– ಸಾಲು ಸಾಲು ಹಗರಣಗಳ ಆರೋಪಕ್ಕೆ ಯುಪಿಎ ಸರ್ಕಾರ ಪತನ
– ಭ್ರಷ್ಟಾಚಾರ ವಿರುದ್ಧದ ಹೋರಾಟದೊಂದಿಗೆ ಹುಟ್ಟಿದ ಪಕ್ಷ ಎಎಪಿ
– ಪಬ್ಲಿಕ್ ಟಿವಿ ವಿಶೇಷ
ಡಾ. ಮನಮೋಹನ್ ಸಿಂಗ್ (Manmohan Singh) ನೇತೃತ್ವದ ಯುಪಿಎ ಸರ್ಕಾರದ ಸತತ ಅವಧಿಯ ಆಡಳಿತದಲ್ಲಿ ಹತ್ತಾರು ಹಗರಣಗಳ ಆರೋಪ ಕೇಳಿಬಂತು. ಮನಮೋಹನ್ ಸಿಂಗ್ ಅವರು ಕಳಂಕದಿಂದ ಮುಕ್ತರಾಗಿದ್ದಾರೆ ಎಂದು ಪರಿಗಣಿಸಿದ್ದರೂ, ಈ ಹಗರಣಗಳ ವಿಚಾರದಲ್ಲಿ ಅವರ ಮೌನ ಆಡಳಿತ ವಿರೋಧಿ ಅಲೆ ಮೇಲೇಳಲು ಕಾರಣವಾಯಿತು. ಹತ್ತು ವರ್ಷಗಳ ಅಧಿಕಾರದ ನಂತರ ಕಾಂಗ್ರೆಸ್ ಅನ್ನು ಜನ ದೃಢವಾಗಿ ಕೈಬಿಟ್ಟರು. ದೇಶದ ಆರ್ಥಿಕ ಪ್ರಗತಿ, ಉದ್ಯೋಗ, ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಸರ್ಕಾರ ಉತ್ತಮ ಕೆಲಸ ಮಾಡಿತು. ಆದರೆ ಸಾಲು ಸಾಲು ಹಗರಣಗಳ ಪಾಶ ಸಿಂಗ್ ಸರ್ಕಾರದ ಪತನಕ್ಕೆ ಕಾರಣವಾಯಿತು.
Advertisement
2ಜಿ ಸ್ಪೆಕ್ಟ್ರಂ ಹಗರಣ
ಯುಪಿಎ ಸರ್ಕಾರ 2014 ರಲ್ಲಿ ಅಧಿಕಾರ ಕಳೆದುಕೊಳ್ಳಲು ಕಾರಣವಾದ ಹಗರಣಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವುದು 2ಜಿ ತರಂಗಗುಚ್ಛ ಹಗರಣ. 2ಜಿ (ಸೆಕೆಂಡ್ ಜನರೇಶನ್ ದೂರಸಂಪರ್ಕ ಸೇವೆ) ಮೊಬೈಲ್ ಸೇವೆಗೆ 2008 ರಲ್ಲಿ ಆಗಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ 9 ದೂರಸಂಪರ್ಕ ಕಂಪನಿಗಳಿಗೆ ಬೇಕಾಬಿಟ್ಟಿ ಲೈಸೆನ್ಸ್ ನೀಡಿದ ಪ್ರಕರಣ ಇದು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 1,76,000 ಕೋಟಿ ರೂ. ನಷ್ಟವಾಯಿತು. ಆಗಿನ ದೂರ ಸಂಪರ್ಕ ಸಚಿವರಾಗಿದ್ದ ಎ.ರಾಜಾ ಅವರ ಮೇಲೆ ಆರೋಪ ಕೇಳಿಬಂದಿತ್ತು. ಹಗರಣ ಬೆಳಕಿಗೆ ಬರುತ್ತಿದ್ದಂತೆಯೇ ವಿಪಕ್ಷಗಳು, ಕಾಂಗ್ರೆಸ್ (Congress) ಅನ್ನು ತರಾಟೆಗೆ ತೆಗೆದುಕೊಂಡವು. ಪ್ರಕರಣದಲ್ಲಿ ಹಲವರ ತಲೆದಂಡವೂ ಆಯ್ತು. ಎ.ರಾಜಾ, ಕನ್ನಿಮೋಳಿ ಜೈಲುಪಾಲಾದರು. ಅಂತಿಮವಾಗಿ ಪ್ರಕರಣದ ಎಲ್ಲಾ 17 ಆರೋಪಿಗಳನ್ನೂ ಖುಲಾಸೆಗೊಳಿಸಲಾಯಿತು. ಇದನ್ನೂ ಓದಿ: 2009: ಮತ್ತೆ ಯುಪಿಎ ‘ಕೈ’ ಹಿಡಿದ ಜನ – ಇನ್ನಷ್ಟು ಕುಸಿದ ಬಿಜೆಪಿ
Advertisement
Advertisement
ಕಾಮನ್ವೆಲ್ತ್ ಗೇಮ್ ಹಗರಣ: 2010 ರಲ್ಲಿ ದಿಲ್ಲಿಯಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ ಸಂಘಟಿಸುವ ವೇಳೆ ಒಟ್ಟು 10 ಭ್ರಷ್ಟಾಚಾರ ಪ್ರಕರಣಗಳು ನಡೆದವು. ಕಾಮನ್ವೆಲ್ತ್ ಕ್ರೀಡಾಕೂಟ ಹಗರಣದಲ್ಲಿ ಸುರೇಶ್ ಕಲ್ಮಾಡಿ ಪ್ರಮುಖ ಆರೋಪಿಯಾದರು. ಕಾಮನ್ವೆಲ್ತ್ ಕ್ರೀಡಾಕೂಟ ಸಂಘಟಿಸಲು ಅಗತ್ಯವಿದ್ದ ನಿರ್ಮಾಣ ಕಾಮಗಾರಿಗಳಿಗೆ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಬಳಸಿರುವುದು, ಹೆಚ್ಚಿನ ಮೊತ್ತದ ಟೆಂಡರ್‌ಗೆ ಅನುಮತಿ ಕೊಟ್ಟಿರುವ ಅವ್ಯವಹಾರ ಆರೋಪ ಕೇಳಿಬಂದಿತ್ತು. ದೆಹಲಿ ಮತ್ತು ಕೇಂದ್ರ ಸರ್ಕಾರಗಳ ವಿವಿಧ ಅಂಗ ಸಂಸ್ಥೆಗಳು ಒಟ್ಟು 3,316.58 ಕೋಟಿ ಮೌಲ್ಯದ 26 ನಿರ್ಮಾಣ ಕಾಮಗಾರಿಗಳು ನಡೆದಿದ್ದವು. ಎಲ್ಲವೂ ಕಳಪೆ ಹಾಗೂ ಕೆಳದರ್ಜೆಯಿಂದ ಕೂಡಿದೆ ಎಂಬ ಆರೋಪ ಕೇಳಿಬಂತು. ಇದರಿಂದ ಸರ್ಕಾರ ಜಾಗತಿಕವಾಗಿ ಮುಜುಗರಕ್ಕೆ ಒಳಗಾಯಿತು. ಅಂತಿಮವಾಗಿ ಕಲ್ಮಾಡಿ ಜೈಲು ಸೇರುವಂತಾಯಿತು.
Advertisement
ಕಲ್ಲಿದ್ದಲು ಹಗರಣ: 194 ಕೋಲ್ ಬ್ಲಾಕ್‌ಗಳ ಹಂಚಿಕೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಸಿಎಜಿ ಬಹಿರಂಗಪಡಿಸಿತು. ಇದರಿಂದ ಸರ್ಕಾರವು 1.86 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿತು. ಇದನ್ನೂ ಓದಿ: 2004: ಎನ್‌ಡಿಎ ಔಟ್.. ಯುಪಿಎ ಇನ್ – ಗಾಂಧಿಯೇತರ ನಾಯಕನಿಗೆ ಪ್ರಧಾನಿ ಪಟ್ಟ
ಅಗಸ್ಟ ವೆಸ್ಟ್ಲೆಂಡ್ ಪ್ರಕರಣ: ಗಣ್ಯವ್ಯಕ್ತಿಗಳ ಹಾರಾಟಕ್ಕೆಂದು 3,600 ಕೋಟಿ ವೆಚ್ಚದಲ್ಲಿ ಭಾರತ 2010 ರಲ್ಲಿ 12 ಅಗಸ್ಟಾ ವೆಸ್ಟೆಲೆಂಡ್ ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿತ್ತು. ಈ ಖರೀದಿ ವ್ಯವಹಾರದಲ್ಲಿ ಅವ್ಯವಹಾರ ನಡೆದಿದೆ ಎನ್ನುವ ಕೂಗು ಬಹುಕಾಲದಿಂದ ಕೇಳಿಬಂದಿತ್ತು. ವಾಯುಪಡೆಯ ಮಾಜಿ ಮುಖ್ಯಸ್ಥರು ಸೇರಿ ಹಲವು ಪ್ರಭಾವಿಗಳು ಹಗರಣದ ಆರೋಪಿಗಳಾಗಿದ್ದರು. ರಾಷ್ಟ್ರಪತಿ, ಉಪರಾಷ್ಟçಪತಿ, ಪ್ರಧಾನಮಂತ್ರಿಯಂಥ ಅತಿಗಣ್ಯರನ್ನು ಹೊತ್ತೊಯ್ಯಲು ಬಳಸುತ್ತಿದ್ದ ಎಂಐ-8 ಹೆಲಿಕಾಪ್ಟರ್‌ಗಳನ್ನು ಬದಲಿಸಬೇಕು ಎಂದು ನಿರ್ಧರಿಸಿದ್ದ ಯುಪಿಎ ಸರ್ಕಾರ, ವಾಯುಪಡೆಯ ಕಮ್ಯುನಿಕೇಷನ್ ಸ್ಕ್ವಾರ್ಡನ್‌ಗೆ 12 ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಅನುಮತಿ ನೀಡಿತು. ಖರೀದಿಗಾಗಿ ಟೆಂಡರ್ ನಿಯಮಾವಳಿ ರೂಪಿಸುವಾಗ ನಿರ್ದಿಷ್ಟ ಕಂಪನಿಗೆ ಅನುಕೂಲ ಮಾಡಿಕೊಡುವಂತೆ ಷರತ್ತುಗಳನ್ನು ವಿಧಿಸಲಾಯಿತು. ಮತ್ತೊಂದು ಕಂಪನಿ ಸಲ್ಲಿಸಿದ್ದ ಸ್ಪರ್ಧಾತ್ಮಕ ಬಿಡ್ ದಾಖಲೆಗಳನ್ನು ಪರಿಗಣಿಸದೇ ನಿರ್ದಿಷ್ಟ ಕಂಪನಿಗೆ ಅನುಕೂಲ ಮಾಡಿಕೊಡಲಾಯಿತು. ಈ ಎಲ್ಲ ಅವ್ಯವಹಾರಗಳ ಹಿಂದಿನ ಚಾಲಕ ಶಕ್ತಿ ಮೈಕಲ್ ಜೇಮ್ಸ್ ಎಂಬ ಆರೋಪವಿತ್ತು.
ಆದರ್ಶ ಹಗರಣ, ಟಟ್ರಾಟ್ರಕ್ ಹಗರಣ, ಸತ್ಯಂ ಹಗರಣ ಇತ್ಯಾದಿಗಳು.. ಯುಪಿಎಗೆ ಭಾರಿ ಮುಜುಗರ ಉಂಟು ಮಾಡಿತು. ಇದು ದೇಶದಲ್ಲಿ ಕಾಂಗ್ರೆಸ್ ವಿರೋಧಿ ಅಲೆಗೆ ಕಾರಣವಾಯಿತು. ಭ್ರಷ್ಟಾಚಾರದ ವಿರುದ್ಧ ಭಾರತದಲ್ಲಿ ಚಳವಳಿ ಪ್ರಾರಂಭವಾದವು.
ಭ್ರಷ್ಟಾಚಾರದ ವಿರುದ್ಧ ಭಾರತ
2011 ಮತ್ತು 2012 ರ ವರೆಗೆ ಭ್ರಷ್ಟಾಚಾರ ವಿರೋಧಿ ಆಂದೋಲನಗಳು ನಡೆದವು. ಭ್ರಷ್ಟಾಚಾರದ ವಿರುದ್ಧ ಸರಣಿ ಪ್ರತಿಭಟನೆಗಳು ನಡೆದವು. ದೆಹಲಿಯಲ್ಲಿ ಅಣ್ಣಾ ಹಜಾರೆ (Anna Hazare) ನೇತೃತ್ವದಲ್ಲಿ ಭ್ರಷ್ಟಾಚಾರದ ವಿರುದ್ಧ ಭಾರತ (IAC) ಆಂದೋಲನ ಪ್ರತಿಧ್ವನಿಸಿತು. ಇದು ದೇಶಾದ್ಯಂತ ಪಸರಿಸಿತು. ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿರುವ ಸರ್ಕಾರಿ ಅಧಿಕಾರಿಗಳ ಮೇಲೆ ಆರೋಪ ಹೊರಿಸುವ ಅಧಿಕಾರವನ್ನು ಹೊಂದಿರುವ ಲೋಕಪಾಲ್ ರಚನೆಗೆ ರಾಷ್ಟ್ರವ್ಯಾಪಿ ಬೇಡಿಕೆ ವ್ಯಕ್ತವಾಯಿತು. ಭಾರತವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಬೇಕೆಂಬ ಹೋರಾಟ ತೀವ್ರಗೊಂಡಿತು. ಇದು ರಾಜಕೀಯೇತರ ವ್ಯಕ್ತಿಗಳ ನೇತೃತ್ವದ ಸಾಮೂಹಿಕ ಚಳುವಳಿಯಾಗಿತ್ತು. ಕೋರ್ ಕಮಿಟಿಯ ಕೆಲವು ಸದಸ್ಯರು ಅಂತಿಮವಾಗಿ ತಮ್ಮದೇ ಆದ ರಾಜಕೀಯ ಪಕ್ಷಗಳನ್ನು ರಚಿಸಿದರು. ಟೀಮ್ ಅಣ್ಣಾ ಎಂದು ಕರೆಯಲ್ಪಡುವ ಐಎಸಿ ಸದಸ್ಯರು ತಮ್ಮ ಶಾಂತಿಯುತ ಪ್ರತಿಭಟನೆಗಳ ಮೂಲಕ ಸಾಮೂಹಿಕ ಬೆಂಬಲವನ್ನು ಗಳಿಸುವಲ್ಲಿ ಯಶಸ್ವಿಯಾದರು. ಆಗ ಉದಯವಾಗಿದ್ದೇ ಆಮ್ ಆದ್ಮಿ ಪಕ್ಷ (AAP). ಮುಂದೆ ಇದು ದೆಹಲಿ ಮತ್ತು ಪಂಜಾಬ್ ರಾಜ್ಯಗಳಲ್ಲಿ ರಾಜಕೀಯವಾಗಿ ಪ್ರಬಲವಾಗಿ ಬೆಳೆದು ಆಡಳಿತ ಚುಕ್ಕಾಣಿ ಹಿಡಿದಿದೆ. ಇದನ್ನೂ ಓದಿ: 1999: ಮತ್ತೆ ಪ್ರಧಾನಿಯಾದ ‘ಅಜಾತಶತ್ರು’ – 5 ವರ್ಷ ಪೂರ್ಣ ಆಡಳಿತ ನಡೆಸಿದ ಮೊದಲ ಬಿಜೆಪಿ ನಾಯಕ
ಚುನಾವಣೆಗೆ ಬಿಜೆಪಿ ಕಾರ್ಯತಂತ್ರ
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಮೇಲಿನ ಭ್ರಷ್ಟಾಚಾರ ಆರೋಪಗಳನ್ನು ಬಿಜೆಪಿ ರಾಜಕೀಯ ದಾಳವಾಗಿ ಬಳಸಿಕೊಂಡಿತು. ವಿಪಕ್ಷವಾಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿತು. ಇದು ಭ್ರಷ್ಟ ಸರ್ಕಾರ ಎಂದು ದೇಶದೆಲ್ಲೆಡೆ ಪ್ರಚಾರ ಮಾಡುತ್ತಾ ಬಂದಿತು. ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಅಲರ್ಟ್ ಆಯಿತು. 2014 ರ ಲೋಕಸಭಾ ಚುನಾವಣೆಗೆ ಬಿಜೆಪಿ ಪ್ರಚಾರ ಮುಖ್ಯಸ್ಥರನ್ನಾಗಿ ನರೇಂದ್ರ ಮೋದಿ ಅವರನ್ನು ನೇಮಿಸಲಾಯಿತು. ಪಕ್ಷದ ಚುನಾವಣಾ ಕಾರ್ಯತಂತ್ರದ ಉಸ್ತುವಾರಿಯನ್ನು ನರೇಂದ್ರ ಮೋದಿ (Narendra Modi) ಮತ್ತು ಅಮಿತ್ ಶಾ ವಹಿಸಿಕೊಂಡರು. ನಾಲ್ಕು ಬಾರಿ ಗುಜರಾತ್‌ನ ಸಿಎಂ ಆಗಿ ರಾಜ್ಯವನ್ನು ಮುನ್ನಡೆಸಿದ ಅನುಭವ ಇದ್ದ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಜೆಪಿ ಘೋಷಿಸಿತು.
ಇತ್ತ, ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿಯವರೊಂದಿಗೆ ತನ್ನ ಪ್ರಚಾರವನ್ನು ಮುನ್ನಡೆಸಲು ಕಾಂಗ್ರೆಸ್ ರಾಹುಲ್ ಗಾಂಧಿಯನ್ನು ಪ್ರೇರೇಪಿಸಿತು. ಮನಮೋಹನ್ ಸಿಂಗ್ ಅವರು ಪ್ರಧಾನಿ ಹುದ್ದೆಗೆ ಅಭ್ಯರ್ಥಿಯಲ್ಲ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿತು. ಪಕ್ಷ ಗೆದ್ದರೆ ರಾಹುಲ್ ಅವರು ಪ್ರಧಾನಿಯಾಗಬಹುದು ಎಂಬ ಊಹಾಪೋಹಕ್ಕೆ ಇದು ಕಾರಣವಾಯಿತು. ಕಾಂಗ್ರೆಸ್‌ಗೆ ರಾಹುಲ್ ಮತ್ತು ಬಿಜೆಪಿಗೆ ಮೋದಿ ಎಂಬಂತೆ ಚುನಾವಣಾ ಪ್ರಚಾರದಲ್ಲಿ ಬಿಂಬಿತವಾಯಿತು.
35 ರಾಜ್ಯಗಳು, 36 ದಿನ ಚುನಾವಣೆ
ದೇಶದ 16ನೇ ಸಾರ್ವತ್ರಿಕ ಚುನಾವಣೆಯು ಏ.7 ರಿಂದ ಮೇಲೆ 12 ರ ವರೆಗೆ ನಡೆಯಿತು. 35 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ 35 ದಿನದ ಅವಧಿಯಲ್ಲಿ ಮತದಾನ ನಡೆಯಿತು. ಇದನ್ನೂ ಓದಿ: 1998: ಮತ್ತೆ ದಿಲ್ಲಿ ಗದ್ದುಗೆಯೇರಿದ ವಾಜಪೇಯಿ – ಕರ್ನಾಟಕದಲ್ಲಿ ಬಿಜೆಪಿ ಎರಡಂಕಿಗೆ ಜಿಗಿತ
6 ರಾಷ್ಟ್ರೀಯ ಹಾಗೂ 39 ಪ್ರಾದೇಶಿಕ ಪಕ್ಷಗಳು ಸೇರಿದಂತೆ ಒಟ್ಟು 464 ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದವು.
ಒಟ್ಟು ಕ್ಷೇತ್ರಗಳು: 543
ಒಟ್ಟು ಅಭ್ಯರ್ಥಿಗಳು: 8,251
ಮತದಾರರ ವಿವರ
ಒಟ್ಟು ಮತದಾರರು: 83,40,82,814
ಮತ ಚಲಾಯಿಸಿದವರು: 55,30,20,648
ಮತ ಪ್ರಮಾಣ: 66.30%
ಪಕ್ಷಗಳ ಬಲಾಬಲ ಎಷ್ಟು?
ಬಿಜೆಪಿ – 282
ಕಾಂಗ್ರೆಸ್ – 44
ಎಐಎಡಿಎಂಕೆ – 37
ಎಐಟಿಸಿ – 33
ಇತರೆ – 142
ಬಹುಮತದೊಂದಿಗೆ ಅಧಿಕಾರ ಹಿಡಿದ ಮೊದಲ ಕಾಂಗ್ರೆಸ್ಸೇತರ ಪಕ್ಷ ಬಿಜೆಪಿ
ಭಾರತೀಯ ಜನತಾ ಪಕ್ಷ (ಎನ್‌ಡಿಎ) 543 ರಲ್ಲಿ 282 ಸ್ಥಾನಗಳೊಂದಿಗೆ ಪೂರ್ಣ ಬಹುಮತದ ಗೆಲುವು ದಾಖಲಿಸಿತು. ಸ್ವತಂತ್ರ ಭಾರತದ ಚುನಾವಣಾ ರಾಜಕೀಯ ಇತಿಹಾಸದಲ್ಲಿ ಬಿಜೆಪಿ ಮೊದಲ ಬಾರಿಗೆ ಪೂರ್ಣ ಬಹುಮತ ಗಳಿಸಿ ಅಧಿಕಾರದ ಗದ್ದುಗೆ ಏರಿತು. ಸರ್ಕಾರ ರಚಿಸಲು ಅಗತ್ಯವಾದ ಮ್ಯಾಜಿಕ್ ಸಂಖ್ಯೆಯನ್ನು ಏಕಾಂಗಿಯಾಗಿ ದಾಟಿದ ಮೊದಲ ಕಾಂಗ್ರೆಸ್ಸೇತರ ಪಕ್ಷವಾಗಿಯೂ ಹೊರಹೊಮ್ಮಿತು. ಹಿಂದಿನ 15 ನೇ ಲೋಕಸಭೆಗಿಂತ 166 ಸ್ಥಾನಗಳನ್ನು ಬಿಜೆಪಿ ಹೆಚ್ಚಿಸಿಕೊಂಡಿತು. ಕಾಂಗ್ರೆಸ್ ಕೇವಲ 44 ಸ್ಥಾನಗಳನ್ನು ಮಾತ್ರ ಗೆದ್ದಿತು. 162 ಸ್ಥಾನಗಳ ಗಣನೀಯ ಕುಸಿತ ಕಂಡಿತು. ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು 2014 ರ ಮೇ 26 ರಂದು ಭಾರತದ 18 ನೇ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.
ಆಮ್ ಆದ್ಮಿ ಪಕ್ಷ
ಯುಪಿಎ ಸರ್ಕಾರದ ಭ್ರಷ್ಟಾಚಾರ ವಿರುದ್ಧದ ಹೋರಾಟದೊಂದಿಗೆ ಉದಯಿಸಿದ ಪಕ್ಷ ಎಎಪಿ. ಈ ಹೋರಾಟ ಮೊದಲು ರಾಜಕೀಯೇತರವಾಗಿತ್ತು. ನಂತರ ರಾಜಕೀಯ ಪಕ್ಷವೊಂದರ ಉದಯಕ್ಕೆ ಕಾರಣವಾಯಿತು. 2014 ರ ಲೋಕಸಭಾ ಚುನಾವಣೆಯಲ್ಲಿ ಎಎಪಿ ಸ್ಪರ್ಧಿಸಿ, 4 ಸ್ಥಾನಗಳನ್ನು ಗೆದ್ದು ಗಮನ ಸೆಳೆಯಿತು. ಎಎಪಿ ಬರಬರುತ್ತಾ ದೆಹಲಿಯಲ್ಲಿ ತನ್ನ ನೆಲೆ ವಿಸ್ತರಿಸಿಕೊಂಡಿತು. ಇದನ್ನೂ ಓದಿ: 1996: ವಾಜಪೇಯಿ ಪ್ರಧಾನಿಯಾಗಿದ್ದು ಕೇವಲ 16 ದಿನ, ನಂತರ ಬಂದ್ರು ದೇವೇಗೌಡ್ರು!
ಕರ್ನಾಟಕದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ?
ಬಿಜೆಪಿ – 17
ಕಾಂಗ್ರೆಸ್ – 9
ಜೆಡಿಎಸ್ – 2