ಬೆಂಗಳೂರು: ನೆರೆ ಹಾನಿ ಕುರಿತು ಇನ್ನೆರಡು ದಿನಗಳಲ್ಲಿ ಅಂಕಿ, ಅಂಶಗಳ ಸಮೇತ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ.
ನೆರೆ ಹಾವಳಿ ಸಂಬಂಧ ಸಚಿವ ಸಂಪುಟ ಉಪ ಸಮಿತಿ ಸಭೆಯ ಬಳಿಕ ಮಾತನಾಡಿದ ಅವರು, ಪ್ರವಾಹದಿಂದ ರಾಜ್ಯದಲ್ಲಿ ಸುಮಾರು 32 ಸಾವಿರ ಕೋಟಿ ರೂ. ನಷ್ಟವಾಗಿದೆ. 118 ವರ್ಷಗಳ ಬಳಿಕ ಈ ಬಾರಿ ವಾಡಿಕೆಗಿಂತ ಶೇ.279ರಷ್ಟು ಮಳೆ ಹೆಚ್ಚಾಗಿದೆ. ಇದರಿಂದ ಆಸ್ತಿ-ಪಾಸ್ತಿ ನಷ್ಟವಾಗಿದೆ. ದೊಡ್ಡ ಅನಾಹುತ ಸಂಭವಿಸಿದೆ. ಪ್ರವಾಹದಿಂದ 87 ಜನ ಮೃತ ಪಟ್ಟಿದ್ದಾರೆ. 2067 ಪ್ರಾಣಿಗಳು ಸಾವನ್ನಪ್ಪಿವೆ. 103 ತಾಲೂಕು ಪ್ರವಾಹಕ್ಕೆ ತುತ್ತಾಗಿದೆ. 7.82 ಲಕ್ಷ ಹೆಕ್ಟೇರ್ ಬೆಳೆ ನಷ್ಟ ಆಗಿದೆ ಅಂತ ಮಾಹಿತಿ ನೀಡಿದರು.
Advertisement
Advertisement
ಪ್ರವಾಹದಿಂದ 2.37 ಲಕ್ಷ ಮನೆಗಳು ನಾಶ ಆಗಿದ್ದು, 6 ಲಕ್ಷ ಜನರನ್ನು ಸ್ಥಳಾಂತರ ಮಾಡಲಾಗಿದೆ. 4 ಲಕ್ಷ ಜನರಿಗೆ ನಿರಾಶ್ರಿತರ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿದೆ. ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಎನ್‍ಡಿಆರ್‍ಎಫ್, ಇಂಡಿಯನ್ ನೇವಿ, ಏರ್ ಫೋರ್ಸ್ ತಂಡಗಳು ಕೆಲಸ ಮಾಡಿವೆ ಎಂದು ತಿಳಿಸಿದರು.
Advertisement
ಈ ವೇಳೆಗೆ 76.69 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಬೇಕಿತ್ತು. ಆದರೆ, 59.26 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಆಗಿದೆ. ನಮ್ಮ ಜಲಾಶಯಗಳಲ್ಲಿ 825 ಟಿಎಂಸಿ ನೀರು ಸಂಗ್ರಹ ಮಾಡಬಹುದು. ಮಳೆ ಹೆಚ್ಚಾಗಿ 830 ಟಿಎಂಸಿ ನೀರು ಹೊರಗೆ ಬಿಡಲಾಗಿದೆ. ಈಗಾಗಲೇ ರಾಜ್ಯ ಸರ್ಕಾರ ಪ್ರವಾಹ ಪರಿಸ್ಥಿತಿ ನಿಭಾಯಿಸಲು 309 ಕೋಟಿ ಹಣ ಬಿಡುಗಡೆ ಮಾಡಿದೆ. ಸಂತ್ರಸ್ಥರಿಗೆ ಹಣ ತಲುಪಿಸುವ ಕೆಲಸ ಸರ್ಕಾರ ಮಾಡಿದೆ ಎಂದು ಮಾಹಿತಿ ನೀಡಿದರು.
Advertisement
ಸಂತ್ರಸ್ತರ ಹಣ ಮಧ್ಯವರ್ತಿಗಳ ಪಾಲಾಗದಂತೆ ತಡೆಯಲು ವಿಶೇಷ ತಂಡ ರಚನೆ ಮಾಡಲಾಗುತ್ತಿದೆ. ಸಂತ್ರಸ್ತರ ಹಣ ದುರುಪಯೋಗವಾದಲ್ಲಿ ಖಂಡಿತವಾಗಿಯೂ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ಈಗಾಗಲೇ ಕೇಂದ್ರ ತಂಡ ನೆರೆ ಅನಾಹುತ ವೀಕ್ಷಣೆ ಮಾಡಿದೆ. ತಂಡ ವರದಿ ಸಲ್ಲಿಸಿದ ಬಳಿಕ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುತ್ತದೆ ಎಂದು ತಿಳಿಸಿದರು. ರಾಜ್ಯ ಸರ್ಕಾರ ಮಧ್ಯಂತರ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿಲ್ಲ. ಈಗ ಎಲ್ಲ ಮಾಹಿತಿ ಸಂಗ್ರಹ ಮಾಡಲಾಗಿದ್ದು, ಎರಡು ದಿನಗಳಲ್ಲಿ ಅಂಕಿ-ಅಂಶದ ಸಮೇತ ವರದಿ ನೀಡಲಾಗುತ್ತದೆ ಎಂದು ತಿಳಿಸಿದರು.