ರೆಸ್ಟೋರೆಂಟ್‍ನಲ್ಲಿದ್ದ ಯುವತಿಯರನ್ನು ಧರಧರನೇ ಎಳೆದು ಹಲ್ಲೆ ನಡೆಸಿದ ಗ್ಯಾಂಗ್

Public TV
0 Min Read
china

ಬೀಜಿಂಗ್: ಚೀನಾದ ರೆಸ್ಟೋರೆಂಟ್‍ವೊಂದರಲ್ಲಿ ತಮ್ಮ ಪಾಡಿಗೆ ತಾವು ಊಟ ಮಾಡುತ್ತಿದ್ದ ಯುವತಿಯರ ಗುಂಪಿನ ಮೇಲೆ ಏಕಾಏಕಿ ದಾಳಿ ನಡೆಸಿದ ಒಂಬತ್ತು ಮಂದಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಯುವತಿಯರ ಜೊತೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ ನಂತರ ವಿರೋಧಿಸಿದ ಯುವತಿಯರ ಮೇಲೆ ದಾಳಿ ಮಾಡಿದ್ದಾರೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಯುವತಿಯರ ಮೇಲೆ ಹಲ್ಲೆ ನಡೆಸಿರುವವರ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಚರಂಡಿ ವಿಷಯಕ್ಕೆ ಜಗಳ – ಯುವಕನ ಕೊಲೆ, 6 ಜನರ ಸ್ಥಿತಿ ಗಂಭೀರ

ಉತ್ತರ ಚೀನಾದ ಹುಬೆ ಪ್ರಾಂತ್ಯದ ಬಾರ್ಬೆಕ್ಯೂ ರೆಸ್ಟೋರೆಂಟ್‍ನಲ್ಲಿ ಇಬ್ಬರು ಸ್ನೇಹಿತೆಯರೊಂದಿಗೆ ಯುವತಿ ಊಟವನ್ನು ಹಂಚಿಕೊಂಡು ತಿನ್ನುತ್ತಿದ್ದಾಗ ವ್ಯಕ್ತಿಯೋರ್ವ ಆಕೆಯ ಬೆನ್ನ ಮೇಲೆ ಕೈ ಹಾಕುತ್ತಾನೆ. ಇದನ್ನು ನಿರಾಕರಿಸಿದ ಯುವತಿ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ಕೆಳಗೆ ಬಿದ್ದ ಯುವತಿಗೆ ಹಿಗ್ಗಾಮುಗ್ಗ ಥಳಿಸಿದ್ದಾನೆ. ನಂತರ ಆಕೆಯನ್ನು ಬಿಡಿಸಿಕೊಳ್ಳಲು ಬಂದ ಮತ್ತೋರ್ವ ಯುವತಿಗೆ ಇನ್ನೊಬ್ಬ ವ್ಯಕ್ತಿ ಹೊಡೆದಿದ್ದಾನೆ. ನಂತರ ಇಬ್ಬರನ್ನು ರೆಸ್ಟೋರೆಂಟ್‌ನಿಂದ ಧರಧರನೇ ಹೊರಗೆ ಎಳೆದುಕೊಂಡು ಹೋಗಿ ಹಲ್ಲೆ ನಡೆಸಿದ್ದಾರೆ.

ಇದೀಗ ಈ ಕೃತ್ಯವನ್ನು ಎಸಗಿದ 9 ಮಂದಿಯನ್ನು ಬಂಧಿಸಲಾಗಿದ್ದು, ಘಟನೆ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಟಾಂಗ್ಶಾನ್ ನಗರದ ಪೊಲೀಸರು ತಿಳಿಸಿದ್ದಾರೆ. ಇದೀಗ ಹಲ್ಲೆಗೊಳಗಾದ ಯುವತಿಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಮತ್ತು ಯಾವುದೇ ಪ್ರಾಣಾಪಾಯವಿಲ್ಲ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಸರಣಿ ಅಪಘಾತ: ಬಿಎಂಟಿಸಿ, ಟೆಂಪೋ ನಡುವೆ ಸಿಲುಕಿದ ಆಟೋ 

Share This Article