‘ಕೈ’ ಬಿಟ್ಟು ಬಿಜೆಪಿ ಸೇರಿದ್ದ ಮೂವರು ಶಾಸಕರಿಗೆ ಮಂತ್ರಿಗಿರಿ ಕೊಟ್ಟ ಗೋವಾ ಸರ್ಕಾರ

Public TV
2 Min Read
GOA Govt

ಪಣಜಿ: ಕಾಂಗ್ರೆಸ್ ಪಕ್ಷಕ್ಕೆ ಸಾಮೂಹಿಕವಾಗಿ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದ 10 ಶಾಸಕರ ಪೈಕಿ ಮೂವರಿಗೆ ಸಚಿವ ಸ್ಥಾನ ನೀಡಲಾಗಿದೆ.

ಫಿಲಿಪ್ ನೆರಿ ರಾಡ್ರಿಗೆಸ್, ಜೆನ್ನಿಫರ್ ಮಾನ್ಸೆರಾಟ್ಟೆ ಮತ್ತು ಚಂದ್ರಕಾಂತ್ ಕವಲೇಕರ್ ಅವರು ಪ್ರಮೋದ್ ಸಾವಂತ್ ಅವರ ಸಂಪುಟ ಸೇರಿದ್ದಾರೆ. ಈ ಮೂವರು ನೂತನ ಸಚಿವರು ಹಾಗೂ ಮಾಜಿ ಉಪಸಭಾಪತಿ ಮೈಕೆಲ್ ಲೋಬೋ ಕೂಡ ಶನಿವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಗೋವಾದ 10 ಕಾಂಗ್ರೆಸ್ ಶಾಸಕರು ಬುಧವಾರ ಬಿಜೆಪಿ ಸೇರಿದ್ದರು. 40 ಸದಸ್ಯರ ಸದನದಲ್ಲಿ ಕಾಂಗ್ರೆಸ್‍ನ ಹತ್ತು ಶಾಸಕರು ಪಕ್ಷ ತೊರೆದು ಬಿಜೆಪಿಗೆ ಸೇರಿದ್ದು ಕಮಲ ಪಾಳಯದ ಬಲವನ್ನು 27ಕ್ಕೇರುವಂತೆ ಮಾಡಿತ್ತು. ಈ ಬೆನ್ನಲ್ಲೇ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಂಪುಟ ಪುನಾರಚನೆ ಮುಂದಾಗಿದ್ದರು.

ಈ ಬಗ್ಗೆ ಶುಕ್ರವಾರ ತಡರಾತ್ರಿ ಮಾಹಿತಿ ನೀಡಿದ್ದ ಪ್ರಮೋದ್ ಸಾವಂತ್ ಅವರು, ನಾಲ್ಕು ನೂತನ ಸಚಿವರನ್ನು ನೇಮಕ ಮಾಡಲಾಗುವುದು. ಗೋವಾ ಫಾರ್ವರ್ಡ್ ಪಾರ್ಟಿ ಹಾಗೂ ಓರ್ವ ಪಕ್ಷೇತರ ಶಾಸಕರಿಗೆ ನೀಡಿದ್ದ ಸಚಿವ ಸ್ಥಾನವನ್ನು ಹಿಂಪಡೆಯಲಾಗುತ್ತಿದೆ. ಶನಿವಾರ ಮಧ್ಯಾಹ್ನ 3 ಗಂಟೆಗೆ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದ್ದರು.

GOA Govt A

ದೋಸ್ತಿ ಪಕ್ಷದ ಶಾಸಕರನ್ನು ಸಂಪುಟದಿಂದ ಕೈಬಿಡುತ್ತಿರುವುದು ಯಾಕೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದ ಪ್ರಮೋದ್ ಸಾವಂತ್ ಅವರು, ಉತ್ತಮ ಆಡಳಿತ ನೀಡಬೇಕು ಎನ್ನುವುದಷ್ಟೇ ನನ್ನ ಉದ್ದೇಶ. ಹೈಕಮಾಂಡ್ ಸೂಚನೆಮೇರೆಗೆ ಸಂಪುಟ ಪುನಾರಚನೆ ನಿರ್ಧಾರ ಕೈಗೊಂಡಿದ್ದೇನೆ ಎಂದು ತಿಳಿಸಿದ್ದರು.

ಪ್ರಮೋದ್ ಸಾವಂತ್ ಅವರು ನೂತನ ಸಚಿವರಾಗಿ ನೇಮಕಗೊಳ್ಳುವ ಶಾಸಕರು ಯಾರು ಎನ್ನುವ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಕಾಂಗ್ರೆಸ್ ಬಿಟ್ಟು ಪಕ್ಷ ಸೇರಿದ ಶಾಸಕರಿಗೆ ಮಂತ್ರಿಗಿರಿ ನೀಡುವ ಮೂಲಕ ಬಿಜೆಪಿ ಹೈಕಮಾಂಡ್ ರಾಜಕೀಯ ಚಾಣಾಕ್ಷತೆ ತೋರಿದೆ ಎನ್ನಲಾಗುತ್ತಿದೆ. ಪ್ರಮೋದ್ ಸಾವಂತ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಎರಡನೇ ಬಾರಿಗೆ ಸಂಪುಟ ಪುನಾರಚನೆ ಇದಾಗಿದೆ.

ವಿಪಕ್ಷ ನಾಯಕ ಚಂದ್ರಕಾಂತ್ ಕವಲೇಕರ್ ನೇತೃತ್ವದಲ್ಲಿ ಕಾಂಗ್ರೆಸ್‍ನ 10 ಮಂದಿ ಬಣವು ಬುಧವಾರ ಸಂಜೆಯ ನಂತರ ಸ್ಪೀಕರ್ ಅವರನ್ನು ಭೇಟಿಯಾಗಿತ್ತು. ಕಾಂಗ್ರೆಸ್‍ನಿಂದ ಹೊರಬರುತ್ತಿರುವುದಾಗಿ ಸ್ಪೀಕರ್ ರಾಜೇಶ್ ಪಾಟ್ನೇಕರ್ ಅವರಿಗೆ ಪತ್ರವನ್ನು ನೀಡಿತ್ತು. ಚಂದ್ರಕಾಂತ್ ಕವಲೇಕರ್, ಅಟನಾಸಿಯೋ ಆನ್ಸೆರಾಟ್ಟೆ, ಜೆನ್ನಿಫರ್ ಮಾನ್ಸೆರಾಟ್ಟೆ, ಫ್ರಾನ್ಸಿಸ್ ಸಿಲ್ವೇರಾ, ಫಿಲಿಪ್ ನೆರಿ ರಾಡ್ರಿಗೆಸ್, ಕ್ಲಿಯೋಫೇಷಿಯೋ ಡಯಾಸ್, ವಿಲ್‍ಫ್ರೆಡ್ ಡಿಸಾ, ನೀಲಕಂಠ್ ಹಲರನಕರ್, ಇಸಿಡೋರ್ ಫರ್ನಾಂಡಿಸ್ ಅವರು ಕಾಂಗ್ರೆಸ್‍ನಿಂದ ಬಂದು ಕಮಲ ಬಣದ ಸದಸ್ಯರಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *