-ಅರುಣ್ ಬಡಿಗೇರ್
ರಾಜ್ಯದ ಸದ್ಯದ ರಾಜಕೀಯದ ಚಿತ್ರಣ ಕೊಟ್ಟೋನು ಕೋಡಂಗಿ ಇಸ್ಕೊಂಡವನು ವೀರಭದ್ರ ಅನ್ನೋ ಹಾಗಾಗಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡೋದಕ್ಕೆ ಕಾಂಗ್ರೆಸ್ ಎಲ್ಲವನ್ನೂ ಜೆಡಿಎಸ್‍ಗೆ ತ್ಯಾಗ ಮಾಡಿತ್ತು. ಮುಖ್ಯಮಂತ್ರಿ ಕುರ್ಚಿಯನ್ನೂ ಜೆಡಿಎಸ್ ಪಕ್ಷಕ್ಕೆ ಬಿಟ್ಟು ಕೊಟ್ಟು, 5 ವರ್ಷ ಕುಮಾರಸ್ವಾಮಿಯೇ ಮುಖ್ಯಮಂತ್ರಿಯಾಗಿರುತ್ತಾರೆ ಅಂತಾ ಒಪ್ಪಂದದ ಪ್ರತಿಯನ್ನೂ ಮಾಧ್ಯಮಗಳ ಮುಂದೆ ಕಾಂಗ್ರೆಸ್ ತೋರಿಸಿ ತಾನು ಮಾತಿಗೆ ಕಟಿಬದ್ಧ ಅನ್ನೋದನ್ನ ಸಾರಿ ಸಾರಿ ಹೇಳಿತ್ತು. ಜೊತೆಗೆ ಅನ್‍ಕಂಡಿಷನಲ್ ಸಪೋರ್ಟ್ ಮಾಡೋದಾಗಿ ಕಾಂಗ್ರೆಸ್ ಮಾತು ಕೊಟ್ಟಿತ್ತು. ಆದ್ರೆ, ಕಾಂಗ್ರೆಸ್ ಈಗ ಮಾತು ತಪ್ಪಿದೆ.
Advertisement
ಮಾತು ತಪ್ಪಿದ ಕಾಂಗ್ರೆಸ್..?
ನಿಗಮ ಮಂಡಳಿಗಳ ನೇಮಕ ವಿಚಾರದಲ್ಲಿ ಕಾಂಗ್ರೆಸ್ ಎಡವಿದೆ. ತನಗೆ ಬೇಕಾಗಿರೋ ಎಲ್ಲ ನಿಗಮ-ಮಂಡಳಿಗಳನ್ನ ತನ್ನ ನಾಯಕರಿಗೆ ಹಂಚಿದೆ. ಮೈತ್ರಿ ಧರ್ಮದ ಪ್ರಕಾರ ನಿಗಮ-ಮಂಡಳಿ ಹಂಚಿಕೆ ಮೊದಲು ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಬೇಕಿತ್ತು. ಆದ್ರೆ, ಯಾವುದೇ ಚರ್ಚೆ ನಡೆಸದೇ ತನಗೇ ಇಷ್ಟ ಬಂದ ಹಾಗೆ ಹಂಚಿಕೆ ಮಾಡಿದೆ. ಇದಲ್ಲದೆ, ಯಾವ ಖಾತೆಯನ್ನು ಯಾವ ಪಕ್ಷ ಹೊಂದಿದೆಯೋ ಆ ಖಾತೆಗೆ ಸಂಬಂಧಿಸಿದ ನಿಗಮ-ಮಂಡಳಿಗಳನ್ನು ಆ ಪಕ್ಷಕ್ಕೇ ಕೊಡಬೇಕು ಅನ್ನೋದು ಮೈತ್ರಿ ಧರ್ಮದಲ್ಲಿ ನಡೆದಿದ್ದ ಮಾತುಕತೆ. ಆದರೆ, ಕಾಂಗ್ರೆಸ್ ತನ್ನ ಅಸಮಾಧಾನಿತ ಶಾಸಕರನ್ನು ಸಮಾಧಾನ ಪಡಿಸಲು ಮೈತ್ರಿ ಧರ್ಮ ಮೀರಿ ಹೋಗಿದೆ.
Advertisement
Advertisement
ಸೀಟು ಹಂಚಿಕೆ ಹೋಯ್ತು, ಫ್ರೆಂಡ್ಲಿ ಫೈಟ್ ಬಂತು..!
ಅಪ್ಪಿ ಮುದ್ದಾಡಿ ದೋಸ್ತಿ ಸರ್ಕಾರ ರಚನೆ ಮಾಡಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ, ಲೋಕಸಭೆಯಲ್ಲೂ ನಮ್ಮ ದೋಸ್ತಿ ಹೀಗೆ ಅಂದಿದ್ದರು. ಆದ್ರೆ, ಈಗ ನಾನೊಂದು ತೀರ ನೀನೊಂದು ತೀರ ಅಂತಿದ್ದಾರೆ. 3:1ರ ಅನುಪಾತದಲ್ಲಿ ಸೀಟು ಹಂಚಿಕೆ ಮಾಡಿಕೊಂಡು ಬಿಜೆಪಿಯನ್ನ ಬಗ್ಗು ಬಡಿಯೋದೇ ನಮ್ಮ ಗುರಿ ಅಂತೆಲ್ಲ ಬಿಲ್ಡಪ್ ಕೊಟ್ಟಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಈಗ ಫ್ರೆಂಡ್ಲಿ ಫೈಟ್ ಮಾಡೋದಕ್ಕೆ ಮುಂದಾಗಿದ್ದಾರೆ. ಅಂದ್ರೆ, 28 ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧೆ ಮಾಡೋಕೆ ನಿರ್ಧರಿಸಿದೆ. ಇದಕ್ಕೆ ಕಾರಣ, 28 ಲೋಕಸಭಾ ಸೀಟುಗಳಲ್ಲಿ ಈ ಹಿಂದಿನ ಮಾತಿನಂತೆ 3:1ರ ಅನುಪಾತದಲ್ಲಿ 9 ರಿಂದ 10 ಸೀಟುಗಳನ್ನ ಕಾಂಗ್ರೆಸ್ ಜೆಡಿಎಸ್ ಗೆ ಬಿಟ್ಟುಕೊಡಬೇಕಿತ್ತು. ಆದ್ರೆ, ಕಾಂಗ್ರೆಸ್ ಇದಕ್ಕೆ ಮಣೆ ಹಾಕುತ್ತಿಲ್ಲ. ಹಾಗಾಗಿ ಜೆಡಿಎಸ್ 28 ಕ್ಷೇತ್ರಗಳಲ್ಲಿ ಫ್ರೆಂಡ್ಲಿ ಫೈಟ್ ಮಾಡೋದಕ್ಕೆ ನಿರ್ಧರಿಸಿದೆ.
Advertisement
ದೋಸ್ತಿಗಳ ಫ್ರೆಂಡ್ಲಿ ಫೈಟ್… ಬಿಜೆಪಿಗೆ ರೈಟ್..!
ಜೆಡಿಎಸ್ ನಿರ್ಧಾರ ಮಾಡಿರೋ ಹಾಗೆ, ಲೋಕಸಭೆಯಲ್ಲಿ 28 ಕ್ಷೇತ್ರಗಳಲ್ಲಿ ಫ್ರೆಂಡ್ಲಿ ಫೈಟ್ ಮಾಡಿದರೆ ಅದರ ಲಾಭ ಬಿಜೆಪಿಗೆ ಆಗೋದ್ರಲ್ಲಿ ಯಾವುದೇ ಅನುಮಾನವವಿಲ್ಲ. ಕಾಂಗ್ರೆಸ್-ಜೆಡಿಎಸ್ ಒಗ್ಗಟ್ಟಾಗಿ ಹೋರಾಟ ಮಾಡೋದಕ್ಕೂ, ಪ್ರತ್ಯೇಕವಾಗಿ ಹೋರಾಟ ಮಾಡೋದಕ್ಕೂ ಬಹಳ ವ್ಯತ್ಯಾಸವಾಗುತ್ತೆ. ಜೆಡಿಎಸ್‍ಗೆ ಕನಿಷ್ಠ ಅಂದ್ರೂ 5 ಲೋಕಸಭಾ ಸೀಟುಗಳಲ್ಲಿ ಒಂಟಿಯಾಗಿ ಹೋರಾಟ ಮಾಡೋ ಸಾಮಥ್ರ್ಯವಿದೆ. ಅದನ್ನ ಹೊರತು ಪಡಿಸಿದರೆ, ಇನ್ನೂ ಹೆಚ್ಚಿನ ಸೀಟುಗಳನ್ನು ಗೆಲ್ಲಲೇ ಬೇಕು ಅಂದ್ರೆ, ಅದಕ್ಕೆ ಕಾಂಗ್ರೆಸ್ ಬೆಂಬಲ ಬೇಕೇ ಬೇಕಾಗುತ್ತೆ. ಅದೇ ರೀತಿಯಾಗಿ ಕಾಂಗ್ರೆಸ್‍ಗೂ ಕೂಡ ಈಗಿರೋ 10 ಸೀಟುಗಳನ್ನ ಇನ್ನೂ ಹೆಚ್ಚಿಸಿಕೊಳ್ಳಬೇಕಾದ್ರೆ, ಜೆಡಿಎಸ್ ಸಪೋರ್ಟ್ ಬೇಕೇ ಬೇಕಾಗುತ್ತೆ. ಹಾಗಾಗಿ ದೋಸ್ತಿಗಳು ಸೀಟು ಹಂಚಿಕೆ ಮಾಡಿಕೊಳ್ಳದೆ ಪ್ರತಿಷ್ಠೆಗಿಳಿದು ಫ್ರೆಂಡ್ಲಿ ಫೈಟ್ ಮಾಡಿದ್ದೇ ಆದಲ್ಲಿ ಬಿಜೆಪಿ ಇದರ ಲಾಭ ಪಡೆದುಕೊಳ್ಳೋದ್ರಲ್ಲಿ ಯಾವುದೇ ಡೌಟ್ ಇಲ್ಲ.
ಸೀಟಿಗಾಗಿ ಬ್ಲ್ಯಾಕ್ ಮೇಲ್ ಮಾಡ್ತಿದೆಯಾ ಜೆಡಿಎಸ್..?
ಬಸವರಾಜ್ ಹೊರಟ್ಟಿ, ಹೆಚ್‍ಡಿ ರೇವಣ್ಣ, ಅನ್ನದಾನಿ ಮೊದಲಾದ ಶಾಸಕರು ಕೊಡ್ತಿರೋ ಹೇಳಿಕೆಗಳು ಒಂದು ರೀತಿ ಕಾಂಗ್ರೆಸ್‍ಗೆ ಬ್ಲ್ಯಾಕ್‍ಮೇಲ್ ಮಾಡುವ ಹಾಗಿದೆ. ಕಾಂಗ್ರೆಸ್ ಮೈತ್ರಿ ಧರ್ಮ ನಿಭಾಯಿಸುತ್ತಿಲ್ಲ. ಹಾಗಾಗಿ ಜೆಡಿಎಸ್ ಸಭೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಫ್ರೆಂಡ್ಲಿ ಫೈಟ್ ಮಾಡೋಣ ಅನ್ನೋ ನಿರ್ಧಾರಕ್ಕೆ ಬಂದಿದ್ದೀವಿ ಅಂತಾ ವಿಧಾನಪರಿಷತ್ ಸದಸ್ಯ ರಮೇಶ್ ಬಾಬು ಮಾಧ್ಯಮಕ್ಕೆ ಹೇಳಿಕೆ ಕೊಡ್ತಿದ್ದಂಗೆ, ಜೆಡಿಎಸ್‍ನ ಒಬ್ಬೊಬ್ಬರೇ ನಾಯಕರು ಕಾಂಗ್ರೆಸ್ ವಿರುದ್ಧ ಹೇಳಿಕೆಗಳನ್ನ ಕೊಡೋಕೆ ಶುರು ಮಾಡಿದ್ದಾರೆ. ಮೈತ್ರಿ ಧರ್ಮದ ಬಗ್ಗೆ ಪ್ರಶ್ನಿಸಲು ಹೊರಟಿದ್ದಾರೆ. ಸಿದ್ದರಾಮಯ್ಯನವರ ನಡೆ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಕೂಸು ಚಿವುಟಿ, ತೊಟ್ಟಿಲು ತೂಗೋ ಕೆಲಸ ಮಾಡ್ತಿದ್ದಾರಾ ಸಿದ್ದರಾಮಯ್ಯ.?
ದೊಡ್ಡ ಗೌಡರ ಮೇಲೆ ಮೊದಲಿನಿಂದಲೂ ಸಿದ್ದರಾಮಯ್ಯನವರಿಗೆ ಎಲ್ಲಿಲ್ಲದ ಕೋಪ. ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ್ದು ಇದೇ ಕಾರಣಕ್ಕೆ. ಜೆಡಿಎಸ್‍ನಲ್ಲಿದ್ದಿದ್ದರೆ ಸಿದ್ದರಾಮಯ್ಯನವರು `ಅಪ್ಪನಾಣೆ’ಗೂ ಸಿಎಂ ಆಗೋ ಚಾನ್ಸೇ ಇರಲಿಲ್ಲ. ಸಿಎಂ ಆಗಲೇ ಬೇಕು ಅನ್ನೋ ಛಲದಿಂದ ಕಾಂಗ್ರೆಸ್ ಸೇರಿ ರಾಜ್ಯದ ಮುಖ್ಯಮಂತ್ರಿಯಾಗಿ 5 ವರ್ಷ ಅಧಿಕಾರವನ್ನೂ ನಡೆಸಿದ್ರು. ಬಿಜೆಪಿ ಮಾಡಿಕೊಂಡ ಸ್ವಯಂಕೃತ ಎಡವಟ್ಟಿನ ಲಾಭ ಸಿದ್ದರಾಮಯ್ಯನವರಿಗೆ ಆಗಿರೋದನ್ನ ಯಾರೂ ತಳ್ಳಿಹಾಕೋ ಹಾಗಿಲ್ಲ. ಹೀಗಿದ್ದಾಗಲೂ ಕಳೆದ ಬಾರಿಯ ಚುನಾವಣೆಯಲ್ಲಿ ದೊಡ್ಡ ಗೌಡ್ರನ್ನ ಬಾಯಿಗೆ ಬಂದಂಗೆ ಮಾತನಾಡಿ, ಚುನಾವಣೆಯಲ್ಲಿ ಪಕ್ಷವೂ ಸೋಲನುಭವಿಸಬೇಕಾಯ್ತು, ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯನವರು ಹೀನಾಯವಾಗಿ ಸೋಲಬೇಕಾಯ್ತು.
ಕಾಂಗ್ರೆಸ್‍ನ ಹೈಕಮಾಂಡ್ ಮಾತಿಗೆ ತಲೆಬಾಗಿ, ಅನಿವಾರ್ಯವಾಗಿ ಮೈತ್ರಿ ಸರ್ಕಾರಕ್ಕೆ ಜೈ ಅಂದು ಸಿಎಂ ಕುರ್ಚಿಯನ್ನ ಕುಮಾರಸ್ವಾಮಿಗೆ ಬಿಟ್ಟುಕೊಟ್ಟಿದ್ರು ಸಿದ್ದರಾಮಯ್ಯ. ಆದ್ರೆ, ಒಳಗೊಳಗೆ ಸಿದ್ದರಾಮಯ್ಯನವರಿಗೆ ಈ ಸರ್ಕಾರ ಇಷ್ಟವಿರಲಿಲ್ಲ. ಧರ್ಮಸ್ಥಳದಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುವ ವೇಳೆಯಲ್ಲೂ ತಮ್ಮ ಕಾರ್ಯಕರ್ತರ ಮುಂದೆ, ಈ ಸರ್ಕಾರ ಲೋಕಸಭಾ ಚುನಾವಣೆವರೆಗೂ ಮಾತ್ರ ಅಂತಾನೂ ಹೇಳಿದ್ರು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯೋದು ಸಿದ್ದರಾಮಯ್ಯನವರಿಗೆ ಇಷ್ಟವಿಲ್ಲವೋ ಏನೋ ಗೊತ್ತಿಲ್ಲ. ಅವರ ಶಿಷ್ಯಂದಿರೇ ಈಗ ಅಸಮಾಧಾನಿತ ಶಾಸಕರಾಗಿರೋದ್ರಿಂದ ನೇರವಾಗಿ ಸಿದ್ದರಾಮಯ್ಯನವರೇ ಇದೆಲ್ಲ ಆಟ ಆಡಿಸುತ್ತಿದ್ದಾರಾ ಅನ್ನೋ ಅನುಮಾನ ಬರದೇ ಇರದು. ಜೊತೆಗೆ, ಅಸಮಾಧಾನಗೊಳ್ಳುವಂತೆ ಮಾಡಿ, ಎಲ್ಲರನ್ನೂ ಸಮಾಧಾನ ಮಾಡೋ ರೀತಿ ಮಾತನಾಡಿ ತಾವೇ ಪಕ್ಷದಲ್ಲಿ ಕಿಂಗ್, ತಾವು ಸೋತಿದ್ದರೂ ಪಕ್ಷದಲ್ಲಿ ಎಲ್ಲ ನಾಯಕರು ತಾವು ಹೇಳಿದ್ರೆ ಮಾತು ಕೇಳ್ತಾರೆ ಅನ್ನೋ ಸಂದೇಶವನ್ನು ಹೈಕಮಾಂಡ್‍ಗೆ ರವಾನಿಸೋ ಯೋಚನೆಯೂ ಈ ಬೆಳವಣಿಗೆಯ ಹಿಂದಿರಬಹುದು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv