ಮಸ್ಕಟ್: ಒಮಾನ್ ಕರಾವಳಿಯಲ್ಲಿ ವ್ಯಾಪಾರಿ ಹಡಗುಗಳ ಮೇಲೆ ಇರಾನ್ ನಡೆಸಿದ ದಾಳಿಗೆ ಮೂವರು ಭಾರತೀಯರು ಬಲಿಯಾಗಿದ್ದಾರೆ. ಪ್ರದೇಶದಾದ್ಯಂತ ನಡೆದ ದಾಳಿಯಲ್ಲಿ ಸುಮಾರು 20 ಮಂದಿ ಗಾಯಗೊಂಡಿದ್ದಾರೆ.
ಮಸ್ಕತ್ ಕರಾವಳಿಯಿಂದ 52 ನಾಟಿಕಲ್ ಮೈಲು ದೂರದಲ್ಲಿ ಸ್ಫೋಟಕಗಳಿಂದ ತುಂಬಿದ್ದ ಡ್ರೋನ್ ಬೋಟ್ ಮೇಲೆ ದಾಳಿ ನಡೆದಿದೆ. ಮಾರ್ಷಲ್ ಐಲಂಡ್ಸ್ ಧ್ವಜವನ್ನು ಹೊತ್ತಿದ್ದ ‘ಎಂವಿ ಎಂಕೆಡಿ ವ್ಯೋಮ್’ ತೈಲ ಟ್ಯಾಂಕರ್‌ಗೆ ಡ್ರೋನ್ ಅಪ್ಪಳಿಸಿದೆ. ಈ ಘಟನೆಯಲ್ಲಿ ಮುಂಬೈ ಮೂಲದ ದೀಕ್ಷಿತ್ ಸೋಲಂಕಿ (25) ಸಾವನ್ನಪ್ಪಿದ್ದಾರೆ.
ಇದಕ್ಕೂ ಮುನ್ನಾ ದಿನ ಹಾರ್ಮುಜ್ ಜಲಸಂಧಿಯಲ್ಲಿ ‘ಎಂವಿ ಸ್ಕೈಲೈಟ್’ ಹೆಸರಿನ ಇನ್ನೊಂದು ವಾಣಿಜ್ಯ ಹಡಗಿನ ಮೇಲೆ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಬಿಹಾರದ ಆಶಿಷ್ ಕುಮಾರ್ ಮತ್ತು ರಾಜಸ್ಥಾನದ ದುಲೀಪ್ ಸಿಂಗ್ ನಾಪತ್ತೆಯಾಗಿದ್ದರು. ತೀವ್ರ ಶೋಧ ಕಾರ್ಯಾಚರಣೆಯ ಬಳಿಕವೂ ಪತ್ತೆಯಾಗದ ಹಿನ್ನೆಲೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪರಿಗಣಿಸಲಾಗಿದೆ. ಮೃತರ ಮಾಹಿತಿಯನ್ನ ಬಹಿರಂಗಗೊಳಿಸಲಾಗಿದೆ.
ಒಮಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ‘ಎಂಕೆಡಿ ವ್ಯೋಮ್ ಹಡಗಿನಲ್ಲಿದ್ದ ಭಾರತೀಯ ಪ್ರಜೆಯ ದುರಂತ ಸಾವು’ ಎಂದು ದೃಢಪಡಿಸಿದೆ. ‘ಹಡಗಿನಲ್ಲಿರುವ ನಮ್ಮ ಪ್ರಜೆಗಳನ್ನು ಸುರಕ್ಷಿತವಾಗಿ ಮತ್ತು ಬೇಗನೆ ವಾಪಸ್ ಕಳುಹಿಸಲು ಅನುಕೂಲವಾಗುವಂತೆ ಒಮಾನ್‌ನಲ್ಲಿರುವ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿರುವುದಾಗಿ’ ರಾಯಭಾರ ಕಚೇರಿ ತಿಳಿಸಿದೆ.
ಸ್ಕೈಲೈಟ್‌ನ ಮೂವರು ಭಾರತೀಯ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಜನರು ತಿಳಿಸಿದ್ದಾರೆ. ಟ್ಯಾಂಕರ್‌ನ 21 ಸದಸ್ಯ ಸಿಬ್ಬಂದಿಯಲ್ಲಿ 16 ಮಂದಿ ಭಾರತೀಯರು ಸೇರಿದ್ದಾರೆ.

