Month: September 2019

  • ಹರ್ಷ ಮೊಯ್ಲಿ ವಿರುದ್ಧ ಕೈ ನಾಯಕ ಕಿಡಿ

    ಹರ್ಷ ಮೊಯ್ಲಿ ವಿರುದ್ಧ ಕೈ ನಾಯಕ ಕಿಡಿ

    ಉಡುಪಿ: ಮಾಜಿ ಸಚಿವ ಪ್ರಮೋದ್ ಜೆಡಿಎಸ್ ನಲ್ಲೇ ಇದ್ದಾರೋ ಕಾಂಗ್ರೆಸ್‍ಗೆ ಬಂದಿದ್ದಾರೋ ಎಂದು ಕರಾವಳಿಯಲ್ಲಿ ಚರ್ಚೆಯಾಗುತ್ತಿದೆ. ಈ ನಡುವೆ ಇದೇ ವಿಚಾರದಲ್ಲಿ ಮಾಜಿ ಸಿಎಂ ವೀರಪ್ಪ ಮೊಯ್ಲಿ ಪುತ್ರನ ಜೊತೆ ಕಾಂಗ್ರೆಸ್ ನಾಯಕನ ಫೋನ್ ಸಂಭಾಷಣೆ ವೈರಲಾಗಿದೆ.

    ಶನಿವಾರ ವೀರಪ್ಪ ಮೊಯ್ಲಿ ಅವರು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ಪತ್ರಕರ್ತರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಪ್ರಮೋದ್ ಮಧ್ವರಾಜ್ ಯಾವಾಗ ಕಾಂಗ್ರೆಸ್ ಗೆ ಮರಳ್ತಾರೆ ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಮೊಯ್ಲಿ, ಪ್ರಮೋದ್ ಜೆಡಿಎಸ್ ನಲ್ಲಿದ್ದಾರೆ. ಅರ್ಜಿ ಹಾಕಿದರೆ ಮತ್ತೆ ಕಾಂಗ್ರೆಸ್ಸಿಗೆ ಬರಬಹುದು ಅಂದಿದ್ದರು.

    veerappa moili

    ಈ ವಿಚಾರ ಸ್ಥಳೀಯ ಕಾರ್ಯಕರ್ತರನ್ನು ಕೆರಳಿಸಿದೆ. ಸುದ್ದಿಗೋಷ್ಠಿಯ ನಂತರ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸದಾಶಿವ್ ಅಮೀನ್ ಅವರು ಹರ್ಷ ಮೊಯ್ಲಿಗೆ ಕರೆ ಮಾಡಿ ಪ್ರಮೋದ್ ಮಧ್ವರಾಜ್ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ಹರ್ಷ ಮೊಯ್ಲಿ, ಪ್ರಮೋದ್ ಜೆಡಿಎಸ್ ನಲ್ಲೇ ಇದ್ದಾನೆ ಎಂದು ಹೇಳುವ ಮೂಲಕ ಏಕವಚನ ಬಳಕೆ ಮಾಡಿದ್ದಾರೆ. ಇದರಿಂದ ಕುಪಿತರಾದ ಸದಾಶಿವ್, ಪದಾಧಿಕಾರಿ ಅಲ್ಲದೆ ಇದ್ದರೂ ನೀವ್ಯಾಕೆ ಕಾಂಗ್ರೆಸ್ ಸಭೆಯಲ್ಲಿ, ಸುದ್ದಿಗೋಷ್ಠಿಯಲ್ಲಿ ಕೂತಿದ್ದು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಪ್ರಮೋದ್ ಗೆ ಗೌರವ ಕೊಟ್ಟು ಮಾತಾಡಿ ಎಂದು ಕಿಡಿಕಾರಿದ್ದಾರೆ. ತುಳು ಭಾಷೆಯ ಈ ಸಂಭಾಷಣೆ ವೈರಲ್ ಆಗಿದೆ.

    Pramod

    ತಾನು ಕಾಂಗ್ರೆಸ್ ತೊರೆದೇ ಇಲ್ಲ. ನಾನು ಮೈತ್ರಿ ಅಭ್ಯರ್ಥಿಯಾಗಿದ್ದೆ ಎಂದು ಪ್ರಮೋದ್ ಮಧ್ವರಾಜ್ ತಟಸ್ಥವಾಗಿ ಕೂತಿದ್ದಾರೆ. ಆದರೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪ್ರಮೋದ್ ಅರ್ಜಿ ಹಾಕಿ ಕಾಂಗ್ರೆಸ್ ಗೆ ಮರಳಲಿ ಎಂದು ಕಾಂಗ್ರೆಸ್ ಜಿಲ್ಲಾ ಘಟಕ ಮೌನವಹಿಸಿದೆ. ಇದು ಕೆಲ ಕಾರ್ಯಕರ್ತರ ಕೋಪಕ್ಕೆ ಕಾರಣವಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹರ್ಷ ಮೊಯಿಲಿ ಕಾರ್ಕಳ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆಗ ಹರ್ಷ ಬಗ್ಗೆ ಕಾರ್ಯಕರ್ತರ ವಿರೋಧಿಸಿದ್ದರು.

  • ವಿಚಿತ್ರ ಸ್ವಾಮೀಜಿಯನ್ನು ಗ್ರಾಮದಿಂದ ಹೊರಹಾಕಿದ ಸ್ಥಳೀಯರು

    ವಿಚಿತ್ರ ಸ್ವಾಮೀಜಿಯನ್ನು ಗ್ರಾಮದಿಂದ ಹೊರಹಾಕಿದ ಸ್ಥಳೀಯರು

    – 6 ತಿಂಗ್ಳು ಅವನು, ಇನ್ನಾರು ತಿಂಗ್ಳು ಅವಳಾಗುವ ಸ್ವಾಮೀಜಿ

    ಬಾಗಲಕೋಟೆ: ಆರು ತಿಂಗಳು ಅವನು, ಇನ್ನಾರು ತಿಂಗಳು ಅವಳಾಗುವ ವಿಚಿತ್ರ ಸ್ವಾಮೀಜಿಯನ್ನು ಚಿಕ್ಕಸಂಗಮದ ಗ್ರಾಮದಿಂದ ಸ್ಥಳೀಯರು ಹೊರಹಾಕಿದ್ದಾರೆ.

    ಜಿಲ್ಲೆಯ ಬೀಳಗಿ ತಾಲೂಕಿನ ಚಿಕ್ಕಸಂಗಮದ ಗ್ರಾಮಸ್ಥರು ವಿದ್ಯಾಹಂಸ ಭಾರತಿ ಸ್ವಾಮೀಜಿಯನ್ನು ಗ್ರಾಮದಿಂದ ಹೊರ ಹಾಕಿದ್ದಾರೆ. ವಿದ್ಯಾಹಂಸ ಭಾರತಿ ಸ್ವಾಮೀಜಿ ಮೈಸೂರು ಜಿಲ್ಲೆ ಪಾಂಡವಪುರ ತಾಲೂಕಿನ ಚಂದ್ರ ಗ್ರಾಮದ ಬಳಿ ಇರುವ ತ್ರಿಧಾಮಕ್ಷೇತ್ರ ಮಹಾಕಾಳಿ ಚಕ್ರೇಶ್ವರಿ ಪೀಠಾಧ್ಯಕ್ಷರಾಗಿದ್ದಾರೆ. ಸ್ವಾಮಿಜಿ ವಿಚಿತ್ರ ವೇಷ ಭೂಷಣಗಳನ್ನು ನೋಡಿದ ಗ್ರಾಮಸ್ಥರೆಲ್ಲರೂ ಗ್ರಾಮದಿಂದ ಕಳುಹಿಸಿದ್ದಾರೆ.

    BGK VICHITRA SWAMY AV 1

    ವಿದ್ಯಾಹಂಸ ಭಾರತಿ ಸ್ವಾಮೀಜಿ ಚಾತುರ್ಮಾಸ ಆಚರಿಸಲು ಚಿಕ್ಕಸಂಗಮಕ್ಕೆ ಬಂದಿದ್ದರು ಎನ್ನಲಾಗಿದೆ. ಚಿಕ್ಕಸಂಗಮದಲ್ಲಿ ಪ್ರತ್ಯಂಗಿರಾ ಹೋಮ, ಹವನ ಹೆಸರಿನಲ್ಲಿ ಗ್ರಾಮಸ್ಥರಿಂದ ಚಿನ್ನಾಭರಣ ಮತ್ತು ಹಣ ಪಡೆದುಕೊಂಡಿದ್ದು ಎಂದು ತಿಳಿದು ಬಂದಿದೆ. ದೊಡ್ಡ ದೊಡ್ಡ ಸ್ವಾಮೀಜಿಗಳು, ಗಣ್ಯವ್ಯಕ್ತಿಗಳ ಜೊತೆಗಿನ ಭಾವಚಿತ್ರ ತೋರಿಸಿ ನಂಬಿಕೆ ಹುಟ್ಟಿಸಿಕೊಂಡಿದ್ದ ಎಂದು ಗ್ರಾಮಸ್ಥರು ಹೇಳುತ್ತಾರೆ.

    Capture

    ಈ ವಿದ್ಯಾಹಂಸ ಭಾರತಿ ಸ್ವಾಮೀಜಿ ವಿರುದ್ಧ 2018ರಲ್ಲಿ ಮೈಸೂರಿನ ಕುವೆಂಪು ನಗರದ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿತ್ತು. ಚಾತುರ್ಮಾಸದ ಪೂಜೆ ಹಿನ್ನೆಲೆಯಲ್ಲಿ ಮನೆಗೆ ಬಂದಿದ್ದ ಸ್ವಾಮೀಜಿ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಸಂತ್ರಸ್ತೆ ದೂರಿನಲ್ಲಿ ದಾಖಲಿಸಿದ್ದರು.

  • ಸ್ವಚ್ಛತೆಯ ಮಂತ್ರ ಪಠಿಸುತ್ತಿರುವ ‘ಕನಸಿನ ರಾಣೇಬೆನ್ನೂರು’ ತಂಡ

    ಸ್ವಚ್ಛತೆಯ ಮಂತ್ರ ಪಠಿಸುತ್ತಿರುವ ‘ಕನಸಿನ ರಾಣೇಬೆನ್ನೂರು’ ತಂಡ

    ಹಾವೇರಿ: ಸ್ವಚ್ಛ ನಗರಿ, ಸುಂದರ ನಗರಿ ಆಗಬೇಕು ಎಂದು ಎಲ್ಲರೂ ಭಾಷಣಗಳಲ್ಲಿ ಹೇಳುತ್ತಾರೆಯೇ ಹೊರತು ಕಾರ್ಯರೂಪಕ್ಕೆ ತರೋರು ಮಾತ್ರ ತೀರಾ ಕಡಿಮೆ. ಆದರೆ ‘ಕನಸಿನ ರಾಣೇಬೆನ್ನೂರು’ ತಂಡ ಸದ್ದಿಲ್ಲದೇ ಸ್ವಚ್ಛ ಮತ್ತು ಸುಂದರ ನಗರಿ ಮಾಡೋ ಕನಸು ಹೊತ್ತು ಫೀಲ್ಡ್ ಗೆ ಇಳಿದು ಪಬ್ಲಿಕ್ ಹಿರೋ ಆಗಿದೆ.

    ಈ ತಂಡದ ಸದಸ್ಯರು ಪ್ರತಿ ವಾರವೂ ಒಂದು ವಾರ್ಡಿಗೆ ತೆರಳಿ ಸ್ವಚ್ಛತೆ ಮಾಡುತ್ತಾರೆ. ಅಲ್ಲದೆ ಕರಪತ್ರಗಳನ್ನ ಹಿಡಿದು ಮನೆ ಮನೆಗೆ ತೆರಳಿ ಸ್ವಚ್ಛ ಮತ್ತು ಸುಂದರ ನಗರಿ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಈ ತಂಡದಲ್ಲಿ ಇಂಜಿನಿಯರ್ ಗಳು, ವೈದ್ಯರು, ಹಲವು ಕಾರ್ಯಕ್ಷೇತ್ರಗಳಲ್ಲಿ ದುಡಿಯುತ್ತಿರುವವರು ಇದ್ದಾರೆ. ಇವರು ‘ಕನಸಿನ ರಾಣೆಬೆನ್ನೂರು’ ಎಂಬ ತಂಡ ಕಟ್ಟಿಕೊಂಡು ನಗರವನ್ನ ಸ್ವಚ್ಛ ಮತ್ತು ಸುಂದರ ನಗರಿ ಮಾಡಲು ಟೊಂಕ ಕಟ್ಟಿ ನಿಂತಿದ್ದಾರೆ. ಈ ಉತ್ಸಾಹಿಗಳು ಭಾನುವಾರ ಬಂತು ಅಂದರೆ ಬೀದಿಗೆ ಇಳಿದು, ಸ್ವಚ್ಛತಾ ಕಾರ್ಯವನ್ನು ಮಾಡುತ್ತಾರೆ.

    public hero 1

    ಸದಸ್ಯರಿಗಾಗಿ ಕನಸಿನ ರಾಣೆಬೆನ್ನೂರು ತಂಡ ವಾಟ್ಸಪ್ ಗ್ರೂಪ್ ರಚಿಸಿಕೊಂಡಿದೆ. ನಗರದ ಯಾವೆಲ್ಲಾ ಪ್ರದೇಶದಲ್ಲಿ ಸಮಸ್ಯೆ ಇದೆ ಎಂಬ ಬಗ್ಗೆ ಗ್ರೂಪ್‍ನಲ್ಲಿ ಚರ್ಚೆ ನಡೆಸುತ್ತಾರೆ. ಬಳಿಕ ಪ್ರತಿ ಭಾನುವಾರ ಎಲ್ಲರೂ ಸೇರಿಕೊಂಡು ಸಮಸ್ಯೆ ಇದ್ದ ಪ್ರದೇಶಕ್ಕೆ ಹೋಗಿ ಸ್ವಚ್ಛತಾ ಕಾರ್ಯ ಮಾಡುತ್ತಾರೆ. ಬೀದಿಬದಿಯ ಗೋಡೆಗಳನ್ನು ಕ್ಲೀನ್ ಮಾಡಿ, ಸ್ವಚ್ಛತೆಯ ಅರಿವು ಮೂಡಿಸುವ ಪೋಸ್ಟರ್ ಹಾಕುತ್ತಾರೆ.

    ಅಷ್ಟೇ ಅಲ್ಲ, ಎಲ್ಲೆಂದರಲ್ಲಿ ಕಸ ಹಾಕುವುದು, ಮರ ಕಡಿಯೋದು, ಅಡಿಕೆ ಎಲೆ ಅಗೆದು ಉಗಿಯೋದು, ಬೇಕಾಬಿಟ್ಟಿ ವಾಹನ ನಿಲ್ಲಿಸಿದ್ದು ಕಂಡರೆ ಇವರೆಲ್ಲಾ ಹೋಗಿ ಕರಪತ್ರ ಹಂಚಿ, ಅರಿವು ಮೂಡಿಸೋ ಕೆಲಸ ಮಾಡುತ್ತಾರೆ. ನಗರದ ಸ್ವಚ್ಛತೆ ಬಗ್ಗೆ ತಿಳಿ ಹೇಳುತ್ತಾರೆ.

    public hero 2

    ಕನಸಿನ ರಾಣೆಬೆನ್ನೂರು ತಂಡಕ್ಕೆ ನಗರಸಭೆಯೂ ಸಾಥ್ ಕೊಟ್ಟು ನಗರವನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತಿದೆ. ಈ ತಂಡದಲ್ಲಿ ಒಟ್ಟು 50 ಮಂದಿ ಸದಸ್ಯರಿದ್ದು, ಇವರ ಸೇವಾ ಕಾರ್ಯ ಇತರರಿಗೆ ಸ್ಫೂರ್ತಿಯಾಗಿದೆ. ಎಲ್ಲಾ ನಗರ ಹಳ್ಳಿಗಳಲ್ಲಿ ಇಂತಹ ತಂಡ ಹುಟ್ಟಿಕೊಂಡರೆ ಸ್ಚಚ್ಛ ಕರ್ನಾಟಕವನ್ನು ಮಾಡುವುದು ಕಷ್ಟದ ಕೆಲಸವಲ್ಲ. ಸ್ವರ್ಥವಿಲ್ಲದೆ ತಮ್ಮ ನಗರ ಸುಂದರವಾಗಿ, ಸ್ವಚ್ಛವಾಗಿರಲಿ ಎಂದು ಕನಸಿನ ರಾಣೇಬೆನ್ನೂರು ತಂಡ ಕೆಲಸ ಮಾಡುತ್ತಿರೋದು ಎಲ್ಲರ ಮನ ಗೆದ್ದಿದೆ.

  • ಜಿಮ್ಸ್ ವೈದ್ಯಕೀಯ ವಿದ್ಯಾರ್ಥಿಗಳಿಗೆ ಮಾರಕ ಡಿಫ್ತೀರಿಯಾ ಸೋಂಕು ತಗುಲಿರುವ ಶಂಕೆ

    ಜಿಮ್ಸ್ ವೈದ್ಯಕೀಯ ವಿದ್ಯಾರ್ಥಿಗಳಿಗೆ ಮಾರಕ ಡಿಫ್ತೀರಿಯಾ ಸೋಂಕು ತಗುಲಿರುವ ಶಂಕೆ

    ಕಲಬುರಗಿ: ಜಿಲ್ಲೆಯ ಜಿಮ್ಸ್ (ಗುಲಬರ್ಗಾ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್) ವೈದ್ಯಕೀಯ ಕಾಲೇಜಿನ 21 ವಿದ್ಯಾರ್ಥಿನಿಯರಿಗೆ ಮಾರಕ ಡಿಫ್ತೀರಿಯಾ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ.

    ಜಿಮ್ಸ್ ವೈದ್ಯಕೀಯ ಕಾಲೇಜಿನ ಮಹಿಳಾ ವಸತಿ ನಿಲಯದಲ್ಲಿ ವಾಸವಿದ್ದ 21 ವಿದ್ಯಾರ್ಥಿನಿಯರಿಗೆ ಡಿಫ್ತಿರೀಯಾ ಸೋಂಕು ತಗುಲಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಜ್ವರ, ಗಂಟಲು ನೋವಿನಿಂದ ವಿದ್ಯಾರ್ಥಿನಿಯರು ಬಳಲುತ್ತಿದ್ದ ಕಾರಣಕ್ಕೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಈ ಬಗ್ಗೆ ತಿಳಿದಿದೆ. ಹೀಗಾಗಿ ಡಿಫ್ತೀರಿಯಾ ಸೋಂಕು ಶಂಕೆ ಹಿನ್ನೆಲೆ ಲೇಡಿಸ್ ಹಾಸ್ಟೆಲಿನಲ್ಲಿದ್ದ 110 ವಿದ್ಯಾರ್ಥಿನಿಯರು ಹಾಗೂ 30 ಸಿಬ್ಬಂದಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು. ಇದರಲ್ಲಿ ಒಟ್ಟು 21 ವಿದ್ಯಾರ್ಥಿನಿಯರಿಗೆ ಡಿಫ್ತೀರಿಯಾ ಸೋಂಕು ತಗುಲಿರುವ ಲಕ್ಷಣಗಳು ಕಂಡುಬಂದಿದ್ದು, ಅವರನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    glb people

    ಡಿಫ್ತೀರಿಯಾ ಸೋಂಕು ಶಂಕೆ ಇರುವ ವಿದ್ಯಾರ್ಥಿಗಳ ವೈದ್ಯಕೀಯ ಪರೀಕ್ಷಾ ವರದಿ ಬೆಂಗಳೂರಿನ ಬಿಎಂಸಿಆರ್‍ಐ ಲ್ಯಾಬೋರೇಟರಿಗೆ ರವಾನೆ ಮಾಡಲಾಗಿದೆ. ಕಲಬುರಗಿಯಲ್ಲಿ ಮಾರಕ ಡಿಫ್ತೀರಿಯಾ ಸೋಂಕು ಶಂಕೆ ಹಿನ್ನೆಲೆ ಜ್ವರ, ಶ್ವಾಸನಾಳ, ಗಂಟಲು ನೋವು ಇದ್ದರೆ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಿ, ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರಲ್ಲಿ ಜಿಮ್ಸ್ ನಿರ್ದೇಶಕರು ಮನವಿ ಮಾಡಿಕೊಂಡಿದ್ದಾರೆ.

  • ತುಂಗಭದ್ರಾ ನದಿ ಮೈದುಂಬಿ ಹರಿದರೂ ಕಾಲುವೆಗೆ ನೀರಿಲ್ಲ

    ತುಂಗಭದ್ರಾ ನದಿ ಮೈದುಂಬಿ ಹರಿದರೂ ಕಾಲುವೆಗೆ ನೀರಿಲ್ಲ

    ರಾಯಚೂರು: ಜಿಲ್ಲೆಯಲ್ಲಿ ಪ್ರವಾಹ ಸೃಷ್ಟಿಸಿದ ನದಿಗಳಲ್ಲಿ ತುಂಗಭದ್ರಾ ನದಿ ಕೂಡ ಒಂದು. ಆದರೆ ನದಿ ಮೈತುಂಬಿ ಹರಿಯುತ್ತಿದ್ದರೂ ಕಾಲುವೆಗೆ ಮಾತ್ರ ನೀರಿಲ್ಲ. ಜಲಾಶಯದಿಂದ ಟಿಎಲ್‍ಬಿಸಿ ಕೆಳಭಾಗದ ಕಾಲುವೆಗೆ ಸಮರ್ಪಕ ನೀರು ದೊರೆಯುತ್ತಿಲ್ಲ.

    ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ನೀರಿಲ್ಲದೆ ಭತ್ತದ ಬೆಳೆ ಒಣಗುತ್ತಿದೆ. ತಾಲೂಕಿನ ಮೇಲ್ಭಾಗದಲ್ಲಿ ನಾಲೆಯಿಂದ ಅಕ್ರಮವಾಗಿ ನದಿ ನೀರು ಬಳಕೆ ಮಾಡುತ್ತಿದ್ದ ಹಿನ್ನೆಲೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಟಿಎಲ್‍ಬಿಸಿ ಕಾಲುವೆಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವೇದಮೂರ್ತಿ ಅವರು ಉಪಕಾಲುವೆ ಹಾಗೂ ಕೆಳಭಾಗದ ನಾಲೆಗೆ ಹರಿಯುವ ನೀರಿನ ಗೇಜ್ ಪರಿಶೀಲನೆ ಮಾಡಿ, ಕೆಳಭಾಗದ ನಾಲೆಗೆ ನೀರು ಹರಿಸಿದ್ದರು.

    rcr no water 1

    ಆದರೆ ಹೆಚ್ಚು ನೀರು ಹರಿಯುತ್ತಿದ್ದ ಕಾರಣಕ್ಕೆ 37 ಮತ್ತು 38ನೇ ಡಿಸ್ಟ್ರಿಬ್ಯೂಟರ್ ನೀರಿನ ಪ್ರಮಾಣ ಇಳಿಕೆ ಮಾಡಲಾಗಿದೆ. ಇದರಿಂದ ಕಾಲುವೆಯಲ್ಲಿ ನೀರು ಇಲ್ಲದಂತಾಗಿದೆ. ಮೊದಲೇ ಪ್ರವಾಹದಿಂದ ಸಾಕಷ್ಟು ನಷ್ಟ ಅನುಭವಿಸುತ್ತಿರುವ ರೈತರಿಗೆ ನೆಮ್ಮದಿಯೇ ಇಲ್ಲದಂತಾಗಿದೆ. ಪ್ರವಾಹ ಬಂದಾಗ ನೀರಿನಲ್ಲಿ ಬೆಳೆ ಕೊಳೆತು ನಷ್ಟವಾಗಿದೆ ಎಂದು ಕಣ್ಣೀರಿಡುತ್ತಿದ್ದ ರೈತರು, ಈಗ ಬೆಳೆಗೆ ಪೂರಕ ನೀರು ಸಿಗುತ್ತಿಲ್ಲ ಎಂದು ಕಂಗಾಲಾಗಿ ಕೂತಿದ್ದಾರೆ.

    ಆದ್ದರಿಂದ ಒಣಗಿರುವ ಕಾಲುವೆಗೆ ಅಧಿಕಾರಿಗಳು ನದಿ ನೀರು ಹರಿಸಿದರೆ ಬೆಳೆಗೆ ಅನುಕೂಲವಾಗುತ್ತದೆ. ದಯಮಾಡಿ ಕಾಲುವೆಗೆ ನೀರು ಹರಿಸಿ ಬೆಳೆಯನ್ನು ಉಳಿಸಿ ಎಂದು ರೈತರು ಮನವಿ ಮಾಡಿದ್ದಾರೆ.

  • ಬಿಎಸ್‍ವೈ ಮೇಲೆ ಮುನಿಸಿಕೊಂಡ ರಮೇಶ್ ಜಾರಕಿಹೊಳಿ

    ಬಿಎಸ್‍ವೈ ಮೇಲೆ ಮುನಿಸಿಕೊಂಡ ರಮೇಶ್ ಜಾರಕಿಹೊಳಿ

    ಬೆಂಗಳೂರು: ಬೆಳಗಾವಿ ಸಾಹುಕಾರ, ಗೋಕಾಕ್ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಸಿಎಂ ಬಿಎಸ್ ಯಡಿಯೂರಪ್ಪ ಮೇಲೆ ಮುನಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ಒಂದು ವಾರದಿಂದಲೂ ಸಿಎಂ ಮೇಲೆ ರಮೇಶ್ ಜಾರಕಿಹೊಳಿ ಮುನಿಸಿಕೊಂಡಿದ್ದು, ಲಕ್ಷ್ಮಣ ಸವದಿ ನಂತರದ ಸ್ಥಾನ ನನಗೆ ಬೇಡ ಎಂದು ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗುತ್ತಿದೆ.

    CM BSY

    ಸ್ಪೀಕರ್ ಆದೇಶ ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಸುಪ್ರೀಂಕೋರ್ಟ್ ಅರ್ಜಿಯ ವಿಚಾರಣೆ ವಿಳಂಬವಾಗುತ್ತಿದೆ. ಇತ್ತ ರಾಜ್ಯ ಬಿಜೆಪಿ ಮೂವರು ಡಿಸಿಎಂಗಳನ್ನು ನೇಮಕ ಮಾಡಿದೆ. ಮೂವರು ನಾಯಕರನ್ನು ಡಿಸಿಎಂ ಮಾಡಿದ ಮೇಲೆ ನನ್ನನ್ನು ಉಪ ಮುಖ್ಯಮಂತ್ರಿ ಮಾಡುತ್ತಾರೆ ಎಂಬುದರ ಗ್ಯಾರೆಂಟಿ ಇದೆಯಾ ಎಂದು ರಮೇಶ್ ಜಾರಕಿಹೊಳಿ ಚಿಂತಿತರಾಗಿದ್ದಾರಂತೆ. ನಮ್ಮ ಸಹಕಾರದಿಂದಲೇ ಸರ್ಕಾರ ರಚನೆಯಾಗಿದ್ದರೂ ನಮಗೆ ಬೆಲೆ ಇಲ್ಲದಿದ್ದರೆ ಹೇಗೆ ಎಂದು ರಮೇಶ್ ಜಾರಕಿಹೊಳಿ ಮುನಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ವಿಧಾನಸಭೆ ಚುನಾವಣೆಯಲ್ಲಿ ಸೋತ ಲಕ್ಷ್ಮಣ ಸವದಿ ಸಂಪುಟ ಸೇರ್ಪಡೆಯಾಗಿದ್ದಾರೆ. ಮೂರನೇ ಡಿಸಿಎಂ ಆಗಿಯೂ ನೇಮಕಗೊಂಡಿದ್ದಾರೆ. ಲಕ್ಷ್ಮಣ ಸವದಿ ಮೂರನೇ ಡಿಸಿಎಂ ಆದ್ರೆ ನಾನು ನಾಲ್ಕನೇ ಡಿಸಿಎಂ ಅನಿಸಿಕೊಳ್ತೀನಿ. ಹಾಗಾಗಿ ಸವದಿ ನಂತರದ ಸ್ಥಾನ ನನಗೆ ಬೇಡ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

  • 550 ಕಿ.ಮೀ ಸೈಕಲ್ ತುಳಿದು ಕಿಚ್ಚನ ಹುಟ್ಟುಹಬ್ಬಕ್ಕೆ ಬಂದ ಅಭಿಮಾನಿ

    550 ಕಿ.ಮೀ ಸೈಕಲ್ ತುಳಿದು ಕಿಚ್ಚನ ಹುಟ್ಟುಹಬ್ಬಕ್ಕೆ ಬಂದ ಅಭಿಮಾನಿ

    ತುಮಕೂರು: ಕಿಚ್ಚ ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಯೋರ್ವ ಶುಭಾಶಯ ಕೋರಲು ಸೈಕಲ್ ಯಾತ್ರೆ ಮೂಲಕ ಬೆಂಗಳೂರು ಹೊರವಲಯದ ನೆಲಮಂಗಲ ತಲುಪಿದ್ದಾರೆ.

    ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಯಲ್ಲಪ್ಪ ಎಂಬ ಅಭಿಮಾನಿ ಸೈಕಲ್ ಯಾತ್ರೆ ಬಂದಿದ್ದಾರೆ. ಕಳೆದ 8 ದಿನದಿಂದ ಸೈಕಲ್‍ನಲ್ಲಿಯೇ ಬೆಂಗಳೂರಿಗೆ ಬಂದಿದ್ದಾರೆ. ಈ ನಡುವೆ ತುಮಕೂರಿಗೆ ಬಂದಿದ್ದ ಅವರನ್ನು ಕಿಚ್ಚ ಸುದೀಪ್ ಅಭಿಮಾನಿಗಳು ಯಲ್ಲಪ್ಪರಿಗೆ ಹಣ್ಣು-ಹಂಪಲು, ಆಹಾರ ಪದಾರ್ಥ ನೀಡಿ ಅಭಿನಂದಿಸಿದ್ದಾರೆ.

    ಶನಿವಾರ ಸಂಜೆ ನೆಲಮಂಗಲಕ್ಕೆ ಬಂದ ಯಲ್ಲಪ್ಪರನ್ನು ಅಲ್ಲಿನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸೇನಾ ಸಮಿತಿ ಅವರು ಅತ್ಮೀಯವಾಗಿ ಬರಮಾಡಿಕೊಂಡು ರಾತ್ರಿ ಉಳಿಯಲು ವ್ಯವಸ್ಥೆ ಮಾಡಿದ್ದರು. ಈ ವಿಚಾರವನ್ನು ನೆಲಮಂಗಲದ ಅಭಿಮಾನಿಗಳು ಟ್ವಿಟ್ಟರ್‍ ಗೆ ಹಾಕಿದ್ದು ಇದನ್ನು ಕಂಡ ಕಿಚ್ಚ ಕೂಡ ರೀಟ್ವೀಟ್ ಮಾಡುವ ಮೂಲಕ ಅಭಿನಂದನೆ ತಿಳಿಸಿದ್ದರು.

    ನಾಳೆ ಅಂದರೆ ಸೆಪ್ಟೆಂಬರ್ 02 ರಂದು ನಡೆಯಲಿರುವ ಕಿಚ್ಚ ಸುದೀಪ್ ಬರ್ತ್ ಡೇ ಸಂಭ್ರಮದಲ್ಲಿ ಯಲ್ಲಪ್ಪ ಪಾಲ್ಗೊಳ್ಳಲಿದ್ದಾರೆ. ಸುಮಾರು 550 ಕಿ.ಮೀ ದೂರ ಸೈಕಲ್ ಮೂಲಕ ಪ್ರಯಾಣಿಸಿ ಬೆಂಗಳೂರಿಗೆ ಬಂದಿರುವ ಯಲ್ಲಪ್ಪ ಅಭಿಮಾನ ಮೆರೆದಿದ್ದಾರೆ.

  • ಶಿಷ್ಯನ ವಿರುದ್ಧ ಸಿದ್ದರಾಮಯ್ಯ ರಣಕಹಳೆ- ಹೊಸಕೋಟೆಯಲ್ಲಿ ಹೊಸ ಅಭ್ಯರ್ಥಿಯನ್ನು ಹುಡುಕಿದ ಮಾಜಿ ಸಿಎಂ

    ಶಿಷ್ಯನ ವಿರುದ್ಧ ಸಿದ್ದರಾಮಯ್ಯ ರಣಕಹಳೆ- ಹೊಸಕೋಟೆಯಲ್ಲಿ ಹೊಸ ಅಭ್ಯರ್ಥಿಯನ್ನು ಹುಡುಕಿದ ಮಾಜಿ ಸಿಎಂ

    -ಉಪಚುನಾವಣೆ ಮುನ್ನವೇ ಹೊಸಕೋಟೆಯಲ್ಲಿ ಕ್ಯಾಂಪೇನ್

    ಬೆಂಗಳೂರು: ಒಂದು ಕಾಲದ ಆಪ್ತ ಅನರ್ಹ ಶಾಸಕ ಎಂಟಿಬಿ ನಾಗರಾಜ್ ವಿರುದ್ಧವೇ ಮಾಜಿ ಸಿಎಂ ಸಿದ್ದರಾಮಯ್ಯ ರಣಕಹಳೆಯನ್ನು ಮೊಳಗಿಸಿದ್ದಾರೆ. ಉಪಚುನಾವಣೆ ಘೋಷಣೆಗೂ ಮುನ್ನವೇ ಹೊಸಕೋಟೆಯ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ವೇಗ ಪಡೆದುಕೊಂಡಿವೆ.

    ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹಗೊಂಡಿರುವ ಎಂಟಿಬಿ ನಾಗರಾಜ್ ಉಪಚುನಾವಣೆಗೆ ಅಖಾಡವನ್ನು ಸಿದ್ಧಗೊಳಿಸಿಕೊಳ್ಳುತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ಎಂಟಿಬಿ ನಾಗರಾಜ್ ನೇರವಾಗಿ ಸಿದ್ದರಾಮಯ್ಯರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಶಿಷ್ಯ ಎಂಟಿಬಿ ವಿರುದ್ಧ ಸಿಡಿದೆದ್ದಿರುವ ಸಿದ್ದರಾಮಯ್ಯ ಹೇಗಾದ್ರೂ ಮಾಡಿ ಹೊಸಕೋಟೆಯನ್ನು ಕಾಂಗ್ರೆಸ್ ವಶ ಮಾಡಿಕೊಳ್ಳಲು ಹೊಸ ಅಭ್ಯರ್ಥಿಯನ್ನೆ ಹುಡುಕಿದ್ದಾರೆ ಎನ್ನಲಾಗುತ್ತಿದೆ.

    MTB Nagaraj

    ಯಾರು ‘ಕೈ’ ಅಭ್ಯರ್ಥಿ?
    ಅನರ್ಹ ಶಾಸಕರ ಅರ್ಜಿ ಪ್ರಕರಣ ನ್ಯಾಯಾಲಯದಲ್ಲಿ ಇರೋದರಿಂದ ಒಂದು ವೇಳೆ ಅವಕಾಶ ಸಿಗದಿದ್ದರೆ ಪುತ್ರನನ್ನ ಕಣಕ್ಕಿಳಿಸಲು ಎಂಟಿಬಿ ನಾಗರಾಜ್ ಪ್ಲಾನ್ ಮಾಡಿಕೊಂಡಿದ್ದಾರೆ. ಇತ್ತ ಕಾಂಗ್ರೆಸ್‍ನಿಂದ ಬಿಜೆಪಿ ಸಂಸದ ಬಚ್ಚೇಗೌಡರ ಪುತ್ರ ಶರತ್ ಬಚ್ಚೇಗೌಡರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತಂದು ಕಣಕ್ಕಿಳಿಸುವ ಕುರಿತು ಚಿಂತಿಸಲಾಗಿದೆ. ಒಂದು ವೇಳೆ ಬಚ್ಚೇಗೌಡರರು ಒಪ್ಪದಿದ್ದಲ್ಲಿ ತಮ್ಮ ಆಪ್ತ ಶಿಷ್ಯ ಬೈರತಿ ಸುರೇಶ್ ಅವರ ಪತ್ನಿ ಪದ್ಮಾವತಿ ಹೊಸಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗೋದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

    ಈಗಾಗಲೇ ಸಿದ್ದರಾಮಯ್ಯನವರು ಬೈರತಿ ಸುರೇಶ್ ಜೊತೆ ಈ ಕುರಿತು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಪತ್ನಿಗೆ ಟಿಕೆಟ್ ಬಹುತೇಕ ಖಚಿತವಾಗುತ್ತಿದ್ದಂತೆ ಬೈರತಿ ಸುರೇಶ್ ಹೊಸಕೋಟೆಯಲ್ಲಿ ಪಕ್ಷದ ಸಂಘಟನೆಗೆ ಮುಂದಾಗಿ, ಸ್ಥಳೀಯಮಟ್ಟದಲ್ಲಿ ಸಭೆಗಳನ್ನು ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ.

    sd mtb

    ಬಹಿರಂಗವಾಗಿಯೇ ಸಿದ್ದರಾಮಯ್ಯರ ವಿರುದ್ಧ ತೊಡೆ ತೊಟ್ಟಿರುವ ಎಂಟಿಬಿ ನಾಗರಾಜವರನ್ನು ಸೋಲಿಸಲು ಮಾಜಿ ಸಿಎಂ ಶಪಥ ಮಾಡಿದ್ದಾರಂತೆ. ಇತ್ತ ಕಾಂಗ್ರೆಸ್ ಟ್ರಬಲ್ ಶೂಟರ್, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸಹ ಎಂಟಿಬಿ ವಿರುದ್ಧ ಗುಡುಗಿದ್ದಾರೆ. ಹಾಗಾಗಿ ಎಂಟಿಬಿ ನಾಗರಾಜ್ ವಿರುದ್ಧ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಜೊತೆಯಾಗುವ ಸಾಧ್ಯತೆಗಳಿವೆ.

  • ಜಮೀನಿನಲ್ಲಿ ಪ್ರತ್ಯಕ್ಷವಾಯ್ತು 12 ಅಡಿ ಉದ್ದದ ಹೆಬ್ಬಾವು

    ಜಮೀನಿನಲ್ಲಿ ಪ್ರತ್ಯಕ್ಷವಾಯ್ತು 12 ಅಡಿ ಉದ್ದದ ಹೆಬ್ಬಾವು

    ಚಾಮರಾಜನಗರ: ಆಹಾರ ಅರಸಿ ಜಮೀನಿಗೆ ಬಂದಿದ್ದ ಸುಮಾರು 12 ಅಡಿ ಉದ್ದದ ಬೃಹತ್ ಹೆಬ್ಬಾವುವನ್ನು ಯಶಸ್ವಿಯಾಗಿ ಸೆರೆಹಿಡಿಯಲಾಗಿದೆ.

    ಜಿಲ್ಲೆಯ ಯಳಂದೂರು ತಾಲೂಕಿನ ಬಿಆರ್‌ಟಿ ಅರಣ್ಯ ಸಮೀಪದ ದಾಸನಹುಂಡಿ ಗ್ರಾಮದಲ್ಲಿ ಹೆಬ್ಬಾವು ಕಾಣಿಸಿಕೊಂಡಿತ್ತು. ದಾಸನಹುಂಡಿ ಗ್ರಾಮದ ವೆಂಕಟರಂಗ ಶೆಟ್ಟಿ ಅವರ ಜಮೀನಿನಲ್ಲಿ ಬೃಹತ್ ಗ್ರಾತದ ಹೆಬ್ಬಾವು ಕಂಡುಬಂದಿತ್ತು. ಹಾವನ್ನು ನೋಡಿದ ತಕ್ಷಣ ಮಾಲೀಕರು ಉರಗ ತಜ್ಞ ಸ್ನೇಕ್ ಮಹೇಶ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

    CNG HEBBAVU 1

    ಸ್ಥಳಕ್ಕೆ ಆಗಮಿಸಿದ ಸ್ನೇಕ್ ಮಹೇಶ್ ಅವರು ಬರೋಬ್ಬರಿ 12 ಅಡಿ ಉದ್ದದ 60 ರಿಂದ 70 ಕೆಜಿ ತೂಕವುಳ್ಳ ಹೆಬ್ಬಾವನ್ನು ಸೆರೆಹಿಡಿದಿದ್ದಾರೆ. ಇವರೊಂಗಿದೆ ಗ್ರಾಮಸ್ಥರು ಕೂಡ ಹಾವನ್ನು ಸೆರೆಹಿಡಿಯಲು ಸಹಾಯ ಮಾಡಿದ್ದಾರೆ. ಸದ್ಯ ಸೆರೆಹಿಡಿದಿರುವ ಹೆಬ್ಬಾವನ್ನು ಸ್ನೇಕ್ ಮಹೇಶ್ ಅವರು ಅರಣ್ಯ ಇಲಾಖೆ ಅನುಮತಿ ಪಡೆದು, ಬಿಳಿಗಿರಿರಂಗನ ಬೆಟ್ಟದ ಕಾಡಿನೊಳಗೆ ಸುರಕ್ಷಿತವಾಗಿ ಬಿಟ್ಟು ಬಂದಿದ್ದಾರೆ.

  • ಒಂದೇ ಜೀಪ್ ಎರಡು ಕಡೆ ಡಿಕ್ಕಿ- ಇಬ್ಬರು ಬೈಕ್ ಸವಾರರ ಸಾವು

    ಒಂದೇ ಜೀಪ್ ಎರಡು ಕಡೆ ಡಿಕ್ಕಿ- ಇಬ್ಬರು ಬೈಕ್ ಸವಾರರ ಸಾವು

    ದಾವಣಗೆರೆ: ಒಂದೇ ಜೀಪ್ ಪ್ರತ್ಯೇಕ ಎರಡು ಅಪಘಾತದಲ್ಲಿ ಇಬ್ಬರು ಬೈಕ್ ಸವಾರರನ್ನು ಬಲಿ ಪಡೆದ ಘಟನೆ ದಾವಣಗೆರೆಯ ಚನ್ನಗಿರಿಯಲ್ಲಿ ನಡೆದಿದೆ.

    ಮೊದಲನೇ ಅಪಘಾತದಲ್ಲಿ ಸಂತೋಷ್( 30) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಂತರ ಎರಡನೇ ಅಪಘಾತದಲ್ಲಿ ಶಿವಮೊಗ್ಗ ಮೂಲಕ ಜ್ಞಾನೇಶ್ವರ (23) ಮೃತಪಟ್ಟಿದ್ದಾರೆ. ಜ್ಞಾನೇಶ್ವರ ಜೊತೆ ಇದ್ದ ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದು, ಚನ್ನಗಿರಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    DVG ACCIDENT AV 4

    ಮೊದಲು ಜಿಲ್ಲೆಯ ಚನ್ನಗಿರಿ ತಾಲೂಕಿನ ಬೆಂಕಿಕೆರೆ ಬಳಿ ರಭಸದಿಂದ ಬಂದ ಬುಲೇರೋ ಜೀಪ್ ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತ ಪಟ್ಟಿದ್ದಾನೆ. ಈ ಅಪಘಾತ ಮಾಡಿ ಗಾಬರಿಗೊಂಡ ಜೀಪ್ ಚಾಲಕ ವಾಹನ ನಿಲ್ಲಿಸದೇ ವೇಗವಾಗಿ ಮುಂದೆ ಹೋಗಿ ಚನ್ನಗಿರಿಯ ನವಚೇತನ ಶಾಲೆಯ ಮುಂಭಾಗ ಇನ್ನೊಂದು ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ಇಬ್ಬರನ್ನು ಬಲಿ ಪಡೆದಿದ್ದಾನೆ.

    ಈ ಸಂಬಂಧ ಚನ್ನಗಿರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಜೀಪ್ ಚಾಲಕನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.