3 ವಿಕೆಟ್, 12 ರನ್, 1 ಮೇಡನ್ ಓವರ್ – ರಶೀದ್ ಬೌಲಿಂಗ್ ದಾಳಿಗೆ ಪಂಜಾಬ್ ಉಡೀಸ್

Public TV
3 Min Read
rashid khan

– ಸೋಲಿನ ಯಾನ ಮುಂದುವರಿಸಿದ ರಾಹುಲ್ ಪಡೆ
– ಪೂರನ್ ಆಕರ್ಷಕ ಅರ್ಧಶತಕ

ದುಬೈ: ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸನ್‍ರೈಸರ್ಸ್ ಹೈದರಾಬಾದ್ ತಂಡ 69 ರನ್‍ಗಳ ಭರ್ಜರಿ ಗೆಲುವನ್ನು ಸಾಧಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿದೆ.

ಇಂದು ನಡೆದ ಐಪಿಎಲ್-2020ಯ 22ನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸನ್‍ರೈಸರ್ಸ್ ಹೈದರಾಬಾದ್ ತಂಡ ನಾಯಕ ವಾರ್ನರ್ ಮತ್ತು ಜಾನಿ ಬೈರ್‌ಸ್ಟೋವ್  ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ನಿಗದಿತ 20 ಓವರಿನಲ್ಲಿ 201 ರನ್ ಗುರಿ ನೀಡಿತು. ಇದನ್ನು ಬೆನ್ನಟ್ಟಿದ ಪಂಜಾಬ್ ತಂಡ ಆರಂಭದಲ್ಲೇ ಎಡವಿತು. ಹೈದರಾಬಾದ್ ತಂಡದ ಬೌಲಿಂಗ್ ದಾಳಿಗೆ ನಲುಗಿದ ಪಂಜಾಬ್ 16.5 ಓವರ್ ಬ್ಯಾಟ್ ಮಾಡಿ 132 ರನ್ ಗಳಿಸಿ ಆಲೌಟ್ ಆಯ್ತು. ಪಂಜಾಬ್ ತಂಡ ಟೂರ್ನಿಯಲ್ಲಿ ಐದನೇ ಸೋಲಿನ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಉಳಿಯಿತು.

IPL OCT 08

ರಶೀದ್ ಖಾನ್ ಸ್ಪಿನ್ ಜಾದು
ಇಂದು ಹೈದರಾಬಾದ್ ಬೌಲರ್ ಗಳು ಪಂಜಾಬ್ ತಂಡವನ್ನು ಬಿಡದೇ ಕಾಡಿದರು. ನಾಲ್ಕು ಓವರ್ ಬೌಲ್ ಮಾಡಿದ ರಶೀದ್ ಖಾನ್ ಅವರು ಪ್ರಮುಖ ಮೂರು ವಿಕೆಟ್ ಪಡೆದು ಕೇವಲ 12 ರನ್ ನೀಡಿದರು. ಜೊತೆಗೆ 15ನೇ ಓವರಿನಲ್ಲಿ ಮೇಡನ್ ಮಾಡಿ ಎರಡು ವಿಕೆಟ್ ಕಿತ್ತು ಮಿಂಚಿದರು. ಇವರಿಗೆ ಉತ್ತಮ ಸಾಥ್ ಕೊಟ್ಟ ವೇಗಿಗಳಾದ ಖಲೀಲ್ ಅಹ್ಮದ್ ಮತ್ತು ಟಿ ನಟರಾಜನ್ ತಲಾ ಎರಡು ವಿಕೆಟ್ ಕಿತ್ತು ಮಿಂಚಿದರು.

ದೊಡ್ಡ ಮೊಟ್ಟದ ರನ್ ಬೆನ್ನಟ್ಟಿದ ಪಂಜಾಬ್ ತಂಡ ಆರಂಭದಲ್ಲೇ ಎಡವಿತು. ಎರಡನೇ ಓವರಿನಲ್ಲೇ ಇಲ್ಲದ ರನ್ ಕದಿಯಲು ಹೋದ ಮಯಾಂಕ್ ಅಗರ್ವಾಲ್ ಅವರು ರನೌಟ್ ಆದರು. ನಂತರ ಬಂದ ಸಿಮ್ರಾನ್ ಸಿಂಗ್ ಅವರು ಸ್ಫೋಟಕ ಆಟಕ್ಕೆ ಮುಂದಾಗಿ 11 ರನ್ ಗಳಿಸಿ ಕೆ ಖಲೀಲ್ ಅಹ್ಮದ್ ಬೌಲಿಂಗ್‍ನಲ್ಲಿ ಪ್ರಿಯಮ್ ಗರ್ಗ್ ಅವರಿಗೆ ಕ್ಯಾಚ್ ಕೊಟ್ಟು ಹೊರನಡೆದರು. ಪರಿಣಾಮ ಪಂಜಾಬ್ ತಂಡ ಆರು ಓವರ್ ಮುಕ್ತಾಯಕ್ಕೆ ಎರಡು ವಿಕೆಟ್ ಕಳೆದುಕೊಂಡು 45 ರನ್ ಪೇರಿಸಿತು.

ಪೂರನ್ ಅಬ್ಬರದ ಅರ್ಧಶತಕ
ನಂತರ ತಾಳ್ಮೆಯ ಆಟಕ್ಕೆ ಮುಂದಾಗಿದ್ದ ನಾಯಕ ಕೆಎಲ್ ರಾಹುಲ್ ಅವರನ್ನು ಅಭಿಷೇಕ್ ಶರ್ಮಾ ಅವರು ಔಟ್ ಮಾಡಿದರು. 16 ಬಾಲಿಗೆ 11 ರನ್ ಗಳಿಸಿದ್ದ ರಾಹುಲ್ ಕೇನ್ ವಿಲಿಯಮ್ಸನ್ ಅವರಿಗೆ ಕ್ಯಾಚ್ ಕೊಟ್ಟ ಹೊರನಡೆದರು. ನಂತರ ಅಬ್ಬರಿಸಿದ ನಿಕೋಲಸ್ ಪೂರನ್ ಅವರು ಕೇವಲ 17 ಬಾಲಿಗೆ ಅರ್ಧಶತಕ ಸಿಡಿಸಿ ಐಪಿಎಲ್‍ನಲ್ಲಿ ವೇಗವಾಗಿ ಅರ್ಧಶತಕ ಸಿಡಿಸಿದ ಐದನೇ ಆಟಗಾರ ಎಂಬ ಖ್ಯಾತಿಗೆ ಒಳಗಾದರು. 2018ರಲ್ಲಿ 14 ಬಾಲಿಗೆ 50 ರನ್ ಹೊಡೆದ ಕೆಎಲ್ ರಾಹುಲ್ ಅವರು ಮೊದಲ ಸ್ಥಾನದಲ್ಲಿ ಇದ್ದಾರೆ.

ಇದಾದ ಬಳಿಕ 11 ಬಾಲಿಗೆ 7 ರನ್ ಸಿಡಿಸಿ ಆಡುತ್ತಿದ್ದ ಗ್ಲೆನ್ ಮ್ಯಾಕ್ಸ್ ವೆಲ್ ಅವರು ಪ್ರಿಯಮ್ ಗಾರ್ಗ್ ಅವರ ಡೈರೆಕ್ಟ್ ಹಿಟ್‍ಗೆ ಬಲಿಯಾಗಿ ಪೆವಿಲಿಯನ್ ಸೇರಿದರು. ಈ ಮೂಲಕ ಐಪಿಎಲ್‍ನಲ್ಲಿ ತಮ್ಮ ವಿಫಲ ಬ್ಯಾಟಿಂಗ್ ಅನ್ನು ಮುಂದುವರೆಸಿದರು. ನಂತರ ಬಂದ ಮಂದೀಪ್ ಸಿಂಗ್ ಅವರು ರಶೀದ್ ಖಾನ್ ಅವರ ಗೂಗ್ಲಿಯನ್ನು ಗುರುತಿಸಲಾಗದೆ ಆರು ರನ್ ಗಳಿಸಿ ಬೌಲ್ಡ್ ಆಗಿ ಹೊರನಡೆದರು. ನಂತರ ಮುಜೀಬ್ ಉರ್ ರಹಮಾನ್ ಕೂಡ ಔಟ್ ಆದರು.

ನಂತರ 37 ಬಾಲಿನಲ್ಲಿ ಏಳು ಸಿಕ್ಸರ್ ಮತ್ತು ಐದು ಬೌಂಡರಿಯೊಂದಗೆ 77 ರನ್ ಸಿಡಿಸಿ ಆಡುತ್ತಿದ್ದ ನಿಕೋಲಸ್ ಪೂರನ್ ಪೂರನ್ ಅವರು, ರಶೀದ್ ಖಾನ್ ಅವರ ಬೌಲಿಂಗ್ ಜಾದುಗೆ ಕ್ಯಾಚ್ ನೀಡಿ ಔಟ್ ಆದರು. ನಂತರದ ಬಾಲಿಗೆ ಕ್ರೀಸಿಗೆ ಬಂದ ಮೊಹಮ್ಮದ್ ಶಮಿ ಅವರು ಕೂಡ ಶೂನ್ಯಕ್ಕೆ ಔಟ್ ಆಗಿ ಹೊರನಡೆದರು. ನಂತರ ಕಣಕ್ಕಿಳಿದ ಪಂಜಾಬ್‍ನ ಎಲ್ಲ ಬ್ಯಾಟ್ಸ್ ಮ್ಯಾನ್‍ಗಳು ಪೆವಿಲಿಯನ್ ಪರೇಡ್ ನಡೆಸಿದರು.

Share This Article
Leave a Comment

Leave a Reply

Your email address will not be published. Required fields are marked *