Connect with us

Chikkamagaluru

ಚಿಕ್ಕಮಗಳೂರು ಕ್ಷೇತ್ರ ಪರಿಚಯ – ಅಖಾಡ ಹೇಗಿದೆ?

Published

on

ಒಂದು ಕಡೆ ದತ್ತಮಾಲೆ ವಿವಾದ, ಮತ್ತೊಂದ್ಕಡೆ ಕೆಂಪು ಉಗ್ರರ ಹೆಜ್ಜೆಯ ಸಪ್ಪಳ, ಬಗರ್ ಹುಕುಂ ಒತ್ತುವರಿಯ ಗುಟುರು. ಕಾಫಿ ಕಹಿಯಾಗೋಕೆ ಇದಕ್ಕಿಂತ ಏನು ಬೇಕು..? ಅಂದ ಹಾಗೆ, ಇವತ್ತಿನ ಕ್ಷೇತ್ರ ಪರಿಚಯದಲ್ಲಿ ಕಾಫಿ ನಾಡು ಚಿಕ್ಕಮಗಳೂರಿನ ಸ್ವಾರಸ್ಯಕರ ಸಂಗತಿಯ ಜೊತೆಗೆ ರಾಜಕೀಯ ಚಿತ್ರಣವನ್ನೂ ನಿಮ್ಮ ಮುಂದೆ ಇಡ್ತಾ ಇದ್ದೇವೆ.

ಚಿಕ್ಕಮಗಳೂರು ಹೆಸರ ಹಿಂದಿದೆ ಸುಂದರ ಕಹಾನಿ
ಚಿಕ್ಕಮಗಳೂರು ಹೆಸರಲ್ಲೇ ಇದೆ ಇದು ಚಿಕ್ಕಮಗಳ ಊರು ಅನ್ನೋದು. ಆದ್ರೆ, ಇದು ಯಾರ ಚಿಕ್ಕ ಮಗಳ ಊರು ಅಂತಾ ಕೇಳಿದ್ರೆ ಅದ್ರ ಹಿಂದೆಯೂ ಸುಂದರ ಕಹಾನಿ ಇದೆ. ಸಖರಾಯ ಪಟ್ಟಣದ ಮುಖ್ಯಸ್ಥ ರುಕ್ಮಾಂಗದ ಈ ಊರನ್ನ ತನ್ನ ಚಿಕ್ಕಮಗಳಿಗೆ ಉಡುಗೊರೆ ರೂಪದಲ್ಲಿ ಕೊಟ್ಟ ಅನ್ನೋದಾಗಿ ಇತಿಹಾಸ ಹೇಳುತ್ತೆ. ಇಲ್ಲಿಂದ ಐದು ಕಿಲೋ ಮೀಟರ್ ದೂರಕ್ಕೆ ಹೋದ್ರೆ, ಹಿರಿಯ ಮಗಳ ಊರು ಕೂಡಾ ಇದೆ. ಹಳೆಯ ಶಾಸನಗಳು ಹೇಳುವಂತೆ ಮೊದಲು ಈ ಎರಡು ಊರುಗಳನ್ನ ಕಿರಿಯ ಮುಗುಲಿ ಹಾಗೂ ಹಿರಿಯ ಮುಗುಲಿ ಅಂತಾ ಕರೆಯಲಾಗ್ತಿತ್ತಂತೆ. ಇದು ಕಾಫಿ ನಾಡಿಗೂ ಮಗಳಿಗೂ ಇರುವ ಭಾವನಾತ್ಮಕ ನಂಟು..!

ಕಾಫಿನಾಡಲ್ಲಿ ಮೊದಲ ಕಾಫಿ ಬೀಜ ಬಿತ್ತಿದ್ದು ಯಾರ್ ಗೊತ್ತಾ..?
ಚಿಕ್ಕಮಗಳೂರಿನ ಗಿರಿ ಶ್ರೇಣಿಗಳು ಪಶ್ಚಿಮ ಘಟ್ಟದ ಒಂದು ಭಾಗ. ತುಂಗೆ ಮತ್ತು ಭದ್ರೆಯರ ತವರೂರು. ಇಲ್ಲಿರೋ ಬಾಬಾ ಬುಡನ್ ಬೆಟ್ಟದಲ್ಲಿ ಅರೇಬಿಕಾ ಕಾಫಿಯನ್ನ ಉತ್ಪಾದಿಸ್ತಾರೆ. ಅಂಧ ಹಾಗೆ, ಚಿಕ್ಕ ಮಗಳೂರಿಗೆ ಕಾಫಿ ಹೇಗೆ ಬಂತು? ಅದ್ರ ಇತಿಹಾಸ ಏನು ಅನ್ನೋದನ್ನ ಕೆದಕ್ತಾ ಹೋದ್ರೆ, 17ನೇ ಶತಮಾನದ ಇತಿಹಾಸದ ಪುಟಗಳಿಂದ ಕಾಫಿ ವಾಸನೆ ಬರುತ್ತದೆ. 17ನೇ ಶತಮಾನದಲ್ಲಿ ಬಹೌದ್ ದಿನ್ ಅಥವಾ ಬಾಬಾ ಬುಡನ್ ಅನ್ನೋ ಸೂಫಿ ಸಂತ ಇದ್ರು. ಅವ್ರು ಇಲ್ಲಿರೋ ಬೆಟ್ಟಗಳ ಗುಹೆಗಳಲ್ಲಿ ನೆಲೆ ಕಂಡುಕೊಳ್ತಿದ್ರು. ಸುಮಾರು ಕ್ರಿಸ್ತ ಶಕ 1670ರಲ್ಲಿ ಬಾಬಾ ಬುಡನ್ ಮೆಕ್ಕಾ ಯಾತ್ರೆಗೆ ತೆರಳಿದ್ದ ಸಂದರ್ಭದಲ್ಲಿ ಅಲ್ಲಿಂದ 7 ಕಾಫಿ ಬೀಜಗಳನ್ನ ತಂದು ಚಿಕ್ಕಮಗಳೂರಲ್ಲಿ ಬಿತ್ತಿದ್ರು ಅನ್ನೋ ಸ್ವಾರಸ್ಯಕರ ಮಾಹಿತಿ ಸಿಗುತ್ತೆ.

ಹಸಿರ ತೇರಿನ ಮೇಲೆ ಅಕ್ಷರ ಸಂತರ ಸಾಹಿತ್ಯದ ಗರಿ.
ಒಂದು ಕಡೆ ಹಸಿರನ್ನೇ ಹೊದ್ದು ಮಲಗಿದಂತಿರೋ ಊರು. ಕವಿಗಳಿಗೆ, ಸಾಹಿತ್ಯ ದಿಗ್ಗಜರಿಗೆ ಇದಕ್ಕಿಂತ ಸ್ವರ್ಗ ಇನ್ನೆಲ್ಲಿ ಸಿಕ್ಕೀತು? ಲಕ್ಷ್ಮೀಶ ದೇವನೂರು, ಡಾ. ಎ.ಆರ್ ಕೃಷ್ಣಶಾಸ್ತ್ರಿ ಅಂಬಳೆಯಂಥಾ ಕವಿ ಮಹೋದಯರು ಕೊಟ್ಟ ಹೆಮ್ಮೆಯ ತಾಣ ಚಿಕ್ಕಮಗಳೂರು. ಹಾಗೆಯೇ ಜ್ಞಾನಪೀಠ ಪ್ರಶಸ್ತಿ ಪಡೆದ ರಾಷ್ಟ್ರಕವಿ ಕುವೆಂಪು, ಕೂದವಳ್ಳಿಯ ಅದ್ಭುತ ಕಥೆಗಾರ ಅಶ್ವತ್ಥ, ಸಾಹಿತ್ಯ ಸಿಂಚನದ ಜೊತೆಗೆ ಪ್ರಕೃತಿಯ ಜೊತೆ ಬೆರೆಯುವಂತೆ ಮಾಡಿದ ಪೂರ್ಣಚಂದ್ರ ತೇಜಸ್ವಿಯಂಥಾ ಸಾಹಿತಿಗಳನ್ನು ಕೊಟ್ಟ ತಾಣ ಇದು.

ಗಿರಿಕನ್ಯೆಯ ಸೆರಗಿನ ನಡುವೆ ಅಡಗಿವೆ ಈ ಸುಂದರ ತಾಣಗಳು
ಚುಮುಚುಮು ಚಳಿಯೇ ಇರಲಿ, ಬಿರು ಬೇಸಿಗೆಯೇ ಇರಲಿ, ಒಂದೇ ಸಮನೆ ಸುರಿಯೋ ಮಳೆಯೇ ಇರಲಿ ಚಿಕ್ಕಮಗಳೂರಿನ ಮುಳ್ಳಯ್ಯನ ಗಿರಿ ಮಾತ್ರ ನಿಮ್ಮನ್ನ ಯಾವ ಕಾಲಕ್ಕೂ ಕೈ ಬೀಸಿ ಕರೆಯುತ್ತೆ. ಮುಳ್ಳಯ್ಯನಗಿರಿ ಕರ್ನಾಟಕ ರಾಜ್ಯದಲ್ಲೇ ಅತೀ ಎತ್ತರದ ಗಿರಿ ಶಿಖರ. ಅಲ್ಲಿಂದ ಅನತಿ ದೂರದಲ್ಲಿದೆ ಬಾಬಾ ಬುಡನ್ ಗಿರಿ. ಚಂದ್ರ ದ್ರೋಣ ಪರ್ವತ ಶ್ರೇಣಿಯಲ್ಲಿ ನೆಲೆಸಿರುವ ಗುರು ದತ್ತಾತ್ರೇಯ ಬಾಬಾಬುಡನ್ ದರ್ಗಾವು ಹಿಂದು ಹಾಗೂ ಮುಸ್ಲಿಮ್ ಧರ್ಮದವರಿಬ್ಬರಿಗೂ ಪವಿತ್ರ. ಇಲ್ಲಿರುವ ಲ್ಯಾಟರೈಟ್ ಗುಹೆಯಲ್ಲಿ ದತ್ತಾತ್ರೇಯ ಸ್ವಾಮಿ ಹಾಗು ಹಜರತ್ ದಾದಾ ಹಯತ್ ಮೀರ್ ಕಲಂದರ್ ನೆಲೆಸಿದ್ರು ಅನ್ನೋ ಉಲ್ಲೇಖಗಳು ಸಿಗುತ್ವೆ. ಈ ಜಾಗ ಎಷ್ಟು ಪವಿತ್ರವೋ ಅಷ್ಟೇ ವಿವಾದದ ಕೇಂದ್ರ ಬಿಂದು ಕೂಡಾ ಹೌದು. ಇನ್ನು, ವರ್ಷಕ್ಕೊಮ್ಮೆ ಪೂಜೆ ನಡೆದರೂ ಪ್ರವಾಸಿಗರನ್ನ ಸೆಳೆಯೋ ದೇವೀರಮ್ಮ ಬೆಟ್ಟ, ಕೆಮ್ಮಣ್ಣುಗುಂಡಿ, ರತ್ನಗಿರಿ ಬೋರ್, ಕುದುರೆ ಮುಖ, ಶೃಂಗೇರಿ, ಹೊರನಾಡು, ಭದ್ರಾ ವನ್ಯಜೀವಿಧಾಮ, ಕಲ್ಲತ್ತಗಿರಿ ಜಲಪಾತ, ಹೆಬ್ಬೆ ಜಲಪಾತ, ಕಳಸ ಹೀಗೆ ಒಂದಾ ಎರಡಾ ಚಿಕ್ಕಮಗಳೂರು ಅನ್ನೋ ಗಿರಿಕನ್ಯೆ ಸದಾ ಯೌವ್ವನವನ್ನ ತುಂಬಿಕೊಂಡಿರಲು ಇಷ್ಟು ಸಾಕು.

ಚಿಕ್ಕಮಗಳೂರಲ್ಲಿ ಹಳೇ ಹುಲಿಗಳ ಹೊಸ ರಾಜಕೀಯ ಪಟ್ಟು..!
ಚಿಕ್ಕಮಗಳೂರ ತುಂಬಾ ಈಗ ಕಾಫಿ ಹೀರೋ ಜನಕ್ಕೆ ರಾಜಕೀಯವೇ ಮಿರ್ಚಿ ಮಂಡಕ್ಕಿ ಎಲ್ಲಾನೂ. ಇಲ್ಲಿ ಕ್ಯಾಂಪೇನ್ ಮಾಡೋಕೆ ಬರೋರ್ಗೆ ಸಮಸ್ಯೆಗಳೇ ಕೇಂದ್ರಬಿಂದುವಾದ್ರೂ ರಾಜಕೀಯ ಲೆಕ್ಕಾಚಾರ ಮಾತ್ರ ಬೇರೆಯದ್ದೇ ಆಗಿರುತ್ತೆ. ಲಿಂಗಾಯತ, ಒಕ್ಕಲಿಗ, ಹಿಂದುಳಿದ ಸಮುದಾಯಗಳ ವೋಟುಗಳು ಇಲ್ಲಿ ಅಭ್ಯರ್ಥಿಯ ಹಣೆಬರಹವನ್ನು ಬರೀತಾವೆ. ಹಾಗಾದ್ರೆ, ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ಚಿತ್ರಣವನ್ನ ನೋಡೋಣ ಬನ್ನಿ.

ಮತ್ತೆ ಗೆದ್ದು ಸೀಟಿ ಹೊಡೆಯೋ ತವಕದಲ್ಲಿದ್ದಾರೆ ಸಿಟಿ ರವಿ..!

 

ಚಿಕ್ಕಮಗಳೂರು ಕ್ಷೇತ್ರದಲ್ಲಿ ಹಾಲಿ ಶಾಸಕ ಸಿಟಿ ರವಿ ತಮ್ಮ ಪ್ರಭಾವ, ವೈಯಕ್ತಿಕ ವರ್ಚಸ್ಸಿಂದ ಕ್ಷೇತ್ರದಲ್ಲಿ ಸೋಲಿಲ್ಲದ ನಾಯಕನಾಗಿ ಬೆಳೆದಿದ್ದಾರೆ. ಹ್ಯಾಟ್ರಿಕ್ ಸಾಧನೆ ಮಾಡಿರೋ ಸಿಟಿ ರವಿ ಈ ಬಾರಿಯೂ ಬಿಜೆಪಿಯಿಂದ ಕಂಟೆಸ್ಟ್ ಮಾಡ್ತಿದ್ದಾರೆ. ಒಂದು ಕಾಲದಲ್ಲಿ ಕಾಂಗ್ರೆಸ್ ನ ಭದ್ರ ಕೋಟೆಯಾಗಿದ್ದ ಚಿಕ್ಕಮಗಳೂರನ್ನ ನಂತ್ರ ಬಿಜೆಪಿ ಹಾಗೂ ಪಕ್ಷೇತರರು ತಮ್ಮ ತೆಕ್ಕೆಗೆ ಎಳೆದುಕೊಂಡಿದ್ದು ಈಗ ಇತಿಹಾಸ. ಕಾಂಗ್ರೆಸ್ ನಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ರೂ ಕೊನೆಯದಾಗಿ ಕೆಪಿಸಿಸಿ ಉಪಾಧ್ಯಕ್ಷ ಹಾಗೂ ವಕ್ತಾರ ಬಿಎಲ್ ಶಂಕರ್ ಕಣದಲ್ಲಿದ್ದಾರೆ. ಆದ್ರೆ ಈ ಬಾರಿ ಸಿಟಿ ರವಿಯವ್ರ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕೋಕೆ ಜೆಡಿಎಸ್ ಚಿಂತಿಸಿದೆ. ಹೀಗಾಗಿ, ಎಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದ ಬಿಎಸ್ ಹರೀಶ್ ಕಣಕ್ಕೆ ಇಳಿದಿದ್ದಾರೆ. ಇನ್ನು, 2013ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸಿ.ಟಿ ರವಿ 58,683 ವೋಟ್ ಗಳಿಸಿದ್ರು. ಕಾಂಗ್ರೆಸ್ಸಿನ ಕೆ.ಎಸ್ ಶಾಂತೇಗೌಡ 47,695 ಮತಗಳನ್ನು ಗಳಿಸಿ ಸಖತ್ ಫೈಟ್ ಕೊಟ್ಟಿದ್ರು. ಈ ಬಾರಿ ಚುನಾವಣೆಯ ರೋಚಕ ಕ್ಷಣಗಳನ್ನ ಕಣ್ತುಂಬಿಕೊಳ್ಳೋಕೆ ನೀವ್ ರೆಡಿಯಾಗಿ.

ಬಂಡಾಯದ ಬಿಸಿಗೆ ತರೀಕೆರೆ ತಬ್ಬಿಬ್ಬು..!

 


ತರೀಕೆರೆ ಕಾಂಗ್ರೆಸ್ ನ ಹಾಲಿ ಶಾಸಕ ಶ್ರೀನಿವಾಸ್ ಮತ್ತೆ ತಮಗೇ ಟಿಕೆಟ್ ಸಿಗುತ್ತೆ ಅನ್ನೋ ಭರವಸೆಯಲ್ಲೇ ಇದ್ರು. ಆದ್ರೆ, ಕೊನೇ ಕ್ಷಣದ ಬದಲಾವಣೆ ಹೊರತಾಗಿ ರಾಜಕೀಯದಲ್ಲಿ ಏನ್ ಬೇಕಾದ್ರೂ ಆಗಬಹುದು ಅನ್ನೋದಕ್ಕೆ ಈ ಕ್ಷೇತ್ರ ಸಾಕ್ಷಿ. ಯಾಕಂದ್ರೆ, ಇಲ್ಲಿ ಹಾಲಿ ಶಾಸಕರಿಗೆ ಬಿಟ್ಟು ಮಾಜಿ ಶಾಸಕ ಎಸ್ ಎಂ ನಾಗರಾಜು ಅವ್ರಿಗೆ ಕಾಂಗ್ರೆಸ್ ಮಣೆ ಹಾಕಿದೆ. ಹೀಗಾಗಿ ಶಾಸಕ ಶ್ರೀನಿವಾಸ್ ಬಂಡಾಯ ಎದ್ದು ಜೆಡಿಎಸ್ ಕದ ತಟ್ಟಿದ್ರು. ದುರಾದೃಷ್ಟವಶಾತ್ ಅಲ್ಲೂ ಅವ್ರ ಆಸೆಗೆ ಯಾವ ಸೊಪ್ಪೂ ಬೀಳಲಿಲ್ಲ. ಇನ್ನು, ಇತ್ತ ಜೆಡಿಎಸ್ ನ ಟಿಕೆಟ್ ಆಕಾಂಕ್ಷಿಯಾಗಿದ್ದ ಟಿ. ಎಚ್ ಶಿವಶಂಕರಪ್ಪ ಪಕ್ಷಕ್ಕೆ ಟಾ ಟಾ ಬೈ ಬೈ ಹೇಳಿ ಒಂದು ಕಾಲು ಹೊರಗಿಟ್ಟಿದ್ರು. ಆದ್ರೆ, ಕೊನೇ ಕ್ಷಣದಲ್ಲಿ ತೆನೆಹೊತ್ತ ಮಹಿಳೆ ಶಿವಶಂಕರಪ್ಪ ಅವ್ರಿಗೇ ಜೈ ಅಂದಿದ್ದಾಳೆ. ಕಳೆದ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಜಿ.ಎಚ್. ಶ್ರೀನಿವಾಸ ಪ್ರಯಾಸದ ಗೆಲುವು ಅಂದ್ರೆ, ಕೇವಲ 899 ಮತಗಳ ಅಂತರದಲ್ಲಿ ಗೆದ್ದು ಗಾದಿ ಹಿಡಿದಿದ್ರು.

ಮೂಡಿಗೆರೆ ಮತದಾರನ ಮೂಡು ಹೇಗಿದ್ಯೋ..!


ಮೂಡಿಗೆರೆಯ ಹಾಲಿ ಶಾಸಕ ಬಿ.ಬಿ ನಿಂಗಯ್ಯ ಬಾರಿಯೂ ಜೆಡಿಎಸ್ ನಿಂದ ರಣರಂಗಕ್ಕೆ ಧುಮುಕಿದ್ದಾರೆ. ವಿರೋಧ ಪಕ್ಷದ ಸಮರ್ಥ ನಾಯಕಿಯಾಗಿ ಕೆಲಸ ಮಾಡಿ ಹಾಲಿ ಎಂಎಲ್ ಸಿ ಯಾಗಿದ್ದ ಮೋಟಮ್ಮಗೆ ಕಾಂಗ್ರೆಸ್ ತನ್ನ ಟಿಕೆಟ್ ಕೊಟ್ಟಿದೆ. ಮೊದಲಿನಿಂದಲೂ ಟಿಕೆಟ್ ತನಗೇ ಸಿಗುತ್ತೆ ಅನ್ನೋ ಅಚಲ ವಿಶ್ವಾಸದಲ್ಲಿದ್ದ ಮೋಟಮ್ಮ ಆ ನಿಟ್ಟಿನಲ್ಲಿ ಕೆಲಸ ಮಾಡ್ತಿದ್ರು. ಇನ್ನು, ಬಿಜೆಪಿ ಮಾಜಿ ಶಾಸಕ ಎಂ.ಪಿ ಕುಮಾರಸ್ವಾಮಿಗೆ ಟಿಕೆಟ್ ಕೊಟ್ಟಿದೆ. ಕಳೆದ 15 ವರ್ಷಗಳಿಂದ ಕ್ಷೇತ್ರದಲ್ಲಿ ಓಡಾಡಿ ಪಕ್ಷ ಸಂಘಟನೆ ಮಾಡಿರೋ ಕುಮಾರಸ್ವಾಮಿಯವರಿಗೇ ಟಿಕೆಟ್ ಕೊಡಬೇಕು ಅನ್ನೋದು ಕಾರ್ಯಕರ್ತರ ಒಕ್ಕೊರೊಲ ಆಗ್ರಹವೂ ಆಗಿತ್ತು. ಹಾಗಾಗಿ, ಈ ಬಾರಿ ಮೂಡಿಗೆರೆ ಭಾರೀ ಸ್ಪರ್ಧೆಗೆ ಅಖಾಡವಾಗಿರೋದಂತೂ ಹೌದು.

ಶೃಂಗೇರಿಯ ಮತಾಧೀಶ ಯಾರನ್ನ ಪೀಠಕ್ಕೆ ಏರಿಸ್ತಾನೆ..?

 


ಶೃಂಗೇರಿಯ ಹಾಲಿ ಶಾಸಕ ಬಿಜೆಪಿಯ ಡಿ ಎನ್ ಜೀವರಾಜ್ ಈ ಬಾರಿಯೂ ಕಣದಲ್ಲಿರೋದು ಬಹುತೇಕ ಅವ್ರಿಗೆ ಪೈಪೋಟಿ ನೀಡೋ ಅಭ್ಯರ್ಥಿಯೇ ಇಲ್ಲ ಅನ್ನೋ ಮಾತುಗಳೂ ಕೇಳಿ ಬರ್ತಿವೆ. ಆಡಳಿತ ವಿರೋಧಿ ಅಲೆ, ಮೋದಿ ಅಲೆಯ ಜೊತೆಗೆ ಹಿಂದೂ ಮತಗಳು, ವೈಯಕ್ತಿಕ ವರ್ಚಸ್ಸು ಜೀವರಾಜ್ ಅವ್ರ ಸ್ಟ್ರೆಂಥ್. 2013ರ ಚುನಾವಣೆಯಲ್ಲಿ ಜೀವರಾಜ್ 58,402 ಮತ ಪಡೆದು ವಿಜಯ ಪತಾಕೆ ಹಾರಿಸಿದ್ರು. ಇನ್ನು, ಕಾಂಗ್ರೆಸ್ ಗೆ ಕೈ ಕೊಟ್ಟು ಬಂದು ತೆನೆ ಹೊತ್ತ ಮಾಜಿ ಸಚಿವ ಎಚ್ ಜಿ ಗೋವಿಂದೇಗೌಡ್ರ ಮಗ ವೆಂಕಟೇಶ್ ಈ ಬಾರಿ ಜೆಡಿಎಸ್ ಕಲಿ. ಕಾಂಗ್ರೆಸ್ ನಿಂದ ಕಣಕ್ಕೆ ಧುಮುಕಿರೋ ಟಿ.ಡಿ ರಾಜೇಗೌಡ ಶೃಂಗೇರಿಯ ಜನರ ಮನದಾಳವನ್ನ ಅರಿಯೋ ಪ್ರಯತ್ನ ಮಾಡಿದ್ದಾರೆ. ಹೇಳಿಕೊಂಡಷ್ಟು ಅಭಿವೃದ್ಧಿಯಾಗಿಲ್ಲ. ಜನ ಬದಲಾವಣೆ ಬಯಸಿದ್ದಾರೆ ಅನ್ನೋ ವನ್ ಲೈನ್ ಅಜೆಂಡಾ ಇವ್ರದ್ದು.

ದತ್ತಾ ಮೇಲಿಲ್ಲ ಕಡೂರು ಜನರಿಗೆ ಯಾವುದೇ ತಕರಾರು..!


ಕಡೂರಿನ ಹಾಲಿ ಎಂಎಲ್ ಎ, ಜೆಡಿಎಸ್ ನ ವೈ ಎಸ್ ವಿ ದತ್ತಾ ಈ ಬಾರಿಯೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. 2010ರ ತನಕ ಕಾಂಗ್ರೆಸ್ ಕಪಿಮುಷ್ಟಿಯಲ್ಲಿದ್ದ ಕಡೂರು ಕ್ಷೇತ್ರವನ್ನ 2013ರಲ್ಲಿ ದತ್ತಾ ತಮ್ಮದಾಗಿಸಿಕೊಂಡ್ರು. ಇನ್ನು ಟಿಕೆಟ್ ಘೋಷಣೆಗೂ ಮುನ್ನವೇ ಜಿಪಂ ಮಾಜಿ ಅಧ್ಯಕ್ಷ ಬೆಳ್ಳಿ ಪ್ರಕಾಶ್ ಪ್ರಚಾರಕ್ಕಾಗಿ ಹೈಟೆಕ್ ವಾಹನವೊಂದನ್ನು ಸಿದ್ಧಗೊಳಿಸಿದ್ರು. ಕೊನೆಗೂ ಬಿಜೆಪಿ ಅವ್ರಿಗೇ ಟಿಕೆಟ್ ಕನ್ಫರ್ಮ್ ಮಾಡಿದೆ. ಕಾಂಗ್ರೆಸ್ ಕೆ. ಎಸ್ ಆನಂದ್ ನ್ನ ಕಣಕ್ಕಿಳಿಸಿದೆ. ಆದ್ರೆ, ಇಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೇ ಇವ್ರಿಗೆ ಟಿಕೆಟ್ ಕೊಟ್ಟಿರೋದು ಸುತಾರಾಂ ಇಷ್ಟವಿರಲಿಲ್ಲ. ಹೀಗಾಗಿ, ಕಡೂರು ಕ್ಷೇತ್ರದಲ್ಲಿ ಯಾವ ರೀತಿಯ ಫಲಿತಾಂಶ ಸಿಗ್ಬೋದು ಅನ್ನೋದೇ ಸಾಕಷ್ಟು ಕುತೂಹಲ ಕೆರಳಿಸಿದೆ.

Click to comment

Leave a Reply

Your email address will not be published. Required fields are marked *