-ಇಬ್ಬರು ಮಾಜಿ ಸಿಎಂಗಳು ಮೋಸ ಮಾಡಿದ್ದಾರೆ
ಹಾವೇರಿ: ನಮ್ಮ ಸಮಾಜಕ್ಕೆ ಮೋಸ ಮಾಡಿದವರು ಇಬ್ಬರು ಮಾಜಿ ಸಿಎಂ ಆಗಿದ್ದಾರೆ. ಅವರು ಖಾಯಂ ಮಾಜಿ ಆಗಿರುತ್ತಾರೆ. ಬೊಮ್ಮಾಯಿಯವರು ಮಾಜಿ ಮುಖ್ಯಮಂತ್ರಿಗಳಂತೆ ನಮ್ಮ ಸಮಾಜಕ್ಕೆ ಮೋಸ ಮಾಡುವುದಿಲ್ಲ. ನಮ್ಮ ಸಮಾಜಕ್ಕೆ 2ಎ ಮೀಸಲಾತಿ ಕೊಡುತ್ತಾರೆ ಎಂಬ ಭರವಸೆ ಇದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಹಾನಗಲ್ ಪಟ್ಟಣದಲ್ಲಿ ಮಾತನಾಡಿದ ಅವರು, ಮೀಸಲಾತಿ ಪರಿಷ್ಕರಣೆ ಬೇಡಿಕೆಯನ್ನು ವಿಧಾನಸೌಧದಲ್ಲಿ ಕೇಳಿದ್ದೆ. ಬಸವರಾಜ ಬೊಮ್ಮಾಯಿ ಅವರು ಗೃಹ ಮಂತ್ರಿ ಆಗಿದ್ದಾಗ ನಮ್ಮ ಬೇಡಿಕೆಗೆ ದೀರ್ಘ ಉತ್ತರ ನೀಡಿದ್ದರು. ಆರು ತಿಂಗಳೊಳಗೆ ಬೇಡಿಕೆ ಈಡೇರಿಸೋದಾಗಿ ಅಂದಿನ ಸಿಎಂ ಯಡಿಯೂರಪ್ಪ ಭರವಸೆ ನೀಡಿದ್ದರು. ಅದು ಯಾವುದು ಈವರೆಗೆ ಆಗಿಲ್ಲ. ಸೆಪ್ಟೆಂಬರ್ 15ಕ್ಕೆ ಆರು ತಿಂಗಳ ಗಡುವು ಮುಗಿಯುತ್ತಿದೆ. ಕೂಡಲಸಂಗಮ ಸ್ವಾಮೀಜಿಗಳ ನೇತೃತ್ವದಲ್ಲಿ ರಾಜ್ಯದಲ್ಲಿ ಸಮುದಾಯದ ಶಕ್ತಿ ಒಗ್ಗೂಡಿಸಲು ಪ್ರಯತ್ನ ನಡೆಯುತ್ತಿದೆ. ನಾವೆಲ್ಲರೂ ಸ್ವಾಮೀಜಿಗಳ ಬೆಂಬಲಕ್ಕೆ ನಿಂತುಕೊಂಡಿದ್ದೇವೆ ಎಂದರು. ಇದನ್ನೂ ಓದಿ: 2ಎ ಮೀಸಲಾತಿ ಹೋರಾಟ ಮುಂದುವರಿಯುತ್ತದೆ: ಯತ್ನಾಳ್
ನಾವು ರಾಜಕೀಯ ಮೀಸಲಾತಿ ಕೇಳುತ್ತಿಲ್ಲ, ಶೈಕ್ಷಣಿಕ ಮೀಸಲಾತಿ ಕೇಳುತ್ತಿದ್ದೇವೆ. ನಮ್ಮ ಸಮಾಜಕ್ಕೆ ಯಾರ್ಯಾರು ಮೋಸ ಮಾಡಿದ್ದಾರೆ ಅನ್ನೋದು ಜನರಿಗೆ ಗೊತ್ತಿದೆ. ಸಮಾಜ ಒಡೆಯಬೇಕು ಅಂತಾ ಕೆಲವರು ರಾಜ್ಯದಲ್ಲಿ ಪಿತೂರಿ ನಡೆಸುತ್ತಿದ್ದಾರೆ. ಎರಡು, ಮೂರು ಪೀಠ ಮಾಡ್ಕೊಂಡು ಕೆಲವರು ಪಂಚಮಸಾಲಿ ಸಮಾಜವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ನಮ್ಮಲ್ಲೆ ಕೆಲವರು ಮಂತ್ರಿ, ಮುಖ್ಯಮಂತ್ರಿ ಆಗಬೇಕು ಎಂದು ಸಮಾಜ ಒಡೆಯೋ ಕೆಲಸ ಮಾಡುತ್ತಿದ್ದಾರೆ. ನಾನು ಮಂತ್ರಿ, ಮುಖ್ಯಮಂತ್ರಿ ಆಗಬೇಕು ಎಂದು ಹೋರಾಟ ಮಾಡುತ್ತಿಲ್ಲ. ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಅಭಿಯಾನ ಬಹಳ ದೊಡ್ಡ ಪರಿಣಾಮ ಆಗುತ್ತದೆ. ಹಿಂದಿನ ಇಬ್ಬರು ಮುಖ್ಯಮಂತ್ರಿಗಳು ನಮ್ಮ ಸಮಾಜವನ್ನು 2 ಎಗೆ ಸೇರಿಸಬಹುದಿತ್ತು, ಆದರೆ ಸೇರಿಸಲಿಲ್ಲ. ಸಿ.ಎಂ.ಉದಾಸಿ ನೇತೃತ್ವದ ಸಮಿತಿ ಪಂಚಮಸಾಲಿ ಸಮಾಜವನ್ನು 2ಎಗೆ ಸೇರಿಸಬಹುದು ಎಂದು ವರದಿ ಕೊಟ್ಟಿದೆ. ಒಂದೆರಡು ನಮ್ಮ ಸಮಾಜದ ನಾಯಕರು ದೆಹಲಿಯಲ್ಲಿ ನಾನು ಲಿಂಗಾಯತ ಲೀಡರ್ ಎಂದು ಹೇಳಿಕೊಂಡು ಹೋಗಿದ್ದಾರೆ. ಯಾರೇ ತಂತ್ರ, ಕುತಂತ್ರ ಮಾಡಿ ಸಮಾಜ ಒಡೆಯೋ ಕೆಲಸಕ್ಕೆ ಮುಂದಾದ್ರೆ ಅದು ನಡಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಯಾರೇ ಮುಖ್ಯಮಂತ್ರಿ ಇದ್ದರೂ ಅವರ ನೇತೃತ್ವದಲ್ಲಿ ಚುನಾವಣೆ ನಡೆಯುತ್ತದೆ. ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ ಎಂಬ ಕೇಂದ್ರ ಗೃಹ ಸಚಿವ ಅಮೀತ್ ಶಾರ ಹೇಳಿಕೆ ಸ್ವಾಗತಾರ್ಹ. ನಾನು ಹಿಂದೆ ಹೇಳಿದ್ದ ಭವಿಷ್ಯ ತಡವಾಗಿ ನಿಜ ಆಗಿದೆ ಎಂದರು.
ನಮ್ಮ ಮಿಸಲಾತಿ ಹೋರಾಟ ಯಾವುದೇ ಸ್ವಾಮೀಜಿ, ನಾಯಕರನ್ನು ಕರೆಯುವ ಅಗತ್ಯವಿಲ್ಲ. ಕುಂಕುಮ ಹಚ್ಚಿ, ತಾಂಬೂಲ ಕೊಟ್ಟು ಕರೆಕೊಡುವ ಅಗತ್ಯವಿಲ್ಲ. ನಿರಾಣಿ 2ಎ ಕೊಡಿಸುತ್ತೇನೆ ಎಂದು ಭರವಸೆ ನೀಡಿದ್ದರು. ವೀರಶೈವ ಲಿಂಗಾಯತರು ಎಲ್ಲ ಒಂದೇ. ವೀರಶೈವ ಮತ್ತು ಲಿಂಗಾಯತ ಎರಡು ಒಂದೇ. ಎಂ.ಬಿ.ಪಾಟೀಲ್‍ರಿಗೆ ಪ್ರಾಯಶ್ಚಿತ ಆಗಿದೆ. ಗಣೇಶ ಚತುರ್ಥಿ ಆಚರಣೆ ಮಾಡಬೇಡಿ ಎನ್ನುತ್ತಾರೆ. ದೊಡ್ಡ, ದೊಡ್ಡ ಕಾರ್ಯಕ್ರಮ ಮಾಡುತ್ತಾರೆ. ಮೊಹರಂನಲ್ಲಿ ಕುಣಿದು ಕುಪ್ಪಳಿಸಿದ್ದಾರೆ, ಗಣೇಶ ಚತುರ್ಥಿ ಬಂದಾಗ ಕೊರೊನಾ ಅಂತಾರೆ. ಹಿಂದೂಗಳಿಗೆ ಇರುವುದು ಒಂದೆ ಭಾರತ. ಈಗಾಗಲೇ ಅವರು ಕಾಶ್ಮೀರಕ್ಕೆ ಬಂದಿದ್ದಾರೆ. ಜಾತ್ಯಾತೀತರು ಅಂತಾ ಹೊರಟರೆ ನಾಳೆ ನಾವು ಉಳಿಯುವುದಿಲ್ಲ, ನೀವು ಉಳಿಯೋದಿಲ್ಲ. ಡಾ.ಅಂಬೇಡ್ಕರರು ದೇಶ ಒಡೆಯೋ ಕೆಲಸ ಮಾಡಬೇಡಿ ಅಂತಾ ಹೇಳಿದ್ರು. ಅಂಬೇಡ್ಕರ್ ನಿಜವಾದ ಸತ್ಯಗಳನ್ನೆ ಹೇಳಿದ್ರು. ಎಲ್ಲ ಕಳ್ಳರು ಸೇರಿಕೊಂಡು ಅಂಬೇಡ್ಕರ್‍ನ್ನೆ ದೂರವಿಟ್ಟರು. ಲಿಂಗಾಯತ, ವೀರಶೈವ ಎಂದು ಹೇಳಿಕೊಂಡು ಹೊರಟರೆ ನಮ್ಮ ದೇಶ ಉಳಿಯುವುದಿಲ್ಲ ಎಂದು ಯತ್ನಾಳ್ ಕಿಡಿಕಾರಿದರು. ಇದನ್ನೂ ಓದಿ: ಪಂಚಮಸಾಲಿ 2ಎ ಮೀಸಲಾತಿ- ದುಂಡು ಮೇಜಿನ ಸಭೆಯಲ್ಲಿ ಪಂಚ ನಿರ್ಣಯ ಪಾಸ್