ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಸಸ್ಯಕಾಶಿ ಲಾಲ್‍ಬಾಗ್‍ನಲ್ಲಿ (Lalbagh) ಈ ಬಾರಿಯ ಗಣರಾಜ್ಯೋತ್ಸವ ಅಂಗವಾಗಿ ಜನವರಿ 18ರಿಂದ 28ರವರೆಗೆ 215ನೇ ಫಲಪುಷ್ಪ ಪ್ರದರ್ಶನ (Flower Show) ನಡೆಯಲಿದೆ. ಈ ಬಾರಿ ಹಲವು ವಿಶೇಷಗಳೊಂದಿಗೆ ತೋಟಗಾರಿಕಾ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
ಈ ಬಾರಿ ಬರೋಬ್ಬರಿ 11 ದಿನಗಳ ಕಾಲ ವಚನ ಸಾಹಿತ್ಯದ ಪರಿಕಲ್ಪನೆಯಡಿ ಲಾಲ್‍ಬಾಗ್‍ನಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ. 12ನೇ ಶತಮಾನದ ಕನ್ನಡದ ತತ್ವಜ್ಞಾನಿ, ಸಮಾಜ ಸುಧಾರಕರಾದ ಬಸವಣ್ಣನವರು ಲಿಂಗ ತಾರತಮ್ಯದೊಂದಿಗೆ ಮೂಢನಂಬಿಕೆಗಳನ್ನು ನಿರಾಕರಿಸಿದ್ರು. ಮಹಿಳೆಯರಿಗೂ ಸಮಾನತೆ ಪ್ರತಿಪಾಸಿದ್ರು. ಅವರ ಚಿಂತನೆ, ಕಾಯಕ ವೈಖರಿಗಳು ಇಂದಿನ ಸಮಾಜಕ್ಕೆ ಅತ್ಯಗತ್ಯ. ಹೀಗಾಗಿ ಈ ಬಾರಿ ಬಸವಣ್ಣ ಮತ್ತು `ವಚನ ಸಾಹಿತ್ಯ’ ಕುರಿತಂತೆ ಫಲಪುಷ್ಪ ಪ್ರದರ್ಶನ ಮಾದರಿಗಳನ್ನು ನಿರ್ಮಿಸಲಾಗುತ್ತಿದೆ.
Advertisement
Advertisement
ಕೇವಲ ಬಸವಣ್ಣ ಮಾತ್ರವಲ್ಲ ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ, ಗಂಗಾಂಬಿಕೆ, ನೀಲಾಂಬಿಕೆ ಮತ್ತಿತರ ವಚನಕಾರರ ಪ್ರತಿಮೆಗಳು, ಅವರ ವಚನಗಳು ಮತ್ತು ವಚನಕಾರರ ಅಂಕಿತನಾಮಗಳು ಹೀಗೆ ಸಮಗ್ರ ವಚನ ಸಾಹಿತ್ಯವೇ ಫಲಪುಷ್ಪ ಪ್ರದರ್ಶನದಲ್ಲಿರಲಿದೆಯಂತೆ. ಫಲಪುಷ್ಪ ಪ್ರದರ್ಶನಕ್ಕೆ 80 ರೂ. ಟಿಕೆಟ್ ದರ ನಿಗದಿ ಮಾಡಲಾಗಿದೆ. ಹಾಲಿಡೇಸ್‍ನಲ್ಲಿ 100 ರೂ. ಟಿಕೆಟ್ ದರ ಇರಲಿದೆ. ಶಾಲಾ ಸಮವಸ್ತ್ರ ಧರಿಸಿ ಬರುವ ಮಕ್ಕಳಿಗೆ ಉಚಿತ ಪ್ರವೇಶವಿರುತ್ತೆ. ಸಮವಸ್ತ್ರ ಇಲ್ಲದ ವಿದ್ಯಾರ್ಥಿಗಳಿಗೆ, ಮಕ್ಕಳಿಗೆ 30 ರೂ. ದರ ನಿಗದಿ ಮಾಡಲಾಗಿದೆ.
Advertisement
Advertisement
ಪ್ರಮುಖ ವಿಶೇಷವೇನು..?: 10 ಅಡಿಯ ಬಸವಣ್ಣನ ಪ್ರತಿಮೆ ಮತ್ತು 30 ಅಡಿ ಎತ್ತರದ ಅನುಭವ ಮಂಟಪ ಈ ಬಾರಿಯ ಪ್ರದರ್ಶನದ ಪ್ರಮುಖ ಆಕರ್ಷಣೆ. ಅನುಭವ ಮಂಟಪದ ಮೂಲ ಪ್ರತಿರೂಪದ ರಚನೆಯನ್ನು ಐರನ್ ಫ್ರೇಮ್‍ವರ್ಕ್‍ನಿಂದ ರೂಪಿಸಿ, ಅದಕ್ಕೆ 750 ಕೆಜಿಗೂ ಹೆಚ್ಚು ವೈರ್ ಮೆಷ್ ಅಳವಡಿಸಿ, 10 ಸಾವಿರಕ್ಕೂ ಹೆಚ್ಚು ಫ್ಲೋರಲ್ ಫೋಮ್‍ಗಳನ್ನು ಬಳಸಿ ಅಂತಿಮ ರೂಪ ಕೊಡಲಾಗಿದೆ. ಅನುಭವ ಮಂಟಪ 34 ಅಡಿ ಅಗಲ ಮತ್ತು 30 ಅಡಿ ಎತ್ತರವಿರುತ್ತೆ. ಕಡುಗೆಂಪು, ಹಳದಿ ಮತ್ತು ಕಿತ್ತಳೆ ವರ್ಣದ 1.5 ಲಕ್ಷ ಗುಲಾಬಿ ಹೂಗಳು, ಹಳದಿ, ಪಿಂಕ್ ಮತ್ತು ಶ್ವೇತ ವರ್ಣದ 1.55 ಲಕ್ಷ ಆಕರ್ಷಕ ಸೇವಂತಿಗೆ ಹೂಗಳು ಹಾಗೂ 1.85 ಲಕ್ಷ ಗುಂಡುರಂಗು (ಗಾಂಫ್ರಿನಾ) ಹೂವುಗಳನ್ನು ಬಳಸಲಾಗುತ್ತದೆ. ಈ ಎಲ್ಲಾ ಹೂಗಳು ಸೇರಿ 4.8 ಲಕ್ಷ ಹೂಗಳನ್ನು ಒಂದು ಬಾರಿಗೆ ಬಳಸಲಾಗುತ್ತಿದೆ.
ಈ ಬಾರಿ ವಚನಕಾರರನ್ನ ಫಲಪುಷ್ಪ ಪ್ರದರ್ಶನದಲ್ಲಿ ಸಂಭ್ರಮಿಸಲು ಹಾಗೂ ಜನತೆಗೆ, ವಿದ್ಯಾರ್ಥಿಗಳಿಗೆ ಫಲಪುಷ್ಪದ ಮೂಲಕ ಅವರನ್ನ ತಲುಪಿಸುವ ಕೆಲಸಕ್ಕೆ ತೋಟಗಾರಿಕೆ ಇಲಾಖೆ ಮುಂದಾಗಿದೆ.