ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಘಜ್ನವಿ ಪಡೆಯ (ಜೆಕೆಜಿಎಫ್) ಇಬ್ಬರು ಭಯೋತ್ಪಾದಕರನ್ನು ಪೊಲೀಸರು (Police) ಬಂಧಿಸಿದ್ದಾರೆ.
ಬಂಧಿತರನ್ನು ಹರಿ ಗ್ರಾಮದ ಅಬ್ದುಲ್ ಅಜೀಜ್ ಮತ್ತು ಮನ್ವರ್ ಹುಸೇನ್ ಎಂದು ಗುರುತಿಸಲಾಗಿದೆ. ಇಬ್ಬರು ಪೂಂಚ್‌ನಲ್ಲಿ ಹಲವಾರು ಗ್ರೆನೇಡ್ ದಾಳಿ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಪೊಲೀಸರು, 37ನೇ ರಾಷ್ಟ್ರೀಯ ರೈಫಲ್ಸ್ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) 38 ನೇ ಬೆಟಾಲಿಯನ್ ಪಡೆಗಳೊಂದಿಗೆ ಭಯೋತ್ಪಾದಕ ಅಜೀಜ್‌ನನ್ನು ಬಂಧಿಸಿದ್ದಾರೆ. ಈ ವೇಳೆ 3 ಗ್ರೆನೇಡ್‌ಗಳನ್ನು ಆತನಿಂದ ವಶಪಡಿಸಿಕೊಂಡಿದ್ದಾರೆ. ಹುಸೇನ್‌ನಿಂದ ಪಿಸ್ತೂಲ್, ಒಂದು ಮ್ಯಾಗಜೀನ್ ಮತ್ತು ಒಂಬತ್ತು ಸುತ್ತಿನ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಧಾರ್ಮಿಕ ಸ್ಥಳಗಳು ಮತ್ತು ಆಸ್ಪತ್ರೆಗಳ ಮೇಲೆ ಗ್ರೆನೇಡ್ ದಾಳಿ, ಭಯೋತ್ಪಾದಕರಿಗೆ ಹಣಕಾಸು ನೆರವು, ದೇಶ ವಿರೋಧಿ ಪ್ರಚಾರ ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆ ಸೇರಿದಂತೆ ಭಯೋತ್ಪಾದಕ ಚಟುವಟಿಕೆಗಳಿಗೆ ಜನರನ್ನು ಸಂಘಟಿಸುವಲ್ಲಿ ಇಬ್ಬರೂ ತೊಡಗಿಸಿಕೊಂಡಿದ್ದರು. ಈ ಕಾರ್ಯಾಚರಣೆಯು ಭಯೋತ್ಪಾದಕ ಜಾಲಗಳನ್ನು ಕಿತ್ತುಹಾಕುವಲ್ಲಿ ನಿರ್ಣಾಯಕ ಹೆಜ್ಜೆಯಾಗಿದೆ ಎಂದು ಭದ್ರತಾ ಪಡೆಗಳು ತಿಳಿಸಿವೆ.
ವಿಚಾರಣೆ ವೇಳೆ ಇಬ್ಬರೂ ಗಡಿಯಾಚೆಗಿನ ತಮ್ಮ ಹ್ಯಾಂಡ್ಲರ್‌ಗಳಿಂದ ನಾಲ್ಕು ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು 1.5 ಲಕ್ಷ ರೂ. ನೆರವು ಪಡೆದಿದ್ದಾರೆ. ಪಿಸ್ತೂಲ್‌ಗಳನ್ನು ನಿರ್ವಹಿಸುವಲ್ಲಿ ತರಬೇತಿ ಪಡೆದಿದ್ದರು ಮತ್ತು ಅರಣ್ಯ ಪ್ರದೇಶದಲ್ಲಿ ಅಭ್ಯಾಸಕ್ಕಾಗಿ ಕೆಲವು ಸುತ್ತು ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ವರ್ಷ ನವೆಂಬರ್ 15 ರಂದು ಸುರನ್‌ಕೋಟೆಯ ಶಿವ ದೇವಾಲಯದ ಮೇಲೆ ಗ್ರೆನೇಡ್ ದಾಳಿ ಪ್ರಕರಣದಲ್ಲಿ ಅಜೀಜ್ ಭಾಗಿಯಾಗಿದ್ದ. ಮಾರ್ಚ್ 26 ರಂದು ಪೂಂಚ್‌ನಲ್ಲಿರುವ ಗುರುದ್ವಾರ ಮಹಂತ್ ಸಾಹಿಬ್, ಜೂನ್‌ನಲ್ಲಿ ಪೂಂಚ್‌ನ ಕಮ್ಸಾರ್‌ನಲ್ಲಿ ಸೇನಾ ಸೆಂಟ್ರಿ ಪೋಸ್ಟ್ ಮತ್ತು ಆಗಸ್ಟ್ 14 ರಂದು CRPF ಸೆಂಟ್ರಿ ಪೋಸ್ಟ್ ಬಳಿ ಶಾಲೆಯ ಮೈದಾನದ ಮೇಲೆ ನಡೆದ ದಾಳಿಯಲ್ಲೂ ಇಬ್ಬರ ಕೈವಾಡ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜುಲೈ 18 ರಂದು ಜಿಲ್ಲಾ ಆಸ್ಪತ್ರೆಯ ಕ್ವಾರ್ಟರ್ಸ್ ಬಳಿ ಹುಸೇನ್ ಗ್ರೆನೇಡ್ ದಾಳಿ ನಡೆಸಿದ್ದ. ಇಬ್ಬರು ಸೇರಿ ಸುರನ್‌ಕೋಟೆಯ ವಿವಿಧ ಸ್ಥಳಗಳಲ್ಲಿ ದೇಶ ವಿರೋಧಿ ಪೋಸ್ಟರ್‌ಗಳನ್ನು ಅಂಟಿಸಿದ್ದರು. ಇದರಲ್ಲಿ ಹರಿ, ಧುಂಡಕ್, ಸನಾಯಿ, ಈದ್ಗಾ-ಹರಿ ಮತ್ತು ಇತರ ಪಕ್ಕದ ಪ್ರದೇಶಗಳ ಸರ್ಕಾರಿ ಪ್ರೌಢಶಾಲೆ ಸೇರಿದೆ. ಈ ಪೋಸ್ಟರ್‌ಗಳನ್ನು ಹುಸೇನ್‌ನ ಮನೆಯಲ್ಲಿ ಮುದ್ರಿಸಿ, ಸಾರ್ವಜನಿಕರಲ್ಲಿ ಭಯವನ್ನು ಸೃಷ್ಟಿಸಲು ಅಂಟಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.