ಮಡಿಕೇರಿ: 10ಕ್ಕಿಂತ ಕಡಿಮೆ ದಾಖಲಾತಿ ಹೊಂದಿರುವ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ದಾಖಲಾತಿ ಹೊಂದಿರುವ ಸಮೀಪದ ಶಾಲೆಗಳಿಗೆ ವಿಲೀನ ಮಾಡುವ ಪ್ರಕ್ರಿಯೆಗೆ ರಾಜ್ಯ ಸರ್ಕಾರ 8 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಚಾಲನೆ ಕೊಟ್ಟಿದೆ. ಈ ನಡುವೆ ಕೊಡಗು (Kodagu) ಜಿಲ್ಲೆಯಲ್ಲಿ ಶೂನ್ಯ ದಾಖಲಾತಿ ಹೊಂದಿದ್ದ 21 ಸರ್ಕಾರಿ ಶಾಲೆಗಳಿಗೆ (Government Schools) ಬೀಗ ಬಿದ್ದಿದೆ.
ಹೌದು. ಕೊಡಗು ಜಿಲ್ಲೆಯಲ್ಲಿ 2019 ರಿಂದ 2024ರ ವರೆಗಿನ ಅವಧಿಯಲ್ಲಿ ಒಟ್ಟು 21 ಸರ್ಕಾರಿ ಶಾಲೆಗಳಿಗೆ ಬೀಗ ಬಿದ್ದಿದೆ. ಮೂಲ ಸೌಕರ್ಯಗಳ ಕೊರತೆಯಿಂದಾಗಿ ಮಕ್ಕಳು ಶಾಲೆಗಳತ್ತ ಮುಖ ಮಾಡುತ್ತಿಲ್ಲ. ನಿರಂತರ ಮಕ್ಕಳ ಕೊರತೆಯಿಂದಾಗಿ ಮಡಿಕೇರಿ ತಾಲೂಕಿನಲ್ಲಿ 6, ಸೋಮವಾರಪೇಟೆ ತಾಲೂಕಿನಲ್ಲಿ 12 ಹಾಗೂ ವೀರಾಜಪೇಟೆ ತಾಲೂಕಿನಲ್ಲಿ 3 ಸರ್ಕಾರಿ ಶಾಲೆಗಳನ್ನ ಬಂದ್ ಮಾಡಲಾಗಿದೆ. ಇದನ್ನೂ ಓದಿ: ಹಾವೇರಿ ಹಿಂದೂ ಯುವತಿ ಹತ್ಯೆ ಕೇಸ್ – ಬಾಡಿಗೆ ಕಾರು ತಂದು ಸ್ವಾತಿ ಕರೆದೊಯ್ದಿದ್ದ ನಯಾಜ್!
2019 ರಲ್ಲಿ 2, 2022 ರಲ್ಲಿ 9, 2023 ರಲ್ಲಿ 4 ಹಾಗೂ 2024 ರಲ್ಲಿ 6 ಶೂನ್ಯ ದಾಖಲಾತಿ ಹೊಂದಿರುವ ಸರ್ಕಾರಿ ಶಾಲೆಗಳಿಗೆ ಬೀಗ ಬಿದ್ದಿದೆ. ಈಗಾಗಲೇ ಮುಚ್ಚಲ್ಪಟ್ಟಿರುವ ಶಾಲೆಗಳಲ್ಲಿ ವಿದ್ಯಾರ್ಥಿಗಳು ದಾಖಲಾದರೆ ಶಾಲೆಗಳನ್ನು ತೆರೆಯಲಾಗುವುದೆಂದು ಶಿಕ್ಷಣ ಇಲಾಖೆ ಹೇಳುತ್ತಿದೆ. ಇದನ್ನೂ ಓದಿ: ಬೆಂಗಳೂರು ಕಸ ಅನ್ನೋದು ಮಾಫಿಯಾ, ಶಾಸಕರೇ ಬ್ಲ್ಯಾಕ್‌ಮೇಲ್ ಮಾಡ್ತಿದ್ದಾರೆ: ಡಿ.ಕೆ ಶಿವಕುಮಾರ್
ಕೊಡಗು ಜಿಲ್ಲೆಯಲ್ಲಿ ಹತ್ತಕ್ಕಿಂತ ಕಡಿಮೆ ದಾಖಲಾತಿ ಹೊಂದಿರುವ 48 ಸರ್ಕಾರಿ ಕಿರಿಯ ಪ್ರಾಥಮಿಕ ಹಾಗೂ 16 ಹಿರಿಯ ಪ್ರಾಥಮಿಕ ಶಾಲೆಗಳಿವೆ. ಒಂದು ಸರ್ಕಾರಿ ಪ್ರೌಢಶಾಲೆ ಇದೆ. ರಾಜ್ಯದ ಹಿಂದಿನ ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವ ಬಿಜೆಪಿ ಸರ್ಕಾರದ ಅವಧಿಯಲ್ಲಿ 10ಕ್ಕಿಂತ ಕಡಿಮೆ ಮಕ್ಕಳಿರುವ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ, ಆದ್ದರಿಂದ ಪಕ್ಕದಲ್ಲಿರುವ ದಾಖಲಾತಿ ಹೊಂದಿರುವ ಶಾಲೆಗಳಿಗೆ ವಿಲೀನ ಮಾಡಬೇಕೆಂದು ಶಾಲಾ ಸುಧಾರಣಾ ಆಯೋಗ ಹಿಂದಿನ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಆಗ ವಿಪಕ್ಷದಲ್ಲಿದ್ದ ಕಾಂಗ್ರೆಸ್ ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತಪಡಿಸಿತ್ತು. ಇದೀಗ ರಾಜ್ಯ ಕಾಂಗ್ರೆಸ್ ಸರ್ಕಾರ ಸದ್ದಿಲ್ಲದೇ, ಹತ್ತಕ್ಕಿಂತ ಕಡಿಮೆ ದಾಖಲಾತಿ ಹೊಂದಿರುವ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ವಿಲೀನ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಕಡಿಮೆ ದಾಖಲಾತಿ ಹೊಂದಿರುವ ಶಾಲೆಗಳನ್ನು ವಿಲೀನಗೊಳಿಸುವ ಪ್ರಕ್ರಿಯೆ ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಂಡರೆ ಕೊಡಗು ಜಿಲ್ಲೆಯ 64 ಸರ್ಕಾರಿ ಶಾಲೆಗಳಿಗೆ ಬೀಗ ಬೀಳುವುದು ಖಚಿತ ಎಂದು ಹೇಳಲಾಗುತ್ತಿದೆ.
ನೆಪ ಮಾತ್ರಕ್ಕೆ ಸರ್ಕಾರಿ ಶಾಲೆ ಉಳಿಸಿ ಎಂದು ಬೊಬ್ಬೆ ಹೊಡೆಯುವ ರಾಜ್ಯ ಸರ್ಕಾರ ಈಗ ಸರ್ಕಾರಿ ಶಾಲೆಗಳನ್ನು ಬಂದ್ ಮಾಡುತ್ತಿದೆ. ಈಗಲಾದರೂ ಎಚ್ಚೆತ್ತುಕೊಂಡು ಸೂಕ್ತ ಕ್ರಮ ತೆಗೆದುಕೊಳ್ಳದೆ ಹೋದರೆ ಮುಂಬರುವ ದಿನಗಳಲ್ಲಿ ಸರ್ಕಾರಿ ಶಾಲೆಗಳೇ ಇಲ್ಲದಂತಾಗುವುದು ಪಕ್ಕಾ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಿ ಸರ್ಕಾರ ಮಾತನ್ನು ಉಳಿಸಿಕೊಂಡಿದೆ: ಹೆಬ್ಬಾಳ್ಕರ್