ರಾಹುಲ್ ಗಾಂಧಿಗೆ ಸೋಲಿನ ಭಯ? – ಅಮೇಥಿ ಜೊತೆ ಕರ್ನಾಟಕದಿಂದ ಸ್ಪರ್ಧೆಗೆ ಒಲವು

Public TV
3 Min Read
RaGaFromKarnataka

ಬೆಂಗಳೂರು: ಲೋಕಸಭಾ ಚುನಾವಣೆ ಸಮರಕ್ಕೆ ದಿನ ಗಣನೆ ಆರಂಭವಾಗುತ್ತಿದಂತೆ ರಾಜಕೀಯ ಪಕ್ಷಗಳ ಘಟಾನುಘಟಿ ನಾಯಕ ಸೋಲು ಗೆಲುವಿನ ಲೆಕ್ಕಾಚಾರ ಆರಂಭವಾಗಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಸೋಲಿನ ಭಯ ಕಾಡುತ್ತಿದ್ಯಾ ಎನ್ನುವ ಪ್ರಶ್ನೆ ಎದ್ದಿದೆ.

ಹೌದು, ರಾಹುಲ್ ಗಾಂಧಿ ಈ ಬಾರಿ ಎರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡಲಿದ್ದಾರೆ ಎನ್ನುವ ಸುದ್ದಿ ರಾಜಕೀಯ ವಲಯದಿಂದ ಕೇಳಿ ಬರುತ್ತಿದೆ. ಈ ಸುದ್ದಿಗೆ ಪೂರಕ ಎಂಬಂತೆ ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಚಾಮರಾಜನಗರದಲ್ಲಿ ನಡೆದ ಸಮಾವೇಶದಲ್ಲಿ ರಾಹುಲ್ ಗಾಂಧಿ ರಾಜ್ಯದಿಂದ ಸ್ಪರ್ಧಿಸಬೇಕು ಎಂದು ಹೇಳಿಕೆ ನೀಡಿದ್ದರಿಂದ ಈ ಪ್ರಶ್ನೆ ಸೃಷ್ಟಿಯಾಗಿದೆ.

rahul gandhi 3

ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಿಂದ 2004ರಿಂದ ರಾಹುಲ್ ಗಾಂಧಿ ಅವರು ಸತತ ಮೂರು ಬಾರಿ ಆಯ್ಕೆ ಆಗಿದ್ದಾರೆ. ಆದರೆ ಈ ಬಾರಿ ವಿರೋಧಿ ಅಲೆ ಜಾಸ್ತಿ ಆಗಿದ್ದು ಈ ಬಾರಿ ಇಲ್ಲಿ ಕಠಿಣ ಸ್ಪರ್ಧೆ ನಡೆಯಲಿದೆ ಎಂದು ಈ ಹಿಂದೆಯೇ ಇಲ್ಲಿ ಸಮೀಕ್ಷೆ ನಡೆಸಿದ್ದ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿತ್ತು. ಹೀಗಾಗಿ ಈ ಬಾರಿ ರಾಹುಲ್ ಗಾಂಧಿ ಎರಡು ಕ್ಷೇತ್ರಗಳಲ್ಲಿ ಕಣಕ್ಕೆ ಇಳಿಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಒಂದು ಅಮೇಥಿಯಾದರೆ ಇನ್ನೊಂದು ಯಾವ ಕ್ಷೇತ್ರ ಎನ್ನುವ ಪ್ರಶ್ನೆಗೆ ಪೂರಕ ಎಂಬಂತೆ ಕೈ ನಾಯಕರು ಕರ್ನಾಟಕದಿಂದಲೇ ಸ್ಪರ್ಧಿಸಿ ಎಂದು ಆಹ್ವಾನ ಕೊಟ್ಟಿದ್ದು ಈಗ ಹಲವು ಅನುಮಾನಗಳನ್ನು ಹುಟ್ಟಿಹಾಕಿದೆ. ಈ ಮೂಲಕ ರಾಹುಲ್ ಗಾಂಧಿ ಅವರಿಗೆ ಅಮೇಥಿ ಸೇಫ್ ಅಲ್ವಾ ಎಂಬ ಅನುಮಾನ ಮೂಡುವಂತೆ ಮಾಡಿದೆ.

ಈಗಾಗಲೇ ರಾಹುಲ್ ಗಾಂಧಿ ಅವರು ಅಮೇಥಿಯಿಂದ ಸ್ಪರ್ಧೆ ಮಾಡುವುದು ಖಚಿತವಾಗಿದ್ದು, ಕಳೆದ ಬಾರಿ ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಮೃತಿ ಇರಾನಿ ಅವರು ಭಾರೀ ಪೈಪೋಟಿ ನೀಡಿದ್ದರು. ಆದರೂ ರಾಹುಲ್ ಗೆದ್ದು ಬೀಗಿದ್ದರು. ಈ ಬಾರಿಯೂ ಬಿಜೆಪಿ ಅಂತಹದ್ದೇ ಪೈಪೋಟಿ ನೀಡುವ ವಿಶ್ವಾಸದಲ್ಲಿದೆ.

smriti irani

ಅಂತರ ಎಷ್ಟಿತ್ತು?
2014ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ 4,08,651 ಮತಗಳನ್ನು ಪಡೆದಿದ್ದರೆ, ಸ್ಮೃತಿ ಇರಾನಿ ಅವರು 3,00,748 ಮತಗಳನ್ನು ಪಡೆದಿದ್ದರು. ಆ ಮೂಲಕ ರಾಹುಲ್ 1,07,903 ಮತಗಳ ಅಂತರದಿಂದ ಜಯ ಪಡೆದಿದ್ದರು. 2009 ರ ಚುನಾವಣೆಯಲ್ಲಿ ರಾಹುಲ್ ಗಾಂಧಿ 4,64,195 ಮತಗಳನ್ನು ಪಡೆದಿದ್ದರೆ ಬಿಎಸ್‍ಪಿಯ ಆಶಿಶ್ ಶುಕ್ಲಾ 93,997 ಮತಗಳನ್ನು ಪಡೆದಿದ್ದರು. ಈ ಮೂಲಕ ರಾಹುಲ್ 3,70,198 ಮತಗಳ ಅಂತರದಿಂದ ಪ್ರಚಂಡವಾಗಿ ಜಯಸಿದ್ದರು. ಈ ಚುನಾವಣೆಯಲ್ಲಿ ಬಿಜೆಪಿಗೆ ಕೇವಲ 37,570 ಮತಗಳು ಬಿದ್ದಿತ್ತು. ಆದರೆ ಮೊದಲ ಬಾರಿಗೆ ಸ್ಪರ್ಧಿಸಿದ್ದ ಸ್ಮೃತಿ ಇರಾನಿ 3 ಲಕ್ಷಕ್ಕೂ ಅಧಿಕ ಮತಗಳನ್ನು ಪಡೆಯುವ ಮೂಲಕ ರಾಜಕೀಯ ಪಂಡಿತರ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿ ಅಚ್ಚರಿ ಮೂಡಿಸಿದ್ದರು.

modi at kanyakumari

ಈ ಬಾರಿ ಕಷ್ಟ ಯಾಕೆ?
ಅಮೇಥಿ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಅವರನ್ನು ಸೋಲಿಸಲು ಪಣತೊಟ್ಟಿರುವ ಸ್ಮೃತಿ ಇರಾನಿ ಅವರು ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಅಲ್ಲದೇ ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಅಮೇಥಿಯ ಎಕೆ 203 ರೈಫಲ್ ತಯಾರಿಕಾ ಕಾರ್ಖಾನೆಗೆ ಶಂಕು ಸ್ಥಾಪನೆಯನ್ನು ಪ್ರಧಾನಿ ಮೋದಿ ಅವರು ನೆರವೇರಿಸಿದ್ದರು. ಈ ವೇಳೆ ಉಗ್ರ ಧಮನಕ್ಕೆ ಮೇಡ್ ಇನ್ ಅಮೇಥಿ ರೈಫಲ್ ಯೋಧರಿಗೆ ಬಲ ನೀಡಲಿದೆ. ಇಷ್ಟು ದಿನ ಒಂದು ಕುಟುಂಬದಿಂದ ಗುರುತಿಸಿಕೊಳ್ಳುತ್ತಿದ್ದ ಈ ಕ್ಷೇತ್ರ ಇನ್ನು ರೈಫಲ್ ಹೆಸರಿನಲ್ಲಿ ಗುರುತಿಸಿಕೊಳ್ಳಲಿದೆ. ಇದೂವರೆಗೆ ನಾವು ಅಮೇಥಿ ಗೆದ್ದಿಲ್ಲ. ಆದರೆ ಈಗ ನಾವು ಜನರ ಹೃದಯ ಗೆದ್ದಿದ್ದೇವೆ ಎಂದು ಮೋದಿ ಭಾಷಣದಲ್ಲಿ ಪ್ರಸ್ತಾಪಿಸಿ ಚುನಾವಣಾ ರಣ ಕಹಳೆ ಮೊಳಗಿಸಿದ್ದರು. 2017ರ ವಿಧಾನಸಭಾ ಚುನಾವಣೆಯಲ್ಲಿ ಅಮೇಥೀ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿದೆ. 3 ಬಿಜೆಪಿ ಗೆದ್ದಿದ್ದರೆ ಒಂದು ಕ್ಷೇತ್ರವನ್ನು ಎಸ್‍ಪಿ ಗೆದ್ದುಕೊಂಡಿತ್ತು.

siddu gundu Rao

ಕೈ ನಾಯಕರು ಹೇಳಿದ್ದು ಏನು?
ಚಾಮರಾಜನಗರದಲ್ಲಿ ನಡೆದ ಕಾಂಗ್ರೆಸ್ ಪರಿವರ್ತನಾ ಸಮಾವೇಶದಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್ ಅವರು, ರಾಹುಲ್ ಗಾಂಧಿಯವರು ಕೇವಲ ಉತ್ತರ ಭಾರತದಿಂದ ಮಾತ್ರ ಸ್ಪರ್ಧೆ ಮಾಡುವುದಲ್ಲ. ದಕ್ಷಿಣ ಭಾರತದಿಂದಲೂ ಸ್ಪರ್ಧೆ ಮಾಡಲಿ. ಅದರಲ್ಲೂ ಕರ್ನಾಟಕದಿಂದಲೇ ಸ್ಪರ್ಧೆ ಮಾಡಲಿ. ಈ ಹಿಂದೆ ಇಂದಿರಾ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರನ್ನು ನಾವು ಆಯ್ಕೆ ಮಾಡಿದ್ದೇವು. ಈಗ ರಾಹುಲ್ ಗಾಂಧಿಯನ್ನು ಆಯ್ಕೆ ಮಾಡಿ ಪ್ರಧಾನ ಮಂತ್ರಿಯನ್ನಾಗಿ ಮಾಡೋಣ ಎಂದು ಹೇಳಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *