ಮುಂಬೈ: ಐಎನ್‍ಎಸ್ ತಲ್ವಾರ್ ನೌಕೆಯಲ್ಲಿ ಅನುಮಾನಾಸ್ಪದವಾಗಿ 21 ವರ್ಷದ ನಾವಿಕರೊಬ್ಬರು ಮೃತಪಟ್ಟಿದ್ದಾರೆ.
ರಾಹುಲ್ ಚೌಧರಿ(21) ಮೃತ ನಾವಿಕ. ಉತ್ತರ ಪ್ರದೇಶದ ಹತ್ರಾಸ್‍ನಲ್ಲಿ ತನ್ನ ಪೋಷಕರೊಂದಿಗೆ ರಜಾದಿನ ಕಳೆದು ಬಂದಿದ್ದ ರಾಹುಲ್ ಚೌಧರಿ ನಿಗೂಢವಾಗಿ ಮೃತಪಟ್ಟಿದ್ದಾರೆ.
Advertisement
ಚೌಧರಿ ಹೇಗೆ ಮೃತಪಟ್ಟಿದ್ದಾರೆ ಎನ್ನುವುದು ಯಾರಿಗೂ ತಿಳಿದಿಲ್ಲ. ಮೆಟ್ಟಿಲನ್ನು ಹತ್ತುವ ಸಂದರ್ಭದಲ್ಲಿ ಚೌಧರಿ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರಬಹುದು ಎಂದು ರಕ್ಷಣಾ ತಂಡದ ಮೂಲಗಳು ತಿಳಿಸಿವೆ.
Advertisement
Advertisement
ರಕ್ತದ ಮಡುವಿನಲ್ಲಿ ಚೌಧರಿ ಬಿದ್ದಿದ್ದನ್ನು ನೋಡಿ ಸಹೋದ್ಯೋಗಿ ತಕ್ಷಣ ಇತರ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಚೌಧರಿಯನ್ನು ಐಎನ್‍ಎಸ್ ಅಶ್ವಿನಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಷ್ಟರಲ್ಲೇ ಚೌಧರಿ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
Advertisement
ಚೌಧರಿ ತಂದೆ ರಮೇಶ್ ಚಂದ್ರ ಹಾಗೂ ಚಿಕ್ಕಪ್ಪ ರಾಕೇಶ್ ಕುಮಾರ್ ಮುಂಬೈಗೆ ಆಗಮಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬರಬೇಕಿದೆ. ಮೃತ ಚೌಧರಿ ತಲೆಯ ಮೇಲೆ ಗಾಯದ ಗುರುತು ಬಿದ್ದಿದ್ದು, ಮೂಗು ಮತ್ತು ಕಿವಿಗಳಿಂದ ರಕ್ತ ಬರುತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೃತ ಚೌಧರಿ ಸಾವಿನ ತನಿಖೆಗೆ ಒಂದು ತನಿಖಾ ತಂಡವನ್ನು ನೇಮಿಸಲಾಗಿದೆ. ಇದು ಒಂದು ಆಕಸ್ಮಿಕ ಘಟನೆಯೇ ಅಥವಾ ಯಾರಾದರೂ ನೌಕೆಯಲ್ಲಿ ಅವರನ್ನು ಹತ್ಯೆ ಮಾಡಿದ್ದಾರಾ ಎನ್ನುವುದು ಖಚಿತವಾಗಿಲ್ಲ. ಅಧಿಕಾರಿಗಳು ಈ ಬಗ್ಗೆ ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ. ಯಾರಾದರೂ ತಪ್ಪಿತಸ್ಥರೆಂದು ಕಂಡುಬಂದರೆ ಅವರನ್ನು ಕಾನೂನಿನ ಮುಂದೆ ಹಾಜರು ಪಡಿಸಲಾಗುತ್ತದೆ ಎಂದು ಭಾರತೀಯ ನೌಕಾಪಡೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.