– ಚೇತಕ್ ಬಗ್ಗೆ ವ್ಯಕ್ತಿ ಹೇಳಿದ್ದೇನು..?
ಪಾಟ್ನಾ: ಸಾಮಾನ್ಯವಾಗಿ ಮನುಷ್ಯರು ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಸಹಜ. ಆದರೆ ಬಿಹಾರದ ಸಹರ್ಸಾ ಜಿಲ್ಲೆಯ ವ್ಯಕ್ತಿಯೋರ್ವ ಕುದುರೆಯ ಹುಟ್ಟುಹಬ್ಬ ಆಚರಣೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ.
ಕುದುರೆ ಹುಟ್ಟುಹಬ್ಬದ ಪ್ರಯುಕ್ತ 50 ಪೌಂಡ್(22.5 ಕೆಜಿ) ಕೇಕ್ ಕತ್ತರಿಸಿದ್ದು, ಜೊತೆಗೆ ಸಾಕಷ್ಟು ಮಂದಿಯನ್ನು ಆಚರಣೆಗೆ ಆಹ್ವಾನ ನೀಡಿ ರುಚಿಕರವಾದ ಸಸ್ಯಹಾರಿ ಹಾಗೂ ಮಾಂಸಹಾರಿ ಅಡುಗೆ ಮಾಡಿ ಉಣಬಡಿಸಿದ್ದಾರೆ. ಸದ್ಯ ಕುದುರೆ ಬರ್ತ್ ಡೇ ಸೆಲೆಬ್ರೆಷನ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.
ರಾಜನೀಶ್ ಕುಮಾರ್ ಅಲಿಯಾಸ್ ಗೋಲು ಯಾದವ್ ಎಂಬ ವ್ಯಕ್ತಿ ಚೇತಕ್ ಎಂಬ ಕುದುರೆಯನ್ನು ಸಾಕಿದ್ದರು. ವಾರದ ಆರಂಭದಲ್ಲಿ ಬೆಳಗ್ಗೆಯೇ ಚೇತಕ್‍ಗೆ ಸ್ನಾನ ಮಾಡಿಸಿ, ಅಲಂಕಾರ ಮಾಡಿ 2ನೇ ವರ್ಷದ ಜನ್ಮದಿನವನ್ನು ಆಚರಿಸಿದ್ದಾರೆ.
ಈ ಕುರಿತಂತೆ ಮಾತನಾಡಿದ ಅವರು, ಚೇತಕ್ ಕೂಡ ನಮ್ಮ ಮನೆಯ ಸದಸ್ಯರಲ್ಲಿ ಒಂದಾಗಿದ್ದು, ಈ ಮುನ್ನ ಮೊದಲನೇ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದೆ. ಈವರೆಗೂ ನಾನು ನನ್ನ ಹುಟ್ಟುಹಬ್ಬವನ್ನೇ ಆಚರಿಸಿಕೊಂಡಿಲ್ಲ. ಆದರೆ ಪ್ರತಿ ವರ್ಷ ಚೇತಕ್ ಜನ್ಮದಿನವನ್ನು ಆಚರಿಸುತ್ತೇನೆ ಎಂದರು.
ಚೇತಕ್ ಮನೆಗೆ ಬಂದಾಗಿನಿಂದಲೂ ಹುಲ್ಲು ಮತ್ತು ಹಾಲನ್ನು ನೀಡಿ ಬೆಳೆಸಿದ್ದೇನೆ. ನಾನು ನನ್ನ ಸ್ವಂತ ಮಗುವಿಗಿಂತ ಹೆಚ್ಚಾಗಿ ಚೇತಕ್‍ನನ್ನು ಪ್ರೀತಿಸುತ್ತೇನೆ. ಮನುಷ್ಯರಿಗಿಂತ ಪ್ರಾಣಿಗಳಿಗೆ ಹೆಚ್ಚು ನಿಯತ್ತಿರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.