯ ನಿರ್ವಹಿಸುತ್ತಿದ್ದು, ದಿನಕ್ಕೆ ಸುಮಾರು 2 ಲಕ್ಷ ಲೀಟರ್ ಹಾಲನ್ನು ಉತ್ಪಾದನೆ ಮಾಡುತ್ತಿದ್ದವು ಎಂದು ತಿಳಿದು ಬಂದಿದೆ.
ಈ ಘಟಕಗಳನ್ನು ನಿರ್ವಹಿಸುವ ಗ್ಯಾಂಗ್‍ನೊಂದಿಗೆ ಕೆಲ ಆಹಾರ ನಿರೀಕ್ಷಕರು ಸಹ ಭಾಗಿಯಾಗಿದ್ದಾರೆ ಎಂದು ಎಸ್‍ಟಿಎಫ್ ಮೂಲಗಳು ತಿಳಿಸಿವೆ. ಶೀಘ್ರದಲ್ಲೇ ಅವರನ್ನು ಗುರುತಿಸಲಾಗುವುದು ಮತ್ತು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.