ಬೆಂಗಳೂರು: ಮುಂಗಾರು ಋತುವಿನ ಮೊದಲ ತಿಂಗಳು ಮಳೆರಾಯ ಮುನಿಸಿಕೊಂಡಿದ್ದು ದೇಶಾದ್ಯಂತ ಶೇ.33ರಷ್ಟು ಮಳೆ ಕೊರತೆ ಉಂಟಾಗಿದೆ.
ಕಳೆದ 100 ವರ್ಷಗಳಲ್ಲಿ ಇದು 5ನೇ ಅತ್ಯಂತ ಮಳೆ ಕೊರತೆಯ ಋತುಮಾನವಾಗಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ ಈ ಜೂನ್‍ನಲ್ಲಿ 121.1 ಮಿಲಿ ಮೀಟರ್ ಮಳೆ ಆಗಿದ್ದರೂ, ಕಳೆದ ವರ್ಷದ ಜೂನ್‍ನಲ್ಲಿ 166.9 ಮಿಲಿ ಮೀಟರ್ ಮಳೆ ಆಗಿತ್ತು. ಹವಾಮಾನ ಇಲಾಖೆಯ ನಿರೀಕ್ಷೆಗಿಂತಲೂ ಈ ಬಾರಿ ಮಳೆ ಕಡಿಮೆಯಾಗಿದೆ.
ಹವಾಮಾನ ತಜ್ಞರು ಜುಲೈ ಮೊದಲಾರ್ಧದಲ್ಲಿ ಉತ್ತಮ ಮಳೆ ಆಗಲಿದೆ ಎಂದು ತಿಳಿಸಿದ್ದಾರೆ. ಕಾವೇರಿಯ ಉಗಮ ಸ್ಥಾನ ತಲಕಾವೇರಿ ಇರುವ ಕೊಡಗು ಜಿಲ್ಲೆಯಲ್ಲಿ ಜೂನ್ 1ರಿಂದ 256 ಮಿಲಿ ಮೀಟರ್ ಮಳೆ ಆಗಿದ್ದು, ಮೊದಲ ತಿಂಗಳಲ್ಲಿ ಶೇ.56ರಷ್ಟು ಮಳೆ ಕೊರತೆ ಉಂಟಾಗಿದೆ. ಉತ್ತರ ಒಳನಾಡಲ್ಲಿ ಮಾತ್ರ ಸಾಧಾರಣ ಮಳೆ ಆಗಿದ್ದು, ದಕ್ಷಿಣ ಒಳನಾಡು ಮತ್ತು ಕರ್ನಾಟಕದ ಕರಾವಳಿ ಜಿಲ್ಲೆಯಲ್ಲೂ ಜೂನ್‍ನಲ್ಲಿ ಮಳೆ ಕಡಿಮೆಯಾಗಿದೆ.
ಯಾವ ವರ್ಷದಲ್ಲಿ ಎಷ್ಟು ಪ್ರಮಾಣ ಮಳೆ ಕಡಿಮೆ?
1823ರಲ್ಲಿ 102 ಮಿ.ಮೀ
1926ರಲ್ಲಿ 98.7 ಮಿ.ಮೀ
2009ರಲ್ಲಿ 85.7 ಮಿ.ಮೀ
2014ರಲ್ಲಿ 95.4 ಮಿ.ಮೀ
ಅನಾವೃಷ್ಟಿ ಹಿನ್ನೆಲೆಯಲ್ಲಿ ಕರ್ನಾಟಕದ ಜಲಾಶಯಗಳಲ್ಲಿ ನೀರಿನ ಸಂಗ್ರಹದ ಕೊರತೆ ಶೇ.32ರಷ್ಟಿದೆ. ನೀರಿಗಾಗಿ ಪರದಾಡ್ತಿರೋ ಚೆನ್ನೈಗೆ ಸದ್ಯಕ್ಕೆ ಮಳೆ ಭಾಗ್ಯ ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.