– ನಿರ್ಲಕ್ಷ್ಯ ತೋರಿಸದೇ ಮೇಕೆದಾಟು ಯೋಜನೆ ಪೂರ್ಣಗೊಳಿಸಿ
ಬೆಂಗಳೂರು: ಸರ್ಕಾರದ ವಿರುದ್ಧವೇ ಸ್ವಪಕ್ಷೀಯರು ಮಾಡಿರುವ 2 ಸಾವಿರ ಕೋಟಿ ನೀರಾವರಿ ಕಿಕ್‍ಬ್ಯಾಕ್ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ಯಾಕಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
2006ರಲ್ಲಿ ಸಿಎಂ ಆಗಿದ್ದ ನನ್ನ ವಿರುದ್ಧ ಬಿಜೆಪಿ ನಾಯಕರೇ ರೂ 150 ಕೋಟಿ ಗಣಿ ಲಂಚ ಆರೋಪ ಮಾಡಿದ್ದರು. ಸರ್ಕಾರದ ಪಾಲುದಾರ ಪಕ್ಷದವರೇ ದೂರಿದ್ದರಿಂದ ನಾನು ಅದನ್ನು ಲೋಕಾಯುಕ್ತಕ್ಕೆ ವಹಿಸಿ ಪಾರದರ್ಶಕತೆ ಕಾದುಕೊಂಡಿದ್ದೆ. ಈಗಿನ ಸರ್ಕಾರದ ವಿರುದ್ಧ ಸ್ವಪಕ್ಷೀಯರೇ ರೂ 2000 ಕೋಟಿ ನೀರಾವರಿ ಕಿಕ್‍ಬ್ಯಾಕ್ ಆರೋಪ ಮಾಡಿದ್ದಾರೆ. ಈಗ ತನಿಖೆ ಯಾಕಿಲ್ಲ?
Advertisement
Advertisement
ರಾಕ್ಷಸ ಸರ್ಕಾರವೊಂದನ್ನು ಕೆಡವಿ ಅತ್ಯಂತ ಸಜ್ಜನ, ಸ್ವಚ್ಛ ಸರ್ಕಾರವನ್ನು ಪ್ರತಿಷ್ಠಾಪಿಸಿದವರೇ ಈ ಆರೋಪ ಮಾಡಿದ್ದಾರೆ. ಹೀಗಾಗಿ ಈ ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕು. ಸಿಎಂ ಯಡಿಯೂರಪ್ಪ 2006ರಲ್ಲಿ ನಾನು ಇಟ್ಟಂಥ ಹೆಜ್ಜೆಯನ್ನೇ ಇಟ್ಟು ತಾವು ಪ್ರಾಮಾಣಿಕ ಎಂಬುದನ್ನು ಸಾಬೀತು ಮಾಡಬೇಕು. ಹೀಗಾಗಿ ಕೂಡಲೇ ಆರೋಪವನ್ನು ತನಿಖೆಗೆ ಒಪ್ಪಿಸಬೇಕು. ಇದನ್ನೂ ಓದಿ: ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಭಾರೀ ಭ್ರಷ್ಟಾಚಾರ – ವಿಶ್ವನಾಥ್ ಆರೋಪ
Advertisement
ಈ ಭ್ರಷ್ಟಾಚಾರದ ಆರೋಪದಲ್ಲಿ ಅನ್ಯರ ಹಸ್ತಕ್ಷೇಪದ ಆರೋಪವಿದೆ. ಆಡಳಿತದಲ್ಲಿ, ಅದೂ ಸರ್ಕಾರದ ಹಂತದಲ್ಲಿ ಮುಖ್ಯಮಂತ್ರಿಗಳ ಕುಟುಂಬಸ್ಥರು ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಜನರ ಸೇವೆಯಲ್ಲಿ ತೊಡಗಿರುವ ಸರ್ಕಾರದಲ್ಲಿ ಸಂಬಂಧವೇ ಇಲ್ಲದವರ ಹಸ್ತಕ್ಷೇಪ ಸರಿಯಲ್ಲ. ಹೀಗಾಗಿ ಅನ್ಯರ ಹಸ್ತಕ್ಷೇಪದ ವಿಚಾರದಲ್ಲಿಯೂ ಗಂಭೀರ ತನಿಖೆ ನಡೆಯಬೇಕು.
Advertisement
ಮೇಕೆದಾಟು ಯೋಜನೆ ಶೀಘ್ರ ಪೂರ್ಣಗೊಳಿಸಿ:
ಮೇಕೆದಾಟು ಯೋಜನೆ ವಿಚಾರವಾಗಿ ಎನ್‍ಜಿಟಿ ದಕ್ಷಿಣ ಪೀಠ ಆರಂಭಿಸಿದ್ದ ಸ್ವಯಂ ಪ್ರೇರಿತ ವಿಚಾರಣೆಯನ್ನು ಪ್ರಧಾನ ಪೀಠ ಇತ್ಯರ್ಥಪಡಿಸಿದೆ. ಯೋಜನೆಗಿದ್ದ ಅಡ್ಡಿಯೊಂದು ನಿವಾರಣೆಯಾಗಿದೆ. ಈಗ ಕೇಂದ್ರದಿಂದ ಶೀಘ್ರವೇ ಅನುಮತಿ ಪಡೆದು ಯೋಜನೆ ಜಾರಿಗೊಳಿಸುವುದರತ್ತ ರಾಜ್ಯ ಸರ್ಕಾರ ಗಮನಹರಿಸಬೇಕು. ಕೇಂದ್ರವೂ ಪರಿಸರ ಅನುಮತಿಯನ್ನು ಶೀಘ್ರ ನೀಡಬೇಕು.
ಕರ್ನಾಟಕ ರಾಜ್ಯಕ್ಕೆ ಮಹತ್ವಪೂರ್ಣವಾಗಿರುವ ಮೇಕೆದಾಟು ಯೋಜನೆ ಪ್ರಮುಖವಾಗಿ ಕುಡಿಯುವ ನೀರಿಗೆ ಅನುಕೂಲ ಕಲ್ಪಿಸುವಂಥದ್ದು. ಈ ಯೋಜನೆಗೆ ತಡೆ ಕೋರುವ ಅರ್ಜಿಯ ವಿಚಾರಣೆ ನಡೆಸಿದ ಎನ್.ಜಿ.ಟಿ ಇಂದು ರಾಜ್ಯದ ವಾದವನ್ನು ಮನ್ನಿಸಿ, ಅರ್ಜಿಯನ್ನು ಇತ್ಯರ್ಥಪಡಿಸಿದೆ. ಆದಷ್ಟು ಶೀಘ್ರದಲ್ಲಿ ಎಲ್ಲ ಅನುಮತಿಗಳನ್ನು ಪಡೆದು ಯೋಜನೆ ಪ್ರಾರಂಭಿಸಲಾಗುವುದು.
— B.S.Yediyurappa (@BSYBJP) June 18, 2021
ಕೇಂದ್ರ-ರಾಜ್ಯದಲ್ಲಿ ಒಂದೇ ಸರ್ಕಾರ ಇದ್ದರೆ ಸ್ವರ್ಗ ಸೃಷ್ಟಿಯಾಗುವುದಾಗಿ ಬಿಜೆಪಿ ಹೇಳಿತ್ತು. ಸ್ವರ್ಗ ಬೇಡ, ಅನಿಶ್ಚಿತತೆಯಲ್ಲಿ ತೂಗುತ್ತಿರುವ ಮೇಕೆದಾಟು ಯೋಜನೆಗೆ ಪರಿಸರ ಅನುಮತಿಯನ್ನು ಶೀಘ್ರ ಪಡೆದುಕೊಂಡರೆ ಸಾಕು. ನಮ್ಮ ನೆಲ, ಜಲ, ಧನ ಬಳಸಿ ನಮ್ಮವರ ದಾಹ ನೀಗಿಸುವ ಯೋಜನೆ ವಿಚಾರದಲ್ಲಿ ಬಿಜೆಪಿ ಸರ್ಕಾರ ಇನ್ನು ನಿರ್ಲಕ್ಷ್ಯ ತೋರಬಾರದು.
ಕೇಂದ್ರದ ಅನುಮತಿ ಸಿಕ್ಕ ಕೂಡಲೇ ಯೋಜನೆ ಆರಂಭಿಸುವ ಯಡಿಯೂರಪ್ಪ ಹೇಳಿಕೆಯನ್ನು ಸೋದರ ಎಂ.ಕೆ.ಸ್ಟಾಲಿನ್ ವಿರೋಧಿಸಿದ್ದಾರೆ. ನ್ಯಾಯಾಲಯದಲ್ಲಿ ವಿಚಾರಣೆಯಾಗುತ್ತಿರುವ ಪ್ರಕರಣವೊಂದರಲ್ಲಿ ಕರ್ನಾಟಕ ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿದೆ ಎಂಬುದು ಅವರ ಆರೋಪ. ವಿಚಾರಣೆಯಾಗುತ್ತಿರುವ ಯೋಜನೆಯೊಂದಕ್ಕೆ ತಡೆ ತರಲು ಪ್ರಧಾನಿಯನ್ನು ಭೇಟಿಯಾಗಿದ್ದೂ ತಪ್ಪಲ್ಲವೇ?
ಹೊಗೇನಕಲ್ ಕುಡಿಯುವ ನೀರಿನ ಯೋಜನೆ ವಿಚಾರದಲ್ಲಿ ತಮಿಳುನಾಡು ಯಾವ ರೀತಿ ನಡೆದುಕೊಂಡಿತು ಎಂದು ನಾನು ಹೇಳಬೇಕಿಲ್ಲ. ಆ ಯೋಜನೆ ಆಗಿದ್ದು
ಎಂ. ಕೆ. ಸ್ಟಾಲಿನ್ ಉಪಮುಖ್ಯಮಂತ್ರಿ ಆಗಿದ್ದ ಕಾಲದಲ್ಲೇ. ಕುಡಿಯುವ ನೀರಿನ ನೆಪವೊಡ್ಡಿ ತಮಿಳುನಾಡು ಕರ್ನಾಟಕದ ಗಡಿ ದಾಟಿ ಬಂದಿತ್ತು. ಸಮರ್ಥನೆಯನ್ನೂ ಮಾಡಿಕೊಂಡಿತ್ತು. ಮೇಕೆದಾಟು ಕೂಡ ಕುಡಿಯುವ ನೀರಿನ ಯೋಜನೆಯೇ.
ಮೇಕೆದಾಟು ಯೋಜನೆಯನ್ನು ಯಾವ ಕೋನದಲ್ಲಿ ನೋಡಿದರೂ ಅದು ನ್ಯಾಯವಾಗೇ ಕಾಣುತ್ತದೆ. ಹೀಗಾಗಿ ವಿವಾದ ಅನಗತ್ಯ. ಕಾವೇರಿಗಾಗಿ ಕಲಹ ನಡೆದದ್ದು ಸಾಕು. ಈಗ ನಾವು ಸೋದರತೆ ಮೆರೆಯಬೇಕಾದ ಅನಿವಾರ್ಯತೆ ಇದೆ ಎಂಬುದನ್ನು ಸೋದರ ಎಂ.ಕೆ.ಸ್ಟಾಲಿನ್ ಅವರಿಗೆ ನಾನು ಮತ್ತೊಮ್ಮೆ ಹೇಳಲು ಬಯಸುತ್ತೇನೆ. ಅನಗತ್ಯ ಕಲಹದಲ್ಲಿ, ಅದೂ ಈ ಹೊತ್ತಲ್ಲಿ ನಾವು ಒಡೆದುಹೋಗಬಾರದು.
ಡಿಸಿಎಂ ಸ್ಪಷ್ಟನೆ ಸಮಾಧಾನ ತಂದಿದೆ:
ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಆರಂಭವಾಗಲಿರುವ 4 ವರ್ಷಗಳ ಪದವಿಯಲ್ಲಿ ಕನ್ನಡ ಭಾಷಾ ಕಲಿಕೆಯನ್ನು 1 ವರ್ಷಕ್ಕೆ ಸೀಮಿತಗೊಳಿಸುವ ಉನ್ನತ ಶಿಕ್ಷಣ ಸಮಿತಿಯ ಪ್ರಸ್ತಾವ ನಿರಾಸೆ ತಂದಿದೆ. ಕನ್ನಡ ಭಾಷಾ ಕಲಿಕೆ ಅದೊಂದು ವಿಷಯ ಮಾತ್ರವಲ್ಲ, ಯುವ ಸಮುದಾಯದಲ್ಲಿ ಸಾಕ್ಷಿಪ್ರಜ್ಞೆ ಬಿತ್ತುವ, ಅವರನ್ನು ಸೂಕ್ಷ್ಮಮತಿಗಳನ್ನಾಗಿ ಮಾಡುವ ಯಶಸ್ವಿ ಪ್ರಯತ್ನ. ಇದನ್ನೂ ಓದಿ: ಪದವಿ ಶಿಕ್ಷಣದಲ್ಲಿ ಭಾಷಾ ವಿಷಯದಲ್ಲಿ ಕನ್ನಡಿಗರಿಗೆ ದ್ರೋಹ -ಸಿದ್ದರಾಮಯ್ಯ
ರಕ್ತಕ್ಕೆ ಅಂಟಿದ ಭಾಷೆ ಕಲಿಕೆಯನ್ನು 1 ವರ್ಷಕ್ಕೆ ಮಿತಿಗೊಳಿಸುವುದು ಅವೈಜ್ಞಾನಿಕ. ಈ ಬಗ್ಗೆ ಡಿಸಿಎಂ ಅಶ್ವತ್ಥ ನಾರಾಯಣ ಸ್ಪಷ್ಟನೆ ನೀಡಿದ್ದಾರೆ. ಈಗಿನ ವ್ಯವಸ್ಥೆಯಂತೆ 2 ವರ್ಷದ ಕನ್ನಡ ಕಲಿಕೆಗೆ ತೊಂದರೆ ಇಲ್ಲ ಎಂದು ಹೇಳಿರುವುದು ಸ್ವಲ್ಪ ಸಮಾಧಾನ ತಂದಿದೆ. ಅದರೆ, 1 ವರ್ಷಕ್ಕೆ ಮಿತಿಗೊಳಿಸುವ ಪ್ರಯತ್ನಗಳು ನಡೆದರೆ ಪರಿಣಾಮ ಕೆಟ್ಟದಾಗುತ್ತದೆ. ಇದನ್ನೂ ಓದಿ: ಪದವಿ ಶಿಕ್ಷಣದಲ್ಲಿ ಕನ್ನಡ ಕಲಿಕೆ ಕಡಿತ ಇಲ್ಲ: ಅಶ್ವತ್ಥ ನಾರಾಯಣ