ರಾಮಮಂದಿರ ಶಂಕು ಸ್ಥಾಪನೆಯ ಧಾರ್ಮಿಕ ಸಂಭ್ರಮದಿಂದ ಹಿಡಿದು ಕೊರೊನಾ ನಡುವೆ ಈ 2020ಕ್ಕೆ ಅಂತ್ಯವಾಗ್ತಿದೆ. ಹಿಂದೆಂದೂ ಕಾಣದ ಕಷ್ಟಗಳನ್ನ ಭಾರತ ಕಂಡಿದೆ. ಲಕ್ಷ ಲಕ್ಷ ಕಾರ್ಮಿಕರು ಸಾವಿರಾರು ಕಿಲೋ ಮೀಟರ್ ನಡೆದ ಕಣ್ಣೀರು ಕಥೆಗಳು ಇಂದು ನಮ್ಮನ್ನ ಭಾವುಕರನ್ನಾಗಿಸುತ್ತೆ. ನೋವು, ಕಷ್ಟ, ಸಮಸೆಗಳನ್ನೇ ಈ 2020 ಹೊತ್ತು ತಂದಿತ್ತು. ಈ ವರ್ಷದ ಒಂದೊಂದು ದಿನ ಪ್ರತಿಯೊಬ್ಬರಿಗೂ ಒಂದೊಂದು ಪಾಠವನ್ನ ಕಲಿಸಿವೆ. ಈ ವರ್ಷ ನಡೆದ ಪ್ರಮುಖ 20 ಘಟನಾವಳಿಗಳು ಇಲ್ಲಿವೆ.
Advertisement
1. ಸಿಎಎ ಮತ್ತು ಎನ್‍ಆರ್ ಸಿ
2020 ಸಿಎಎ ಮತ್ತು ಎನ್‍ಆರ್ ಸಿ ವಿರುದ್ಧದ ಪ್ರತಿಭಟನೆಯೊಂದಿಗೆ ಆರಂಭವಾಯ್ತು. ಫೆಬ್ರವರಿ ವೇಳೆಗೆ ತೀವ್ರ ಸ್ವರೂಪ ಪಡೆದುಕೊಂಡ ಈ ಹೋರಾಟ ಹಲವು ದೊಂಬಿ, ಗಲಾಟೆ, ರಾಜಕೀಯ ಪಕ್ಷಗಳ ಕೆಸರರಾಚಾಟಕ್ಕೆ ನಾಂದಿಯಾಯ್ತು. ಫೆಬ್ರವರಿ 23ರಿಂದ 29ರವರೆಗೆ ಈಶಾನ್ಯ ದೆಹಲಿಯಲ್ಲಿ ನಡೆದ ಕೋಮು ಘರ್ಷಣೆಯಲ್ಲಿ 53 ಜನ ಪ್ರಾಣ ಕಳೆದುಕೊಂಡರು. ಎಷ್ಟೋ ಮನೆ, ಅಂಗಡಿಗಳು ಬೆಂಕಿಯ ಕೆನ್ನಾಲಿಗೆಗೆ ಧಗ ಧಗಿಸಿದವು. ಇನ್ನು ಶಾಹೀನಾಭಾಗ್ ನಲ್ಲಿ ಸೇರಿದ ಮಹಿಳೆಯರು ರಸ್ತೆ ತಡೆ ನಡೆಸಿ ಸಿಎಎ ಮತ್ತು ಎನ್‍ಆರ್ ಸಿ ವಿರೋಧಿಸಿ ಪ್ರತಿಭಟನೆ ನಡೆಸಿದ್ದು, ಇಡೀ ಜಗತ್ತಿನಾದ್ಯಂತ ಸದ್ದು ಮಾಡಿತ್ತು.
Advertisement
Advertisement
2. ನಮಸ್ತೆ ಟ್ರಂಪ್
ಫೆಬ್ರವರಿ 24ರಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿದ ಬಳಿಕ ಮೊದಲ ಬಾರಿಗೆ ಭಾರತಕ್ಕೆ ಆಗಮಿಸಿದ್ದರು. ಈ ಹಿನ್ನೆಲೆ ನಮಸ್ತೆ ಟ್ರಂಪ್ ಹೆಸರಿನಲ್ಲಿ ಕಾರ್ಯಕ್ರಮವನ್ನ ಕೇಂದ್ರ ಸರ್ಕಾರ ಆಯೋಜಿಸಿತ್ತು. ಟ್ರಂಪ್ ದಂಪತಿ ಸಾಬರಮತಿ ಆಶ್ರಮ ಮತ್ತು ತಾಜ್‍ಮಹಲ್ ಗೂ ಭೇಟಿ ನೀಡಿದ್ದರು. ಮೊಟೆರಾ ಮೈದಾನದ ವೇದಿಕೆಯಲ್ಲಿ ಪ್ರಧಾನಿ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ವೇದಿಕೆ ಹಂಚಿಕೊಂಡಿದ್ದರು.
Advertisement
3. ಕೊರೊನಾ ಎಂಟ್ರಿ
ದೆಹಲಿಯ ಬೆಂಕಿ ಕಾಳಗದ ಗೋಲಿ ಮಾರೋ ಪ್ರತಿಭಟನೆ ಬಳಿಕ ದೇಶ ಹೋಳಿಯ ಬಣ್ಣದ ಸಂಭ್ರಮಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿತ್ತು. ಈ ಸಂದರ್ಭದಲ್ಲಿಯೇ ಚೀನಿಯ ಕೊರೊನಾ ವೈರಸ್ ಇಡೀ ಜಗತ್ತನ್ನ ಆಕ್ರಮಿಸತೊಡಗಿತ್ತು. ಅಸಲಿಗೆ ಭಾರತದೊಳಗೆ ಜನವರಿಗೆ ಈ ಕೊರೊನಾ ಎಂಟ್ರಿ ಕೊಟ್ಟಿತ್ತು. ಆದ್ರೆ ಮಾರ್ಚ್ 17ರಂದು ಕರ್ನಾಟಕದ ಕಲಬುರಗಿಯ ಓರ್ವ ವೃದ್ಧನನ್ನ ಕೊರೊನಾ ಮೊದಲ ಬಲಿ ಪಡೆದ ಬಳಿಕ ಇಡೀ ದೇಶ ಅಕ್ಷರಶ: ಸಹ ನಡುಗಿತ್ತು. ಇದುವರೆಗೂ ಒಂದು ಕೋಟಿಗೂ ಅಧಿಕ ಜನ ಕೊರೊನಾ ಸೋಂಕಿಗೆ ತುತ್ತಾಗಿದ್ದು, ಸುಮಾರು ಒಂದೂವರೆ ಲಕ್ಷದಷ್ಟು ಜನ ಪ್ರಾಣ ಕಳದುಕೊಂಡಿದ್ದಾರೆ.
4. ಯೆಸ್ ಬ್ಯಾಂಕ್
ಈ ವರ್ಷ ಯೆಸ್ ಬ್ಯಾಂಕ್ ಗ್ರಾಹಕರು ತಮ್ಮ ಹಣಕ್ಕಾಗಿಯೇ ಕ್ಯೂ ನಿಲ್ಲುವಂತೆ ಮಾಡ್ತು. ದೇಶದ ದೊಡ್ಡ ಖಾಸಗಿ ಬ್ಯಾಂಕ್ ಗಳಲ್ಲಿ ಒಂದಾಗಿರೋ ಯೆಸ್ ಬ್ಯಾಂಕ್ ವ್ಯವಹಾರಗಳ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ನಿಬಂಧನೆಗಳನ್ನ ಹೇರಿತು. ಪರಿಣಾಮ ಯೆಸ್ ಬ್ಯಾಂಕ್ ಗ್ರಾಹಕರು ಖಾತೆಯಲ್ಲಿ ಹಣವಿದ್ರೂ ತಿಂಗಳಿಗೆ ಕೇವಲ 50 ಸಾವಿರ ರೂ. ಪಡೆದುಕೊಳ್ಳುವಂತಾಗಿರತ್ತು. ಆರ್‍ಬಿಐ ನಿಬಂಧನೆ ಪರಿಣಾಮ ಯೆಸ್ ಬ್ಯಾಂಕ್ ಶೇರುಗಳ ಮುಖಬೆಲೆ 5 ರೂಪಾಯಿಗೆ ಬಂದು ತಲುಪಿತ್ತು.
5. ಪ್ರವಾಸಿ ಕಾರ್ಮಿಕರು
ಕೊರೊನಾ ತಡೆಗಾಗಿ ಮಾರ್ಚ್ 25ರಿಂದ 21 ದಿನಗಳ ಕಾಲ ಇಡೀ ದೇಶ ಸಂಪೂರ್ಣ ಲಾಕ್‍ಡೌನ್ ಗೆ ಒಳಪಟ್ಟಿತ್ತು. ದಿಢೀರ್ ಲಾಕ್‍ಡೌನ್ ಹೇರಿದ ನಿರ್ಧಾರದಿಂದ ಪ್ರವಾಸಿ/ವಲಸೆ ಕಾರ್ಮಿಕರು ಒಂದೊತ್ತಿನ ಊಟಕ್ಕೂ ಪರದಾಡುವಂತಾಯ್ತು. ಬಸ್, ರೈಲು ಸಿಗದೇ ತಲೆ ಮೇಲೆ ಗಂಟು ಮೂಟೆ ಹೊತ್ತುಕೊಂಡು ಕಂಕುಳಲ್ಲಿ ಪುಟ್ಟ ಕಂದಮ್ಮಗಳನ್ನ ಹೊತ್ತ ಕಾರ್ಮಿಕ ವರ್ಗ ನಡೆದುಕೊಂಡು ಊರು ತಲುಪಲು ಮುಂದಾಯ್ತು. ಈ ಕಷ್ಟದ ದೃಶ್ಯಗಳು ಭಾರತ ಮತ್ತು ಪಾಕಿಸ್ತಾನ ವಿಭಜನೆ ಸಂದರ್ಭವನ್ನ ನೆನಪಿಸಿದ್ದವು ಅಂತ ಹಿರಿಯರು ಕಣ್ಣೀರು ಹಾಕಿದ್ದರು. ದೆಹಲಿ-ಮುಂಬೈ- ಚೆನ್ನೈ-ಬೆಂಗಳೂರು ಸೇರಿದಂತೆ ಮಹಾನಗರಗಳಿಂದ ಹೊರಟ ಕಾರ್ಮಿಕರು ಸಾವಿರಾರು ಕಿಲೋ ಮೀಟರ್ ನಡೆದುಕೊಂಡೇ ಊರು ತಲುಪಿದ್ರು. ಇನ್ನು ಮೇ 8ರಂದು ಮಹಾರಾಷ್ಟ್ರದ ಔರಾಂಗಬಾದ್ ಊರು ಸೇರಲು ರೈಲ್ವೇ ಮಾರ್ಗ ಬಳಸಿ ಹೋಗ್ತಿದ್ದ 16 ಜನ ಸಾವಿನ ಮನೆ ಸೇರಿದ್ದರು. ರೈಲು ಹಳಿಗಳ ಮೇಲೆ ಬಿದ್ದಿದ್ದ ರೊಟ್ಟಿಗಳು ನೋಡುಗರ ಕರುಳು ಕಿತ್ತು ಬರುವಂತೆ ಮಾಡಿತ್ತು.
6. ನಿರ್ಭಯಾ ಹಂತಕರಿಗೆ ಗಲ್ಲು
ಮಾರ್ಚ್ 20, 2020 ನ್ಯಾಯದ ದಿನ ಅಂತ ಸೋಶಿಯಲ್ ಮೀಡಿಯಾದಲ್ಲಿ ಕರೆಲಾಯ್ತು. ಕಾರಣ ಡಿಸೆಂಬರ್ 16, 2012ರಂದು ನಡೆದ ಗ್ಯಾಂಗ್‍ರೇಪ್, ಕೊಲೆ ನಿರ್ಭಯಾ ಕೇಸ್ ನ ಅಪರಾಧಿಗಳಾದ ಪವನ್, ಮುಖೇಶ್, ಅಕ್ಷಯ್ ಮತ್ತು ವಿನಯ್ ನಾಲ್ವರನ್ನ ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲಾಯ್ತು.
7. ಮಧ್ಯ ಪ್ರದೇಶದಲ್ಲಿ ಅರಳಿದ ಕಮಲ
ಈ ವರ್ಷ ರಾಜಕೀಯ ಮೇಲಾಟಗಳಿಗೂ ಸಾಕ್ಷಿಯಾಯ್ತು. ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್ ಕಮಲ್‍ನಾಥ್ ಸರ್ಕಾರ ಬೀಳಿಸಿ ಶಿವರಾಜ್ ಸಿಂಗ್ ಚೌಹಾಣ್ ನಾಲ್ಕನೇ ಬಾರಿ ಮಧ್ಯಪ್ರದೇಶದ ಅಧಿಕಾರದ ಚುಕ್ಕಾಣಿ ಹಿಡಿದರು. ಜ್ಯೋತಿರಾದಿತ್ಯ ಸಿಂಧಿಯಾ ನೇತೃತ್ವದಲ್ಲಿ 22 ಶಾಸಕರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರಿಂದ ಮಾರ್ಚ್ 20ರಂದು ಕಮಲ್‍ನಾಥ್ ಸರ್ಕಾರ ಪತನವಾಯ್ತು. ಮಾರ್ಚ್ 23ರಂದು ಶಿವರಾಜ್ ಸಿಂಗ್ ಚೌಹಣ್ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು.
8. ಅಂಫಾನ್ ಸೈಕ್ಲೋನ್ ಮತ್ತು ಮಿಡತೆ ದಾಳಿ
ಕೊರೊನಾ ಕಾಲಘಟ್ಟದಲ್ಲಿ ಪಶ್ಚಿಮ ಬಂಗಾಳ ಅಂಫಾನ್ ಚಂಡಮಾರುತಕ್ಕೆ ಸಿಲುಕಿತ್ತು. ದೇಶದ ಪೂರ್ವ ಭಾಗ ಸಂಕಷ್ಟಕ್ಕೆ ಸಿಲುಕಿತ್ತು. ಇದು ಕೊರೊನಾಗಿಂತ ಭಯಾನಕ ಎಂದು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದರು. ಅಂಫಾನ್ ನಿಂದ ಪಶ್ಚಿಮ ಬಂಗಾಳದಲ್ಲಿ 13.9 ಬಿಲಿಯನ್ ಡಾಲರ್ ನಷ್ಟು ನಷ್ಟವಾಗಿತ್ತು. ಸುಮಾರು 30 ಸಾವಿರ ಮನೆಗಳು ಮತ್ತು 88 ಸಾವಿರ ಹೆಕ್ಟೆರ್ ಪ್ರದೇಶದಲ್ಲಿ ಬೆಳೆಯಲಾಗಿದ್ದ ಬೆಳೆ ನಾಶವಾಗಿತ್ತು.
ಚಂಡಮಾರುತದ ಬಳಿಕ ದೇಶಕ್ಕೆ ಪೂರ್ವ ಭಾಗದ ಪಾಕಿಸ್ತಾನದಿಂದ ಬಂದ ಮಿಡತೆಗಳು ಅನ್ನದಾತನಿಗೆ ಪೆಟ್ಟು ನೀಡಿದ್ದವು. ಮಿಡತೆ ದಾಳಿಯಿಂದ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಅಪಾರ ಪ್ರಮಾಣದ ಬೆಳೆ ನಾಶವಾಗಿತ್ತು.
9. ಗಲ್ವಾನ್ ಸಂಘರ್ಷ
ಜೂನ್ 15-16ರಂದು ಲಡಾಕ್ ಗಡಿಯ ಗಲ್ವಾನ್ ಬಳಿ ಚೀನಾ ಮತ್ತು ಭಾರತ ಸೈನಿಕರ ನಡುವೆ ಸಂಘರ್ಷ ನಡೆದಿತ್ತು. ಈ ವೇಳೆ ಭಾರತದ 20 ಸೈನಿಕರು ಹುತಾತ್ಮರಾಗಿದ್ರೆ, ಚೀನಾದ 40 ಸೈನಿಕರು ಸಾವನ್ನಪ್ಪಿದ್ದರು. ಆದ್ರೆ ಚೀನಾ ಸಾವು-ನೋವು ಸಂಭವಿಸಿಲ್ಲ ಎಂದು ಹೇಳಿತ್ತು. ಮೇ 5 ಮತ್ತು 6ರಿಂದಲೇ ಆರಂಭಗೊಂಡಿದ್ದ ಈ ಸಂಘರ್ಷ ಜೂನ್ 15-16ಕ್ಕೆ ಹಿಂಸೆಯ ರೂಪ ಪಡೆದುಕೊಂಡಿತ್ತು. ಈ ಸಂಘರ್ಷ ಬೆನ್ನಲ್ಲೇ ಕೇಂದ್ರ ಸರ್ಕಾರ ಚೀನಾದ 100ಕ್ಕೂ ಹೆಚ್ಚು ಆ್ಯಪ್‍ಗಳನ್ನ ಬ್ಯಾನ್ ಮಾಡಿದೆ. ಚೀನಾ ವಸ್ತುಗಳ ಬಳಕೆ ವಿರೋಧಿಸಿ ಭಾರತದಲ್ಲಿ ಕ್ಯಾಂಪೇನ್ ಆರಂಭಗೊಂಡಿದೆ. ಆದ್ರೆ ಇಂದು ಸಹ ಭಾರತ- ಚೀನಾ ಗಡಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.
10. ಯುಎನ್‍ಎಸ್‍ಸಿಯಲ್ಲಿ ಭಾರತ
ಕೊರೊನಾ, ಅಂಫಾನ್ ಮತ್ತು ಚೀನಾ ವಿವಾದದ ನಡುವೆಗೆ ಭಾರತಕ್ಕೆ ಸಿಹಿ ಸುದ್ದಿ ಸಿಕ್ಕಿತು, ಜೂನ್ 2020ರಂದು ಸಂಯುಕ್ತ ರಾಷ್ಟ್ರ ಸುರಕ್ಷೆ ಅಸೋಸಿಯೇಷನ್ ನಲ್ಲಿ ಭಾರತ ಎಂಟನೇ ಬಾರಿ ಸದಸ್ಯ ಸ್ಥಾನ ಪಡೆಯಿತು. ಚಲಾವಣೆಯಾದ 192 ಮತಗಳಲ್ಲಿ ಭಾರತಕ್ಕೆ 184 ವೋಟ್ ಪಡೆದಿತ್ತು.
11. ಸುಶಾಂತ್ ಸಿಂಗ್ ರಜಪೂತ್ ಸಾವು
2020 ಬಾಲಿವುಡ್ ಈ ಬಾರಿ ಹೊಸ ವಿಷಯ ಮತ್ತು ಚರ್ಚೆಗಳಿಗೆ ಕಾರಣವಾಯ್ತು. ಬಿಟೌನ್ ಉದಯೋನ್ಮುಖ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಇದಕ್ಕೆಲ್ಲ ಮುನ್ನುಡಿ ಬರೆಯಿತು. ಇದೇ ಪ್ರಕರಣ ಡ್ರಗ್ಸ್ ತಿರುವು ಪಡೆದುಕೊಂಡ ಪರಿಣಾಮ ನಟಿ ರಿಯಾ ಚಕ್ರವರ್ತಿ ಜೈಲು ವಾಸ ಅನುಭವಿಸಿ ಸದ್ಯ ಜಾಮೀನಿನ ಮೇಲೆ ಹೊರ ಇದ್ದಾರೆ. ಹಾಸ್ಯ ನಟಿ ಭಾರತಿ ಸಿಂಗ್ ಮತ್ತು ಪತಿ ಹರ್ಷ್ ಸಹ ಜೈಲಿಗೆ ಹೋಗಿ ಬಂದಿದ್ದಾರೆ. ಇನ್ನು ದೀಪಿಕಾ ಪಡುಕೋಣೆ, ರಕುಲ್ ಪ್ರೀತ್ ಸಿಂಗ್, ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್, ಕರಣ್ ಜೋಹರ್, ಅರ್ಜುನ್ ರಾಂಪಾಲ್ ಸೇರಿದಂತೆ ಬಾಲಿವುಡ್ ಅಂಗಳದ ದೊಡ್ಡ ತಾರೆಯರು ವಿಚಾರಣೆ ಎದುರಿಸಿದ್ದಾರೆ. ಜೂನ್ 14ರಂದು ನೇಣು ಬಿಗಿದ ಸ್ಥಿತಿಯಲ್ಲಿ ಸುಶಾಂತ್ ಶವ ಸಿಕ್ಕಿತ್ತು. ಸದ್ಯ ಪ್ರಕರಣದ ತನಿಖೆಯನ್ನ ಸಿಬಿಐ ನಡೆಸುತ್ತಿದೆ.
12. ಭಾರತಕ್ಕೆ ಬಂದ ರಫೇಲ್
ಚೀನಾ ಜೊತೆಗಿನ ಗಡಿ ವಿವಾದ ಬಳಿಕ ಕೋತಿ ಪಾಕ್ ಸಹ ತನ್ನ ಬಾಲ ಬಿಚ್ಚಲಾರಂಭಿಸಿತ್ತು. ಈ ನಡುವೆ ಜುಲೈ 27ರಂದು ಐದು ರಫೇಲ್ ಯುದ್ಧ ವಿಮಾನಗಳು ಭಾರತ ತಲುಪಿದವು. ಸೆಪ್ಟೆಂಬರ್ 10ರಂದು ಈ ರಫೇಲ್ ಗಳು ಅಧಿಕೃತವಾಗಿ ವಾಯು ಸೇನೆ ಸೇರಿಕೊಂಡವು. ಇದಾದ ಬಳಿಕ ನವೆಂಬರ್ 4ರಂದು ಮತ್ತೆ ಮೂರು ರಫೇಲ್ ವಾಯುಸೇನೆ ಸೇರ್ಪಡೆಗೊಂಡಿವೆ. ಫ್ರಾನ್ಸ್ ನಿಂದ ಭಾರತ ಒಟ್ಟು 36 ರಫೇಲ್ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ.
13. ಕಾನ್ಪುರ ವಿಕಾಸ್ ದುಬೆ ಹತ್ಯಾಕಾಂಡ
ಜುಲೈ ತಿಂಗಳಿನಲ್ಲಿ ಮುನ್ನಲೆಗೆ ಬಂದವನೇ ಬಿಕೂರು ಗ್ರಾಮದ ಕುಖ್ಯಾತ ವಿಕಾಸ್ ದುಬೆ. ಈತ ತನ್ನ ಟೀಂ ಜೊತೆ ಸೇರಿ ಬಂಧನಕ್ಕೆ ಆಗಮಿಸಿದ್ದ ಪೊಲೀಸರ ಮೇಲೆ ದಾಳಿ ನಡೆಸಿದ್ದನು. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಸಿಓ ಸೇರಿದಂತೆ ಎಂಟು ಜನ ಪೊಲೀಸರು ಹುತಾತ್ಮರಾಗಿದ್ದರು. ಮಧ್ಯ ಪ್ರದೇಶದ ಉಜ್ಜೈನ್ ನಲ್ಲಿ ವಿಕಾಸ್ ದುಬೆಯ ಬಂಧನವಾಗಿತ್ತು. ಮಧ್ಯಪ್ರದೇಶದಿಂದ ಉತ್ತರ ಪ್ರದೇಶಕ್ಕೆ ಕರೆದೊಯ್ಯುವ ಮಾರ್ಗ ಮಧ್ಯೆ ತಪ್ಪಿಸಿಕೊಳ್ಳಲು ಯತ್ನಿಸಿದ್ದ ದುಬೆಯನ್ನ ಎನ್‍ಕೌಂಟರ್ ಮಾಡಲಾಗಿತ್ತು. ಇದಾದ ಎಂಟು ದಿನದಲ್ಲಿ ಯುಪಿ ಪೊಲೀಸರು ವಿಕಾಸ್ ದುಬೆಯ ತಂಡವನ್ನ ಇಲ್ಲದಂತೆ ಮಾಡಿದರು.
14. ರಾಮಮಂದಿರದ ಶಿಲಾನ್ಯಾಸ
ನವೆಂಬರ್ 9, 2019ರಂದು ಸುಪ್ರೀಂಕೋರ್ಟ್ ನಲ್ಲಿ ರಾಮಮಂದಿರ ಮತ್ತು ಬಾಬರಿ ಮಸೀದಿ ವಿವಾದ ಅಂತ್ಯವಾಗಿತ್ತು. ಆದ್ರೆ ರಾಮಮಂದಿರದ ಶಿಲಾನ್ಯಾಸ ಕಾರ್ಯಕ್ರಮ ಆಗಸ್ಟ್ 5ರಂದು ನಡೆಯಿತು. ಅಯೋಧ್ಯೆಗೆ ಆಗಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಮಮಂದಿರದ ಶಿಲಾನ್ಯಾಸ ನೆರೆವೇರಿಸಿದರು.
15. ಕೊರೊನಾ ಕಾಲಘಟ್ಟದಲ್ಲಿ ಬಿಹಾರದ ಚುನಾವಣೆ
ಕೊರೊನಾ ಕಾಲಘಟ್ಟದಲ್ಲಿ ಪ್ರಜಾಪ್ರಭುತ್ವದ ಪ್ರಕ್ರಿಯೆಯಾದ ಬಿಹಾರ ವಿಧಾನಸಭೆ ಚುನಾವಣೆ ಯಶಸ್ವಿಯಾಗಿ ನಡೆಯಿತು. ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ ತೇಜಸ್ವಿ ಯಾದವ್ ಆರ್‍ಜೆಡಿ ಅಧಿಕಾರದಿಂದ ವಂಚಿವಾಯ್ತು. ಬಿಜೆಪಿ ಬೆಂಬಲದೊಂದಿಗೆ ಜೆಡಿಯು ನಾಲ್ಕನೇ ಬಾರಿ ಬಿಹಾರದಲ್ಲಿ ಸರ್ಕಾರ ರಚನೆ ಮಾಡಿತು.
16. ಐಪಿಎಲ್-13
ಕೊರೊನಾದಿಂದ ಮುಂದೂಡುತ್ತಾ ಬಂದಿದ್ದ ಐಪಿಎಲ್ ಪಂದ್ಯಗಳನ್ನ ಈ ಬಾರಿ ಬಿಸಿಸಿಐ ಯುಎಇಯಲ್ಲಿ ಆಯೋಜಿಸಿ ಯಶಸ್ವಿಯಾಯ್ತು. ಸೆಪ್ಟೆಂಬರ್ 19ರಂದು ಆರಂಭವಾದ ಪಂದ್ಯಗಳು ನವೆಂಬರ್ 10ಕ್ಕೆ ಅಂತ್ಯವಾದವು. ಮುಂಬೈ ಇಂಡಿಯನ್ಸ್ ತಂಡ ಐದನೇ ಬಾರಿ ಐಪಿಎಲ್ ಟ್ರೋಫಿಗೆ ಮುತ್ತಿಕ್ಕುವ ಮೂಲಕ 13ನೇ ಆವೃತ್ತಿಯನ್ನ ತನ್ನದಾಗಿಸಿಕೊಂಡಿತು. ಕೊರೊನಾದಿಂದಾಗಿ ಭಾರತೀಯರು ಐಪಿಎಲ್ ಪಂದ್ಯಗಳನ್ನ ಕಣ್ತುಂಬಿಕೊಂಡ್ರು. ಈ ಬಾರಿ ಐಪಿಎಲ್ ನೋಡುಗರ ಸಂಖ್ಯೆ ಶೇ.23ರಷ್ಟು ಏರಿಕೆ ಕಂಡಿತು.
17. ಪಾತಾಳಕ್ಕೆ ಕುಸಿದ ಜಿಡಿಪಿ
ಕೊರೊನಾ, ಲಾಕ್‍ಡೌನ್ ಪರಿಣಾಮ ಭಾರತದ ಜಿಡಿಪಿ ಪಾತಾಳಕ್ಕೆ ಕುಸಿಯುವ ಮೂಲಕ ಕೆಟ್ಟ ದಾಖಲೆ ಬರೆದಿತ್ತು. ಏಪ್ರಿಲ್ ನಿಂದ ಜೂನ್ ವರೆಗಿನ ತ್ರೈಮಾಸಿಕ ಜಿಡಿಪಿ ಮೈನಸ್ ಶೇ.23.9ರಷ್ಟು ಕುಸಿತಕಂಡಿತ್ತು. ಇದು 1996ರ ಜಿಡಿಪಿಗಿಂತ ಕಡಿಮೆ ಇತ್ತು. ಈ ಬಗ್ಗೆ ವಿತ್ತೆ ಸಚಿವೆ ನಿರ್ಮಲಾ ಸೀತಾರಾಮನ್ ಇದೆಲ್ಲಾ ದೈವ ಇಚ್ಛೆ ಅನ್ನೋ ಹೇಳಿಕೆ ಚಚೆಗೆ ಗ್ರಾಸವಾಗಿತ್ತು.
18. ದೆಹಲಿ ಗಡಿಯಲ್ಲಿ ಅನ್ನದಾತರ ಧರಣಿ
2020ರ ಆರಂಭದಲ್ಲಿ ಸಿಎಎ ಮತ್ತು ಎನ್‍ಆರ್‍ಸಿ ಹೋರಾಟಗಳಿಗೆ ದೆಹಲಿ ವೇದಿಕೆಯಾಗಿತ್ತು. ಈಗ ದೆಹಲಿ ಗಡಿಭಾಗದಲ್ಲಿ ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆ ವಿರೋಧಿಸಿ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ಸರ್ಕಾರ ಕೆಲ ಬದಲಾವಣೆಗೆ ಮುಂದಾಗಿದ್ದರೂ ರೈತರು ಮೂರು ಕಾಯ್ದೆಗಳನ್ನ ಹಿಂಪಡೆದುಕೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ಮುಂದುವರಿಸಿದ್ದಾರೆ. ಈ ಸಂಬಂಧ ರೈತರು ಭಾರತ್ ಬಂದ್ ಗೆ ಕರೆ ನೀಡಿದ್ದರು.
19. ದಾಖಲೆ ಬರೆದ ಶೇರು ಮಾರುಕಟ್ಟೆ
ಕೊರೊನಾ ಮತ್ತು ಅರ್ಥಿಕ ಹಿಂಜರಿತದ ಸುಳಿಗೆ ಸಿಲುಕಿದ್ದು ಶೇರು ಪೇಟೆ ದಾಖಲೆ ಬರೆದಿದೆ. ಸೆನ್ಸಕ್ಸ್ 46,890 ಗಡಿ ತಲುಪಿದ್ರೆ, ನಿಫ್ಟಿ 13,740 ತಲುಪವಲ್ಲಿ ಯಶಸ್ವಿಯಾಗಿತ್ತು. ಕೊರೊನಾ, ಜಿಡಿಪಿ ಕುಸಿತ ಕಂಡಿದ್ದರೂ ಚಿನ್ನದ ಬೆಲೆ ಮಾತ್ರ ಏರಿಕೆ ಕಾಣಿಸುತ್ತಿದೆ. ಈ ವರ್ಷ ಹಳದಿ ಲೋಹ 10 ಗ್ರಾಂಗೆ 56,191 ರೂ.ವರೆಗೂ ತಲುಪಿತ್ತು. ಬೆಳ್ಳಿ ಪ್ರತಿ ಕೆಜಿಗೆ 77,949 ರೂ.ವರೆಗೂ ಏರಿಕೆ ಕಂಡು ದಾಖಲೆ ಬರೆದಿದೆ.
20. ಗುರು – ಶನಿ ಸಂಯೋಗ
ಸೂರ್ಯ- ಚಂದ್ರ ಗ್ರಹಣಗಳ ನಡುವೆ ನಭೋಮಂಡಲ ಈ ವರ್ಷ ಮತ್ತೊಂದು ಕೌತುಕಕ್ಕೆ ಸಾಕ್ಷಿಯಾಗಿತ್ತು. ಡಿಸೆಂಬರ್ 21ರ ಸಂಜೆ ಗುರು ಮತ್ತು ಶನಿ ಸಂಯೋಗವಾಗಿತ್ತು. ಈ ಸಮ್ಮಿಲನ 800 ವರ್ಷಗಳ ಬಳಿಕ ನಡೆದಿದ್ದರಿಂದ ಇಡೀ ಜಗತ್ಯು ಅತ್ಯುತ್ಸಾಹದಿಂದ ಈ ಕೌತುಕವನ್ನ ನೋಡಿತ್ತು. ಮತ್ತೆ ಈ ವಿಸ್ಮಯ 2080ರಲ್ಲಿ ಘಟಿಸಲಿದೆ.