ಬಳ್ಳಾರಿ: ಸಂಡೂರು ತಾಲೂಕಿನ ಕುರೇಕುಪ್ಪ ಫಾರ್ಮ್‍ನಲ್ಲಿ ಹಕ್ಕಿಜ್ವರ (Bird Flu) ಪತ್ತೆಯಾಗಿದ್ದು ಸಾವಿರಾರು ಕೋಳಿಗಳು ಸಾವನ್ನಪ್ಪಿವೆ.
ಕುರೇಕುಪ್ಪ ಜಾನುವಾರು ಸಂವರ್ಧನೆ ಮತ್ತು ತರಬೇತಿ ಕೇಂದ್ರದಲ್ಲಿನ ಕೋಳಿಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದೆ. ಹಕ್ಕಿಜ್ವರದಿಂದ 2,000 ಕೋಳಿಗಳು ಸತ್ತಿರುವುದು ದೃಢಪಟ್ಟಿದೆ. ತರಬೇತಿ ಕೇಂದ್ರದಲ್ಲಿ ರೈತರಿಗೆ ವಿತರಿಸಲು ಅಸೀಲ್ ತಳಿಯ ಕೋಳಿಗಳನ್ನು ಸಾಕಲಾಗಿತ್ತು.
ಕಳೆದ ಹತ್ತು ದಿನಗಳಿಂದ ಪ್ರತಿದಿನ ಮೂವತ್ತು ಕೋಳಿಗಳು ಸಾಯುತ್ತಿವೆ. ಕೋಳಿಗಳ ಸ್ಯಾಂಪಲ್‍ನ್ನು ಭೋಪಾಲ್‍ನಲ್ಲಿನ ಲ್ಯಾಬ್‍ಗೆ ಕಳುಹಿಸಲಾಗಿತ್ತು. ಇದೀಗ ಕೋಳಿಗಳಲ್ಲಿ ಹಕ್ಕಿಜ್ವರ ಇರುವುದು ದೃಢಪಟ್ಟಿದೆ. ಇನ್ನೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪಶುಸಂಗೋಪನಾ ಇಲಾಖೆ ಮಾಹಿತಿ ನೀಡಿದೆ.
ಕೇಂದ್ರದ ಒಂದು ಕಿಮೀ ವ್ಯಾಪ್ತಿಯಲ್ಲಿ ಯಾವುದೇ ಹಳ್ಳಿಗಳು, ಜನವಸತಿ ಪ್ರದೇಶಗಳು ಇಲ್ಲ. 10 ಕಿಮೀ ವ್ಯಾಪ್ತಿಯಲ್ಲಿ ಯಾವುದೇ ಖಾಸಗಿ ಕೋಳಿ ಫಾರ್ಮ್‍ಗಳು ಇಲ್ಲ. ಇದರಿಂದ ಹಕ್ಕಿಜ್ವರ ಬೆರೆಡೆಗೆ ಹರಡುವ ಸಾಧ್ಯತೆ ಕಡಿಮೆ ಇದೆ.