ಮುಂಬೈ: ವಿವಾಹಿತ ಮಹಿಳೆಯ ಮೇಲೆ ಆಕೆಯ ಗೆಳೆಯ ಹಾಗೂ ಮೂವರು ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಈ ಘಟನೆ ಔರಂಗಾಬಾದ್ ಹೊರವಲಯದಲ್ಲಿ ಕಳೆದ ಗುರುವಾರ ನಡೆದಿರುವುದಾಗಿ ಅಲ್ಲಿನ ಪೊಲೀಸರು ಶನಿವಾರ ತಿಳಿಸಿದ್ದಾರೆ. ಸದ್ಯ ಆರೋಪಿ ಗೆಳೆಯ ಅನಿಲ್ ವಸಂತ್ ತೊಂಬ್ರೆ(22)ಯನ್ನು ಪೊಲಿಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಏನಿದು ಘಟನೆ?: ನವೆಂಬರ್ 2ರಂದು ಸಂಜೆ ತೊಂಬ್ರೆ ವಿವಾಹಿತ ಮಹಿಳೆಯ ಸಂತೋಷಿ ಮಠ ನಗರದಲ್ಲಿರೋ ಮನೆಗೆ ತೆರಳಿ ತನ್ನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸುವಂತೆ ಹೇಳಿದ್ದಾನೆ. ತೋಂಬ್ರೆ ಗೆಳೆಯರು ಆಹಾರ ಮತ್ತು ಮದ್ಯದ ಬಾಟಲಿಗಳನ್ನು ತಂದು ಪಾರ್ಟಿಯಲ್ಲಿ ಸೇರಿಕೊಂಡಿದ್ದಾರೆ.
ಬಳಿಕ ಗೆಳೆಯ ತೋಂಬ್ರೆ ಮತ್ತು ಆತನ ಮೂವರು ಗೆಳೆಯರು ಸೇರಿ ಮಹಿಳೆಯನ್ನು ಎಂಐಡಿಸಿ ಪ್ರದೇಶದ ಟಕ್ಲಿ ಗ್ರಾಮಕ್ಕೆ ಕರೆದುಕೊಂಡು ಹೋಗಿ ಮತ್ತು ಬರುವ ಪಾನೀಯವನ್ನು ಒತ್ತಾಯ ಪೂರ್ವಕವಾಗಿ ಕುಡಿಸಿದ್ದಾರೆ. ತಂಪುಪಾನೀಯ ಕುಡಿದ ಮಹಳೆ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಈ ವೇಳೆ ನಾಲ್ವರು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಘಟನೆಯ ಬಳಿಕ ಮಹಿಳೆಯನ್ನು ಪಕ್ಕದಲ್ಲಿರೋ ಪೆಟ್ರೋಲ್ ಪಂಪ್ ಬಳಿ ಎಸೆದು ಕಾಲ್ಕಿತ್ತಿದ್ದಾರೆ.
ಮಹಿಳೆ ಪ್ರಜ್ಞಾಹೀನಳಾಗಿ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಕೂಡಲೇ ಎಚ್ಚೆತ್ತ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಮಹಿಳೆ ನಡೆದ ಘಟನೆಯನ್ನು ವಿವರಿಸಿರುವುದಾಗಿ ಸಹಾಯಕ ಪೊಲೀಸ್ ಅಧಿಕಾರಿ ಅತ್ಯಜಿತ್ ತೈಟ್ ವಾಲೆ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮಹಿಳೆಯ ಗೆಳೆಯನನ್ನು ಬಂಧಿಸಿಲಾಗಿದ್ದು, ತಲೆಮರೆಸಿಕೊಂಡಿರೋ ಮೂವರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.