2022ರಿಂದ 3 ದಿನ ‘ಬೆಂಗಳೂರು ಹಬ್ಬ’ವಾಗಿ ಕೆಂಪೇಗೌಡ ಜಯಂತಿ ಆಚರಣೆ: ಡಿಸಿಎಂ

Public TV
3 Min Read
Ashwath narayan 7

ಬೆಂಗಳೂರು: ಮುಂದಿನ ವರ್ಷದಿಂದ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಮೂರು ದಿನಗಳ ಕಾಲ ‘ಬೆಂಗಳೂರು ಹಬ್ಬ’ವನ್ನಾಗಿ ಆಚರಿಸಲಾಗುವುದು ಎಂದು ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ನಾಡಪ್ರಭು ಕೆಂಪೇಗೌಡರ 512ನೇ ಜಯಂತಿ ನಿಮಿತ್ತ ವಿಧಾನಸೌಧ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆದ ಜಯಂತಿ ಆಚರಣೆಯಲ್ಲಿ ಅಂಚೆ ಲಕೋಟೆ ಲೋಕಾರ್ಪಣೆ ಹಾಗೂ ಅಧ್ಯಯನ ಕೇಂದ್ರ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರತಿ ವರ್ಷ ಜೂನ್ 27ರಂದು ನಾಡಪ್ರಭುಗಳ ಜಯಂತಿಯನ್ನು ಆಚರಿಸಲಾಗುತ್ತದೆ. ಜೂನ್ 26, 27 ಮತ್ತು 28ರಂದು, ಅಂದರೆ 3 ದಿನಗಳ ಕಾಲ ಅವರ ಜಯಂತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ‘ಬೆಂಗಳೂರು ಹಬ್ಬ’ದ ಹೆಸರಿನಲ್ಲಿ ಆಚರಿಸಲಾಗುವುದು. ಆ ಮೂರೂ ದಿನಗಳ ಕಾಲ ಬೆಂಗಳೂರು ನಗರದಲ್ಲಿನ ಎಲ್ಲ ಪಾರಂಪರಿಕ ತಾಣ, ಕಟ್ಟಡಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿ ವಿಶ್ವವಿಖ್ಯಾತ ಹಬ್ಬದ ಮಾದರಿಯಲ್ಲಿ ಆಚರಿಸಲಾಗುವುದು ಎಂದು ಡಿಸಿಎಂ ಹೇಳಿದರು.

Ashwath narayan 3 1 medium

ಮುಂದಿನ ವರ್ಷ ಲೋಕಾರ್ಪಣೆ
ಬೆಂಗಳೂರು ಆಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಂದಿನ 23 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಸೆಂಟ್ರಲ್ ಪಾರ್ಕ್ ನಡುವೆ ಸ್ಥಾಪನೆಯಾಗುತ್ತಿರುವ 108 ಎಡಿ ಎತ್ತರದ ಲೋಹ ಪ್ರತಿಮೆ ಲೋಕಾರ್ಪಣೆ ಮುಂದಿನ ವರ್ಷದ ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಡಿಸಿಎಂ ಡಾ.ಅಶ್ವತ್ಥನಾರಾಯಣ ಪ್ರಕಟಿಸಿದರು.

ಈ ವರ್ಷದ ಜಯಂತಿ ದಿನವೇ ಪ್ರತಿಮೆ ಲೋಕಾರ್ಪಣೆ ಆಗಬೇಕಿತ್ತು. ಕೋವಿಡ್ ಕಾರಣದಿಂದ ತಡವಾಯಿತು. ಈಗಾಗಲೇ ನೋಯಿಡಾದಲ್ಲಿ ಪ್ರತಿಮೆ ಭರದಿಂದ ತಯಾರಾಗುತ್ತಿದೆ. ಏರ್‍ಪೋರ್ಟ್ ನಲ್ಲೂ ಕಾಮಗಾರಿ ಪುನಾ ಆರಂಭವಾಗಿದೆ. ಈ ಯೋಜನೆ ಕಾರ್ಯಗತವಾದ ಮೇಲೆ ಅದು ಬೆಂಗಳೂರಿನ ದೊಡ್ಡ ಹೆಗ್ಗುರುತಾಗಿ ಕಾಣಲಿದೆ ಎಂದು ಅವರು ವಿವರಿಸಿದರು.

Ashwath narayan 1 2 medium

ಕೆಂಪೇಗೌಡ ಪ್ರವಾಸೋದ್ಯಮ ಸರ್ಕ್ಯೂಟ್
ಬೃಹತ್ತಾಗಿ ಬೆಂಗಳೂರು ನಗರದ ಸುತ್ತಮುತ್ತ ಈಗಲೂ 15,000 ಹೆಕ್ಟೇರ್ ದಟ್ಟ ಅರಣ್ಯವಿದೆ. ಅದರ ಜತೆಗೆ ರಾಜಧಾನಿಯ ಸುತ್ತಮುತ್ತಲಿನಲ್ಲಿ ಕೆಂಪೇಗೌಡರಿಗೆ ಸಂಬಂಧಿಸಿದ 46 ಪಾರಂಪರಿಕ ತಾಣಗಳಿವೆ. ಇವೆಲ್ಲವನ್ನೂ ಅನುಸಂಧಾನಗೊಳಿಸಿ ಒಂದು ಬೃಹತ್ತಾದ ಪ್ರವಾಸೋದ್ಯಮ ಸರ್ಕ್ಯೂಟ್ ಅನ್ನು ಮಾಡಲು ಉದ್ದೇಶಿಸಲಾಗಿದೆ. ಈ ಮೂಲಕ ಕೆಂಪೇಗೌಡರ ಬಗ್ಗೆ ಇಡೀ ಜಗತ್ತಿಗೆ ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಇನ್ನೆರಡು ವರ್ಷದೊಳಗೆ ಈ ಯೋಜನೆಯನ್ನು ಸಂಪೂರ್ಣವಾಗಿ ಜಾರಿಗೆ ತರಲಾಗುವುದು ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಉಳಿದಂತೆ ಕೆಂಪೇಗೌಡರು ಐಕ್ಯರಾಗಿರುವ, ಅವರ ವೀರ ಸಮಾಧಿ ಇರುವ ಮಾಗಡಿ ತಾಲೂಕಿನ ಕೆಂಪಾಪುರವನ್ನು ಜಾಗತಿಕ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದು ಭೂಸ್ವಾಧೀನ ನಡೆಯುತ್ತಿದೆ. ಮುಂದಿನ ವರ್ಷದ ಜಯಂತಿ ಕಾರ್ಯಕ್ರಮವನ್ನು ನಾಡಪ್ರಭುಗಳ ವೀರ ಸಮಾಧಿ ಮುಂದೆ ಆಚರಿಸುವ ಸಂಕಲ್ಪ ಸರ್ಕಾರದ್ದಾಗಿದೆ ಎಂದು ಅವರು ನುಡಿದರು.

Ashwath narayan 2 1 medium

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜ್ಞಾನಭಾರತಿಯಲ್ಲಿ ನಿರ್ಮಾಣ ಆಗುತ್ತಿರುವ ಕೆಂಪೇಗೌಡ ಅಧ್ಯಯನ ಕೇಂದ್ರದ ನಿರ್ಮಾಣ ಕಾಮಗಾರಿಗೆ ವರ್ಚುಯಲ್ ಮೂಲಕ ಚಾಲನೆ ನೀಡಿ, ನಾಡಪ್ರಭುಗಳ ಅಂಚೆ ಲಕೋಟೆಯನ್ನು ಲೋಕಾರ್ಪಣೆ ಮಾಡಿದರು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಡೆಯುತ್ತಿರುವ ಸೆಂಟ್ರಲ್ ಪಾರ್ಕ್-ಕೆಂಪೇಗೌಡ ಪ್ರತಿಮೆ ನಿರ್ಮಾಣ ಕಾಮಗಾರಿ ಪ್ರಗತಿಯ ವಿಡಿಯೋ ಹಾಗೂ ಅಧ್ಯಯನ ಕೇಂದ್ರದ ಪ್ರಾತ್ಯಕ್ಷಿಕೆಯನ್ನು ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು. ಇದನ್ನೂ ಓದಿ: ಸಮಸ್ತ ಕನ್ನಡಿಗರ ಪಾಲಿಗೆ ಕೆಂಪಾಪುರವೂ ಒಂದು ಶ್ರದ್ಧಾಕೇಂದ್ರ: ಡಿಸಿಎಂ

ಆದಿಚುಂನಗಿರಿ ಮಠದ ಶ್ರೀ ಡಾ.ನಿರ್ಮಲಾನಂದ ನಾಥ ಮಹಾಸ್ವಾಮೀಜಿ, ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ, ಬ್ರಹ್ಮಗುಂಡ ಸ್ಫಟಿಕಪುರಿ ಸಂಸ್ಥಾನದ ಶ್ರೀ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಅವರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಇದನ್ನೂ ಓದಿ: ಬಿಜೆಪಿಯವರು ಕಾಂಗ್ರೆಸ್‍ಗೆ ಸಪೋರ್ಟ್ ಮಾಡ್ತೀವಿ ಸಿಎಂ ಆಗಿ ಎಂದಿದ್ದಾರೆ: ಎಸ್.ಎಸ್ ಮಲ್ಲಿಕಾರ್ಜುನ್

ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಕೆ.ಸಿ.ನಾರಾಯಣ ಗೌಡ, ಗೋಪಾಲಯ್ಯ, ಶಾಸಕರಾದ ಎಸ್.ಆರ್.ವಿಶ್ವನಾಥ್, ಮಂಜುನಾಥ್, ರಿಜ್ವಾನ್ ಅರ್ಷದ್, ವೈ.ಎ.ನಾರಾಯಣ ಸ್ವಾಮಿ, ಸಂಸದ ಪಿ.ಸಿ.ಮೋಹನ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮಾಗಡಿಯ ಕೃಷ್ಣಮೂರ್ತಿ ಅವರು ಇದೇ ಸಂದರ್ಭದಲ್ಲಿ ಕೆಂಪಾಪುರದಿಂದ ತಂದ ಆತ್ಮಜ್ಯೋತಿಯನ್ನು ಮುಖ್ಯಮಂತ್ರಿಯವರಿಗೆ ಹಸ್ತಾಂತರ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *