– 2ನೇ ಅವಧಿಗೆ ಪ್ರಧಾನಿಯಾದ ಮನಮೋಹನ್ ಸಿಂಗ್
– ದೇಶ ಗೆದ್ದರೂ ಕರ್ನಾಟಕದಲ್ಲಿ ಕುಸಿದ ಕಾಂಗ್ರೆಸ್
ಪಬ್ಲಿಕ್ ಟಿವಿ
2004 ರಲ್ಲಿ ಮನಮೋಹನ್ ಸಿಂಗ್ (Manmohan Singh) ನೇತೃತ್ವದ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (UPA) ಸರ್ಕಾರ ಐದು ವರ್ಷಗಳ ಪೂರ್ಣ ಆಡಳಿತ ನಡೆಸಿತು. ಸ್ಥಿರ ಸರ್ಕಾರದ ಆಡಳಿತಕ್ಕೆ ತನ್ನ ಮೈತ್ರಿ ಪಾಲುದಾರರನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಯಿತು. ಅಚ್ಚರಿ ಎಂಬಂತೆ ಪ್ರಧಾನಿ ಸ್ಥಾನ ಅಲಂಕರಿಸಿದ್ದ ಮನಮೋಹನ್ ಸಿಂಗ್ ವಿವಾದಾತ್ಮಕವಲ್ಲದ ವ್ಯಕ್ತಿಯಾಗಿ ಸ್ಥಿರವಾದ ಮೈತ್ರಿ ಹಡಗನ್ನು ಮುನ್ನಡೆಸಿದರು. ಆದರೂ ಅವರು ಕೇವಲ ವಾಸ್ತವಿಕ ಪ್ರಧಾನ ಮಂತ್ರಿ, ಆಡಳಿತದ ಚುಕ್ಕಾಣಿ ಸೋನಿಯಾರ ಕೈಯಲ್ಲಿದೆ ಎಂಬ ಆರೋಪಗಳು ಕೇಳಿಬಂದಿದ್ದವು.
Advertisement
ಭಾರತದ ಜಿಡಿಪಿ ಹೆಚ್ಚಳ
ಯುಪಿಎ ಸರ್ಕಾರದ ಮೊದಲ ಐದು ವರ್ಷಗಳ ಆಡಳಿತದಲ್ಲಿ ಭಾರತವು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಎಲ್ಲಾ ಕ್ಷೇತ್ರಗಳಲ್ಲೂ ಸುಧಾರಣೆ ಕಂಡಿತು ಎಂದು ವಿಶ್ಲೇಷಿಸಲಾಗಿದೆ. ಭಾರತದ ಜಿಡಿಪಿ ಬೆಳವಣಿಗೆ ದರವು ವಾಜಪೇಯಿ ಅವರ ಅವಧಿಯಲ್ಲಿ ಶೇ.8 ರಷ್ಟು ಮುಟ್ಟಿತ್ತು. ಆದರೆ ಅದು ಮನಮೋಹನ್ ಸಿಂಗ್ ಅವರ ಆಡಳಿತದಲ್ಲಿ ಶೇ.9 ಕ್ಕೆ ಏರಿತು. 2008 ರ ಜಾಗತಿಕ ಆರ್ಥಿಕ ಬಿಕ್ಕಟ್ಟ ಎದುರಾಗಿತ್ತು. ಆಗ ಭಾರತದ ಜಿಡಿಪಿ (GDP) ಬೆಳವಣಿಗೆ ದರವು ಶೇ.6.7 ಆಗಿತ್ತು. ಇದನ್ನೂ ಓದಿ: 2004: ಎನ್‌ಡಿಎ ಔಟ್.. ಯುಪಿಎ ಇನ್ – ಗಾಂಧಿಯೇತರ ನಾಯಕನಿಗೆ ಪ್ರಧಾನಿ ಪಟ್ಟ
Advertisement
Advertisement
ಇಂಡೋ-ಯುಎಸ್ ಪರಮಾಣು ಒಪ್ಪಂದಕ್ಕೆ ಮೈತ್ರಿಯಲ್ಲೇ ವಿರೋಧ
ಮನಮೋಹನ್ ಸರ್ಕಾರದ ಅಡಿಯಲ್ಲಿ ಭಾರತವು ತನ್ನ ರಫ್ತಿನ ಪಾಲನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಯಿತು. ಶಿಕ್ಷಣವನ್ನು ವಿಸ್ತರಿಸಲಾಯಿತು. NREGA ದಂತಹ ಉದ್ಯೋಗ ಯೋಜನೆಗಳನ್ನು ತರಲಾಯಿತು. ಮಾಹಿತಿ ಹಕ್ಕು ಕಾಯ್ದೆಯನ್ನು ಅಂಗೀಕರಿಸಲಾಯಿತು. ಸ್ಥಿರ ಆಡಳಿತದ ನಡುವೆಯೂ ಸರ್ಕಾರಕ್ಕೆ ಹಲವು ಸವಾಲುಗಳಿದ್ದವು. ಇಂಡೋ-ಯುಎಸ್ ಪರಮಾಣು ಒಪ್ಪಂದವು ಯುಪಿಎ ಮತ್ತು ವಿರೋಧ ಪಕ್ಷಗಳ ನಡುವೆ ಹಾಗೂ ಯುಪಿಎಯೊಳಗೆ ಘರ್ಷಣೆ ಉಂಟು ಮಾಡಿತ್ತು. ಎಡರಂಗವು ಈ ಒಪ್ಪಂದವನ್ನು ತೀವ್ರವಾಗಿ ವಿರೋಧಿಸಿತು. ಮನಮೋಹನ್ ಸಿಂಗ್ ಮತ್ತು ಯುಎಸ್ ಅಧ್ಯಕ್ಷ ಜಾರ್ಜ್ ಬುಷ್ ಅವರು ಒಪ್ಪಂದಕ್ಕೆ ಸಹಿ ಹಾಕಿದ್ದು, ಆಡಳಿತ ಮೈತ್ರಿಕೂಟದ ಅನೇಕ ನಾಯಕರು ಮತ್ತು ವಿಪಕ್ಷಗಳ ವಿರೋಧಕ್ಕೆ ಕಾರಣವಾಗಿತ್ತು. ಆದರೂ ಸಿಂಗ್ ಸರ್ಕಾರವು ಯಶಸ್ವಿಯಾಗಿ ಐದು ವರ್ಷ ಪೂರ್ಣ ಆಡಳಿತ ನಡೆಸಿತು.
Advertisement
35 ರಾಜ್ಯಗಳು, 28 ದಿನ ಚುನಾವಣೆ
15ನೇ ಸಾರ್ವತ್ರಿಕ ಚುನಾವಣೆಯು ಏಪ್ರಿಲ್ 16 ರಿಂದ ಮೇ 13 ರ ವರೆಗೆ ನಡೆಯಿತು. 35 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ 28 ದಿನ ಮತದಾನ ನಡೆಯಿತು. ಇದನ್ನೂ ಓದಿ: 1999: ಮತ್ತೆ ಪ್ರಧಾನಿಯಾದ ‘ಅಜಾತಶತ್ರು’ – 5 ವರ್ಷ ಪೂರ್ಣ ಆಡಳಿತ ನಡೆಸಿದ ಮೊದಲ ಬಿಜೆಪಿ ನಾಯಕ
ಚುನಾವಣೆಯಲ್ಲಿ 7 ರಾಷ್ಟ್ರೀಯ ಹಾಗೂ 34 ಪ್ರಾದೇಶಿಕ ಪಕ್ಷಗಳು ಸೇರಿ ಒಟ್ಟಾರೆ 363 ಪಕ್ಷಗಳು ಸ್ಪರ್ಧೆ ಮಾಡಿದ್ದರು.
ಒಟ್ಟು ಕ್ಷೇತ್ರಗಳು: 543
ಅಭ್ಯರ್ಥಿಗಳು: 8,070
ಮತದಾರರ ವಿವರ
ಒಟ್ಟು ಮತದಾರರು: 71,69,85,101
ಪುರುಷರು: 37,47,58,801
ಮಹಿಳೆಯರು: 34,22,26,300
ಯಾವ ಪಕ್ಷಕ್ಕೆ ಎಷ್ಟು ಸ್ಥಾನ?
ಕಾಂಗ್ರೆಸ್ – 206
ಬಿಜೆಪಿ – 116
ಬಿಎಸ್‌ಪಿ – 21
ಸಿಪಿಐ(ಎಂ) – 16
ಎನ್‌ಸಿಪಿ – 9
ಆರ್‌ಜೆಡಿ – 4
ಸಿಪಿಐ – 4
ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ
2009 ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಬೆಂಬಲಿಸಬಹುದು ಎಂಬ ಊಹಾಪೋಹ ಇತ್ತು. ಆದರೆ ಯುಪಿಎ ಮತ್ತೆ ಅಧಿಕಾರಕ್ಕೆ ಬಂದರೆ ಮನಮೋಹನ್ ಸಿಂಗ್ ಅವರನ್ನೇ ಪ್ರಧಾನಿಯಾಗಿ ಮುಂದುವರಿಸಲಾಗುವುದು ಎಂದು ಸೋನಿಯಾ ಗಾಂಧಿ ಘೋಷಿಸಿದ್ದರು. ಅದರಂತೆ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಕಾಂಗ್ರೆಸ್ ಹೊರಹೊಮ್ಮಿತು. ಯುಪಿಎ ಮೈತ್ರಿಕೂಟ ಮತ್ತೆ ಸರ್ಕಾರ ರಚಿಸಿತು. ಇದನ್ನೂ ಓದಿ: 1998: ಮತ್ತೆ ದಿಲ್ಲಿ ಗದ್ದುಗೆಯೇರಿದ ವಾಜಪೇಯಿ – ಕರ್ನಾಟಕದಲ್ಲಿ ಬಿಜೆಪಿ ಎರಡಂಕಿಗೆ ಜಿಗಿತ
ಕುಸಿತ ಕಂಡ ಬಿಜೆಪಿ
2004 ರ ಚುನಾವಣೆಯಲ್ಲಿ 138 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ 2009 ರ ಚುನಾವಣೆಗೆ 22 ಸ್ಥಾನಗಳ ಕುಸಿತ ಕಂಡಿತು. 116 ಸ್ಥಾನಗಳನ್ನು ಮಾತ್ರ ಗೆದ್ದಿತು. ಮತಗಳ ಪ್ರಮಾಣ 22.16% ಗೆ ಕುಸಿತ ಕಂಡಿತು. ಕಾಂಗ್ರೆಸ್ 2004 ರಲ್ಲಿ 145 ಸ್ಥಾನ ಇದ್ದಿದ್ದು, 2009 ಕ್ಕೆ 206 ಸ್ಥಾನಗಳಲ್ಲಿ ಗೆಲುವು ಸಾಧಿಸಿ, 61 ಸೀಟ್‌ಗಳನ್ನು ಹೆಚ್ಚಿಸಿಕೊಂಡಿತು. ಮತಗಳ ಪ್ರಮಾಣ 26.53% ಗೆ ಏರಿಕೆ ಕಂಡಿತು. ಬಹುಜನ ಸಮಾಜ ಪಕ್ಷ (21) ಮತ್ತು ಎಐಎಡಿಎಂಕೆ (9) ಚುನಾವಣೆಯಲ್ಲಿ ಉತ್ತಮ ಫಲಿತಾಂಶದೊಂದಿಗೆ ಗಮನ ಸೆಳೆದವು.
ಕರ್ನಾಟಕದಲ್ಲಿ ಏನಾಗಿತ್ತು?
ಬಿಜೆಪಿ – 19
ಕಾಂಗ್ರೆಸ್ – 6
ಜೆಡಿಎಸ್ – 3
ದಶಕದಿಂದ ಎರಡಂಕಿ ದಾಟದ ಕಾಂಗ್ರೆಸ್
1999 ರಲ್ಲಿ ಕಾಂಗ್ರೆಸ್ ಪಕ್ಷ 18 ಸ್ಥಾನಗಳನ್ನು ಗೆದ್ದಿತ್ತು. 2004 ರಲ್ಲಿ ಇದು 8 ಕ್ಕೆ ಇಳಿಯಿತು. 2009 ರಲ್ಲಿ 6 ಕ್ಕೆ ಸೀಮಿತವಾಯಿತು. ಆದರೆ ಬಿಜೆಪಿ ಎರಡಂಕಿಯೊಂದಿಗೆ ಏರುಗತಿಯಲ್ಲಿ ಸಾಗಿದೆ. ಇದನ್ನೂ ಓದಿ: 1996: ವಾಜಪೇಯಿ ಪ್ರಧಾನಿಯಾಗಿದ್ದು ಕೇವಲ 16 ದಿನ, ನಂತರ ಬಂದ್ರು ದೇವೇಗೌಡ್ರು!