ಮಕ್ಕಳ ಕಳ್ಳರೆಂದು ಕಾಂಗ್ರೆಸ್ ನಾಯಕರನ್ನು ಥಳಿಸಿದ ಗ್ರಾಮಸ್ಥರು

Public TV
1 Min Read
mp congress leader

ಭೋಪಾಲ್: ಮೂವರು ಕಾಂಗ್ರೆಸ್ ನಾಯಕರನ್ನು ಮಕ್ಕಳ ಅಪಹರಣಕಾರರು ಎಂದು ತಪ್ಪಾಗಿ ತಿಳಿದು ಗ್ರಾಮಸ್ಥರು ಅವರನ್ನು ಥಳಿಸಿರುವ ಘಟನೆ ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ಗುರುವಾರ ರಾತ್ರಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ಬೆತುಲ್ ಜಿಲ್ಲೆಯ ನವಲ್ಸಿಂಹ್ ಗ್ರಾಮದಲ್ಲಿ ಮಕ್ಕಳನ್ನು ಅಪಹರಿಸುವ ಕಳ್ಳರ ಗ್ಯಾಂಗ್ ಓಡಾಡುತ್ತಿದೆ ಎಂಬ ವದಂತಿಗಳ ಮೇರೆಗೆ ಊರಿನ ಗ್ರಾಮಸ್ಥರು ರಸ್ತೆ ಮಧ್ಯ ಮರಗಳನ್ನು ಹಾಕಿ ಮಾರ್ಗ ಬಂದ್ ಮಾಡಿ ಕಾಯುತ್ತಾ ಕುಳಿತಿದ್ದಾರೆ.

madhya pradesh police

ಈ ಸಮಯದಲ್ಲಿ ಅದೇ ಮಾರ್ಗದಲ್ಲಿ ಮೂವರು ಸ್ಥಳೀಯ ಕಾಂಗ್ರೆಸ್ ನಾಯಕರಾದ ಧರ್ಮೇಂದ್ರ ಶುಕ್ಲಾ, ಧರ್ಮ ಸಿಂಗ್ ಲಂಜಿವಾರ್ ಮತ್ತು ಲಲಿತ್ ಬರಾಸ್ಕರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ರಾತ್ರಿಯಲ್ಲಿ ಮರಗಳು ಬಿದ್ದಿರುವುದನ್ನು ನೋಡಿದ್ದಾರೆ. ಈ ಕೆಲಸವನ್ನು ಯಾರೋ ಹೆದ್ದಾರಿ ದರೋಡೆಕೋರರು ಮಾಡಿ ದರೋಡೆ ಮಾಡಲು ಕಾಯುತ್ತಿದ್ದಾರೆಂದು ಭಾವಿಸಿದ ನಾಯಕರು ಕಾರನ್ನು ವೇಗವಾಗಿ ಹಿಂದಿರುಗಿಸಲು ನೋಡಿದ್ದಾರೆ.

ಈ ವೇಳೆ ಅನುಮಾನಗೊಂಡ ಗ್ರಾಮಸ್ಥರು ಅವರನ್ನು ಬೆನ್ನಟ್ಟಿ ಹಿಡಿದು ಅವರನ್ನು ಸುತ್ತುವರೆದು ವಾಹನವನ್ನು ಜಖಂ ಮಾಡಿ. ಅವರನ್ನು ಹೊರಗೆ ಎಳೆದುಕೊಂಡು ಮೂವರನ್ನು ಥಳಿಸಿದ್ದಾರೆ.

ಈ ವಿಚಾರವಾಗಿ ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿ ರಾಮ್ ಸ್ನೇಹಿ ಮಿಶ್ರಾ, ಗ್ರಾಮಸ್ಥರು ಮಕ್ಕಳ ಅಪಹರಣಕಾರರೆಂದು ಶಂಕಿಸಿ, ನಾಯಕರ ವಾಹನವನ್ನು ಬೆನ್ನಟ್ಟಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ವಾಹನಕ್ಕೆ ಹಾನಿಯಾಗಿದೆ ಮತ್ತು ಮೂವರು ಕಾಂಗ್ರೆಸ್ ಮುಖಂಡರ ಮೇಲೂ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಬೆತುಲ್ ಪೊಲೀಸ್ ಠಾಣೆಯಲ್ಲಿ ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

police 1 1

ಕಳೆದ ಕೆಲ ವಾರಗಳಿಂದ ಮಕ್ಕಳ ಕಳ್ಳರೆಂದ ಭಾವಿಸಿ ಶಂಕಿತ ವ್ಯಕ್ತಿಗಳನ್ನು ಗ್ರಾಮಸ್ಥರು ಥಳಿಸಿರುವ ಸುಮಾರು 12 ಪ್ರಕರಣಗಳು ಮಧ್ಯಪ್ರದೇಶದಲ್ಲಿ ವರದಿಯಾಗಿವೆ. ಕಾಂಗ್ರೆಸ್ ಮುಖಂಡರನ್ನು ಥಳಿಸಿದ ಇದೇ ಜಿಲ್ಲೆಯ ಬೆತುಲ್‍ನಿಂದ ಮೂರು ಪ್ರಕರಣಗಳು ವರದಿಯಾಗಿವೆ. ಇದನ್ನು ಬಿಟ್ಟರೆ ಇಂದೋರ್, ಭೋಪಾಲ್, ಹೋಶಂಗಾಬಾದ್, ಸೆಹೋರ್, ನೀಮುಚ್, ರೈಸನ್ ಮತ್ತು ದೇವಾಸ್‍ನಿಂದ ಇದೇ ರೀತಿಯ ಪ್ರಕರಣಗಳು ವರದಿಯಾಗಿವೆ.

Share This Article
Leave a Comment

Leave a Reply

Your email address will not be published. Required fields are marked *