20 ಲಕ್ಷ ಕೋಟಿ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ-ಆತ್ಮ ನಿರ್ಭರ ಭಾರತಕ್ಕೆ ಕರೆ ನೀಡಿದ ಪ್ರಧಾನಿ ಮೋದಿ

Public TV
4 Min Read
PM Modi b

-ಹೊಸ ರೂಪದೊಂದಿಗೆ ಲಾಕ್‍ಡೌನ್ 4.0 ಜಾರಿ
-ಸ್ಥಳೀಯರಿಗಾಗಿ ಲೋಕಲ್ ವಸ್ತುಗಳನ್ನೇ ಖರೀದಿಸಿ

ನವದೆಹಲಿ: ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 20 ಲಕ್ಷ ಕೋಟಿಯ ವಿಶೇಷ ಅರ್ಥಿಕ ಪ್ಯಾಕೇಜ್ ಘೋಷಣೆ ಮಾಡಿ, ಆತ್ಮ ನಿರ್ಭರ ಭಾರತಕ್ಕೆ ಕರೆ ನೀಡಿದರು.

ಕಳೆದ ನಾಲ್ಕು ತಿಂಗಳಿನಿಂದ ಜಗತ್ತಿನ ಎಲ್ಲ ರಾಷ್ಟ್ರಗಳು ಹೋರಾಟ ನಡೆಸುತ್ತಿವೆ. ಕೊರೊನಾ ಬಹುತೇಕ ದೇಶಗಳಲ್ಲಿ ನರ್ತನ ಮುಂದುವರಿಸಿದ್ದು, ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡಿದ್ದರೆ, ಕೋಟ್ಯಂತರ ಜನರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಒಂದು ವೈರಸ್‍ನಿಂದ ವಿಶ್ವದ ದೇಶಗಳು ಜೀವ ಉಳಿಸುವದಕ್ಕಾಗಿ ಹೋರಾಡುತ್ತಿವೆ. ಎಲ್ಲ ನಿಯಮಗಳನ್ನು ಪಾಲಿಸುತ್ತಾ ಜೀವ ಉಳಿಸಿಕೊಳ್ಳುವದರ ಜೊತೆ ಮುಂದೆ ಸಾಗಬೇಕಿದೆ.

ಈ ಸಂಕಷ್ಟದಿಂದ ಪಾರಾಗಲು ನಮ್ಮೆಲ್ಲರ ಸಂಕಲ್ಪ ಮತ್ತಷ್ಟು ಕಠಿಣ ಮತ್ತು ದೃಢವಾಗಬೇಕಿದೆ. ಕೊರೊನಾ ಸಾಂಕ್ರಾಮಿಕ ರೋಗದಿಂದ ದೇಶದಲ್ಲಾಗುತ್ತಿರೋ ಬದಲಾವಣೆಗಳನ್ನ ನಾವು ಗಮನಿಸುತ್ತಿದ್ದೇವೆ. ಹಾಗಾಗಿ ಕೊರೊನಾ ವಿರುದ್ಧ ಒಗ್ಗಟ್ಟಿನಿಂದ ಹೋರಾಡಬೇಕಿದೆ. ಆತ್ಮ ನಿರ್ಭರಕ್ಕೆ ಪ್ರಧಾನಿಗಳು ಕರೆ ನೀಡಿದರು.

ಭಾರತದಲ್ಲಿ ಬೆರಳಿಣಿಕೆಯಲ್ಲಿ ಎನ್-95 ಮಾಸ್ಕ್ ಗಳ ಉತ್ಪಾದನೆ ಆಗುತ್ತಿತ್ತು. ಇಂದು ಪ್ರತಿದಿನ 2 ಲಕ್ಷಕ್ಕೂ ಅಧಿಕ ಪಿಪಿಇ ಕಿಟ್, ಮಾಸ್ಕ್ ಗಳ ತಯಾರಿ ಆಗ್ತಿದೆ. ಕೊರೊನಾದಿಂದ ನಾವು ಬದಲಾಗಿರೋದು ಈ ಉತ್ಪಾದನೆ ಉದಾಹರಣೆ. ಜಗತ್ತಿನಲ್ಲಿ ಸ್ವಾವಲಂಬನೆ ವ್ಯಾಖ್ಯಾನ ಬದಲಾವಣೆಯಾಗಿದೆ. ಭಾರತದ ಸಂಸ್ಕೃತಿ ಮತ್ತು ಸಂಸ್ಕಾರ ವಿಶ್ವವೇ ಒಂದು ಎಂಬ ಸಂದೇಶವನ್ನು ಸಾರುತ್ತಿದೆ. ನಮ್ಮ ಆತ್ಮ ಇಡೀ ವಿಶ್ವ, ವಿಶ್ವದ ಕಲ್ಯಾಣವೇ ಭಾರತ ಆಗಿದೆ. ಇಡೀ ವಿಶ್ವ ಭಾರತದ ದೃಷ್ಟಿಯಿಂದ ನೋಡುವಂತಾಗಿದೆ.

PM Modi a 1

ಭಾರತದ ಪ್ರಗತಿಯಲ್ಲಿ ವಿಶ್ವದ ಬೆಳವಣಿಗೆಗೆ ಸಹಾಯವಾಗಿದೆ. ಭಾರತ ಬಯಲು ಮುಕ್ತ ಶೌಚವಾದಾಗ ಇದರ ಪರಿಣಾಮ ವಿಶ್ವದ ಮೇಲೆ ಬಿದ್ದಿದೆ. ಮಾನವ ಸಂಕುಲ ಕಲ್ಯಾಣಕ್ಕಾಗಿ ಭಾರತ ಒಳ್ಳೆಯ ಕೆಲಸ ಮಾಡುತ್ತೆ ಎಂದು ಇಡೀ ವಿಶ್ವದ ನಂಬಿಕೆಯಾಗಿದೆ. ಭಾರತ ಸಮೃದ್ಧವಾಗಿತ್ತು, ಚಿನ್ನದ ನಾಡು ಆಗಿತ್ತು. ಅಂದಿನಿಂದಲೂ ವಿಶ್ವದ ಕಲ್ಯಾಣಕ್ಕಾಗಿ ಶ್ರಮಿಸಿದೆ. ಆದ್ರೆ ಭಾರತ ಗುಲಾಮಗಿರಿಗೆ ನಲುಗಿತ್ತು.

ಇಂದು ನಮ್ಮ ಬಳಿ ತಂತ್ರಜ್ಞಾನ, ಜ್ಞಾನ ಎಲ್ಲವೂ ಇದೆ. ನಮ್ಮ ಬಳಿ ಅತ್ಯಂತ ಪ್ರತಿಭಾನ್ವಿತರು ಇದ್ದಾರೆ. ನಾವೆಲ್ಲ ಜೊತೆಯಾಗಿ ಇಂದು ಉತ್ತಮ ಉತ್ಪನ್ನಗಳನ್ನು ತಯಾರಿಸೋಣ. ಕಛ್ ಭೂಕಂಪದ ಸ್ಥಿತಿಯನ್ನು ನೋಡಿದ್ದೇನೆ. ಕೆಲವೇ ದಿನಗಳಲ್ಲಿ ಕಛ್ ಎದ್ದು ನಿಲ್ಲುವ ಮೂಲಕ ಭಾರತೀಯ ಸಂಕಲ್ಪವನ್ನು ತೋರಿಸಿತು. ಸ್ವಾವಲಂಬಿ ಭಾರತ ಐದು ಆಧಾರ ಸ್ತಂಭಗಳಾದ ಆರ್ಥಿಕತೆ, ಮೂಲಭೂತ ಸೌಕರ್ಯ, ವ್ಯವಸ್ಥೆ, ಪ್ರಜಾಪ್ರಭುತ್ವ ಮತ್ತು ಬೇಡಿಕೆ-ಪೂರೈಕೆ ಮೇಲೆ ನಿಂತಿದೆ.

ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ (ಆತ್ಮ ನಿರ್ಭರ ಭಾರತ ಅಭಿಯಾನ): ಭಾರತದ ಆರ್ಥ ವ್ಯವಸ್ಥೆಯ ಚೇತರಿಕೆಗಾಗಿ 20 ಲಕ್ಷ ಕೋಟಿ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದರು. ಇದು ಜಿಡಿಪಿಯ ಶೇ.10ರಷ್ಟಿದೆ. ರೈತರು, ಕಾರ್ಮಿಕರು, ಸಣ್ಣ ವ್ಯಾಪಾರಿ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ, ಗೃಹೋದ್ಯಮ ನಡೆಸುವ ದೇಶದ ವಿಭಿನ್ನ ಜನರಿಗಾಗಿ ಪ್ಯಾಕೇಜ್ ಲಾಭ ಸಿಗಲಿದೆ. ದೇಶಕ್ಕಾಗಿ ತೆರಿಗೆ ಪಾವತಿಸುವರಿಗಾಗಿ ಈ ವಿಶೇಷ ಪ್ಯಾಕೇಜ್ ಘೋಷಣೆ. ನಾಳೆ ವಿತ್ತ ಸಚಿವರಿಂದ ಆತ್ಮ ನಿರ್ಭರ ಪ್ಯಾಕೇಜ್ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.

ಈ ವಿಶೇಷ ಆರ್ಥಿಕ ಪ್ಯಾಕೇಜ್ ನಿಂದ ಪ್ರತಿ ವರ್ಗದ ಕಾರ್ಯಕ್ಷಮತೆ ಹೆಚ್ಚಾಗಲಿದೆ. ಲಾಕ್‍ಡೌನ್ ನಿಂದ ರಸ್ತೆ ಬದಿ ವ್ಯಾಪಾರಿಗಳು, ಮನೆಗೆಲಸ ಮಾಡೋರು, ಪುಟ್ಟ ಅಂಗಡಿ ನಡೆಸೋರು, ಮೀನುಗಾರರು, ಮಾರುಕಟ್ಟೆ ವ್ಯಾಪಾರಿಗಳು ತುಂಬಾನೇ ಕಷ್ಟ ಅನುಭವಿಸಿದ್ದಾರೆ. ಇದೀಗ ನಾವೆಲ್ಲರೂ ಇವರನ್ನ ಆರ್ಥಿಕವಾಗಿ ಮೇಲೆತ್ತಬೇಕಿದೆ. ಈ ವಿಶೇಷ ಪ್ಯಾಕೇಜ್ ಇವರೆಲ್ಲರ ಜೀವನಕ್ಕೆ ಬೆಳಕಾಗಲಿದೆ. ಪ್ರತಿ ಭಾರತೀಯ ನಿವಾಸಿಗಳು ಸ್ಥಳೀಯಮಟ್ಟದಲ್ಲಿ ತಯಾರಾಗುವ ವಸ್ತುಗಳನ್ನ ಖರೀದಿಸಿ ಮತ್ತು ಪ್ರಚಾರ ಮಾಡುವ ಕುರಿತು ಶಪಥ ಮಾಡಬೇಕಿದೆ. ಬ್ರ್ಯಾಂಡೆಡ್ ವಸ್ತುಗಳು ಈ ಹಿಂದೆ ಲೋಕಲ್ ಆಗಿದ್ದವು.

ಬಹಳ ದೀರ್ಘ ಕಾಲದವರೆಗೆ ಕೊರೊನಾ ಇರಲಿದೆ. ಲಾಕ್‍ಡೌನ್ ನಾಲ್ಕನೇ ಹಂತ ಹೊಸ ರೂಪದಲ್ಲಿ ಜಾರಿಯಾಗಲಿದೆ. ರಾಜ್ಯದ ಸಲಹೆಗಳ ಮೇರೆಗೆ ಹೊಸ ಲಾಕ್‍ಡೌನ್ ನಿಯಮಗಳ ಬಗ್ಗೆ ಮೇ 18ರೊಳಗೆ ತಿಳಿಯಲಿದೆ. ಮಾಸ್ಕ್ ಧರಿಸುವ ಮೂಲಕ ಕೊರೊನಾ ವಿರುದ್ಧ ಹೋರಾಡೋಣ.

 

Share This Article
Leave a Comment

Leave a Reply

Your email address will not be published. Required fields are marked *